ಜನವರಿ 23ರಿಂದ ರಣಜಿ ಟ್ರೋಫಿಯ ಪಂದ್ಯಾವಳಿ ಅರಂಭವಾಗಲಿದೆ. ಭಾರತೀಯ ಕ್ರಿಕೆಟ್ ತಂಡದ ಎಲ್ಲ ಆಟಗಾರರು ರಣಜಿ ಟೂರ್ನಿಯಲ್ಲಿ ಆಟುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ. ಆದಾಗ್ಯೂ, ಅನಾರೋಗ್ಯದ ಕಾರಣದಿಂದಾಗಿ ರಣಜಿಯಲ್ಲಿ ಆಡಲಾಗುವುದಿಲ್ಲ ಎಂದು ವಿರಾಟ್ ಕೊಹ್ಲಿ ಬಿಸಿಸಿಐಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ದೆಹಲಿ ತಂಡದಲ್ಲಿ ಕೊಹ್ಲಿ ಅವರ ಹೆಸರನ್ನು ಪಟ್ಟಿ ಮಾಡಲಾಗಿತ್ತು. ಆದರೆ, ಇದೀಗ, ಅವರು ಟೂರ್ನಿಯಲ್ಲಿ ಆಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಅಂತೆಯೇ, ಕರ್ನಾಟಕ ತಂಡದಲ್ಲಿ ಆಡಲಿದ್ದ ಕೆ.ಎಲ್ ರಾಹುಲ್ ಕೂಡ ರಣಜಿಯಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಕೊನೆ ಪಂದ್ಯದಲ್ಲಿ ಕೊಹ್ಲಿ ಕುತ್ತಿಗೆ ಸೆಳೆತ ಸಮಸ್ಯೆಯನ್ನು ಎದುರಿಸಿದ್ದರು. ಉತ್ತಮ ಪ್ರದರ್ಶನವನ್ನೂ ನೀಡಲು ಸಾಧ್ಯವಾಗಿರಲಿಲ್ಲ. ಫಿಸಿಯೋ ಚಿಕಿತ್ಸೆಯನ್ನು ಪಡೆದಿದ್ದರು. ಆದಾಗ್ಯೂ, ಸಂಪೂರ್ಣ ಗುಣಮುಖರಾಗಿಲ್ಲವೆಂದು ಹೇಳಿಕೊಂಡಿರುವ ಕೊಹ್ಲಿ ರಣಜಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಬಿಸಿಸಿಐನ ಕೇಂದ್ರೀಯ ಗುತ್ತಿಗೆ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿರುವ ಪ್ರತಿಯೊಬ್ಬ ಅಟಗಾರನೂ ದೇಶೀಯ ಕ್ರಿಕೆಟ್ ‘ರಣಜಿ’ಯಲ್ಲಿ ಆಡಲೇಬೇಕೆಂದು ಬಿಸಿಸಿಐ ಕಡ್ಡಾಯಗೊಳಿಸಿದೆ. ತಪ್ಪಿದಲ್ಲಿ, ಅಂತಹವರ ವಿರುದ್ಧ ನಿರ್ಬಂಧಗಳನ್ನು ಹೇರಬಹುದು. ಅಲ್ಲದೆ, ಐಪಿಎಲ್‌ನಲ್ಲಿ ಆಡುವುದನ್ನೂ ನಿಷೇಧಿಸಬಹುದು ಎಂದು ಎಚ್ಚರಿಕೆಯನ್ನೂ ನೀಡಲಾಗಿದೆ.
ಒಂದು ವೇಳೆ, ರಣಜಿಯಲ್ಲಿ ಆಡಲು ಸಾಧ್ಯವಾಗಲಿದ್ದರೆ, ಆ ಆಟಗಾರರು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ತಮ್ಮ ಸಮಸ್ಯೆಗಳನ್ನು ತಿಳಿಸಿ, ಟೂರ್ನಿಯಿಂದ ಹೊರ ಉಳಿಯಲು ಅನುಮತಿ ಪಡೆಯಬೇಕು ಎಂದು ಬಿಸಿಸಿಐ ನಿರ್ದೇಶನ ನೀಡಿದೆ.