ಗದ್ದುಗೆ ಗುದ್ದಾಟ | ಬಿ ವೈ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಉಳಿಯುತ್ತಾ?

Date:

Advertisements
ಬಿಜೆಪಿಯಲ್ಲಿ ಹೆಸರಿಗೆ 'ಚುನಾವಣೆ' ಎಂದು ಕರೆದರೂ ಪಕ್ಷದ ವರಿಷ್ಠರು ಸೂಚಿಸುವ ವ್ಯಕ್ತಿಯನ್ನೇ ಅಧ್ಯಕ್ಷ ಪಟ್ಟಕ್ಕೆ ಕೂರಿಸುವ ಪದ್ಧತಿ ಇದೆ. ವಿಜಯೇಂದ್ರ ಅವರನ್ನು ಯಾವುದೋ ಲೆಕ್ಕಾಚಾರ ಇಟ್ಟುಕೊಂಡೇ ವರಿಷ್ಠರು ಹಿಂದೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸಿದ್ದರು. ಮತ್ತೆ ಅವರನ್ನೇ ಆಯ್ಕೆ ಮಾಡುವ ಸಾಧ್ಯತೆ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ, ವಿರೋಧಿ ಬಣವು ಸಹ ಹೊಸ ಅಧ್ಯಕ್ಷರ ಪ್ರತಿಷ್ಠಾಪನೆಗೆ ಗುಪ್ತ ಸಮರವನ್ನೇ ನಡೆಸುತ್ತಿದೆ. ಬಿ ಎಲ್‌ ಸಂತೋಷ್‌ ಅವರು ಸಿ ಟಿ ರವಿ, ಅಶ್ವತ್ಥ ನಾರಾಯಣ ಹಾಗೂ ಬಸನಗೌಡ ಪಾಟೀಲ್‌ ಯತ್ನಾಳ್‌ ಹಿಂದಿದ್ದಾರೆ. ಈ  ಗದ್ದುಗೆ ಗುದ್ದಾಟದಲ್ಲಿ ಯಾರು ಗೆಲ್ಲುತ್ತಾರೆ?

ರಾಜ್ಯ ಬಿಜೆಪಿ ಪರಿಸ್ಥಿತಿ ಈಗ ‘ಮನೆಯೊಂದು ಮೂರು ಬಾಗಿಲು’ ಎನ್ನುವಂತಾಗಿದೆ. ಮಾಧ್ಯಮಗಳ ಮುಂದೆ ‘ಶಿಸ್ತಿನ ಪಕ್ಷ’ ಎಂದೇ ಬಿಂಬಿಸಿಕೊಳ್ಳುವ ಬಿಜೆಪಿಯೊಳಗೆ ಮೊದಲಿನಿಂದಲೂ ಬಣ ಬಡಿದಾಟ ಜೋರಾಗಿದೆ. ಆದರೆ ಅದು ಬೂದಿ ಮುಚ್ಚಿದ ಕೆಂಡದಂತಿದೆ. ಆಗಾಗ ಪಕ್ಷದೊಳಗೆ ಅಸಮಾಧಾನದ ಗಾಳಿ ಜೋರು ಬೀಸಿದಾಗ ಬಹಿರಂಗವಾಗಿಯೇ ಆ ಭಿನ್ನಮತ ಸ್ಫೋಟಗೊಂಡಿದ್ದೂ ಇದೆ.

ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಕುರ್ಚಿ ಅಲುಗಾಡುತ್ತಿರುವ ಬಗ್ಗೆ ಗುಸು ಗುಸು ಚರ್ಚೆ ಕಮಲದ ಪಡಸಾಲೆಯಲ್ಲೇ ಹೆಚ್ಚು ಕೇಳಿಬರುತ್ತಿದೆ. ಬಿ ವೈ ವಿಜಯೇಂದ್ರ ರಾಜ್ಯ ಬಿಜೆಪಿ ಘಟದ ರಾಜ್ಯಾಧ್ಯಕ್ಷರಾಗಿ ಒಂದು ವರ್ಷ ಪೂರೈಸುತ್ತಿದ್ದಂತೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಬಗ್ಗೆ ಪಕ್ಷದೊಳಗಿನ ಭಿನ್ನಮತೀಯ ನಾಯಕರಿಂದ ಆಗ್ರಹಗಳು ಜೋರಾಗಿವೆ.

ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟದಿಂದ ತಮ್ಮನ್ನು ಕೆಳಗಿಳಿಸಲಾಗುತ್ತದೆ ಎಂಬ ಮಾತುಗಳು ಕೇಳಿಬಂದ ತಕ್ಷಣವೇ ಹೊಸ ವರ್ಷದಂದು ವಿಜಯೇಂದ್ರ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ, ತಮ್ಮ ಸ್ಥಾನವನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡಿದರು. ಆದರೆ, ಎಲ್ಲ ರಾಜ್ಯಗಳಲ್ಲಿ ರಾಜ್ಯಾಧ್ಯಕ್ಷರ ಆಯ್ಕೆಗಾಗಿ ಬಿಜೆಪಿ ಚುನಾವಣಾ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶಿಸಿರುವುದು ವಿಜಯೇಂದ್ರಗೆ ಮತ್ತಷ್ಟು ತಲೆನೋವು ತಂದಿದೆ.

Advertisements

ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ಹಿನ್ನೆಲೆಯಲ್ಲಿ ಕರ್ನಾಟಕದ ಚುನಾವಣಾಧಿಕಾರಿಯಾಗಿ ಕೇಂದ್ರ ಕೃಷಿ ಸಚಿವ ಶಿವರಾಜ್‌ಸಿಂಗ್ ಚೌಹಾಣ್ ಅವರನ್ನು ನೇಮಕ ಮಾಡಲಾಗಿದೆ. ಶನಿವಾರ (ಜ.18ರಂದು) ಶಿವಮೊಗ್ಗೆಕ್ಕೆ ಶಿವರಾಜ್‌ಸಿಂಗ್ ಚೌಹಾಣ್ ಭೇಟಿ ನೀಡುತ್ತಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.

ಬಿಜೆಪಿಯೊಳಗಿನ ಹಲವು ನಾಯಕರು ರಾಜ್ಯಾಧ್ಯಕ್ಷ ಪಟ್ಟಕ್ಕೆ ಬಹಿರಂಗವಾಗಿ ಬೇಡಿಕೆ ಇಟ್ಟಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದ ರೇಸ್​ನಲ್ಲಿ ಸಿ ಟಿ ರವಿ, ಅಶ್ವತ್ಥ ನಾರಾಯಣ, ಆರ್‌ ಅಶೋಕ್‌, ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್‌ ಯತ್ನಾಳ್‌, ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ನಾಯಕರ ಹೆಸರುಗಳು ಕೇಳಿಬರುತ್ತಿವೆ. ಅತ್ತ ವಿಜಯೇಂದ್ರ ಕೂಡ ರಾಜ್ಯಾಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಶತಪ್ರಯತ್ನ ನಡೆಸಿದ್ದಾರೆ.

ವಿಜಯೇಂದ್ರ ಯಡಿಯೂಋಪ್ಪ

ನಳೀನ್‌ ಕುಮಾರ್‌ ಕಟೀಲ್‌ ಅವರು ರಾಜ್ಯಾಧ್ಯಕ್ಷರಾಗಿದ್ದ ವೇಳೆ ಅವರ ಬದಲಾವಣೆಗೂ ಪಕ್ಷದೊಳಗೆ ಕೂಗು ಕೇಳಿಬಂದಿತ್ತು. 2023ರಲ್ಲಿ ರಾಜ್ಯದ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಸ್ವಲ್ಪ ಮಟ್ಟಿಗೆ ತೇಪೆ ಹಾಕಿ ಭಿನ್ನಮತ ಶಮನಗೊಳಿಸಲಾಗಿತ್ತು. ಆದರೆ, ಚುನಾವಣೆಯ ಫಲಿತಾಂಶ ಹೊರಬಿದ್ದಾಗ ಆಡಳಿತಾರೂಢ ಬಿಜೆಪಿ ಮಕಾಡೆ ಮಲಗಿತ್ತು. ಪ್ರಧಾನಿ ಮೋಧಿ, ಗೃಹ ಸಚಿವ ಅಮಿತ್‌ ಶಾ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್‌ ಸಂತೋಷ್‌ ಅವರಿಗೂ ಚುನಾವಣೆ ಫಲಿತಾಂಶ ತೀವ್ರ ಅವಮಾನ ತಂದಿತ್ತು.

