ʼದಲಿತ ಸಂಘಟನೆಗಳ ಚಳವಳಿಗಳು ಕಾಂಗ್ರೆಸ್ ಪ್ರೇರಿತವಾಗಿದ್ದು, ಕಾಂಗ್ರೆಸ್‌ನಿಂದ ಹಣ ಪಡೆದು ಪ್ರತಿಭಟನೆ ನಡೆಸಲಾಗುತ್ತಿದೆʼ ಎಂಬ ಮಾಜಿ ಶಾಸಕ ಕೆ ಅನ್ನದಾನಿಯವರ ಹೇಳಿಕೆಯನ್ನು ದಲಿತ, ರೈತ, ಅಲ್ಪಸಂಖ್ಯಾತ, ಕಾರ್ಮಿಕ ಹಿಂದುಳಿದ ವರ್ಗಗಳ ಮಹಾ ಒಕ್ಕೂಟ ಖಂಡಿಸಿದೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಮಾನ ಮನಸ್ಕರ ವೇದಿಕೆಯ ಸಂಚಾಲಕ ಲಕ್ಷ್ಮಣ್ ಚೀರನಹಳ್ಳಿ, “ದಲಿತ ಚಳವಳಿಗಳ ಕುರಿತು ಲಘುಮಾತಾಡಿದ ಅನ್ನದಾನಿ ಮತ್ತು ನರೇಂದ್ರ ಸ್ವಾಮಿ ಹೇಳಿಕೆಯು ರಾಜಕೀಯ ಗುಲಾಮಗಿರಿಯಷ್ಟೇ ಖಂಡನಾರ್ಹ. ಜೆಪಿಯ ಕೇಂದ್ರ ಸಚಿವ ಅಮಿತ್ ಶಾ, ಅಂಬೇಡ್ಕರ್ ಅವರನ್ನು ಕುರಿತು ನೀಡಿದ ಅಪಮಾನಕರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಲಾಗದೆ ಸಮರ್ಥಿಸಿಕೊಳ್ಳುವ ಜೆಡಿಎಸ್ ನಾಯಕ ಡಾ. ಕೆ ಅನ್ನದಾನಿಯದ್ದು ಮನುವಾದಿ ಮನಸ್ಥಿತಿಯಾದರೆ, ನಮ್ಮದು ಸಿದ್ದರಾಮಯ್ಯ ಸಿದ್ದಾಂತವೆಂದು ಹೇಳಿಕೊಳ್ಳುವ ಶಾಸಕ ನರೇಂದ್ರಸ್ವಾಮಿವರ ಹೇಳಿಕೆ ರಾಜಕೀಯ ಗುಲಾಮಗಿರಿಯಿಂದ ಕೂಡಿದೆ. ಇವರಿಬ್ಬರ ಹೇಳಿಕೆಗಳೂ ಖಂಡನೀಯವಾಗಿದ್ದು, ಕೂಡಲೇ ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದರು.
“ಶಾ ಹೇಳಿಕೆಯನ್ನು ಸಂಭ್ರಮಿಸುವ ಮನುವಾದಿ ಬಿಜೆಪಿ ಮನಸ್ಥಿತಿಗೂ ಅನ್ನದಾನಿ ಹೇಳಿಕೆಗೂ ಯಾವುದೇ ವ್ಯತ್ಯಾಸ ಇಲ್ಲವಾಗಿದೆ. ಸಾಹಿತ್ಯ ಸಮ್ಮೇಳನದಂತಹ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಹುಜನರ ಆಹಾರದ ಹಕ್ಕನ್ನು ನಿರಾಕರಿಸುವ ಅನ್ನದಾನಿ ಯಾವ ಮನುವಾದಿಗೂ ಕಡಿಮೆಯಿಲ್ಲ” ಎಂದರು.
“ಅಮಿತ್ ಶಾ ಆಡಿದ ಅಪಮಾನದ ಮಾತುಗಳ ವಿರುದ್ಧ ದಲಿತ ಸಂಘಟನೆಗಳು ನಡೆಸುತ್ತಿರುವ ಹೋರಾಟ ಕಾಂಗ್ರೆಸ್ ಪ್ರೇರಿತ ಹಾಗೂ ಕಾಂಗ್ರೆಸ್ ನಿಂದ ಹಣ ಪಡೆದು ನಡೆಸಲಾಗುತ್ತದೆಂದು ಬಿಡು ಬೀಸು ಹೇಳಿಕೆ ನೀಡಿರುವ ಮಾಜಿ ಶಾಸಕ ಅನ್ನದಾನಿ, ದಲಿತ ಸಮುದಾಯದ ಸ್ವಾಭಿಮಾನಿ ಹೋರಾಟವನ್ನು ತಮ್ಮ ಚಿಲ್ಲರೆ ರಾಜಕಾರಣದ ಭಾಗವಾಗಿ ನೋಡುವ ಪ್ರಯತ್ನ ನಡೆಸಿದ್ದಾರೆ” ಎಂದು ದೂರಿದರು.
