ಬಿಜೆಪಿ ವಿಜಯೇಂದ್ರ ಕಾಂಗ್ರೆಸ್ಸಿನ ಡಿ.ಕೆ. ಶಿವಕುಮಾರ್ ಪರ ವಕಾಲತ್ತು ವಹಿಸುತ್ತಿರುವುದೇಕೆ?

Date:

Advertisements
ಮಾಧ್ಯಮಗಳ ಬಲದಿಂದ 'ನಾಯಕ'ರಾಗಿರುವ ವಿಜಯೇಂದ್ರ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಟೀಕಿಸಿ, ಪ್ರಶ್ನಿಸಿ, ಜನರಲ್ಲಿ ಜಾಗೃತಿ ಉಂಟು ಮಾಡುವ ಬದಲು, ಡಿಕೆ ಪರ ವಕಾಲತ್ತು ವಹಿಸುತ್ತಿದ್ದಾರೆ. ಹೊಂದಾಣಿಕೆ ರಾಜಕಾರಣವನ್ನು ಬಹಿರಂಗಗೊಳಿಸಿ, ಬೆತ್ತಲಾಗುತ್ತಿದ್ದಾರೆ.

”ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅಧಿಕಾರದಿಂದ ಇಳಿಸಲು ಜನ ಕುಡುಗೋಲು ಬಡಿಗೆ ಹಿಡಿದು ಬರುತ್ತಾರೆ” ಎಂದು ಜ. ೧೭ರಂದು ಶುಕ್ರವಾರ ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರು, ಶಾಸಕರು, ಮಾಜಿ ಮುಖ್ಯಮಂತ್ರಿಗಳ ಪುತ್ರರು ಆದ ವಿಜಯೇಂದ್ರ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾರೆಂದರೆ, ಮಾಧ್ಯಮಗಳು ಆದ್ಯತೆ ನೀಡಿ ಪ್ರಕಟಿಸುತ್ತವೆ. ಅದು ಸಹಜ ಕೂಡ.

ಆದರೆ ಇಲ್ಲಿ, ವಿಜಯೇಂದ್ರ ವಿಷಯದಲ್ಲಿ ಮಾಧ್ಯಮಗಳ ಒಲವು ಕೊಂಚ ಹೆಚ್ಚಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ಅತಿ ಎನಿಸುವಷ್ಟಾಗಿದೆ. ವಿಜಯೇಂದ್ರ ನಿಂತರೂ, ಕುಳಿತರೂ, ಕೆಮ್ಮಿದರೂ ಸುದ್ದಿ ಮಾಡುತ್ತವೆ. ಪ್ರಚಾರ ನೀಡಿ ಪ್ರೋತ್ಸಾಹಿಸುತ್ತವೆ. ಈ ‘ಪ್ರೋತ್ಸಾಹ’ ಏಕೆ ಎಂದು ಬುದ್ಧಿವಂತ ಓದುಗರು ಅರ್ಥ ಮಾಡಿಕೊಳ್ಳಬೇಕು, ಇರಲಿ.

Advertisements

ಸಿದ್ದರಾಮಯ್ಯರನ್ನು ಜನ ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಲು ಬಡಿಗೆ ಹಿಡಿದು ಬರುತ್ತಾರೆಂದ ವಿಜಯೇಂದ್ರ ಮುಂದುವರೆದು, ”ಸಿದ್ದರಾಮಯ್ಯರ ರಾಜಕೀಯ ಚಾಣಾಕ್ಷ. ತಮ್ಮ ಅವಧಿ ಮುಗಿಯುತ್ತಿದೆ ಅಂತ ರಾಜಕೀಯ ತಂತ್ರ ಕುತಂತ್ರ ಮಾಡುತ್ತಿದ್ದಾರೆ. ಡಿಕೆಶಿ ವಿರುದ್ಧ ರಾಜಕೀಯ ದಾಳ ಉರುಳಿಸುತ್ತಿದ್ದಾರೆ. ಪಕ್ಷ ಅಧಿಕಾರಕ್ಕೆ ಬರಲು ನನ್ನದು ಸಿಂಹಪಾಲು ಅಂತ ಡಿಕೆಶಿ, ಸಿಎಂ ಆಗಬೇಕು ಅಂತ ಕನಸು ಕಾಣುತ್ತಿದ್ದಾರೆ. ಇನ್ನೊಂದು ಕಡೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿದರೂ ಡಿಕೆ ಸಿಎಂ ಆಗಬಾರದು ನಾವು ಆಗಬೇಕು ಅಂತ ಸಚಿವರು ಡಿನ್ನರ್ ಮೀಟಿಂಗ್ ಮಾಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಪೂರ್ಣಾವಧಿ ಸಿಎಂ ಆಗಲ್ಲ. ಯಾವುದೇ ಕ್ಷಣದಲ್ಲಾದರೂ ರಾಜೀನಾಮೆ ಕೊಡಬಹುದು” ಎಂದಿದ್ದಾರೆ.  

ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಏನೆಂದರೆ, ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಆಡಳಿತವೈಖರಿ ಬಗ್ಗೆ ಟೀಕಿಸುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯನವರ ವಿರುದ್ಧ ನಿಲುವು ತಳೆದು, ಡಿಕೆ ಶಿವಕುಮಾರ್ ಪರ ಒಲುವು ತೋರುತ್ತಿದ್ದಾರೆ.

ಅಸಲಿಗೆ ಅಧಿಕಾರ ಹಂಚಿಕೆ ಎನ್ನುವುದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಕರ್ನಾಟಕದ ಜನ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಬಹುಮತ ಪಡೆದು ಕಾಂಗ್ರೆಸ್ ಪಕ್ಷ, ಹೈಕಮಾಂಡ್ ಮುಖ್ಯಮಂತ್ರಿ ಯಾರಾಗಬೇಕು, ಅವರು ಎಷ್ಟು ದಿನ ಆ ಕುರ್ಚಿಯಲ್ಲಿ ಕೂರಬೇಕು ಎನ್ನುವುದನ್ನು ನಿರ್ಧರಿಸುತ್ತದೆ. ಅದು ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಸಂಗತಿ.

ಆದರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಏಕೆ ಡಿಕೆ ಪರ ಒಲುವು ತೋರುತ್ತಿದ್ದಾರೆ, ಅವರಿಗೆ ಅದರಲ್ಲೇನು ಆಸಕ್ತಿ?

ಈ ಬಗ್ಗೆ ಹೆಸರು ಹೇಳಲು ಇಚ್ಛಿಸದ ಬಿಜೆಪಿ ನಾಯಕರೊಬ್ಬರು, ”ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ವಿಜಯೇಂದ್ರ ಏನೂ ಆಗಿರಲಿಲ್ಲ. ಆದರೂ ಎಲ್ಲಾ ಖಾತೆಗಳಲ್ಲೂ ಕೈಯಾಡಿಸುತ್ತಿದ್ದರು. ಮುಖ್ಯಮಂತ್ರಿಗಳ ಬಳಿ ಬರುವ ಫೈಲ್‌ಗಳಿಗೆ ಸಹಿ ಹಾಕುತ್ತಿದ್ದವರು ಅವರಾದರೂ, ಯಾವುದಕ್ಕೆ ಹಾಕಬೇಕು – ಹಾಕಬಾರದು ಎನ್ನುವುದನ್ನು ನಿರ್ಧರಿಸುತ್ತಿದ್ದುದು ವಿಜಯೇಂದ್ರ. ಸಿಎಂ ಯಡಿಯೂರಪ್ಪನವರಿಗೆ ಇದ್ದ ಮೂರ್‍ನಾಲ್ಕು ಮಂದಿ ಮೀಡಿಯಾ ಅಡ್ವೈಸರ್‍‌ಗಳನ್ನು ಹೊರಗಟ್ಟಿ, ಮೀಡಿಯಾ ಮ್ಯಾನೇಜ್ ಮಾಡಿದ್ದೂ ಅವರೇ. ಅಲ್ಲಿಂದಲೇ ನಿಮ್ಮ ಪತ್ರಕರ್ತರು ವಿಜಯೇಂದ್ರರಿಗೆ ಹತ್ತಿರವಾಗಿದ್ದು. ಆದರೆ ‘ಪವರ್ ಟಿವಿ’ಯವರು ಮಾತ್ರ ವಿಜಯೇಂದ್ರರ ವಿರುದ್ಧ ತಿರುಗಿ ಬಿದ್ದಿದ್ದರು. ಅವರ ‘ಲೀಲೆ’ಗಳನ್ನು ಬಿತ್ತರಿಸಲಾಗುವುದೆಂದು ಸಮಯ ನಿಗದಿ ಮಾಡಿದ್ದರು. ಬಿತ್ತರವಾಗುವ ಸಮಯಕ್ಕೆ ಪವರ್ ಟಿವಿಯ ಪವರ್ ಕಟ್ ಮಾಡಲಾಗಿತ್ತು. ಕಚೇರಿಯನ್ನು ಧ್ವಂಸಗೊಳಿಸಲಾಗಿತ್ತು. ಪ್ರಸಾರ ಸ್ಥಗಿತಗೊಂಡಿತ್ತು. ಆದರೆ ಅವರು ವಿಜಯೇಂದ್ರ ವಿರುದ್ಧ ಬಿಜೆಪಿ ಹೈಕಮಾಂಡಿಗೆ ಸಿಡಿ ಸಮೇತ ದೂರು ನೀಡಿದ್ದರು. ಅದೇ ಸಿಡಿಯನ್ನು ಅಂದು ವಿರೋಧ ಪಕ್ಷದಲ್ಲಿದ್ದ ಡಿ.ಕೆ. ಶಿವಕುಮಾರ್ ಅವರಿಗೂ ಕೊಟ್ಟಿದ್ದರು. ಅವರು ನೇರವಾಗಿ ಬಂದು ಯಡಿಯೂರಪ್ಪನವರ ಕೈಗಿಟ್ಟು, ಹೊಂದಾಣಿಕೆ ಮುಖ್ಯ ಎಂದಿದ್ದರು. ಅದೇ ಹೊಂದಾಣಿಕೆ ಈಗ ಯಡಿಯೂರಪ್ಪನವರ ಬಗ್ಗೆ ಇರುವ ಪೊಕ್ಸೋ ಕೇಸಿನಲ್ಲಿಯೂ ಕಾಣುತ್ತಿದೆ” ಎಂದರು.

