ಶಿವಮೊಗ್ಗ ನಗರದ ಹಲವು ಭಾಗಗಳಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು, ಸ್ಥಳೀಯರು, ವಾಹನ ಸವಾರರು ನಿತ್ಯ ಮಹಾನಗರ ಪಾಲಿಕೆಗೆ ಹಿಡಿಶಾಪ ಹಾಕಿಕೊಂಡು ಓಡಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಗೋಪಾಲಗೌಡ ಬಡಾವಣೆ ಬಿ-ಬ್ಲಾಕ್, ಡಿ-ಬ್ಲಾಕ್ ನಿವಾಸಿಗಳು ʼಆಯುಕ್ತರೇ ಸ್ಥಳಕ್ಕೆ ಭೇಟಿ ನೀಡಿ ನಾಯಿ ಹಾವಳಿ ಬಗೆಹರಿಸಿʼ ಎಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಸ್ಥಳೀಯ ನಿವಾಸಿ ಮಂಜುನಾಥ್ ಮನವಿ ಮಾಡಿದ್ದು, “ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ ಸ್ಥಳೀಯರು ಓಡಾಡಲು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ. ಬೈಕು, ಕಾರುಗಳ ಜತೆಗೆ ಮಕ್ಕಳು ಸೈಕಲ್ ಓಡಿಸಲೂ ಆಗದಷ್ಟು ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ ಮತ್ತು ಕೆಲವು ನಾಯಿಗಳು ಐದಾರು ಜನರಿಗೆ ಕಚ್ಚಿರುವ ಘಟನೆಯೂ ನಡೆದಿದೆ” ಎಂದರು.
ಈ ಸುದ್ದಿ ಓದಿದ್ದೀರ ? ಶಿವಮೊಗ್ಗ | ಶಾಸಕ ಚೆನ್ನಿ, ನೀವೆಷ್ಟು ಗೋಶಾಲೆಗಳಿಗೆ ಅನುದಾನ ನೀಡಿದ್ದೀರೆಂದು ಗಂಡಸ್ತನದಿಂದ ಹೇಳಿ: ಎಚ್ ಸಿ ಯೋಗೇಶ್
“ಈ ವಿಚಾರ ಸಂಬಂಧ ಹಲವು ಬಾರಿ ಕರೆ ಮಾಡಿದರೂ ಮಹಾನಗರ ಪಾಲಿಕೆ ಆಯುಕ್ತರು ಯಾವುದೇ ಪ್ರತಿಕ್ರಿಯೆ ನೀಡಿರುವುದಿಲ್ಲ. ಇಷ್ಟಾದರೂ ಕೂಡ ಸಮಸ್ಯೆ ಬಗಹರಿಸುತ್ತಿಲ್ಲ. ಸಮಸ್ಯೆ ಹೀಗೇ ಮುಂದುವರೆದರೆ ನಾವು ಏನು ಮಾಡಬೇಕು?. ಹಾಗಾಗಿ ಸ್ವತಃ ಮಹಾನಗರ ಪಾಲಿಕೆ ಆಯುಕ್ತರೇ ಸ್ಥಳಕ್ಕೆ ಭೇಟಿ ನೀಡಿ, ನಾಯಿಗಳ ಉಪಟಳವನ್ನು ಕಣ್ಣಾರೆ ವೀಕ್ಷಿಸಬೇಕು” ಎಂದು ಮನವಿ ಮಾಡಿದ್ದಾರೆ.
“ಜನವರಿ 20ರೊಳಗೆ ಸೂಕ್ತ ಕ್ರಮ ಜರುಗಿಸದಿದ್ದಲ್ಲಿ ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಎದರು ಧರಣಿ ಮಾಡದೆ ಸ್ಥಳೀಯ ನಿವಾಸಿಗಳಿಗೆ ಬೇರೆ ಮಾರ್ಗ ಉಳಿದಿರುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.