ಸೋಲಿನ ಅವಮಾನಕ್ಕೆ ಒಂದಿಷ್ಟು ತಿಂಗಳುಗಳ ಕಾಲ ಕರ್ನಾಟಕದ ಕಡೆ ಬಿಜೆಪಿಯ ವರಿಷ್ಠರು ತಲೆಹಾಕಿಯೂ ಮಲಗಲಿಲ್ಲ ಅನ್ನಿಸುತ್ತೆ. ಪರಿಣಾಮ ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾದ ವೇಳೆ ನಡೆದ ಮೊದಲ ವಿಧಾನಮಂಡಲ ಅಧಿವೇಶನ ವಿರೋಧ ಪಕ್ಷದ ನಾಯಕರಿಲ್ಲದೇ ನಡೆದು ಹೋಯಿತು. ಆಡಳಿತಾರೂಢ ಪಕ್ಷದ ನಾಯಕರಿಂದ ವಿಪಕ್ಷ ನಾಯಕ ಮತ್ತು ಸಮರ್ಥ ರಾಜ್ಯಾಧ್ಯಕ್ಷ ಆಯ್ಕೆಯ ಬಗೆಗಿನ ಮೂದಲಿಕೆಯ ಮಾತುಗಳು ಬಿಜೆಪಿ ನಾಯಕರನ್ನು ಇನ್ನಿಲ್ಲದಂತೆ ಚುಚ್ಚಿದವು. ಕೊನೆಗೆ ಅವಮಾನ ಸಹಿಸಿಕೊಳ್ಳಲಾಗದೇ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದ ಕಡೆ ದೆಹಲಿಯ ಬಿಜೆಪಿ ವರಿಷ್ಠರು ಕಣ್ಣು ತೆರೆದರು.

ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು, ಪ್ರಬಲ ಲಿಂಗಾಯತ ಸಮುದಾಯ ಬಿ ಎಸ್‌ ಯಡಿಯೂರಪ್ಪ ಅವರ ಬೆನ್ನಿಗಿರುವುದನ್ನು ಅರ್ಥಮಾಡಿಕೊಂಡ ಬಿಜೆಪಿ ವರಿಷ್ಠರು ಬಿಎಸ್‌ವೈ ಆಗ್ರಹಕ್ಕೆ ದುಸರಾ ಮಾತನಾಡದೆ ಪುತ್ರ ವಿಜಯೇಂದ್ರನಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡಿದರು. ಹಾಗೆಯೇ ರಾಜ್ಯದ ಮತ್ತೊಂದು ಪ್ರಬಲ ಒಕ್ಕಲಿಗ ಸಮುದಾಯಕ್ಕೆ ನ್ಯಾಯ ಒದಗಿಸುವ ಪ್ರಯತ್ನವಾಗಿ ಆರ್‌ ಅಶೋಕ್‌ಗೆ ವಿಧಾನಸಭೆಯ ಪ್ರತಿಪಕ್ಷ ಸ್ಥಾನ ನೀಡಲಾಯಿತು.

