ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ತೇಜಸ್ವಿನಿ ಆಸ್ಪತ್ರೆಯ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಅಮಾಯಕ ಜೀವವೊಂದು ಬಲಿಯಾಗಿದ್ದು, ತಪ್ಪಿತಸ್ಥ ವೈದ್ಯರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಮೃತರ ಕುಟುಂಬಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
“ಮಂಗಳೂರು ನಗರದ ಪಂಜಿಮೊಗರು ನಿವಾಸಿ ಹಾಮದ್ ಎಂಬವರು 2024ರ ಡಿಸೆಂಬರ್ 21ರಂದು ಬಿಜೈ ರೋಹನ್ ಕಾರ್ಪೊರೇಶನ್ ಕಟ್ಟಡದ ಬಳಿಯಿಂದ ಲಾಲ್‌ಬಾಗ್ ಕಡೆಗೆ ನಡೆದುಕೊಂಡು ಬಂದು ರಸ್ತೆ ದಾಟುತ್ತಿದ್ದಾಗ, ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತ ಬಂದ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ಹಾಮದ್ ತೀವ್ರವಾಗಿ ಗಾಯಗೊಂಡಿದ್ದರು. ಸ್ಥಳೀಯರು ಕೂಡಲೇ ತೇಜಸ್ವಿನಿ ಆಸ್ಪತ್ರೆಗೆ ಸುಮಾರು ಸಂಜೆ 4.40ಕ್ಕೆ ದಾಖಲಿಸಿದ್ದಾರೆ. ಈ ವೇಳೆ ಆಸ್ಪತ್ರೆಯ ವೈದ್ಯರು ಸಂತ್ರಸ್ತ ಗಾಯಾಳುವನ್ನು ಸರಿಯಾಗಿ ಪರೀಕ್ಷಿಸದೆ ಕೇವಲ ಮುರಿತಕ್ಕೊಳಗಾಗಿರುವ ಬಲಗಾಲಿನ ಮೂಳೆಯನ್ನು ಶಸ್ತ್ರಚಿಕಿತ್ಸೆ ನಡೆಸಿ ಸರಿಪಡಿಸಲು ತಗಲುವ ವೆಚ್ಚದ ಕುರಿತು ಚೌಕಾಸಿ ನಡೆಸುತ್ತಿದ್ದರು” ಎಂದು ಆರೋಪಿಸಲಾಗಿದೆ.
“ತೇಜಸ್ವಿನಿ ಆಸ್ಪತ್ರೆಯ ವೈದ್ಯರು ಸರಿಯಾಗಿ ಪರೀಕ್ಷೆ ನಡೆಸದೆ ಒಳರೋಗಿಯಾಗಿ ದಾಖಲಿಸಲೂ ಕೂಡಾ ಹಿಂಜರಿಯುತ್ತಿದ್ದರು. ಆ ದಿನ ಸಂಜೆ 4.40ಕ್ಕೆ ಆಸ್ಪತ್ರೆಗೆ ಬಂದ ಗಾಯಾಳುವನ್ನು ರಾತ್ರಿ 8.30ರವರೆಗೂ ಕನಿಷ್ಠ ಒಳರೋಗಿಯಾಗಿಯೂ ದಾಖಲಿಸದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದರು” ಎಂದು ದೂರಿದರು.
“ಪೊಲೀಸರಿಗೆ ಪ್ರಥಮ ಮಾಹಿತಿಯನ್ನೂ ಕೂಡಾ ಒದಗಿಸದೆ ಕಾನೂನು ನಿಯಮ ಪಾಲಿಸದೆ ಕರ್ತವ್ಯ ಲೋಪ ಎಸಗಿದ್ದಾರೆ. ಗಾಯಾಳು ಹಾಮದ್ ಎಂಬುವವರನ್ನು ತೇಜಸ್ವಿನಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳು ನಡೆಸಿಕೊಂಡ ರೀತಿ ಮತ್ತು ತಪ್ಪಾದ ಚಿಕಿತ್ಸಾ ಕ್ರಮ ಹಾಗೂ ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಅಮಾಯಕ ಜೀವ ಕಳೆದುಕೊಳ್ಳುವಂತಾಗಿದೆ. ಹಾಮದ್ ಕೂಲಿ ಕೆಲಸ ಮಾಡಿ ಬದುಕುತ್ತಿದ್ದನು. ಇದೀಗ ಇವರನ್ನು ಅವಲಂಬಿಸಿರುವ 4 ಮಂದಿ ಮಕ್ಕಳು ಮತ್ತು ಮಡದಿ ಬೀದಿಗೆ ಬೀಳುವಂತಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ?: ಮಂಗಳೂರು | ಜ.14ರಂದು ರಸ ಬೈ ರಾಗ ಸಂಗೀತ ಕಚೇರಿ
“ಈ ಎಲ್ಲ ಹಿನ್ನಲೆಯಲ್ಲಿ ತೇಜಸ್ವಿನಿ ಆಸ್ಪತ್ರೆ ಮತ್ತು ಅಲ್ಲಿನ ತಪ್ಪಿತಸ್ಥ ವೈದ್ಯರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಜತೆಗೆ ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಪರಿಹಾರ ಒದಗಿಸಿಕೊಡಬೇಕು” ಎಂದು ಮನವಿ ಮಾಡಿದರು.
