“ದಲಿತ, ಹಿಂದುಳಿದ, ಅಲ್ಪಸಂಖ್ಯಾತರು, ಕಾರ್ಮಿಕರು, ಪ್ರಗತಿಪರ ರೈತರು, ಕನ್ನಡಪರ ಹಾಗೂ ಮಹಿಳಾ ಸಂಘಟನೆಗಳ ಮಹಾ ಒಕ್ಕೂಟದಿಂದ ಜ. 20ರಂದು ಬಾಗಲಕೋಟೆ ಬಂದ್ ಕರೆ ನೀಡಲಾಗಿದೆ” ಎಂದು ಪ್ರಗತಿಪರ ಚಿಂತಕ ಪರಶುರಾಮ ಮಹಾರಾಜನ್ ತಿಳಿಸಿದರು.
“ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಬಾಗಲಕೋಟ ಪಟ್ಟಣದ ನವನಗರದಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದರು.
“ಸಂಘ ಪರಿವಾರ ಹಾಗೂ ಬಿಜೆಪಿ ನಾಯಕರು ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸಂವಿಧಾನದ ವಿರುದ್ಧ ಮಾತನಾಡುವುದನ್ನು ನೋಡಿದ್ದೇವೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ಕಾರಣಕ್ಕಾಗಿ ಇವರು ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಹುಸಿ ಪ್ರೇಮ ತೋರಿಸುತ್ತಿದ್ದಾರೆ. ಅವರ ಮನಸ್ಸಿನಲ್ಲಿ ಮನುವಾದ ತುಂಬಿಕೊಂಡಿದೆ” ಎಂದು ಕಿಡಿಕಾರಿದರು.
“ಪಟ್ಟಣದ ಎಲ್ಲ ವ್ಯಾಪಾರಸ್ಥರು, ಸಂಘ-ಸಂಸ್ಥೆಗಳು, ಬೀದಿಬದಿ ವ್ಯಾಪಾರಸ್ಥರು, ಸಾರ್ವಜನಿಕರು ಬಂದ್‌ಗೆ ಸ್ವಯಂ ಪ್ರೇರಿತವಾಗಿ ಬೆಂಬಲ ನೀಡಬೇಕು. ಇಡೀ ದಿನ ನವನಗರ, ವಿದ್ಯಾಗಿರಿ ಸೇರಿದಂತೆ ನಗರದೆಲ್ಲೆಡೆ ವ್ಯಾಪಾರಸ್ಥರು ತಮ್ಮ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ ಬೆಂಬಲಿಸಬೇಕು. ಬೆಳಗ್ಗೆ ನಗರದ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ. ನಂತರ ವಲ್ಲಭಭಾಯಿ ಚೌಕ್, ಟಾಂಗಾ ನಿಲ್ದಾಣ, ಎಂಜಿ ರಸ್ತೆ, ಬಸವೇಶ್ವರ ವೃತ್ತದ ಮೂಲಕ ಸಾಗಿ ಹೊಳೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಬಹಿರಂಗ ಸಭೆ ನಡೆಸಲಾಗುವುದು” ಎಂದರು.
ಮುಖಂಡ ಪೀರಪ್ಪ ಮ್ಯಾಗೇರಿ ಮಾತನಾಡಿ, “ಡಾ. ಬಿ ಆರ್ ಅಂಬೇಡ್ಕರ್ ಅವರೇ ನಮ್ಮ ಉಸಿರು ಹಾಗೂ ದೇವರು. ಆ ದೇವರಿಗಿಂತ ಬೇರೆ ದೇವರು ನಮಗಿಲ್ಲ. ಅಂತವರ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವಮಾನ ಮಾಡಿರುವುದು ಇಡೀ ದೇಶದ ಎಲ್ಲ ದಲಿತ ಸಮುದಾಯವನ್ನು ಹಿಯಾಳಿಸಿದಂತಾಗಿದೆ. ಸಚಿವ ಸಂಪುಟದಿಂದ ಅವರನ್ನು ವಜಾ ಗೊಳಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸಚಿವ ಪ್ರಿಯಾಂಕ್ ಖರ್ಗೆ ಮನೆ ಮುತ್ತಿಗೆ ಖಂಡಿಸಿ ದಸಂಸ ಪ್ರತಿಭಟನೆ
ಪತ್ರಿಕಾ ಗೋಷ್ಠಿಯಲ್ಲಿ ದಲಿತ ಮುಖಂಡರು ವೈ.ಸಿ. ಕಾಂಬಳೆ, ದ್ಯಾಮಣ್ಣ ಗಾಳಿ, ಹಾಜಿಸಾಬ್ ದಂಡಿನ, ಯುವರಾಜ ಬಂಡಿ, ಪ್ರೇಮನಾಥ, ಗರಸಂಗಿ, ಡಿ.ಬಿ.ಸಿದ್ದಾಪೂರ ಇತರರಿದ್ದರು.