ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಪೋಷಕರು ಕೆಲಸ ಮಾಡುತ್ತಿದ್ದರೆ, ಪುಟ್ಟ ಮಕ್ಕಳು ಆಟವಾಡುತ್ತಾ ನೀರಿನ ಸಂಪ್‌ಗೆ ಬಿದ್ದು ಪ್ರಾಣ ಕಳೆದುಕೊಂಡ ಹಲವು ಪ್ರಕರಣಗಳು ನಮ್ಮ ಮುಂದಿವೆ. ಹೆಣ್ಣುಮಕ್ಕಳ ಮೇಲೆ ಅಲ್ಲೇ ಕೆಲಸ ಮಾಡುವ ಕಾರ್ಮಿಕರಿಂದ ಲೈಂಗಿಕ ದಾಳಿಗಳಾಗುತ್ತಿವೆ. ಎಲ್ಲ ವಯಸ್ಸಿನ ಹೆಣ್ಣುಮಕ್ಕಳು ಮೇಸ್ತ್ರಿ, ದಲ್ಲಾಳಿ, ಕಾರ್ಮಿಕ ಹೀಗೆ ಎಲ್ಲರಿಂದಲೂ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಕೊಲೆ ನಡೆದಾಗ ಸುದ್ದಿಯಾಗುವುದು ಬಿಟ್ಟರೆ ನಿತ್ಯ ಆಗುವ ದೌರ್ಜನ್ಯ ಸದ್ದಾಗುವುದೇ ಇಲ್ಲ.
ಕಳೆದ ಸೋಮವಾರ(ಜ.13) ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಕಟ್ಟಡ ಕಾರ್ಮಿಕ ದಂಪತಿಯ ಆರು ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ, ಹತ್ಯೆ ಮಾಡಲಾಗಿದೆ. ಆರೋಪಿ ಬಿಹಾರ ಮೂಲದ ಅಭಿಷೇಕ್ ಕುಮಾರ್. ಬಾಲಕಿಯ ಹೆತ್ತವರು ಕೂಡಾ ಹೊರ ರಾಜ್ಯದವರು. ಆರೋಪಿ ಅದೇ ಕಟ್ಟಡದ ಗಾರೆ ಕೆಲಸಗಾರ.
ಮತ್ತೊಂದು ಪ್ರಕರಣದಲ್ಲಿ ಬಳ್ಳಾರಿಯ ತೋರಣಗಲ್‌ನಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಐದು ವರ್ಷದ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದ ದುಷ್ಕರ್ಮಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. ಈ ಪ್ರಕರಣದ ಆರೋಪಿ ಕೂಡಾ ಬಿಹಾರ ಮೂಲದವನು. ಬಾಲಕಿಯ ಪೋಷಕರು ಖಾಸಗಿ ಕಾರ್ಖಾನೆಯಲ್ಲಿ ಕೂಲಿ ಕಾರ್ಮಿಕರು. ಅವರೂ ಉತ್ತರ ಪ್ರದೇಶದವರು.
