ದೆಹಲಿ ವಿಧಾನಸಭೆಗೆ ಫೆಬ್ರವರಿ 5ರಂದು ಚುನಾವಣೆ ನಡೆಯಲಿದೆ. ಚುನಾವಣೆಗಾಗಿ ಬಿಜೆಪಿಯ ಪ್ರಣಾಳಿಕೆಯನ್ನು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಬಿಡುಗಡೆ ಮಾಡಿದ್ದಾರೆ. ಪ್ರಣಾಳಿಕೆಯಲ್ಲಿ, ಮಹಿಳೆಯರಿಗೆ ಮಾಸಿಕ 2,500 ರೂ. ಸಹಾಯಧನ ನೀಡುವುದಾಗಿ ಮತ್ತು 500 ರೂ.ಗೆ ಎಲ್‌ಪಿಜಿ ವಿತರಿಸುವುದಾಗಿ ಬಿಜೆಪಿ ಭರವಸೆ ನೀಡಿದೆ.
ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ನಡ್ಡಾ, “ಪ್ರಣಾಳಿಕೆಯು ದೆಹಲಿ ಪ್ರಗತಿಗೆ ನೀಲನಕ್ಷೆಯಾಗಿ ಕಾರ್ಯನಿರ್ವಹಿಸುತ್ತದೆ. ಪಕ್ಷವು ಅಧಿಕಾರಕ್ಕೆ ಬಂದರೆ ಅಸ್ತಿತ್ವದಲ್ಲಿರುವ ಎಲ್ಲ ಕಲ್ಯಾಣ ಯೋಜನೆಗಳನ್ನು ಮುಂದುವರಿಸುವುತ್ತದೆ. ಜೊತೆಗೆ, ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರುತ್ತದೆ” ಎಂದು ಹೇಳಿದ್ದಾರೆ.
“ನಾವು 2014ರ ಲೋಕಸಭಾ ಚುನಾವಣೆ ವೇಳೆ 500 ಭರವಸೆಗಳನ್ನು ದೇಶದ ಜನರಿಗೆ ನೀಡಿದ್ದೆವು. ಅದರಲ್ಲಿ, 499 ಭರವಸೆಗಳನ್ನು ಈಡೇರಿಸಿದ್ದೇವೆ. 2019ರಲ್ಲಿ, ನಾವು 235 ಭರವಸೆಗಳನ್ನು ನೀಡಿದ್ದೆವು, ಅವುಗಳಲ್ಲಿ 225 ಭರಸೆಗಳನ್ನು ಪೂರ್ಣಗೊಳಿಸಿದ್ದೇವೆ. ಉಳಿದವು ಅನುಷ್ಠಾನಗೊಳ್ಳುವ ಹಂತದಲ್ಲಿದೆ” ಎಂದು ಹೇಳಿದ್ದಾರೆ.
“ಮಹಿಳೆಯರ ಸಬಲೀಕರಣವು ಬಿಜೆಪಿಗೆ ಆದ್ಯತೆಯಾಗಿದೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಮಹಿಳಾ ಸಮಾನ್ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ದೆಹಲಿಯಲ್ಲಿಯೂ ಅದೇ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತೇವೆ” ಎಂದು ಹೇಳಿದ್ದಾರೆ.
ಬಿಜೆಪಿಯ ಪ್ರಮುಖ ಘೋಷಣೆಗಳು:
- ಮಹಿಳಾ ಸಮೃದ್ಧಿ ಯೋಜನೆಯಡಿ ಮಹಿಳೆಯರಿಗೆ ₹2,500 ಮಾಸಿಕ ನೆರವು.
- ಆರ್ಥಿಕವಾಗಿ ದುರ್ಬಲ ವರ್ಗದ ಮಹಿಳೆಯರಿಗೆ ₹500ಕ್ಕೆ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್‌ಗಳು, ಹೋಳಿ ಮತ್ತು ದೀಪಾವಳಿ ಸಮಯದಲ್ಲಿ ತಲಾ ಒಂದು ಉಚಿತ ಸಿಲಿಂಡರ್.
- ದೆಹಲಿಯಲ್ಲಿ ಪ್ರತಿ ಕುಟುಂಬಕ್ಕೆ ₹5 ಲಕ್ಷ ಆರೋಗ್ಯ ವಿಮೆಯನ್ನು ಒದಗಿಸುವ ಆಯುಷ್ಮಾನ್ ಭಾರತ್ ಯೋಜನೆಯ ಅನುಷ್ಠಾನ.
- ದೆಹಲಿ ನಿವಾಸಿಗಳಿಗೆ ₹5 ಲಕ್ಷ ಹೆಚ್ಚುವರಿ ಆರೋಗ್ಯ ವಿಮೆ.
- 60–70 ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ ₹2,500 ಮಾಸಿಕ ಪಿಂಚಣಿ.
- 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ ₹3,000 ಮಾಸಿಕ ಪಿಂಚಣಿ.
- ಜೆಜೆ ಕ್ಲಸ್ಟರ್‌ಗಳಲ್ಲಿ ಅಟಲ್ ಕ್ಯಾಂಟೀನ್‌ಗಳ ಸ್ಥಾಪನೆ. ಕೇವಲ 5 ರೂ.ಗೆ ಪೌಷ್ಟಿಕ ಊಟ.