ರಾಜ್ಯದ ಬಲಿಷ್ಠ, ಬಹುಸಂಖ್ಯಾತ ಸಮುದಾಯವಾದ ಲಿಂಗಾಯತ ಜಾತಿಗೆ ಸೇರಿದ ಯಡಿಯೂರಪ್ಪ ಈಗ ಮಾಜಿ ಮುಖ್ಯಮಂತ್ರಿ. ಆದರೂ ಅವರು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ವರಿಷ್ಠ ನಾಯಕರೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ. ಆ ಸಂಪರ್ಕ ಡಿಸಿಎಂ ಡಿ.ಕೆ. ಶಿವಕುಮಾರ್ ಮೇಲಿರುವ ಮನಿ ಲಾಂಡರಿಂಗ್, ಐಟಿ ಕೇಸ್‌ಗಳಿಗೆ ಅನುಕೂಲವಾಗಿರಬಹುದು ಅಥವಾ ಇಲ್ಲದೇನೂ ಇರಬಹುದು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ರೂಪಾಯಿ ಮೌಲ್ಯ ಕುಸಿತವೂ, ವಿಶ್ವಗುರುವಿನತ್ತ ಮೋದಿ ಭಾರತವೂ

ಆದರೆ ಅವರ ನಡುವೆ ಸ್ನೇಹವಿದೆ. ಆ ಸ್ನೇಹ ವ್ಯಾವಹಾರಿಕವಾಗಿರಬಹುದು, ಇಲ್ಲವೇ ರಾಜಕಾರಣವಾಗಿರಬಹುದು. ಅದನ್ನು ಮುಂದುವರೆಸಿರುವ ವಿಜಯೇಂದ್ರ, ಡಿ.ಕೆ. ಶಿವಕುಮಾರ್ ಮೇಲೆ ಮುಗಿಬಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಚರ್ಚೆಯನ್ನು ಮುನ್ನೆಲೆಗೆ ತಂದು, ಸಿಎಂ ರೇಸಿನಿಂದ ದೂರವಿಡಲು ನೋಡುತ್ತಿರುವ ಕಾಂಗ್ರೆಸ್ಸಿಗರ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಸಿದ್ದರಾಮಯ್ಯನವರನ್ನು ಜನ ಬಡಿಗೆ ಹಿಡಿದುಕೊಂಡು ಬಂದು ಕುರ್ಚಿಯಿಂದ ಕೆಳಗಿಳಿಸುತ್ತಾರೆ ಎನ್ನುತ್ತಿದ್ದಾರೆ.