ಆರ್‌ ಅಶೋಕ್‌ ಅವರ ಆಯ್ಕೆಗೆ ವಿರೋಧಗಳು ದೊಟ್ಟ ಮಟ್ಟದಲ್ಲಿ ಕೇಳಿಬರಲಿಲ್ಲ. ಆದರೆ, ವಿಜಯೇಂದ್ರ ಆಯ್ಕೆಗೆ ಯಡಿಯೂರಪ್ಪ ವಿರೋಧಿ ಬಣದ ನಾಯಕರ ಕಣ್ಣು ಕೆಂಪಾಯಿತು. ಬಸನಗೌಡ ಪಾಟೀಲ್‌ ಯತ್ನಾಳ್‌, ಕೆ ಎಸ್‌ ಈಶ್ವರಪ್ಪ, ರಮೇಶ್‌ ಜಾರಕಿಹೊಳಿ ಅವರು ವಿಜಯೇಂದ್ರ ನಾಯಕತ್ವವನ್ನು ತಾವು ಒಪ್ಪಿಕೊಳ್ಳಲ್ಲ ಎಂದು ಬಹಿರಂಗವಾಗಿಯೇ ಸಾರಿದರು. ನಂತರ ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಘಟದ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಮೇಲೆ ಯಡಿಯೂರಪ್ಪ ಕುಟುಂಬದ ವಿರುದ್ಧ ಮತ್ತೊಂದು ಸುತ್ತಿನ ಸಂಘರ್ಷ ಪಕ್ಷದೊಳಗೆ ಬಲವಾಗತೊಡಗಿತು. ಬಿಜೆಪಿಯನ್ನು ಯಡಿಯೂರಪ್ಪ ಅವರ ಕಪಿಮುಷ್ಠಿಯಿಂದ ಬಿಡಿಸಿಕೊಳ್ಳಬೇಕು ಎನ್ನುವ ಪ್ರಯತ್ನದಲ್ಲಿ ಸದಾ ಮುಂದಿರುವ ಬಿ ಎಲ್‌ ಸಂತೋಷ್‌ ಅವರು ಸಂಘಪರಿವಾರದ ನಿಷ್ಠ ನಾಯಕರನ್ನು ಮುಂದಿಟ್ಟುಕೊಂಡು ಹೊಸ ಹೊಸ ಆಟ ಮುಂದುವರಿಸಿದರು.

ಬಿ ಎಲ್‌ ಸಂತೋಷ್‌

ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟವನ್ನು ಜೀವಂತವಾಗಿಟ್ಟಿರುವುದೇ ಅಮಿತ್‌ ಶಾ ಮತ್ತು ಬಿ ಎಲ್‌ ಸಂತೋಷ್‌ ಎನ್ನುವ ಮಾತಿದೆ. ಯುಡಿಯೂರಪ್ಪ ಅವರಿಗಿರುವ ಲಿಂಗಾಯತ ಸಮುದಾಯದ ಏಕಮೇವ ನಾಯಕ ಎಂಬ ಹಣೆಪಟ್ಟಿಯನ್ನು ಕಳಚಲು ಪಂಚಮಸಾಲಿ ಮೀಸಲಾತಿ ಹೋರಾಟ ದಾಳವಾಗುತ್ತಿದೆ. ಹೀಗಾಗಿಯೇ ಬಸನಗೌಡ ಪಾಟೀಲ್‌ ಯತ್ನಾಳ್‌ ಹೋರಾಟದ ಮುಂಚೂಣಿಯಲ್ಲಿದ್ದಾರೆ. ‘ಪಂಚಮಸಾಲಿ ಸಮುದಾಯವು ಯಡಿಯೂರಪ್ಪ ಅವರನ್ನು ಒಪ್ಪಿಕೊಳ್ಳಲ್ಲ’ ಎನ್ನುವ ನರೇಷನ್‌ ಯತ್ನಾಳ್‌ ಮೂಲಕ ಕಟ್ಟಲಾಗುತ್ತಿದೆ.‌