ಇಬ್ಬರು ಅಮಾಯಕ ಹೆಣ್ಣು ಜೀವಗಳು ಹಾದಿ ತಪ್ಪಿದ ಯುವಕರ ಪೈಶಾಚಿಕ ಕೃತ್ಯಕ್ಕೆ ಬಲಿಯಾಗಿದ್ದಾರೆ. ಇವು ನಮ್ಮ ಅಂತಃಸಾಕ್ಷಿಯನ್ನು ಕಲಕಬೇಕಿದ್ದ ಘಟನೆಗಳು. ಆದರೆ ಅವರು ಬೇರೆ ರಾಜ್ಯದವರು ಎಂಬ ಕಾರಣಕ್ಕೆ ಈ ಸಮಾಜದ ಸ್ಪಂದನೆ ಕೂಡಾ ಕ್ಷಣಿಕವಾಗಿದೆ. 24/7 ಸುದ್ದಿ ಮಾಧ್ಯಮಗಳಲ್ಲಿ ನಿಮಿಷದ ಸುದ್ದಿಯಾಗಿ ಮರೆಯಾಗಿದೆ. ಆದರೆ, ಘಟನೆ ನಡೆದಿರುವುದು ಕರ್ನಾಟಕದಲ್ಲಿ, ಭಾರತದ ಐಟಿ ರಾಜಧಾನಿಯಲ್ಲಿ, ಅತ್ಯಂತ ಹೆಚ್ಚು ಜಿಎಸ್‌ಟಿ ಸಂಗ್ರಹವಾಗುವ ಮುಂದುವರಿದ ರಾಜ್ಯದಲ್ಲಿ, ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ…
ಅತ್ಯಾಚಾರಕ್ಕೆ ಈಡಾದ ಪ್ರತಿ ಹೆಣ್ಣಿನ ನೋವು ಒಂದೇ ಆಗಿರುತ್ತದೆ. ಅದರಲ್ಲೂ ಆರು ವರ್ಷದ ಪುಟ್ಟ ಮಗುವೊಂದು ಕೈ ಕಾಲೂ ಬಲಿತಿರದ ಎಳೆತನದಲ್ಲಿ ಬಲಿಷ್ಠ ದುರುಳನಿಂದ ಬಲಾತ್ಕಾರಕ್ಕೆ ಒಳಗಾಗಿ ಆ ನೋವಿನಿಂದ ಅಸುನೀಗುವುದೆಂದರೆ ಇದಕ್ಕಿಂತ ಭೀಕರ ಕ್ರೌರ್ಯ ಬೇರೆ ಯಾವುದಿದೆ? ಇದನ್ನು ವಿರೋಧಿಸಲು, ಈ ದುಷ್ಟ ವ್ಯವಸ್ಥೆಯ ಬಗ್ಗೆ ಸಿಡಿದೇಳಲು ಆರೋಪಿಯ ಧರ್ಮ ಮುಖ್ಯವಾಗಬೇಕೇ? ಅವನು ಮುಸ್ಲಿಮನೇ ಆಗಿರಬೇಕೇ? ಹಿಂದುವಾಗಿದ್ದರೆ ಅತ್ಯಾಚಾರ ಒಪ್ಪಿತವೇ ಅಥವಾ ತಳ್ಳಿಹಾಕಬಹುದಾದ ಹಗುರ ಅಪರಾಧವೇ? ಹೌದು ಎನ್ನುವುದಾದರೆ ನಮ್ಮ ಸಮಾಜ ಎತ್ತ ಸಾಗುತ್ತಿದೆ?
