ಬಳ್ಳಾರಿಯಲ್ಲಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ(ಕೆಎಸ್‌ಡಬ್ಲ್ಯೂಸಿ) ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ ಸುಮಾರು 6 ಕೋಟಿ ರೂಪಾಯಿ ಮೌಲ್ಯದ ಸುಮಾರು 24,000 ಕ್ವಿಂಟಾಲ್ ಜೋಳ ಸೇವನೆಗೆ ಯೋಗ್ಯವಲ್ಲವೆಂದು ತಿಳಿದುಬಂದಿದೆ. ಹುಳು ಬಿದ್ದಿರುವ ಜೋಳವನ್ನು ಬಳ್ಳಾರಿ ಜಿಲ್ಲೆ ಮತ್ತು ಸುತ್ತಮುತ್ತಲಿನ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಸಲಾಗುತ್ತಿದೆ ಎನ್ನಲಾಗಿದೆ.
ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಶುಕ್ರವಾರ ಕೆಎಸ್‌ಡಬ್ಲ್ಯೂಸಿಯ ಯುನಿಟ್-2ರ ಗೋದಾಮಿಗೆ ಭೇಟಿ ನೀಡಿದಾಗ ಇದು ಬೆಳಕಿಗೆ ಬಂದಿತು. ಒಟ್ಟಾರೆಯಾಗಿ, ತಲಾ 50 ಕೆಜಿ ತೂಕದ 48,000 ಚೀಲ ಜೋಳದಲ್ಲಿ ಹುಳ ಪತ್ತೆಯಾಗಿದೆ.
ನ್ಯಾಯಮೂರ್ತಿ ವೀರಪ್ಪ, ಉಪ ನೋಂದಣಾಧಿಕಾರಿ ಅರವಿಂದ್ ಎನ್ ವಿ ಮತ್ತು ಇತರರು ಪ್ರಶ್ನಿಸಿದಾಗ, “ಕೆಎಸ್‌ಡಬ್ಲ್ಯೂದ ಬಳ್ಳಾರಿ ಘಟಕದ ವ್ಯವಸ್ಥಾಪಕಿ ಶರಾವತಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ಸಕಿನಾ ಅವರು 2024ರ ಮಾರ್ಚ್ 29ರಂದು ಭಾರತೀಯ ಆಹಾರ ನಿಗಮ(ಎಫ್‌ಸಿಐ)ದಿಂದ ಜೋಳ ಸೇವನೆಗೆ ಯೋಗ್ಯವಾಗಿದೆಯೆಂದು ಪ್ರಮಾಣಪತ್ರ ಪಡೆದಿದ್ದೇವೆಂದು ಹೇಳಿದರು. ಹಾಗಾಗಿ ನ್ಯಾಯಬೆಲೆ ಅಂಗಡಿಗಳ ಮೂಲಕ ಜೋಳವನ್ನು ವಿತರಿಸಲು ಹಾವೇರಿ ಮತ್ತು ಇತರ ಜಿಲ್ಲೆಗಳಿಗೆ ಕಳುಹಿಸಲಾಗಿದೆ” ಎಂಬುದು ತಿಳಿದುಬಂದಿದೆ.
“ಜೋಳವು ಪ್ರಾಣಿಗಳು ತಿನ್ನಲೂ ಯೋಗ್ಯವಲ್ಲ. ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಒಟ್ಟಾರೆಯಾಗಿ 48,000 ಚೀಲ ಜೋಳ ವ್ಯರ್ಥವಾಗಿದೆ” ಎಂದು ಉಪ ಲೋಕಾಯುಕ್ತರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ʼನಮ್ಮ ಬದುಕೇ ಹೋರಾಟ; ನಾವು ಮತಕ್ಕಾಗಿ ಬೇಕೇ ಹೊರತು ಸಾಮಾಜಿಕ ಬದುಕಿಗಲ್ಲʼ; ಆದಿವಾಸಿಗಳ ಅಳಲು
“ನ್ಯಾಯಮೂರ್ತಿ ವೀರಪ್ಪ ಅವರ ವಾಗ್ವಾದದಿಂದ ಅಸಮಾಧಾನಗೊಂಡ ಶರಾವತಿ, ʼಗೋದಾಮಿಗೆ ಭೇಟಿ ನೀಡಿದ್ದನ್ನು ದೃಢೀಕರಿಸಲು ಜಿಪಿಎಸ್‌ಗೆ ಲಿಂಕ್ ಮಾಡುವ ಫೋಟೋವನ್ನು ಒದಗಿಸುವಂತೆ ಕೇಳಿದರು. ಈ ನಡೆ ನಮ್ಮನ್ನು ಪ್ರಶ್ನಿಸುವ ಹಂತವನ್ನು ತಲುಪಿದ್ದಾರೆಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆʼ ಎಂದು ಉಪ ನೋಂದಣಾಧಿಕಾರಿ ಅರವಿಂದ್ ಎನ್ ವಿ ಹೇಳಿದರು.
“ತೆರಿಗೆದಾರರ ಹಣವನ್ನು ಬಳಸಿ ಜೋಳವನ್ನು ಖರೀದಿಸಲಾಗಿದ್ದು, ಅದನ್ನು ಈ ರೀತಿ ವ್ಯರ್ಥ ಮಾಡಬಾರದು. ಸಂಬಂಧಪಟ್ಟ ಸಚಿವರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದರು.