ತಮಿಳುನಾಡಿನಲ್ಲಿ ಆಚರಿಸಲಾಗುವ ಜಲ್ಲಿಕಟ್ಟು ಮತ್ತು ಹೋರಿ ಪಳಗಿಸುವ ಸ್ಪರ್ಧೆಗಳಲ್ಲಿ ಗುರುವಾರ ಏಳು ಮಂದಿ ಸಾವನ್ನಪ್ಪಿದ್ದಾರೆ. 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗುರುವಾರ ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಜಲ್ಲಿಕಟ್ಟು ಮತ್ತು ಹೋರಿ ಪಳಗಿಸುವ ಸ್ಪರ್ಧೆಗಳು ನಡೆದಿವೆ. ಈ ವೇಳೆ, ಹಲವೆಡೆ ಸ್ಪರ್ಧೆಯಲ್ಲಿದ್ದವರು ಮತ್ತು ಪ್ರೇಕ್ಷಕರು ಗಾಯಗೊಂಡಿದ್ದಾರೆ ಮೃತಪಟ್ಟಿದ್ದಾರೆ. ಸಾವನ್ನಪ್ಪಿದ ಏಳು ಮಂದಿಯ ಪೈಕಿ ಆರು ಮಂದಿ ಪ್ರೇಕ್ಷಕರು.
ಕೃಷ್ಣಗಿರ ಜಿಲ್ಲೆಯ ಬಸ್ತಲಪಲ್ಲಿ, ಸೇಲಂ ಜಿಲ್ಲೆಯ ಸೆಂಥರಪಟ್ಟಿ, ಶಿವಗಂಗಾ ಜಿಲ್ಲೆಯ ಸಿರವಾಯಲ್ ಮಂಜುವಿರಟ್ಟು, ಮೆಟ್ಟುಪಟ್ಟಿ ಹಾಗೂ ಮಧುರೈನ ಅಲಂಗನಲ್ಲೂರು ಎಂಬಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ವೀಕ್ಷಿಸಲು ತೆರಳಿದ್ದವರಲ್ಲಿ ತಲಾ ಒಬ್ಬ ಪ್ರೇಕ್ಷಕರೊಬ್ಬರು ಸಾವನ್ನಪ್ಪಿದ್ದಾರೆ.
ಇನ್ನು, ಒದುರಂಪಟ್ಟಿಯ ಮಂಗಲದೇವನಪಟ್ಟಿ ಎಂಬಲ್ಲಿ ಬಸ್ಗಾಗಿ ಕಾಯುತ್ತಿದ್ದ ವ್ಯಕ್ತಿಗೆ ಸ್ಪರ್ಧಾಕಣದಿಂದ ಓಡಿಬಂದ ಎತ್ತು ಗುದ್ದಿದ್ದು, ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸಿರವಾಯಲ್ನಲ್ಲಿ ಹೋರಿಯನ್ನು ಹಿಡಿಯಲು ಪ್ರಯತ್ನಿಸಿದ ಹೋರಿಯ ಮಾಲೀಕ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಪದುಕೊಟ್ಟೈ, ಕರೂರು ಮತ್ತು ತಿರುಚ್ಚಿ ಜಿಲ್ಲೆಗಳಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಗಳಲ್ಲಿ 156 ಮಂದಿ ಗಾಯಗೊಂಡಿದ್ದಾರೆ. ಅಲಂಗನಲ್ಲೂರು ಜಲ್ಲಿಕಟ್ಟುವಿನಲ್ಲಿ 17 ಮಂದಿ ಹೋರಿ ಮಾಲೀಕರು ಮತ್ತು 33 ಮಂದಿ ಪ್ರೇಕ್ಷಕರು ಸೇರಿ 76 ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ, ವಿವಿಧ ಸ್ಥಳಗಳಲ್ಲಿ ಸುಮಾರು 150ಕ್ಕೂ ಮಂದಿ ಗಾಯಗೊಂಡಿದ್ದಾರೆ.
ತಮಿಳುನಾಡಿನಲ್ಲಿ ಪೊಂಗಲ್ (ಸಂಕ್ರಾಂತಿ) ಸಂದರ್ಭದಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ಸಾಂಪ್ರದಾಯಿಕವಾಗಿ ಏರ್ಪಡಿಸಲಾಗುತ್ತದೆ. ಆದರೆ, ಇದು ಪ್ರಾಣಿ ಹಿಂಸೆಯ ಕ್ರೀಡೆ ಎಂಬ ಕಾರಣ, ವಿವಿಧ ಸಂದರ್ಭಗಳಲ್ಲಿ ಜಲ್ಲಿಕಟ್ಟು ಆಚರಣೆಯನ್ನು ನಿಷೇಧಿಸಲಾಗಿತ್ತು. 2014 ಮತ್ತು 2016ರಲ್ಲಿ ನಿಷೇಧ ಹೇರಲಾಗಿತ್ತು. ನಿಷೇಧ ತೆರವಿಗೆ ಆಗ್ರಹಿಸಿ ಪ್ರತಿಭಟನೆಗಳು ನಡೆದಿದ್ದವು. ಆ ನಂತರ, ಪ್ರಾಣಿಗಳನ್ನು ಬಳಸದೆ ಜಲ್ಲಿಕಟ್ಟು ಆಚರಿಸಬೇಕು ಎಂಬ ಷರತ್ತಿನ ಮೇಲೆ ನಿಷೇಧಗಳನ್ನು ತೆರೆಯಲಾಗಿತ್ತು.
ಆದಾಗ್ಯೂ, 2023ರಲ್ಲಿ ಮತ್ತೆ ಜಲ್ಲಿಕಟ್ಟು ನಿಷೇಧಿಸುವ ಚರ್ಚೆ ಮುನ್ನೆಲೆಗೆ ಬಂದಿತ್ತು. ಆಗ, ತಮಿಳನಾಡು ಸರ್ಕಾರವು ಜಲ್ಲಿಕಟ್ಟು ತಮಿಳುನಾಡಿ ಪರಂಪರೆ, ಕ್ರೀಡೆಗೆ ಅವಕಾಶ ಇರುತ್ತದೆ ಎಂದು ಕಾನೂನು ಜಾರಿ ಮಾಡಿತು. ಆ ಕಾನೂನನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. ಆದರೆ, ಜಲ್ಲಿಕಟ್ಟು ತಮಿಳುನಾಡಿನ ಸಾಂಸ್ಕೃತಿಕ ಪರಂಪರೆ ಎಂದು ಶಾಸಕಾಂಗವೇ ಘೋಷಣೆ ಮಾಡಿರುವಾಗ, ನ್ಯಾಯಾಂಗವು ವಿಭಿನ್ನ ಅಭಿಪ್ರಾಯ ಪ್ರಕಟಿಸುವುದು ಸಾಧ್ಯವಿಲ್ಲ ಎಂದಿದ್ದ ಸುಪ್ರೀಂ ಕೋರ್ಟ್, ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ನೀಡುವ ಸರ್ಕಾರದ ನೀತಿಯನ್ನು ಎತ್ತಿಹಿಡಿದಿತ್ತು.