ಇಲ್ಲಿ ಮುಖ್ಯವಾಗಿ ಏಳುವ ಪ್ರಶ್ನೆ ಏನೆಂದರೆ, ಉತ್ತರ ಭಾರತದಿಂದ ಅಥವಾ ಪಕ್ಕದ ರಾಜ್ಯಗಳಿಂದ ಕರ್ನಾಟಕಕ್ಕೆ ಕೂಲಿ ಕಾರ್ಮಿಕರಾಗಿ ಬರುವ ಜನರ ಅದರಲ್ಲೂ ಹೆಣ್ಣುಮಕ್ಕಳ ಸುರಕ್ಷತೆ ಯಾರ ಹೊಣೆ? ಈ ಪ್ರಶ್ನೆಗೆ ಉತ್ತರ ಅಷ್ಟೊಂದು ಸುಲಭವಿಲ್ಲ. ಬದುಕು ಕಟ್ಟಿಕೊಳ್ಳಲು ನಿರುದ್ಯೋಗ ಹೆಚ್ಚಿರುವ, ಅಭಿವೃದ್ಧಿ ಆರೋಗ್ಯ ಶಿಕ್ಷಣದಲ್ಲಿ ಹಿಂದುಳಿದ ಉತ್ತರಪ್ರದೇಶ, ಬಿಹಾರಗಳಿಂದ ಹೆಚ್ಚು ಮಂದಿ ಹೊಟ್ಟೆಪಾಡಿಗಾಗಿ ಕರ್ನಾಟಕಕ್ಕೆ ಬರುತ್ತಿದ್ದಾರೆ. ಕುಶಲಕರ್ಮಿಗಳಾಗಿ(ಟೈಲರ್, ಡಿಸೈನರ್), ಸೆಕ್ಯುರಿಟಿ ಗಾರ್ಡ್, ವಿವಿಧ ಬಗೆಯ ಸಣ್ಣಪುಟ್ಟ ವ್ಯಾಪಾರಿಗಳಾಗಿ ಬರುವವರ ಬದುಕು ಒಂದು ಬಗೆಯಾದರೆ, ಕಟ್ಟಡ -ಕಾರ್ಖಾನೆ ಕೆಲಸಗಳಲ್ಲಿ ಕೂಲಿ ಕೆಲಸಕ್ಕೆ ಬರುವವರ ಬದುಕು ಮತ್ತೊಂದು ಬಗೆಯಾಗಿರುತ್ತದೆ. ಅದರಲ್ಲೂ ಕಟ್ಟಡ ಕಾರ್ಮಿಕರು ಯಾವುದೋ ದಲ್ಲಾಳಿಯ ಸಂಪರ್ಕದಿಂದ ಬಂದಿರುತ್ತಾರೆ. ಒಂದೇ ಕಡೆ ನಿಶ್ಚಿತ ಕೆಲಸ ಇರುವುದಿಲ್ಲ. ಈ ವಾರ ಒಂದು ಕಡೆಯಾದರೆ, ಮುಂದಿನ ವಾರ ಮತ್ತೊಂದು ಕಡೆ. ಹೀಗೆ ಪಾತ್ರೆ ಪಡಗ ಮಕ್ಕಳ ಜೊತೆ ಗಂಡ ಹೆಂಡತಿ ಕೆಲಸದ ಜಾಗಗಳಲ್ಲಿ ಠಿಕಾಣಿ ಹೂಡಬೇಕಿರುತ್ತದೆ. ಪುಟ್ಟ ಮಕ್ಕಳು ಅಲ್ಲೇ ಕಟ್ಟಡ ಸಾಮಾಗ್ರಿಗಳ ನಡುವೆ ಆಟವಾಡುತ್ತ ಬೆಳೆಯುತ್ತಾರೆ. ಶುಚಿತ್ವ, ಪೌಷ್ಟಿಕ ಆಹಾರ, ಬಟ್ಟೆ ಬರೆ, ಶಿಕ್ಷಣ ಯಾವುದೂ ಇರುವುದಿಲ್ಲ. ಅದೊಂದು ದೊಡ್ಡ ಸಮಸ್ಯೆಯಾದರೆ, ಈ ಕಾರ್ಮಿಕ ಕುಟುಂಬಗಳ ಹೆಣ್ಣುಮಕ್ಕಳ ಮೇಲಾಗುವ ಲೈಂಗಿಕ ದಾಳಿಯನ್ನು ತಡೆಯುವುದು ಯಾರ ಹೊಣೆ?