ಸೋಜಿಗದ ಸಂಗತಿ ಎಂದರೆ, ಡಿ.ಕೆ. ಶಿವಕುಮಾರ್ ಅವರನ್ನು ಕೆಪಿಸಿಸಿ ಹುದ್ದೆಯಿಂದ ಕೆಳಗಿಳಿಸಲು ಕಾಂಗ್ರೆಸ್‌ನಲ್ಲಿ ಕಾದಾಟ ಜೋರಾಗಿದ್ದರೆ, ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಿಂದ ವಿಜಯೇಂದ್ರರನ್ನು ಕೆಳಗಿಳಿಸಲು ಬಿಜೆಪಿಯಲ್ಲೂ ಅಂಥದ್ದೇ ಕದನ ಕುತೂಹಲದ ಘಟ್ಟ ತಲುಪಿದೆ.

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ವಿಜಯೇಂದ್ರ ಡಿಫ್ಯಾಕ್ಟೋ ಸಿಎಂ ಆಗಿ, ಬಿಜೆಪಿಯ ಹಿರಿಯ ಸಚಿವರ ಖಾತೆಗಳಲ್ಲಿ ಕೈಯಾಡಿಸುತ್ತಿದ್ದುದು ಮತ್ತು ಎಲ್ಲದರಲ್ಲೂ ಫಾರ್ಟಿ ಪರ್ಸೆಂಟ್ ಎನ್ನುತ್ತಿದ್ದುದು ಬಿಜೆಪಿಗರಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಗಿತ್ತು. ಅದೇ ಕಾರಣಕ್ಕೆ ಪಕ್ಷ ಇಬ್ಭಾಗವಾಗಿತ್ತು. ಆರೆಸ್ಸೆಸ್ ಬಲಗೊಂಡಿತ್ತು. ಹೈಕಮಾಂಡಿಗೆ ದೂರು ಹೋಗಿತ್ತು. ಆ ಅಸಮಾಧಾನ ಯಡಿಯೂರಪ್ಪನವರು ಸಿಎಂ ಕುರ್ಚಿಯಿಂದ ಕೆಳಗಿಳಿಯುತ್ತಿದ್ದಂತೆ ಶಮನಗೊಂಡಿತ್ತು. ಆದರೆ, ಲೋಕಸಭಾ ಚುನಾವಣೆಗೂ ಮುನ್ನ, ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದು ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಭುಗಿಲೇಳುವಂತೆ ಮಾಡಿತ್ತು. ಪಕ್ಷದಲ್ಲಿ ಗುಂಪುಗಾರಿಕೆ ಹೆಚ್ಚಾಗಿತ್ತು. ಅದು ಮುಡಾ, ವಾಲ್ಮೀಕಿ, ವಕ್ಫ್ ಪ್ರಕರಣಗಳನ್ನು ಜನರಲ್ಲಿಗೆ ತೆಗೆದುಕೊಂಡು ಹೋಗುವ ಪ್ರತಿಭಟನೆಗಳಲ್ಲಿ ಬಿಜೆಪಿ ನಾಯಕರ ನಡುವಿನ ಭಿನ್ನಮತ ಎದ್ದುಕಾಣತೊಡಗಿತ್ತು.

ಅದರಲ್ಲೂ ಮುಡಾ ಹಗರಣವನ್ನು ಜನರಲ್ಲಿಗೆ ಕೊಂಡೊಯ್ಯುವ ಭಾಗವಾಗಿ ಬಿಜೆಪಿ ಮತ್ತು ಜೆಡಿಎಸ್ ಮೈಸೂರಿನಿಂದ ಬೆಂಗಳೂರಿಗೆ ನಡೆಸುವ ಪಾದಯಾತ್ರೆ ಕುರಿತು ಬಸನಗೌಡ ಪಾಟೀಲ ಯತ್ನಾಳ್, ‘ಅದು ಅಡ್ಜಸ್ಟ್‌ಮೆಂಟ್ ಪಾದಯಾತ್ರೆ, ಡಿಕೆ ಪರವಾಗಿ, ಸಿದ್ದರಾಮಯ್ಯ ವಿರುದ್ಧವಾಗಿ ನಡೆಯುತ್ತಿರುವ ಪಾದಯಾತ್ರೆ’ ಎಂದಿದ್ದರು.

ವಿಜಯೇಂದ್ರ ಡಿಕೆ1

ಹಾಗೆ ಯತ್ನಾಳ್ ಬಹಿರಂಗವಾಗಿ ಹೇಳುವ ಹಿಂದೆ ಆರೆಸ್ಸೆಸ್‌ನ ಬಿ.ಎಲ್. ಸಂತೋಷ್ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇದ್ದಾರೆ. ಅವರ ಆಜ್ಞೆ, ಆದೇಶಗಳಂತೆ ಕೆಲಸ ಮಾಡುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಲ್, ರಮೇಶ್ ಜಾರಕಿಹೊಳಿ ಬಹಿರಂಗವಾಗಿಯೇ ವಿಜಯೇಂದ್ರರ ವಿರುದ್ಧ ಸೆಟೆದು ನಿಂತಿದ್ದಾರೆ. ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸುವತನಕ ವಿರಮಿಸುವುದಿಲ್ಲ ಎಂದು ಶಪಥ ತೊಟ್ಟಿದ್ದಾರೆ. ಅದಕ್ಕೆ ಸಿ.ಟಿ. ರವಿ, ಅಶ್ವತ್ಥನಾರಾಯಣ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಕುಮ್ಮಕ್ಕು ಕೊಡುತ್ತಿದ್ದಾರೆ. ಯಡಿಯೂರಪ್ಪ ಮತ್ತವರ ಮಕ್ಕಳಿಂದ ಪಕ್ಷವನ್ನು ಉಳಿಸಿ ಎಂದು ಬಸವರಾಜ ಬೊಮ್ಮಾಯಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿಗಳು ದೆಹಲಿಗೆ ದೂರು ನೀಡಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಹಾ ಕುಂಭಮೇಳ ಯಾರಿಗಾಗಿ, ಯಾತಕ್ಕಾಗಿ?

ಹೀಗೆ ರಾಜ್ಯ ಬಿಜೆಪಿ ಒಡೆದ ಮನೆಯಂತಾಗಿದೆ. ಯಾರೂ ಯಾರ ಮಾತನ್ನೂ ಕೇಳದಂತಾಗಿದೆ. ದಿಲ್ಲಿಯ ವರಷ್ಠರು ರಾಜ್ಯದತ್ತ ತಲೆಹಾಕಿಯೂ ಮಲಗದಂತಾಗಿದ್ದಾರೆ. ವಿಚಿತ್ರವೆಂದರೆ, ರಾಜ್ಯ ಬಿಜೆಪಿಯಲ್ಲಿ ಇಷ್ಟೆಲ್ಲ ರಾಜಕೀಯ ಬೆಳವಣಿಗೆಗಳಾಗುತ್ತಿದ್ದರೂ ಸುದ್ದಿ ಮಾಧ್ಯಮಗಳು ತುಟಿ ಬಿಚ್ಚುವುದಿಲ್ಲ. ಬಿಜೆಪಿಯ ಅಂತಃಕಲಹವನ್ನು ಸುದ್ದಿ ಮಾಡುವುದಿಲ್ಲ. ಮಾಡಿದರೂ, ಕಾಣುವಂತಿರುವುದಿಲ್ಲ. ಏಕೆಂದರೆ, ಆರೆಸ್ಸೆಸ್, ಬಿಜೆಪಿ, ಮೋದಿ, ಸನಾತನ ಮತ್ತು ‘ಸಂಥಿಂಗ್’ ಕಾರಣವಾಗಿರುತ್ತದೆ.

ಅಂತಹ ಮಾಧ್ಯಮಗಳ ಬಲದಿಂದ ‘ನಾಯಕ’ರಾಗಿರುವ ವಿಜಯೇಂದ್ರ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಟೀಕಿಸಿ, ಪ್ರಶ್ನಿಸಿ, ಜನರಲ್ಲಿ ಜಾಗೃತಿ ಉಂಟು ಮಾಡಲು ಬದಲು, ಡಿಕೆ ಪರ ವಕಾಲತ್ತು ವಹಿಸುತ್ತಿದ್ದಾರೆ. ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಹೊಂದಾಣಿಕೆ ರಾಜಕಾರಣವನ್ನು ಬಹಿರಂಗಗೊಳಿಸಿ, ಬೆತ್ತಲಾಗುತ್ತಿದ್ದಾರೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

Download Eedina App Android / iOS

X