ಮದ್ಯದ ಅಮಲಿನಲ್ಲಿ ಪತಿಯೊಬ್ಬ ತನ್ನ ಪತ್ನಿಗೆ ಗುಂಡು ಹಾರಿಸಿದ್ದು, ಆ್ಯಸಿಡ್ ಸೇವಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ರಾಮಚಂದ್ರ ಗೌಡ ಮತ್ತು ಅವರ ಪತ್ನಿ ವಿನೋದ ಕುಮಾರಿ ಎಂದು ಗುರುತಿಸಲಾಗಿದೆ.
ಸುಳ್ಯದ ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ಮನೆಯಲ್ಲಿದ್ದ ಪ್ರಶಾಂತ್ ಎಸ್ ಆರ್, “ತನ್ನ ತಂದೆ ರಾಮಚಂದ್ರ ಗೌಡ ಅವರಿಗೆ ಅತಿಯಾದ ಮದ್ಯಪಾನದ ಚಟವಿತ್ತು” ಎಂದು ದೂರಿನಲ್ಲಿ ತಿಳಿಸಿದ್ದಾರೆ.
“ಶುಕ್ರವಾರ ಅತಿಯಾದ ಮದ್ಯ ಸೇವಿಸಿದ ನಂತರ ಮನೆಗೆ ಮರಳಿದ ತಂದೆ, ಅಜ್ಜ-ಅಜ್ಜಿ ಮತ್ತು ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಪ್ರಾರಂಭಿಸಿದರು. 11:30ರ ಸುಮಾರಿಗೆ, ಹೊಸದಾಗಿ ನಿರ್ಮಿಸುತ್ತಿರುವ ಮನೆಯ ಅಡುಗೆ ಕೋಣೆಯಲ್ಲಿ ನನ್ನ ತಾಯಿಯೊಂದಿಗೆ ವಾಗ್ವಾದಕ್ಕಿಳಿದರು” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಶೀಘ್ರದಲ್ಲಿ ನಿರ್ಧಾರ: ಶರಣಪ್ರಕಾಶ ಪಾಟೀಲ್
“ಜಗಳ ಬಿಡಿಸಲು ಬಂದ ಮಗ ಪ್ರಶಾಂತ್ನಿಗೆ ತನ್ನ ಬಳಿಯಿದ್ದ ಬಂದೂಕಿನಿಂದ ಗುಂಡು ಹಾರಿಸಲು ರಾಮಚಂದ್ರ ಯತ್ನಿಸಿದ್ದಾನೆ. ಮಗನಿಗೆ ಶೂಟ್ ಮಾಡುವಾಗ ತಾಯಿ ವಿನೋದಾ ಅಡ್ಡ ಬಂದಿದ್ದಾರೆ. ಈ ವೇಳೆ ಗುಂಡು ತಗುಲಿ ವಿನೋದಾ ಕುಮಾರಿ ಮೃತಪಟ್ಟಿದ್ದಾರೆ. ಬಳಿಕ ಆ್ಯಸಿಡ್ ಸೇವಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
ಬಿಎನ್ಎಸ್ ಕಾಯ್ದೆಯ ಸೆಕ್ಷನ್ 103 ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 ಮತ್ತು 27ರ ಅಡಿಯಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ದಕ್ಷಿಣ ಕನ್ನಡ ಎಸ್‌ಪಿ ಯತೀಶ್ ಎನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