ಸಾಮೂಹಿಕ ಜವಾಬ್ದಾರಿ : ಕುಮಾರ್ ಸಮತಳ
ಕಟ್ಟಡ ಕಾರ್ಮಿಕರ ಹಕ್ಕುಗಳಿಗಾಗಿ ದುಡಿಯುತ್ತಿರುವ ಸಾಮಾಜಿಕ ಕಾರ್ಯಕರ್ತ ಕುಮಾರ್ ಸಮತಳ ಹೇಳುತ್ತಾರೆ- “ಹೊರ ರಾಜ್ಯಗಳಿಂದ ಬರುವ ಕಾರ್ಮಿಕರ ಬಗ್ಗೆ ಸರಿಯಾದ ಮಾಹಿತಿ ಇರಲ್ಲ. ಅವರು ಕಾರ್ಮಿಕ ಇಲಾಖೆಯ ನಿಯಮದಡಿಯೂ ಬರಲ್ಲ. ಕಟ್ಟಡ ಕೆಲಸಕ್ಕೆ ನೇಮಿಸಿಕೊಳ್ಳುವವರು, ಕಾರ್ಖಾನೆಯ ಮಾಲೀಕರು ರಕ್ಷಣೆ ಕೊಡಬೇಕು. ಇಲ್ಲಿ ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹೀಗೆ ಎಲ್ಲರೂ ಜವಾಬ್ದಾರರು. ಕಟ್ಟಡದ ಗುತ್ತಿಗೆದಾರ, ಕಾರ್ಮಿಕರ ಪೂರೈಕೆ ಮಾಡುವ ದಲ್ಲಾಳಿಗಳನ್ನು ಕೂಡಾ ಜವಾಬ್ದಾರಿ ಮಾಡಬೇಕಾಗಿದೆ. ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್ ನಿರ್ಮಾಣವಾಗುವಾಗ ವರ್ಷಗಳ ಕಾಲ ಕಾರ್ಮಿಕರು ಅಲ್ಲೇ ವಾಸವಿರಬೇಕಾದಾಗ ತಾತ್ಕಾಲಿಕ ಶೀಟ್ ಮನೆಗಳನ್ನು ಕಟ್ಟಿಕೊಡಲಾಗುತ್ತದೆ. ಕನಿಷ್ಠ ಶೌಚಾಲಯ, ನೀರು, ಬೆಳಕಿನ ವ್ಯವಸ್ಥೆಯಾದರೂ ಮಾಡಿಕೊಡಲಾಗುತ್ತದೆ. ಆದರೆ, ಖಾಸಗಿ ಕಟ್ಟಡಗಳ ನಿರ್ಮಾಣ ಕೆಲಸಗಳಿಗೆ ಕೆಲ ದಿನಗಳಿಗಷ್ಟೇ ಅಥವಾ ತಿಂಗಳುಗಳ ಕೆಲಸಕ್ಕೆ ಆ ಕಟ್ಟಡಗಳಲ್ಲಿಯೇ ಯಾವುದೇ ಸುರಕ್ಷತೆ ಇಲ್ಲದೇ ಕಾರ್ಮಿಕ ಕುಟುಂಬಗಳು ಬದುಕುತ್ತವೆ. ಈ ಬಗ್ಗೆ ಸ್ವಯಂಸೇವಾ ಸಂಸ್ಥೆಗಳು, ಕಾರ್ಮಿಕ ಪರ ಸಂಘಟನೆಗಳು ಜಾಗೃತಿ ಮೂಡಿಸುವ ಅಗತ್ಯವಿದೆ. ಶುಚಿತ್ವ, ಹೆಣ್ಣುಮಕ್ಕಳ ಸುರಕ್ಷತೆಗೆ ನಿಗಾ ಇಡುವಂತೆ ಕುಟುಂಬಗಳಿಗೆ ಮನವರಿಕೆ ಮಾಡುವುದು ಮುಖ್ಯ. ಪೊಲೀಸರು ಕಟ್ಟಡ ಕಾರ್ಮಿಕರು ಹೆಚ್ಚು ಇರುವ ಕಡೆ ಬೀಟ್ ಹೋಗುವುದು, ಆಗಾಗ ಅಲ್ಲಿನ ಕಾರ್ಮಿಕರ ಬಗ್ಗೆ ಮಾಹಿತಿ ಪಡೆಯುವುದು ಮುಂತಾದ ಕ್ರಮಗಳನ್ನು ಕೈಗೊಂಡರೆ ಕಾರ್ಮಿಕ ಕುಟುಂಬಗಳಿಗೆ ಭದ್ರತೆಯ ಭಾವ ಬರುತ್ತದೆ. ಕ್ರಿಮಿನಲ್‌ಗಳಿಗೆ ಭಯದ ವಾತಾವರಣ ನಿರ್ಮಾಣ ಮಾಡುವುದು ಕೂಡಾ ಮುಖ್ಯ”.

