ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬುದನ್ನು ಸಾಬೀತು ಮಾಡಲು ಸಂತ್ರಸ್ತೆಯ ದೈಹಿಕ ಗಾಯಗಳು ಮುಖ್ಯವಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ಹೇಳಿಕೆ ನೀಡಿದೆ.
ಲೈಂಗಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ತೀರ್ಪು ನೀಡಿದ್ದ ಉತ್ತರಾಖಂಡ ಹೈಕೋರ್ಟ್, ಸಂತ್ರಸ್ತೆಯ ದೇಹದ ಮೇಲೆ ಯಾವುದೇ ಗಾಯಗಳಾಗಿಲ್ಲ ಎಂಬ ವರದಿಯ ಆಧಾರದ ಮೇಲೆ ಆರೋಪಿಯನ್ನು ಆರೋಪಮುಕ್ತಗೊಳಿಸಿತ್ತು. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಆ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಮತ್ತು ಎಸ್‌ವಿಎನ್ ಭಟ್ಟಿ ಅವರಿದ್ದ ಪೀಠ, “ಲೈಂಗಿಕ ಕಿರುಕುಳ ಎಸಗುವ ಸಮಯದಲ್ಲಿ ಗಾಯಗಳಾಗುವುದು ಸಹಜ. ಗಾಯಗಳು ಆಗದೆಯೂ ಇರಬಹುದು. ಆದರೆ, ಪ್ರಕರಣವನ್ನು ಸಾಬೀತು ಮಾಡಲು ಅದೇ ಮುಖ್ಯವಲ್ಲ” ಎಂದು ಅಭಿಪ್ರಾಯಪಟ್ಟಿದೆ.
“ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಂತ್ರಸ್ತೆಯರ ಮೇಲೆಯೇ ಕಳಂಕ ಹೇರಲಾಗುತ್ತದೆ. ಇಂತಹ ಕಳಂಕವು ಮಹಿಳೆಯರಿಗೆ ಗಮನಾರ್ಹ ಅಡೆತಡೆ ಉಂಟುಮಾಡುತ್ತದೆ. ಅವರು ಭಯ, ಆಘಾತ, ಸಾಮಾಜಿಕ ಕಳಂಕದಂತಹ ಭಾವನೆಗಳಿಂದ ಪ್ರಭಾವಿತರಾಗಿ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಸಿತ್ತಾರೆ. ಘಟನೆಯ ಬಗ್ಗೆ ಬಹಿರಂಗ ಪಡಿಸಲು ಹಿಂಜರಿಯುತ್ತಾರೆ” ಎಂದು ಹೇಳಿದೆ.
ವಿಚಾರಣೆಯನ್ನು ಮುಂದೂಡಿದೆ.