ಅಲ್ಪಸಂಖ್ಯಾತ ಸಮುದಾಯವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಪರಿಣಾಮ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ ಸಚಿವ ಸಂಪುಟದಲ್ಲಿ ಹಾಗೂ ನಿಗಮ ಮಂಡಳಿಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ನಿರೀಕ್ಷೆಯಂತೆ ಅವಕಾಶಗಳು ಸಿಕ್ಕಿಲ್ಲ. ಈಗಲಾದರೂ ಸಚಿವ ಜಮೀರ್ ಅಹಮದ್ ಅವರನ್ನು ಉಪಮುಖ್ಯಮಂತ್ರಿ(ಡಿಸಿಎಂ) ಮಾಡಬೇಕು ಎಂದು ರಾಜ್ಯ ಆಲ್ಪಸಂಖ್ಯಾತ ಘಟಕದ ಶಿವಮೊಗ್ಗ ಜಿಲ್ಲಾಧ್ಯಕ್ಷ ಸಯ್ಯದ್ ಮುಜೀಬುಲ್ಲಾ ಆಗ್ರಹಿಸಿದರು.
ಶಿವಮೊಗ್ಗ ನಗರದದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತಾಡಿ, “ಸಚಿವ ಜಮೀರ್ ಅಹಮದ್ ಜನಪ್ರಿಯ, ಜಾತ್ಯತೀತ ನಾಯಕರು. ಮತ್ತೆ ಜನಪ್ರಿಯ ಶಾಸಕರಾಗಿ ಹಾಗೂ ಸಚಿವರಾಗಿ ಸಮರ್ಥವಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ಇವರ ಕೊಡುಗೆ ಅನನ್ಯವಾಗಿದೆ. ಹಾಗಾಗಿ ಸಚಿವ ಸಂಪುಟ ವಿಸ್ತರಣೆಯಾದಲ್ಲಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸಿಗಬೇಕಾದ ನ್ಯಾಯವನ್ನು ನೀಡುವ ಸಲುವಾಗಿ ಜನಪ್ರಿಯ ಸಚಿವರು ಸಮರ್ಥ ನಾಯಕ ಬಿ ಜೆಡ್ ಜಮೀರ್ ಅಹಮದ್ ಖಾನ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ನೆರವಿನ ಹಸ್ತಕ್ಕಾಗಿ ಎದುರು ನೋಡುತ್ತಿದೆ ಬಡ ಕುಟುಂಬ
“ಎಂಎಲ್‌ಸಿ ಬಲ್ಕಿಸ್ ಬಾನು ಅವರು ವಿಧಾನ ಪರಿಷತ್ ಸದಸ್ಯೆಯಾಗಿ ಜಿಲ್ಲೆಯ ಎಲ್ಲ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ಜನಪ್ರಿಯರಾಗಿದ್ದಾರೆ. ಸರ್ಕಾರದ ಘನತೆಯನ್ನು ಹೆಚ್ಚಿಸಿ ಜಿಲ್ಲೆಯಲ್ಲಿ ಕ್ರಿಯಾಶೀಲ ಜನನಾಯಕಿಯಾಗಿದ್ದಾರೆ. ಆದರೆ ಜಿಲ್ಲೆಯಿಂದ ಈವರೆಗೆ ಅಲ್ಪಸಂಖ್ಯಾತ ಸಮುದಾಯದವರನ್ನು ಸಚಿವರನ್ನಾಗಿ ಮಾಡಿರುವುದಿಲ್ಲ. ಎಂಎಲ್‌ಸಿ ಬಲ್ಕಿಸ್ ಬಾನು ಅವರನ್ನು ಸಚಿವರನ್ನಾಗಿ ನೇಮಕ ಮಾಡಿ ಹಾಗೂ ನಿಗಮ ಮಂಡಳಿಗಳಲ್ಲೂ ಕೂಡಾ ಅಲ್ಪಸಂಖ್ಯಾತ ಸಮುದಾಯವನ್ನು ಪರಿಗಣಿಸುವಂತೆ ಅಲ್ಪಸಂಖ್ಯಾತ ವೇದಿಕೆಯು ಒತ್ತಾಯಿಸುತ್ತದೆ” ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಶೇಖ್ ಸಿರಾಜ್, ಜಿಲ್ಲಾ ಉಪಾಧ್ಯಕ್ಷ ಸೈಮನ್ ರಾಜ್, ಪದಾಧಿಕಾರಿಗಳಾದ ಜಫರುಲ್ಲಾ ಷರೀಪ್, ಇರ್ಫಾನ್, ಅಂಜದ್ ಖಾನ್, ಅಪ್ರೋಜ್ ಖಾನ್, ನಜರುಲ್ಲಾ ಸೇರಿದಂತೆ ಇತರರು ಇದ್ದರು.