ವಲಸಿಗರ ಲೆಕ್ಕ ಸಿಗಲ್ಲ, ಮಾಲೀಕರೇ ಜವಾಬ್ದಾರರು : ಮಂಜುನಾಥ್
ಈ ದಿನ.ಕಾಮ್ ಜೊತೆ ಮಾತನಾಡಿದ ಕಾರ್ಮಿಕ ಇಲಾಖೆಯ ಅಸಿಸ್ಟೆಂಟ್ ಕಮಿಷನರ್ ಮಂಜುನಾಥ್, “ರಾಜ್ಯಕ್ಕೆ ವರ್ಷದಲ್ಲಿ ಸರಾಸರಿ ಒಂದು ಕೋಟಿ(ಹತ್ತು ಮಿಲಿಯನ್)ಯಷ್ಟು ಕಾರ್ಮಿಕರು ಹೊರ ರಾಜ್ಯಗಳಿಂದ ಬಂದು ಹೋಗುತ್ತಿರುತ್ತಾರೆ. ಅವರ ಲೆಕ್ಕ ಇಡುವುದು ಅಸಾಧ್ಯ. ದೊಡ್ಡ ದೊಡ್ಡ ಕಟ್ಟಡ ನಿರ್ಮಾಣ ಕಂಪನಿಗಳಲ್ಲಿ ಕಾರ್ಮಿಕರ ಮಾಹಿತಿ ಇರುತ್ತದೆ. ಸಣ್ಣಪುಟ್ಟ ಕಟ್ಟಡಗಳ ಕೆಲಸಗಳಲ್ಲಿ ತೊಡಗಿಕೊಳ್ಳುವ ಕಾರ್ಮಿಕರು ಒಂದೆಡೆಯಿಂದ ಮತ್ತೊಂದು ಕಡೆಗೆ ಸಂಚರಿಸುತ್ತಿರುತ್ತಾರೆ. ಇಂತಹ ಕಡೆಗಳಲ್ಲಿ ನಡೆಯುವ ದೌರ್ಜನ್ಯಗಳಿಗೆ ಮಾಲೀಕರೇ ಜವಾಬ್ದಾರರು” ಎಂದು ಹೇಳುತ್ತಾರೆ.
ವಲಸಿಗ ಹುಡುಗರಿಗೆ ಕಾನೂನಿನ ಭಯವೇ ಇಲ್ಲ: ಲತಾಮಾಲ
ಕಾರ್ಮಿಕರ ಕ್ಷೇತ್ರದಲ್ಲಿ ದುಡಿದಿರುವ ಗ್ರಾಮೀಣಾಭಿವೃದ್ಧಿ ತಜ್ಞೆ ಲತಾಮಾಲ ಅವರು ʼಈ ದಿನʼದ ಜೊತೆ ಮಾತನಾಡುತ್ತಾ, “ಕಾನೂನುಗಳು ಇವೆ, ಆದರೆ ಅದರಿಂದ ಉಪಯೋಗವೇನು? ಉತ್ತರದ ರಾಜ್ಯಗಳಿಂದ ಬಂದ ವಲಸಿಗ ಹುಡುಗರಿಗೆ ಯಾವ ತಿಳಿವಳಿಕೆಯಾಗಲಿ, ಕಾನೂನಿನ ಭಯವಾಗಲಿ ಇಲ್ಲ. ಅವರಿಗೆ ಹೀಗೆ ಮಾಡಿದರೆ ತೊಂದರೆಯಾದೀತೆಂಬ ಪರಿಜ್ಞಾನವೇ ಇಲ್ಲ. ಹುಡುಗಿಯರೊಂದಿಗೆ ಅಸಭ್ಯವಾಗಿ ವರ್ತಿಸುವುದೇ ಒಂದು ಮನರಂಜನೆಯಾಗಿದೆ. ಕೆಲವು ಸ್ವಯಂ ಸೇವಾ ಸಂಸ್ಥೆಗಳು ಕೆಲಸ ಮಾಡುತ್ತವಾದರೂ, ಆಗೊಮ್ಮೆ ಈಗೊಮ್ಮೆ ಬರುವ ಅವರ ಮೇಲೆ ಇವರಿಗೆ ಯಾವ ವಿಶ್ವಾಸವೂ ಇಲ್ಲ. ಕಾರ್ಮಿಕ ಇಲಾಖೆ ಈ ಬಗ್ಗೆ ಯಾವ ಕ್ರಮ ವಹಿಸುತ್ತಿದೆಯೋ ತಿಳಿಯದು. ಎಲ್ಲಾ ಕಾರ್ಮಿಕರನ್ನು ನೋಂದಣಿ ಮಾಡಿಕೊಳ್ಳಲು ರೈಲ್ವೆ ನಿಲ್ದಾಣಗಳಲ್ಲಿ ಮತ್ತಿತರ ಕಡೆ ಪ್ರಚಾರವನ್ನೇನೋ ಮಾಡುತ್ತಿದ್ದಾರೆ. ಆದರೆ, ನೋಂದಣಿ ಪ್ರಕ್ರಿಯೆ ಸುಲಭವಾಗಲು ಮತ್ತು ಬೇರೆ ರಾಜ್ಯಗಳಿಂದ ಬಂದವರಿಗೆ, ಅದರಲ್ಲೂ ಹರೆಯದ ಯುವತಿಯರಿಗೆ ರಕ್ಷಣೆ ಒದಗಿಸುವ ವ್ಯವಸ್ಥೆ ಇದೆಯೇ ಎಂಬುದು ಅವರಿಗೆ ತಿಳಿದಿಲ್ಲ. ಕಟ್ಟಡ ನಿರ್ಮಾಣ ಸಂಸ್ಥೆ/ಮಾಲೀಕರಿಗೂ ಹೆಣ್ಣು ಮಕ್ಕಳಿಗೆ ಹಾಗೂ ಮಹಿಳೆಯರಿಗೆ ರಕ್ಷಣೆ ನೀಡುವುದು ತನ್ನ ಜವಾಬ್ದಾರಿ ಎಂಬುದು ಗೊತ್ತಿಲ್ಲ. ಏನಾದರೂ ಅವಘಡ ಸಂಭವಿಸಿದರೆ, ಅವರ ಮೇಲೆ ಯಾವ ಕ್ರಮಗಳೂ ಜರುಗುವುದಿಲ್ಲ. ಇನ್ನು ಅನೌಪಚಾರಿವಾದ ಸಣ್ಣ ಪುಟ್ಟ ನಿರ್ಮಾಣ ಕೆಲಸಗಳಲ್ಲಂತೂ ಕೇಳುವವರೇ ಇಲ್ಲ. ಅಲ್ಲಿ ಏನಾದರೂ ಶೋಷಣೆಗೆ ಒಳಗಾದ ಕುಟುಂಬವೇ ಜವಾಬ್ದಾರಿ” ಎನ್ನುತ್ತಾರೆ.
ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ಅಧ್ಯಕ್ಷರಿಗೆ ಮಾಹಿತಿಯೇ ಇಲ್ಲ!
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ಇಂತಹ ಪ್ರಕರಣಗಳಲ್ಲಿ ಯಾವ ಕ್ರಮ ಕೈಗೊಳ್ಳಲಿದೆ ಎಂದು ಸಮಿತಿಯ ಅಧ್ಯಕ್ಷ ನಾಗಣ್ಣ ಗೌಡ ಅವರನ್ನು ಕೇಳಿದಾಗ ಎಚ್ಚೆತ್ತುಕೊಂಡ ಅವರು, ತಾವು ದೆಹಲಿಯಲ್ಲಿ ಇರುವುದಾಗಿಯೂ ಬೆಂಗಳೂರಿಗೆ ವಾಪಸ್ ಬಂದ ನಂತರ ಸ್ಥಳಕ್ಕೆ ಭೇಟಿ ನೀಡಿ ಕಟ್ಟಡದ ಮಾಲೀಕರ ವಿರುದ್ಧ ದೂರು ದಾಖಲಿಸಲಾಗುವುದು ಎಂದರು. ಮಗುವಿನ ಸಾವಾಗಿ ಐದು ದಿನಗಳಾಗಿವೆ, ಸುದ್ದಿ ಎಲ್ಲೆಡೆ ಬಂದಿದೆ. ಮಕ್ಕಳ ಹಕ್ಕುಗಳ ರಕ್ಷಣೆಗೆಂದೇ ಸಮಿತಿ ಇರುವುದು. ಅಲ್ಲಿ ಅಧ್ಯಕ್ಷರಷ್ಟೇ ಅಲ್ಲ ಸರ್ಕಾರದಿಂದ ನೇಮಕಗೊಂಡ ಅಧಿಕಾರಿ ಇರುತ್ತಾರೆ, ಸದಸ್ಯರಿರುತ್ತಾರೆ. ಕಚೇರಿ, ಸಿಬ್ಬಂದಿ ಎಲ್ಲವೂ ಸರ್ಕಾರದಿಂದ ಒದಗಿಸಲಾಗಿರುತ್ತದೆ. ಮಕ್ಕಳ ಹಕ್ಕುಗಳಿಗೆ ಧಕ್ಕೆಯಾದಾಗ ಯಾರೋ ದೂರು ನೀಡಲು ಕಾಯಬಾರದು. ಸ್ವಯಂಪ್ರೇರಿತರಾಗಿ (ಸುವೋಮೋಟೋ) ದೂರು ದಾಖಲಿಸಿಕೊಳ್ಳಬೇಕು. ಆದರೆ ಅದಾಗುತ್ತಿಲ್ಲ. ಈ ನಿರ್ಲಕ್ಷ್ಯ ಅಮಾನವೀಯ.

ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಪೋಷಕರು ಕೆಲಸ ಮಾಡುತ್ತಿದ್ದರೆ, ಪುಟ್ಟ ಮಕ್ಕಳು ಆಟವಾಡುತ್ತಾ ನೀರಿನ ಸಂಪ್‌ಗೆ ಬಿದ್ದು ಪ್ರಾಣ ಕಳೆದುಕೊಂಡ ಹಲವು ಪ್ರಕರಣಗಳು ನಮ್ಮ ಮುಂದಿವೆ. ಜೊತೆಗೆ ಹೆಣ್ಣುಮಕ್ಕಳ ಮೇಲೆ ಅಲ್ಲೇ ಕೆಲಸ ಮಾಡುವ ಕಾರ್ಮಿಕರಿಂದ ಲೈಂಗಿಕ ದಾಳಿಗಳಾಗುತ್ತಿವೆ. ಎಲ್ಲ ವಯಸ್ಸಿನ ಹೆಣ್ಣುಮಕ್ಕಳು ಮೇಸ್ತ್ರಿ, ದಲ್ಲಾಳಿ, ಕಾರ್ಮಿಕ ಹೀಗೆ ಎಲ್ಲರಿಂದಲೂ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಕೊಲೆಯಂತಹ ಘಟನೆ ನಡೆದಾಗ ಸುದ್ದಿಯಾಗುವುದು ಬಿಟ್ಟರೆ ನಿತ್ಯ ಆಗುವ ದೌರ್ಜನ್ಯ ಸದ್ದಾಗುವುದೇ ಇಲ್ಲ. ನಿರ್ಮಾಣ ಹಂತದ ಕಟ್ಟಡದೊಳಗೆ ಪುರುಷರು, ಮಹಿಳೆಯರು, ಮಕ್ಕಳು ಎಲ್ಲರೂ ಒಂದೇ ಕಡೆ ರಾತ್ರಿ ತಂಗುವುದು, ಕುಡಿತ ಮಾದಕ ವ್ಯಸನದಂತಹ ದುಶ್ಚಟಗಳು ಅತ್ಯಾಚಾರ, ಕೊಲೆಯಂತಹ ಕ್ರೌರ್ಯಗಳಿಗೆ ಪ್ರೇರಣೆಯಾಗುತ್ತಿದೆ. ಬಾಲ್ಯ ವಿವಾಹ, ಹದಿವಯಸ್ಸಿನ ತಾಯಂದಿರು, ಏಡ್ಸ್‌ನಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಜವಾಬ್ದಾರಿ ಏನು?
