ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪತ್ನಿ ಬುಶ್ರಾ ಬೀಬಿ ಅವರನ್ನು ದೋಷಿ ಎಂದು ಪಾಕಿಸ್ತಾನ ನ್ಯಾಯಾಲಯ ಘೋಷಿಸಿದೆ. ಇಬ್ಬರಿಗೂ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ, ಖಾನ್ ಅವರಿಗೆ 10 ಲಕ್ಷ ರೂ. ಮತ್ತು ಬುಶ್ರಾ ಬೀಬಿ ಅವರಿಗೆ 7 ಲಕ್ಷ ರೂ. ದಂಡ ವಿಧಿಸಿದೆ.
ಅಲ್-ಖಾದಿರ್ ಯೂನಿವರ್ಸಿಟಿ ಪ್ರಾಜೆಕ್ಟ್ ಟ್ರಸ್ಟ್‌ಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಖಾನ್ ದಂಪತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ ಭ್ರಷ್ಟಾಚಾರ ವಿರೋಧಿ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿದೆ. ಶುಕ್ರವಾರ ಅಂತಿಮ ತೀರ್ಪು ಪ್ರಕಟಿಸಿದೆ.
ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಾಬೀತಾಗಿದೆ. ಖಾನ್ ಅವರು ಈಗಾಗಲೇ ಜೈಲಿನಲ್ಲಿದ್ದಾರೆ. ತೀರ್ಪು ಪ್ರಕಟವಾದ ಬಳಿಕ ಬುಶ್ರಾ ಬೀಬಿ ಅವರನ್ನು ಬಂಧಿಸಲಾಗಿದೆ.
ಸರ್ಕಾರಿ ಉಡುಗೊರೆಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದ ಪ್ರಕರಣದಲ್ಲಿ 2023ರ ಆಗಸ್ಟ್‌ನಲ್ಲಿ ಖಾನ್ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಂದಿನಿಂದಲೂ ಅವರು ಜೈಲಿನಲ್ಲಿದ್ದಾರೆ.