ಗೃಹಲಕ್ಷ್ಮಿ ಯೋಜನೆಯು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ವಿಸ್ತೀರ್ಣ ಮಾಡಿರುವುದು ಬಹುದೊಡ್ಡ ಸಂತಸದ ವಿಚಾರ. ಆದರೆ, ಕೆಲ ಲಿಂಗತ್ವ ಅಲ್ಪಸಂಖ್ಯಾತರಿಗೆ ದಾಖಲೀಕರಣ, ಮನೆ ಬಾಡಿಗೆಗೆ ನೀಡದಿರುವುದು, ವಾಸಸ್ಥಳ ದೃಢೀಕರಣ ನೀಡುವಲ್ಲಿ ಗೊಂದಲಗಳು ಎದುರಾಗಿದ್ದು, ಐಡೆಂಟಿಟಿ ಕಾರ್ಡ್ ಪಡೆಯುವುದು ಕಷ್ಟವಾಗಿದೆ. ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಲಿಂಗತ್ವ ಅಲ್ಪಸಂಖ್ಯಾತರು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ಮಹರೋಜ್ ಖಾನ್ ಅವರಿಗೆ ಹಕ್ಕೊತ್ತಾಯ ಸಲ್ಲಿಸಿದ್ದಾರೆ.
ಶನಿವಾರ, ಬೆಂಗಳೂರಿನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಸಂಸ್ಥೆ ಮತ್ತು ಒಂದೆಡೆ ಸಂಸ್ಥೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಹೋರಾಜ್ ಖಾನ್ ಅವರು ಅಂತರ್ಲಿಂಗಿ ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತ ಸಮುದಾಯದೊಂದಿಗೆ ಸಂವಾದ ನಡೆಸಿದರು. ಸಭೆಯಲ್ಲಿ ನೆರೆದಿದ್ದ ಸಮುದಾಯದ ಪ್ರತಿನಿಧಿಗಳು ತಾವು ಎದುರಿಸುತ್ತಿರುವ ಕಷ್ಟಗಳ ಕುರಿತು ಬೆಳಕು ಚೆಲ್ಲಿದರು. ಶಕ್ತಿ ಯೋಜನೆಯಿಂದ ಅನೇಕ ಬಸ್ ಚಾಲಕರು ಹಾಗೂ ಕಂಡಕ್ಟರ್‌ಗಳಿಗೆ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಮಾಹಿತಿ ಇಲ್ಲದೆ, ತಮಗೆ ಸಾರ್ವಜನಿಕವಾಗಿ ನಿಂದಿಸುತ್ತಿರುವ ಕುರಿತು ಅಳಲು ತೋಡಿಕೊಂಡರು.
“ಅನ್ನಭಾಗ್ಯ ಪಡೆಯಲು ಪಡಿತರ ಚೀಟಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರಿಗೆ ಹೆಚ್ಚಾಗಿ ಸಿಗುತ್ತಿಲ್ಲ. ಏಕೆಂದರೆ, ಪಡಿತರ ಚೀಟಿಯು ಕೌಟುಂಬಿಕ ವ್ಯವಸ್ಥೆಯನ್ನು ಕೇಳುತ್ತದೆ. ಆದರೆ, ತಾವು ಕುಟುಂಬಗಳಿಂದ ಹೊರಗಿದ್ದು, ಕುಟುಂಬಗಳಿಲ್ಲದೆ ಬದುಕುತ್ತಿದ್ದೇವೆ. ಈ ಕುರಿತು ವಿಶೇಷವಾದ ಗಮನ ಹರಿಸಬೇಕು. ಪಡಿತರ ಚೀಟಿ ವ್ಯವಸ್ಥೆಯಲ್ಲಿ ಪ್ರತ್ಯೇಕವಾಗಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಅವಕಾಶ ನೀಡಬೇಕು” ಎಂದು ಆಗ್ರಹಿಸಿದರು.
ಮನವಿಯನ್ನು ಆಲಿಸಿದ ಮೆಹರೋಜ್ ಖಾನ್, “ಲಿಂಗತ್ವ ಅಲ್ಪಸಂಖ್ಯಾತರ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗುವುದು” ಎಂದು ಭರವಸೆ ನೀಡದರು.
ಸಂವಾದ ಕಾರ್ಯಕ್ರಮದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಅಕ್ಕೈ ಪದ್ಮಶಾಲಿ, ಸೌಮ್ಯ, ಶಮಾ, ಪ್ರಕಾಶಿ, ಅಭಿದ ಬೇಗಂ, ಕವಿತಾ ಕೃಷ್ಣಮೂರ್ತಿ, ಸಮೀರ್, ರಕ್ಷಿತಾ ಸೇರಿದಂತೆ ಹಲವರು ಇದ್ದರು.