ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ(ಕೆಯುಡಬ್ಲ್ಯೂಜೆ) 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಪತ್ರಕರ್ತ ಡಾ.ಮಹಮದ್ ಯೂನುಸ್ ಹಾಗೂ ಪ್ರಜಾವಾಣಿ ಜಿಲ್ಲಾ ವರದಿಗಾರ ಕೆ.ಓಂಕಾರ ಮೂರ್ತಿ ಅವರನ್ನು ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಜಿಲ್ಲೆಯ ಇಬ್ಬರು ಪತ್ರಕರ್ತರಿಗೆ ಸಂದಿರುವ ರಾಜ್ಯಮಟ್ಟದ ಗೌರವ ನಮ್ಮೆಲ್ಲರಿಗೂ ಪ್ರಶಸ್ತಿ ಬಂದಂತೆ. ಬೆಂಗಳೂರಿಗೆ ಸೀಮಿತವಾಗಿದ್ದ ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳನ್ನು ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ತಲುಪುವಂತೆ ಮಾಡಿದ್ದು ಮಹಮದ್ ಯೂನುಸ್. ಅಕಾಡೆಮಿ ಸದಸ್ಯರಾಗಿದ್ದ ಅವಧಿಯಲ್ಲಿ ಈ ಕೆಲಸ ಮಾಡಿದರು. ಸಮಾಜಕ್ಕೆ ಉಪಯೋಗ ಆಗುವಂತಹ ಕೆಲಸ ಮಾಡಿದರೆ ಮಾತ್ರ ಸಮಾಜಮುಖಿ ಪತ್ರಕರ್ತರಾಗಲು ಸಾಧ್ಯ. ಸುದ್ದಿ ಹುಡುಕಿಕೊಂಡು ಹೋಗಿ, ಕಣ್ತೆರೆದು ನೋಡಬೇಕು. ಕೋಲಾರದ ಪತ್ರಿಕೋದ್ಯಮದಲ್ಲಿ ಗಟ್ಟಿತನ ಇದೆ. ಅದನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕು ಎಂದರು.
ಓಂಕಾರ ಮೂರ್ತಿ ಅವರು ಜಿಲ್ಲೆಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ ವರದಿಗೆ ಅತ್ಯುತ್ತಮ ಸ್ಕೂಪ್ ಪ್ರಶಸ್ತಿ ಬಂದಿದೆ. ಮೊರಾರ್ಜಿ ವಸತಿ ಶಾಲೆಯಲ್ಲಿ ಮಲದ ಗುಂಡಿಗೆ ಮಕ್ಕಳನ್ನು ಇಳಿಸಿ ಸ್ವಚ್ಛತೆ ಎಂಬ ವಿಶೇಷ ವರದಿ ಬರೆದಿದ್ದರು. ಇಂತಹ ವರದಿಗಳು ಎಲ್ಲರಿಂದಲೂ ಬರಲಿ ಎಂದು ಆಶಿಸಿದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ಈ ಬಾರಿ ಜಿಲ್ಲೆಯ ಇಬ್ಬರಿಗೆ ಪ್ರಶಸ್ತಿ ಬಂದಿದ್ದು, ಇದು ಪತ್ರಕರ್ತರಿಗೆ ಸ್ಪೂರ್ತಿ ಆಗುವಂತದ್ದು. ಪರಿಶ್ರಮ ಹಾಕಿ ಮಾಡುವ ಕೆಲಸಕ್ಕೆ ಪ್ರತಿಫಲ ಸಿಗುತ್ತದೆ ಎಂಬುದಕ್ಕೆ ಪ್ರಶಸ್ತಿಗಳು ಸಾಕ್ಷಿ ಎಂದು ಹೇಳಿದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ ಎಸ್ ಗಣೇಶ್ ಮಾತನಾಡಿ, “ಪ್ರತಿ ವರ್ಷ ಜಿಲ್ಲೆಗೆ ಈ ರೀತಿ ಪ್ರಶಸ್ತಿಗಳು ಬರುತ್ತಿರಬೇಕು. ಈ ಪ್ರಶಸ್ತಿ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೆ ಪ್ರೇರಣೆಯಾಗಲಿ. ಜಿಲ್ಲೆಯ ಸಮಸ್ಯೆಗಳ ಕುರಿತು ಕಣ್ತೆರೆಸುವ ವರದಿಗಳನ್ನು ಬರೆಯುವ ಅವಶ್ಯಕತೆಯಿದೆ” ಎಂದರು.
ಸಂಘದ ಉಪಾಧ್ಯಕ್ಷ ಎ ಸದಾನಂದ ಮಾತನಾಡಿ, “ಇಬ್ಬರಿಗೆ ಪ್ರಶಸ್ತಿ ಬಂದಿರುವುದು ಸಂಘದ ಪಾಲಿಗೆ ಹೆಮ್ಮೆಯ ವಿಚಾರ. ಸಂಘ
ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ರಾಜ್ಯ ಮಟ್ಟದಲ್ಲಿ ಜಿಲ್ಲೆಯ ಪತ್ರಕರ್ತರಿಗೆ ಗೌರವ ಸಿಗುತ್ತಿದೆ. ಇದು ನಮ್ಮ ಸಂಘಕ್ಕೂ ಸಂದ
ಗೌರವ” ಎಂದರು.
ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿರುವ ಮಹಮದ್ ಯೂನುಸ್ ಹಾಗೂ ಓಂಕಾರ ಮೂರ್ತಿ ತಮ್ಮ ಅನಿಸಿಕೆ ಹಂಚಿಕೊಂಡರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ರೂಪಾಯಿ ಮೌಲ್ಯ ಕುಸಿತವೂ, ವಿಶ್ವಗುರುವಿನತ್ತ ಮೋದಿ ಭಾರತವೂ
ಸಂಘದ ಪ್ರಧಾನ ಕಾರ್ಯದರ್ಶಿ ಎಸ್ ಕೆ ಚಂದ್ರಶೇಖರ್, ಹಿರಿಯ ಪತ್ರಕರ್ತ ಬಿ ಸುರೇಶ್, ಹಿರಿಯ ಪತ್ರಕರ್ತ ಪ್ರಕಾಶ್(ಮಾಮಿ) ಹಾಗೂ ಇತರೆ ಪತ್ರಕರ್ತರು ಹಾಜರಿದ್ದರು.