ಮಹಾರಾಷ್ಟ್ರದ ‘ಶಿವಸೇನೆ ತರ’ ರಾಜ್ಯದಲ್ಲೂ ‘ಪಂಚಮಸಾಲಿ ಸೇನೆ’ ಕಟ್ಟುವ ತಯಾರಿ

ಪಂಚಮಸಾಲಿ ಸಮುದಾಯದ ಹೋರಾಟದಲ್ಲಿರುವ ಸಕ್ರಿಯ ನಾಯಕರೊಬ್ಬರು ಈ ದಿನ.ಕಾಮ್‌ ಜೊತೆ ಪಂಚಮಸಾಲಿ ಸಮುದಾಯದ ಹೋರಾಟದ ಮುಂದಿನ ಭವಿಷ್ಯವನ್ನು ಕೂಡ ಬಿಚ್ಚಿಟ್ಟಿದ್ದಾರೆ. ಯಡಿಯೂರಪ್ಪ ಅವರ ಶಕ್ತಿಗೆ ಮುಳುವಾಗಲು ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಜೀವಂತವಾಗಿಟ್ಟುಕೊಟ್ಟು ಕಾಲಕ್ರಮೇಣ ಲಿಂಗಾಯತ ಸಮುದಾಯದಲ್ಲೇ ಎರಡು ಬಣಗಳನ್ನು ಮಾಡಿ, ಮಹಾರಾಷ್ಟ್ರದಲ್ಲಿ ಶಿವಸೇನೆ ಹುಟ್ಟಿದಂತೆ ಕರ್ನಾಟಕದಲ್ಲೂ ‘ಪಂಚಮಸಾಲಿ ಸೇನೆ’ಯನ್ನು ಸ್ಥಾಪಿಸುವ ಆಲೋಚನೆ ಯಡಿಯೂರಪ್ಪ ವಿರೋಧಿ ಬಣದ ನಾಯಕರಿಗಿದೆ ಎನ್ನಲಾಗಿದೆ.

ಯಡಿಯೂರಪ್ಪ ವಿರುದ್ಧ ಪರ್ಯಾಯ ನಾಯಕತ್ವ ಕಟ್ಟುತ್ತಿರುವ ಬಿ ಎಲ್‌ ಸಂತೋಷ್‌ ಟೀಮ್‌ ಸದಸ್ಯರು ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಹಿಂದಿದ್ದಾರೆ. ಹೀಗಾಗಿಯೇ ವಿಜಯೇಂದ್ರ ವಿರುದ್ಧ ಯತ್ನಾಳ್‌ ಎಷ್ಟೇ ನಾಲಿಗೆ ಹರಿಬಿಟ್ಟರು ಶಿಸ್ತಿನ ಪಕ್ಷದಲ್ಲಿ ಅವರ ಶಿಸ್ತು ಕ್ರಮ ಜರುಗಲೇ ಇಲ್ಲ.

ಪಂಚಮಸಾಲಿ ಹೋರಾಟ 1
ಬೆಳಗಾವಿಯಲ್ಲಿ ನಡೆದ ಪಂಚಮಸಾಲಿ ಹೋರಾಟ

ಈ ಗದ್ದುಗೆ ಗುದ್ದಾಟ ಗುಪ್ತವಾಗಿ ನಡೆಯುತ್ತಿದೆ. ಪಟ್ಟು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತಿಲ್ಲ. ಅನುಭವದ ಕೊರತೆ, ಸರಕಾರದ ವಿರುದ್ಧ ಹೋರಾಟ ನಡೆಸುವುದಕ್ಕೆ ಹಿಂದೇಟು ಸಹಿತ ವಿಜಯೇಂದ್ರ ವಿರುದ್ಧ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಬಣ ಹಲವು ಸುತ್ತಿನ ಆರೋಪ ಪಟ್ಟಿ ಸಲ್ಲಿಸಿದೆ. ಇದರ ಜತೆಗೆ ತಟಸ್ಥ ಬಣದಿಂದಲೂ ಆಕ್ಷೇಪವಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಒಕ್ಕಲಿಗ ಹಾಗೂ ಮಹಿಳಾ ಕೋಟಾದಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿಯೋಜಿಸಬೇಕು ಎನ್ನುವ ಆಗ್ರಹವೂ ಮುನ್ನೆಲೆಗೆ ಬಂದಿದೆ.

“ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ಆಯ್ಕೆ ಮಾಡುವುದು ಆಗ ಅನಿವಾರ್ಯವಾಗಿತ್ತು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ಮಾಡಲಾಗುತ್ತಿದೆ. ವಿಜಯೇಂದ್ರ ಬದಲಾಗುತ್ತಾರೆ ಎಂದು ನೇರವಾಗಿ ಹೇಳಲ್ಲ. ಆದರೆ, ಪ್ರಜಾಪ್ರಭುತ್ವ ನೆಲೆಯಲ್ಲಿ ನಮ್ಮ ಪಕ್ಷದ ಆಂತರಿಕ ಚುನಾವಣಾ ಪ್ರಕ್ರಿಯೆ ದೇಶದಾದ್ಯಂತ ಜಾರಿಯಲ್ಲಿದೆ” ಎನ್ನುವ ಮೂಲಕ ಪರೋಕ್ಷವಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಡೆಯಲಿದೆ ಎಂಬುದನ್ನು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.

“ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಹೆಚ್ಚು ದಿನ ಉಳಿಯುವುದಿಲ್ಲ. ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಪದಚ್ಯುತಗೊಳಿಸಿದರೆ ಮಾತ್ರ ತಾವು ಬಿಜೆಪಿಗೆ ಮರಳಲು ಸಾಧ್ಯ” ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಟೊಂಕ ಕಟ್ಟಿ ನಿಂತಿದ್ದಾರೆ. ಯಡಿಯೂರಪ್ಪ ಹೊಂದಾಣಿಕೆಯ ರಾಜಕೀಯದಲ್ಲಿ ತೊಡಗಿದ್ದಾರೆ ಎಂಬುದು ಕೆ ಎಸ್‌ ಈಶ್ವರಪ್ಪ ಅವರ ಗಂಭೀರ ಆರೋಪ. ಅಲ್ಲದೇ ಇತ್ತೀಚೆಗೆ ನಡೆದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಒಂದೂ ಸ್ಥಾನ ಗೆಲ್ಲದಿರುವುದು ವಿಜಯೇಂದ್ರ ಸ್ಥಾನಕ್ಕೆ ಮತ್ತಷ್ಟು ಕುತ್ತು ತಂದಿದೆ.

ಕಳೆದ ಕೆಲವು ದಿನಗಳ ಹಿಂದೆ ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾದ ವೇಳೆ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ರಾಜಕ್ಕೆ ಭೇಟಿ ನೀಡಿ ಬಣ ಬಡಿದಾಟ ತಣ್ಣಗಾಗಿಸಿದ್ದರು. ಆದರೆ, ಈಗ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಕೂಗು ಏಳುತ್ತಿದ್ದಂತೆ ಬಿಜೆಪಿಯ ಮಾಜಿ ಸಚಿವ ಕುಮಾರ್ ಬಂಗಾರಪ್ಪ, “ಜನವರಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಆಗುವ ಸಾಧ್ಯತೆ ಇದೆ. ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನನ್ನು ಪರಿಗಣಿಸಿ ಎಂದು ಹೇಳಿದ್ದೇನೆ. ಕಳೆದ 30 ವರ್ಷಗಳಿಂದ ನಾನು ರಾಜಕಾರಣದಲ್ಲಿ ಇದ್ದೇನೆ. ಒಬಿಸಿ ಸಮುದಾಯಕ್ಕೆ ಆದ್ಯತೆ ನೀಡಿದರೆ ನನ್ನ ಪರಿಗಣಿಸಿ ಎಂದಿದ್ದೇನೆ” ಎಂದು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಟವೆಲ್‌ ಹಾಕಿದ್ದಾರೆ.

