ಬೀದರ್ ಜಿಲ್ಲೆಯಲ್ಲಿ ಹಾಡುಹಗಲೇ ಕೊಲೆ, ಎಟಿಎಂ ದರೋಡೆ ನಡೆಯುತ್ತಿರುವುದನ್ನು ಗಮನಿಸಿದರೆ ಆಡಳಿತ ವ್ಯವಸ್ಥೆ ಸತ್ತು ಹೋಗಿದೆ ಎಂದೆನಿಸುತ್ತಿದೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಘಟನೆ ನಡೆಯಿತು. ಅದು ಮಾಸುವ ಮುನ್ನವೇ ಇಂದು ಅಮಾಯಕ ಸಿಬ್ಬಂದಿಯ ಜೀವ ಹೋಗಿದೆ. ಇಂತಹ ಘಟನೆಗಳಿಂದ ಜಿಲ್ಲೆಯಲ್ಲಿ ಜನಸಾಮಾನ್ಯರು ನಿರಾತಂಕವಾಗಿ ಬದುಕಲು ಸಾಧ್ಯವಿಲ್ಲ. ಇದು ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಸಂಪೂರ್ಣ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕೂಡಲೇ ಉಸ್ತುವಾರಿ ಸಚಿವರು ಇದರ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಭಗವಂತ ಖೂಬಾ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ, ಜಿಲ್ಲಾ ಉಸ್ತುವಾರಿ ಮಂತ್ರಿಗೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲದಿರುವುದು, ದೇಶದ್ರೋಹದ ಘಟನೆಗಳಿಗೆ, ಸಮಾಜಘಾತುಕ ಶಕ್ತಿಗಳಿಗೆ ನೀಡುತ್ತಿರುವ ಕುಮ್ಮಕ್ಕು ಇಂತಹ ಘಟನೆಗಳಿಗೆ ಪ್ರೇರಣೆ ನೀಡುತ್ತಿವೆ ಎಂದಿದ್ದಾರೆ.
ʼಆಡಳಿತ ವ್ಯವಸ್ಥೆಯ ನಡುವೆ ಅಧಿಕಾರಿಗಳಿಗೆ ಅವರ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಬೇಕು. ಆದರೆ ಇಲ್ಲಿ ಉಸ್ತುವಾರಿ ಸಚಿವರು ಎಲ್ಲ ನಾನೇ ಮಾಡಬೇಕು. ನನ್ನ ಕೈಯಲ್ಲಿ ಎಲ್ಲವೂ ಇರಬೇಕೆಂದು ಆಡಳಿತದಲ್ಲಿ ಅತಿಯಾದ ಹಸ್ತಕ್ಷೇಪ ಮಾಡಿದ್ದಕ್ಕೆ ಅಧಿಕಾರಿಗಳಿಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ಈಗಲಾದರೂ ಸಚಿವರು ಈಶ್ವರ ಖಂಡ್ರೆಯವರು ಸ್ವಲ್ಪ ಅಧಿಕಾರಿಗಳಿಗೆ ಕೆಲಸ ಮಾಡಲು ಬಿಡಬೇಕುʼ ಎಂದಿದ್ದಾರೆ.
ಜಿಲ್ಲಾ ಪೊಲೀಸ್ ವ್ಯವಸ್ಥೆಯ ವೈಫಲ್ಯ ಕಾರಣ :
ಗುಂಡಿನ ದಾಳೆ ನಡೆದ ಸ್ಥಳದ ಅಕ್ಕಪಕ್ಕದಲ್ಲೇ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ನ್ಯಾಯಾಲಯ, ತಹಸೀಲ್ದಾರ್ ಕಚೇರಿ ಇವೆ. ಸದಾ ಪೋಲೀಸರು ಇರುವ ಜಿಲ್ಲೆಯ ಹೃದಯಭಾಗದಲ್ಲೇ ಇಂತಹ ಘಟನೆಗಳು ನಡೆಯುತ್ತಿರುವುದು ಜಿಲ್ಲಾ ಪೋಲೀಸ್ ವ್ಯವಸ್ಥೆಯ ವೈಫಲ್ಯವು ಇದಕ್ಕೆ ಕಾರಣವಾಗಿದೆ. ಈವಾಗ ಪೊಲೀಸರು ಕಳ್ಳನನ್ನು ಬಂಧಿಸಬಹುದು, ಆದರೆ ಅಮಾಯಕ ಸಿಬ್ಬಂದಿಯ ಜೀವ ಮತ್ತೆ ಕೊಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾಜಿ ಸಂಸದ ಭಗವಂತ ಖೂಬಾ ಅವರು ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಜೀವ ಕಳೆದುಕೊಂಡ ಗಿರಿ ವೆಂಕಟೇಶ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.
ಈ ಸುದ್ದಿ ಓದಿದ್ದೀರಾ? ಬೀದರ್ ಎಟಿಎಂ ದರೋಡೆ | ದುಷ್ಕರ್ಮಿಗಳ ಬಂಧನಕ್ಕೆ ತುರ್ತು ಕ್ರಮ: ಈಶ್ವರ್ ಖಂಡ್ರೆ
ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತು ಮೃತ ಸಿಬ್ಬಂದಿ ಕುಟುಂಬಕ್ಕೆ ₹1 ಕೋಟಿ ಪರಿಹಾರ ಮತ್ತು ಗಾಯಗೊಂಡ ಸಿಬ್ಬಂದಿಗೆ ಅಗತ್ಯ ಚಿಕಿತ್ಸೆ ಮತ್ತು ₹50 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಈ ಕೃತ್ಯ ಎಸಗಿರುವ ಘಾತುಕರನ್ನು ಆದಷ್ಟೂ ಬೇಗ ಹೆಡೆಮುರಿ ಕಟ್ಟಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಆಗ್ರಹಿಸಿದ್ದಾರೆ.