ದುರುಳ ವ್ಯಕ್ತಿಯೊಬ್ಬ ಪೊಲೀಸರ ಎದುರೇ ತನ್ನ ಮಗಳನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ವಿವಾಹಕ್ಕೆ ಸಂಬಂಧಿಸಿದ ಜಗಳದಿಂದಾಗಿ 20 ವರ್ಷದ ಮಗಳನ್ನು ತಂದೆಯೇ ಹತ್ಯೆ ಮಾಡಿದ್ದಾರೆ.
ಗ್ವಾಲಿಯರ್‌ನ ಗೋಲಾ ಕಾ ಮಂದಿರ ಪ್ರದೇಶದಲ್ಲಿ ಘಟನೆ ನಡೆದಿದೆ. ಹತ್ಯೆಗೀಡಾದ ಯುವತಿಯನ್ನು ತನು ಗುರ್ಜಾರ್ ಎಂದು ಹೆಸರಿಸಲಾಗಿದೆ. ಆಕೆಯನ್ನು ಆಕೆಯ ತಂದೆ ಮಹೇಶ್ ಗುರ್ಜಾರ್ ಹತ್ಯೆಗೈದಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತನು ಅವರಿಗೆ ಕುಟುಂಬಸ್ಥರು ವಿವಾಹ ನಿಶ್ಚಯಿಸಲು ಮುಂದಾಗಿದ್ದರು. ವರನೊಬ್ಬನನ್ನು ಹುಡುಕಿ, ಮದುವೆ ಪ್ರಸ್ತಾಪವನ್ನು ಯುವತಿಯ ಮುಂದಿಟ್ಟಿದ್ದರು. ಆದರೆ, ವಿವಾಹಕ್ಕೆ ನಿರಾಕರಿಸಿದ ಯುವತಿ, ತಾವು ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದಾರೆ.
ಕುಟುಂಬಸ್ಥರು ನಿಶ್ಚಿಯಿಸಿದ್ದ ವಿವಾಹವನ್ನು ಸಂಬಂಧಿಗಳ ಎದುರು ಯುವತಿ ನಿರಾಕರಿಸಿದ್ದರಿಂದ ಕುಪಿತಗೊಂಡ ಆಕೆಯ ತಂದೆ ಮಹೇಶ್, ದೇಸೀ ಬಂದೂಕಿನಿಂದ ಆಕೆಯ ಮೇಲೆ ಗುಂಡು ಹಾರಿಸಿ, ಹತ್ಯೆಗೈದಿದ್ದಾರೆ. ಅಲ್ಲದೆ, ಸಂಬಂಧಿ ರಾಹುಲ್ ಎಂಬಾತ ಕೂಡ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ ಎಂದು ವರದಿಯಾಗಿದೆ.
ಘಟನೆಗೂ ಮುನ್ನ ಯುವತಿ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, “ನನ್ನ ಇಚ್ಛೆಗೆ ವಿರುದ್ಧವಾಗಿ ನನ್ನ ಕುಟುಂಬವು ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದೆ. ನನ್ನ ತಂದೆ ಮಹೇಶ್ ಮತ್ತು ಇತರ ಕುಟುಂಬ ಸದಸ್ಯರು ನನಗೆ ಒತ್ತಡ ಹೇರುತ್ತಿದ್ದಾರೆ. ನಾನು ವಿಕ್ಕಿ ಎಂಬಾತನನ್ನು ವಿವಾಹವಾಗಲು ಬಯಸಿದ್ದೇನೆ. ಆದರೆ, ನನ್ನ ಕುಟುಂಬದವರು ಒಪ್ಪುತ್ತಿಲ್ಲ. ದಿನನಿತ್ಯ ನನ್ನನ್ನು ಥಳಿಸುತ್ತಿದ್ದಾರೆ. ಕೊಲ್ಲುವ ಬೆದರಿಕೆ ಹಾಕಿದ್ದಾರೆ. ನನಗೆ ಜೀವ ಭಯವಿದೆ” ಎಂದು ಹೇಳಿಕೊಂಡಿದ್ದಾರೆ.
ಈ ವರದಿ ಓದಿದ್ದೀರಾ?: ಆರಿಸಿದ ಮತದಾರರಿಗೆ ಅವಮಾನಿಸುತ್ತಿರುವ ಕಾಂಗ್ರೆಸ್; ಫ್ಯಾಸಿಸ್ಟ್ ನರೇಟಿವ್ ಕಟ್ಟುತ್ತಿರುವ ಮಾಧ್ಯಮಗಳು
ವೈರಲ್ ಆದ ವಿಡಿಯೋವನ್ನು ಕಂಡ ಪೊಲೀಸರು ಯುವತಿಯ ಮನೆಗೆ ತೆರಳಿದ್ದು, ಯುವತಿ ಮತ್ತು ಕುಟುಂಬಸ್ಥರನಡುವೆ ಸಂಧಾನ ಮಾಡಿಸಲು ಮುಂದಾಗಿದ್ದರು. ಈ ವೇಳೆ, ಯುವತಿ ತನ್ನ ಕುಟುಂಬದೊಂದಿಗೆ ಇರಲು ನಿರಾಕರಿಸಿದ್ದಾರೆ. ಯುವತಿಯನ್ನು ಮಾತನಾಡಲು ಪ್ರತ್ನೇಕವಾಗಿ ಕರೆದೊಯ್ದ ಯುವತಿಯ ತಂದೆ, ಆಕೆಯ ಮೇಲೆ ಗುಂಡು ಹಾರಿಸಿದ್ದಾರೆ.
ಆರೋಪಿ ಮಹೇಶ್ ಗುರ್ಜರ್‌ನನ್ನು ಪೊಲೀಸರು ತಕ್ಷಣ ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಬಂದೂಕನ್ನು ವಶಕ್ಕೆ ಪಡೆದಿದ್ದಾರೆ. ರಾಹುಲ್ ಎಂಬಾತ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.