ಯತ್ನಾಳ್ ಜಾರಜಿ

“ನಾನು ಕೂಡ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ. ವಿಜಯೇಂದ್ರನೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಇಟ್ಟುಕೊಳ್ಳಲಿ. ನಾನು ರಾಜ್ಯಾಧ್ಯಕ್ಷನಾಗುತ್ತೇನೆ” ಎಂದು ಹಿಂದೆಯೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ‌ಸ್ಪಷ್ಟಪಡಿಸಿದ್ದಾರೆ. ಇನ್ನು ಶಾಸಕ ರಮೇಶ್​ ಜಾರಕಿಹೊಳಿ ನೇರವಾಗಿಯೇ ವಿಜಯೇಂದ್ರ ವಿರುದ್ಧ ಹರಿಹಾಯ್ದಿದ್ದು, “ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸಲು ಆಗುತ್ತಿಲ್ಲ. ಅಧ್ಯಕ್ಷ ಸ್ಥಾನದಿಂದ ತಕ್ಷಣವೇ ಅವರನ್ನು ಬದಲಾವಣೆ ಮಾಡಬೇಕು. ಯಡಿಯೂರಪ್ಪ ಹುಟ್ಟು ಹೋರಾಟಗಾರ. ಆದರೆ ವಿಜಯೇಂದ್ರ ಯಡಿಯೂರಪ್ಪ ಅವರ ಕಾಲಿನ ಧೂಳಿಗೂ ಸಮನಲ್ಲ. ಜೀನ್ಸ್ ಪ್ಯಾಂಟ್, ಟೀ ಶರ್ಟ್ ಹಾಕಿಕೊಂಡು ಓಡಾಡುವ ವಯಸ್ಸು ಅವರದ್ದು” ಎಂದು ಟೀಕಿಸಿದ್ದಾರೆ.

“ವಿಜಯೇಂದ್ರ ಜೊತೆ ಲಿಂಗಾಯತ, ಒಕ್ಕಲಿಗರು ಇಲ್ಲ. ನನ್ನ ಬೆನ್ನಿಗೆ ನಿಲ್ಲುವಂತೆ ವಿಜಯೇಂದ್ರ ಹಿಂದುಳಿದ ನಾಯಕರಿಗೆ ಬೆದರಿಸುತ್ತಿದ್ದಾರೆ. ವಿಜಯೇಂದ್ರ ಜೊತೆಯಲ್ಲಿರುವ ಬಹುತೇಕರು ಹಿಂದುಳಿದ‌ ಸಮುದಾಯದವರು. ಲಿಂಗಾಯತ, ಒಕ್ಕಲಿಗರು ಯಾರೂ ಇಲ್ಲ. ಪಾಪ ರೇಣುಕಾಚಾರ್ಯ ರಾಜಕೀಯ ‌ಅಸ್ತಿತ್ವಕ್ಕಾಗಿ ಅವರ ಜೊತೆಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಾರಾಗಬೇಕು ಎಂದು ನಾನು ಬಹಿರಂಗವಾಗಿ ಹೇಳಲ್ಲ. ಆದರೆ, ಆಂತರಿಕ ಸಭೆ ಮಾಡಿ ಕೇಳಲಿ, ಆಗ ನನ್ನ ಅಭಿಪ್ರಾಯ ತಿಳಿಸುತ್ತೇನೆ” ಎಂದು ರಮೇಶ್​ ಜಾರಕಿಹೊಳಿ ಹೇಳಿದ್ದಾರೆ.

ಒಟ್ಟಾರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ನಿರ್ಗಮನಕ್ಕೆ ಸಿದ್ಧತೆಯ ಹೊಸ್ತಿಲಲ್ಲೇ ರಾಜ್ಯ ಬಿಜೆಪಿಯ ಆಂತರಿಕ ರಾಜಕಾರಣವೂ ಹೊಸ ಸ್ವರೂಪ ಪಡೆಯುತ್ತಿದೆ. ನಡ್ಡಾ ನಿರ್ಗಮನಕ್ಕೆ ಮುನ್ನ ತಮ್ಮ ಅವಧಿ ವಿಸ್ತರಣೆ ಮಾಡಿಕೊಳ್ಳುವುದಕ್ಕೆ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಶತಪ್ರಯತ್ನ ನಡೆಸುತ್ತಿದ್ದರೆ, ಅವರ ಪರವಾಗಿ ಯಡಿಯೂರಪ್ಪ ಮತ್ತು ಬಣ ನಿಂತಿದೆ. ಇದಕ್ಕೆ ಪ್ರತಿಯಾಗಿ ವಿರೋಧಿ ಬಣವು ಹೊಸ ಅಧ್ಯಕ್ಷರ ಪ್ರತಿಷ್ಠಾಪನೆಗೆ ಗುಪ್ತ ಸಮರವನ್ನೇ ನಡೆಸುತ್ತಿದೆ. ಬಿ ಎಲ್‌ ಸಂತೋಷ್‌ ಅವರು ಸಿ ಟಿ ರವಿ, ಅಶ್ವತ್ಥ ನಾರಾಯಣ ಹಾಗೂ ಬಸನಗೌಡ ಪಾಟೀಲ್‌ ಯತ್ನಾಳ್‌ ಹಿಂದಿದ್ದಾರೆ.