ಇದನ್ನು ಓದಿದ್ದೀರಾ? ಭಾರತ vs ಐರ್ಲೆಂಡ್ | ವೇಗದ ಶತಕ ಬಾರಿಸಿ ದಾಖಲೆ ಬರೆದ ಸ್ಮೃತಿ ಮಂದಾನಾ
ದಲಿತರ ದೌರ್ಜನ್ಯದ ವಿರುದ್ದ ತುಟಿ ಬಿಚ್ಚದ ಅನ್ನದಾನಿ
ಜ್ಯಾತ್ಯತೀತ ಜನತಾ ದಳದ ಪರಿಶಿಷ್ಟ ಜಾತಿ ಪಂಗಡದ ಅಧ್ಯಕ್ಷರಾಗಿರುವ ಅನ್ನದಾನಿಯವರು, ಅಮಿತ್ ಶಾ ಹೇಳಿಕೆ ವಿರುದ್ದ ಇಡೀ ಜಾತ್ಯಾತೀತ ಜನತಾದಳವನ್ನು ಹೋರಾಟಕಿಳಿಸುತ್ತಾರೆಂಬ ಯಾವ ವಿಶ್ವಾಸವೂ ನಮಗಿಲ್ಲ. ಜಿಲ್ಲೆಯಲ್ಲಿ ದಲಿತರ ಮೇಲಿನ ಯಾವುದೇ ದೌರ್ನ್ಯದ ವಿರುದ್ದ ತುಟಿಬಿಚ್ಚದ ಅನ್ನದಾನಿ ದಲಿತ ಸಂಘಟನೆಗಳ ಹೋರಾಟಗಳಿಗೆ ಕಾಂಗ್ರೆಸ್ ಹಣ ಫೀಡ್ ಮಾಡಿದೆಯೆಂದು ಹೇಳುವ ಮೂಲಕ, ದಲಿತರ ಸ್ವಾಭಿಮಾನಿ ಹೋರಾಟವನ್ನು ಅಪಮಾನಗೊಳಿಸುವ ಹೀನ ಪ್ರಯತ್ನವನ್ನು ನಿಲ್ಲಿಸಬೇಕು. ತಮ್ಮ ಬೀಸು ಹೇಳಿಕೆಗೆ ಸಾಕ್ಷ್ಯ ಒದಗಿಸಬೇಕು, ಇಲ್ಲವೇ ಮಂಡ್ಯ ಜಿಲ್ಲೆಯ ದಲಿತ ಸಮುದಾಯದ ಬೇಷರತ್ ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದರು.
ನರೇಂದ್ರ ಸ್ವಾಮಿ ಹೇಳಿಕೆಯು ರಾಜಕೀಯ ಗುಲಾಮಗಿರಿ
ದಲಿತ ಸಂಘರ್ಷ ಸಮಿತಿ ಮುಖಂಡ ಸೋಮನಹಳ್ಳಿ ಅನ್ನದಾನಿ ಮಾತನಾಡಿ, “ನರೇಂದ್ರ ಸ್ವಾಮಿ ಹೇಳಿಕೆಯು ರಾಜಕೀಯ ಗುಲಾಮಗಿರಿ ಹೇಳಿಕೆಯಾಗಿದೆ. ನರೇಂದ್ರ ಸ್ವಾಮಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಓಲೈಸುವ ಭರಾಟೆಯಲ್ಲಿ ಸಿದ್ದರಾಮಯ್ಯನವರ ಸಿದ್ದಾಂತವೇ ಈ ರಾಜ್ಯದಲ್ಲಿ ಅಂತಿಮ ಎಂದಿದ್ದಾರೆ. ಈ ರಾಜ್ಯ ಮಾತ್ರವಲ್ಲ ಇಡೀ ಒಕ್ಕೂಟಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಸಿದ್ಧಾಂತವೇ ಗೌರವಾರ್ಹವಾಗಿದೆ. ಆದರೆ ಅಧಿಕಾರದ ಹಪಾಹಪಿಯಿಂದ ಹಾಲಿ ಶಾಸಕರು ಈ ರೀತಿಯ ಬಾಲಬಡುಕ ಹೇಳಿಕೆಗಳನ್ನು ನೀಡಬಾರದು. ತಮ್ಮನ್ನು ಅಧಿಕಾರಕ್ಕೇರಿಸಿದ ಸಿದ್ದಾಂತಕ್ಕೆ ನಿಷ್ಟೆಯಿಂದಿರಬೇಕು. ತಮ್ಮ ಹೇಳಿಕೆಗಾಗಿ ಶಾಸಕರು ಬಹಿರಂಗವಾಗಿ ಕ್ಷಮೆ ಕೇಳದಿದ್ದರೆ, ಅವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಸಿದರು.
ಇದನ್ನು ನೋಡಿದ್ದೀರಾ? ಅಮೆರಿಕಾದಲ್ಲಿ ನಿಲ್ಲದ ಕಾಡ್ಗಿಚ್ಚು!
ಕರ್ನಾಟಕ ಸಮ ಸಮಾಜ ಸಂಘಟನೆಯ ನರಸಿಂಹಮೂರ್ತಿ, ಅಂಬೇಡ್ಕರ್ ವಾರಿಯರ್ಸ್ ಸಂಘಟನೆಯ ಅಧ್ಯಕ್ಷ ಗಂಗರಾಜು, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಂ ವಿ ಕೃಷ್ಣ, ಸಂವಿಧಾನ ಬಳಗದ ಅನಿಲ್ ಕಿರುಗಾವಲು ಸೇರಿದಂತೆ ಇತರರು ಇದ್ದರು.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
jayakumarcsj@gmail.com