ಇಲ್ಲಿ ರಾಜಕಾರಣಿಗಳ ಜವಾಬ್ದಾರಿ ಏನು? ಕೇವಲ ಪಕ್ಷ ರಾಜಕೀಯದ ಪ್ರತಿಭಟನೆ ಮಾಡಿಕೊಂಡು ಕಾಲಹರಣ ಮಾಡೋದೇ ಅವರ ಕೆಲಸವೇ? ಜನರ ಮತದಿಂದಾಗಿ ಅಧಿಕಾರದ ಸ್ಥಾನಗಳಿಗೆ ಏರಿದವರು ಸಮಾಜದಲ್ಲಿ ಆಗುತ್ತಿರುವ ಅನ್ಯಾಯ, ಅತ್ಯಾಚಾರಗಳ ವಿರುದ್ಧ ನಿಲ್ಲಬೇಕಲ್ಲವೇ? ಇತ್ತೀಚೆಗೆ ಗೋವಿಗೆ ಸಿಗುತ್ತಿರುವ ಪ್ರಾಮುಖ್ಯತೆ, ಗೌರವ, ಸ್ಪಂದನೆ ಒಂದು ಹೆಣ್ಣು ಮಗುವಿಗೆ ಸಿಗುತ್ತಿಲ್ಲ ಎಂಬುದು ನಾಗರಿಕ ಸಮಾಜವೇ ಲಜ್ಜೆಯಿಂದ ತಲೆ ತಗ್ಗಿಸಬೇಕಾದ ವಿಚಾರ. ತಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಆಗುವ ಅನ್ಯಾಯ, ಅಕ್ರಮಗಳಿಗೆ ಮೌನವಾಗಿರೋದು, ಅಪರಾಧಿಗಳ ರಕ್ಷಣೆ ಮಾಡೋದು, ಆರೋಪಗಳ ತನಿಖೆ ನಡೆಸದಿರೋದು, ವಿಪಕ್ಷದಲ್ಲಿದ್ದಾಗ ಉಗ್ರ ಪ್ರತಿಭಟನೆ ಮಾಡೋದು, ಅಪರಾಧಿಗಳ ಧರ್ಮ ನೋಡಿ ಪ್ರತಿಭಟಿಸೋದು ಇದನ್ನು ಯಾರು ಮಾಡಿದರೂ ಒಪ್ಪಲಾಗದು. ಯಾವುದೇ ಪಕ್ಷ -ಸರ್ಕಾರವಾಗಲಿ ಹೀಗೆ ಮಾಡುವುದು ಮಾನವೀಯತೆಗೆ, ಸಂವಿಧಾನಕ್ಕೆ ಬಗೆಯುವ ಅಪಚಾರ.
ಇದನ್ನೂ ಓದಿ ಹಸುವಿನ ಹರಿದ ಕೆಚ್ಚಲಿನಿಂದ ದ್ವೇಷದ ವಿಷ ಹಿಂಡಲು ಹೊರಟವರು…
ಯಾವುದೇ ದೇಶ, ರಾಜ್ಯ, ಧರ್ಮ ಜಾತಿಯ ಹೆಣ್ಣುಮಗುವೇ ಆಗಲಿ ಅತ್ಯಾಚಾರ ಅತ್ಯಾಚಾರವೇ. ಅದರ ನೋವಿನ, ಆಘಾತದ ಪ್ರಮಾಣ ಈ ಯಾವ ಮಾನದಂಡದಿಂದಲೂ ಹೆಚ್ಚು ಕಡಿಮೆ ಆಗದು. ಆದರೆ ಸಮಾಜದ ಸ್ಪಂದನೆಯ ಮಟ್ಟ ಈ ಎಲ್ಲ ಅಂಶಗಳ ಆಧಾರದಲ್ಲಿ ಹೆಚ್ಚು ಕಡಿಮೆ ಆಗುತ್ತಿರುವುದು ಅತ್ಯಂತ ನೋವಿನ ಸಂಗತಿ. ಒಂದು ಹಸುವಿಗೆ ಮರುಗುವ ಮಂದಿ ಹಸುಳೆಯ ಅತ್ಯಾಚಾರ ಕೊಲೆಗೆ ಮರುಗಿಲ್ಲ ಎಂಬುದು ಎದ್ದು ಕಾಣುತ್ತಿರುವ ಕಟುಸತ್ಯ.

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.