ಫೆಬ್ರುವರಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ನಡೆಯಲಿದ್ದು, ಅದಕ್ಕೆ ಮುನ್ನ ರಾಜ್ಯ ಅಧ್ಯಕ್ಷರ ಸ್ಥಾನಕ್ಕೂ ಆಯ್ಕೆ ಆಗಬೇಕು. ಬಿಜೆಪಿಯಲ್ಲಿ ಹೆಸರಿಗೆ ‘ಚುನಾವಣೆ’ ಎಂದು ಕರೆದರೂ ಪಕ್ಷದ ವರಿಷ್ಠರು ಸೂಚಿಸುವ ವ್ಯಕ್ತಿಯನ್ನೇ ಅಧ್ಯಕ್ಷ ಪಟ್ಟಕ್ಕೆ ಕೂರಿಸುವ ಪದ್ಧತಿ ಇದೆ. ರಾಜ್ಯದಲ್ಲಿ ಈಗಾಗಲೇ ಬೂತ್ ಮತ್ತು ಮಂಡಲಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಬಹುತೇಕ ಮುಗಿದಿದೆ. ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ. ಆದರೆ, ವರಿಷ್ಠರ ಮನಸ್ಸಿನಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ವಿಜಯೇಂದ್ರ ಅವರನ್ನು ಅಧ್ಯಕ್ಷರಾನ್ನಾಗಿ ತಂದು ಕೂರಿಸಿದಾಗಲೂ ಎಲ್ಲರಿಗೂ ಅಚ್ಚರಿ ಆಗಿತ್ತು. ಸ್ವತಃ ವಿಜಯೇಂದ್ರ ಅವರೇ ಅಧ್ಯಕ್ಷ ಹುದ್ದೆ ಒಲಿದು ಬರಬಹುದು ಎಂದು ನಿರೀಕ್ಷಿಸಿರಲಿಲ್ಲ. ಯಾವುದೋ ಲೆಕ್ಕಾಚಾರ ಇಟ್ಟುಕೊಂಡೇ ವರಿಷ್ಠರು ತಂದು ಕೂರಿಸಿದ್ದರು. ಮತ್ತೆ ಅವರನ್ನೇ ಆಯ್ಕೆ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಗದ್ದುಗೆ ಗುದ್ದಾಟದಲ್ಲಿ ವಿಜಯೇಂದ್ರ ಅವರ ಗದ್ದುಗೆ ಉರುಳುತ್ತಾ ಅಥವಾ ಭದ್ರವಾಗಿಯೇ ಇರುತ್ತಾ ಎಂಬುದು ಕಾದು ನೋಡಬೇಕು.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ, ಬೆಂಕಿ ಹಚ್ಚಿ ಸುಟ್ಟ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಎಸ್ ಎಫ್ ಐ ಆಗ್ರಹ

ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹಿರಿಯೂರು ತಾಲೂಕಿನ 19 ವರ್ಷದ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಆಹ್ವಾನ ಸಂಪೂರ್ಣ ಸುಳ್ಳು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಈ ಬಾರಿಯ ದಸರಾ ಉದ್ಘಾಟನೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಆಹ್ವಾನಿಸಲಾಗಿದೆ...

Download Eedina App Android / iOS

X