ಅಪ್ರಾಪ್ತೆ ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವಕನೋರ್ವ ಆಕೆಯ ಕತ್ತು ಸೀಳಿ ಹತ್ಯೆಗೈದ ಘಟನೆ ಹರಿಯಾಣದ ಫರಿದಾಬಾದ್‌ನ ದಬುವಾ ಕಾಲೋನಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಆರೋಪಿಯನ್ನು ಪವನ್, ಮೃತ ಬಾಲಕಿಯನ್ನು ಖುಷ್ನುಮಾ ಅಲಿಯಾಸ್ ಕರಿಷ್ಮಾ ಎಂದು ಗುರುತಿಸಲಾಗಿದೆ.
ಕಳೆದ ಏಪ್ರಿಲ್‌ನಲ್ಲಿ ಪವನ್ ಮತ್ತು ಕರಿಷ್ಮಾ ಇಬ್ಬರು ಮನೆ ಬಿಟ್ಟು ಹೋಗಿದ್ದರು. ಪೊಲೀಸರು ಇಬ್ಬರನ್ನು ಪತ್ತೆ ಹಚ್ಚಿ ಕರಿಷ್ಮಾ ಬಾಲಕಿಯಾದ ಕಾರಣ ಆಕೆಯನ್ನು ಕುಟುಂಬಸ್ಥರಿಗೆ ಒಪ್ಪಿಸಿದ್ದರು. ಪವನ್ ಅನ್ನು ಜೈಲಿಗೆ ಹಾಕಲಾಗಿತ್ತು.
ಇದನ್ನು ಓದಿದ್ದೀರಾ? ಸಂತ್ರಸ್ತೆ ಜೊತೆ ಮದುವೆ ಷರತ್ತು; ಅತ್ಯಾಚಾರ ಆರೋಪಿಗೆ ಜಾಮೀನು
ಸೆಪ್ಟೆಂಬರ್‌ನಲ್ಲಿ ಜಾಮೀನಿನ ಮೇಲೆ ಹೊರಬಂದ ಪವನ್ ತನ್ನನ್ನು ಮದುವೆಯಾಗುವಂತೆ ಕರಿಷ್ಮಾಗೆ ಒತ್ತಾಯಿಸುತ್ತಿದ್ದ.
ಶನಿವಾರ ಕರಿಷ್ಮಾ ತನ್ನ ನೆರೆಮನೆಗೆ ಹೋಗಿದ್ದಳು. ಅಲ್ಲಿದ್ದ ಪವನ್ ತನ್ನನ್ನು ಮದುವೆಯಾಗುವಂತೆ ಕರಿಷ್ಮಾಳನ್ನು ಪೀಡಿಸಿದ್ದಾನೆ. ಆಕೆ ಮದುವೆಯಾಗಲು ನಿರಾಕರಿಸಿದ್ದಕ್ಕೆ ಆಕೆಯ ಕತ್ತು ಸೀಳಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಬಾಲಕಿಯ ತಂದೆಯ ದೂರಿನ ಆಧಾರದಲ್ಲಿ ದಬುವಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.
ಇದನ್ನು ಓದಿದ್ದೀರಾ? ಬಳ್ಳಾರಿ | ಅಪ್ರಾಪ್ತೆ ಮೇಲೆ ಅತ್ಯಾಚಾರ; ಆರೋಪಿ ಶೋಧಕ್ಕೆ ತಂಡ ರಚನೆ
“ಪವನ್ ನನ್ನ ಮಗಳನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದನು. ಆದರೆ ಆಕೆ ನಿರಾಕರಿಸುತ್ತಿದ್ದಳು. ಆಕೆಯನ್ನು ಕೊಲ್ಲುವುದಾಗಿ ಪವನ್ ಬೆದರಿಕೆ ಹಾಕುತ್ತಿದ್ದನು. ಕೊನೆಗೆ ನನ್ನ ಮಗಳನ್ನು ಕೊಂದುಬಿಟ್ಟ” ಎಂದು ಬಾಲಕಿಯ ತಂದೆ ಅನ್ಸರ್ ಖಾನ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಫರಿದಾಬಾದ್ ಪೊಲೀಸ್ ವಕ್ತಾರರು, “ಎಫ್‌ಐಆರ್ ದಾಖಲಿಸಲಾಗಿದ್ದು, ಇನ್ನೂ ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಲು ನಮ್ಮ ತಂಡ ಕಾರ್ಯಾಚರಣೆ ನಡೆಸುತ್ತಿವೆ. ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು” ಎಂದು ಹೇಳಿದ್ದಾರೆ.
ಇದೇ ರೀತಿಯ ಘಟನೆ ಹುಬ್ಬಳ್ಳಿ, ಹರಿಯಾಣ ಮೊದಲಾದ ಕಡೆ ನಡೆದಿತ್ತು. ಆದರೆ ನೇಹಾ ಹತ್ಯೆ ಪ್ರಕರಣದಲ್ಲಿ ಆರೋಪಿ ಮುಸ್ಲಿಂ ಆದ ಕಾರಣ ಮಾಧ್ಯಮಗಳು ಕೃತ್ಯಕ್ಕೆ ಲವ್ ಜಿಹಾದ್ ಬಣ್ಣ ಬಳಿದು ತಮ್ಮ ಟಿಆರ್‌ಪಿ ಹೆಚ್ಚಿಸುವ ಕೀಳು ಮಟ್ಟಕ್ಕೆ ಇಳಿದಿದ್ದರು. ಇನ್ನೊಂದೆಡೆ ಬಿಜೆಪಿ ತನ್ನ ರಾಜಕೀಯ ಬೇಳೆ ಬೇಯ್ಯಿಸುವ ಯತ್ನ ಮಾಡಿತ್ತು.
ಆದರೆ ಹರಿಯಾಣದಲ್ಲಿ ನಡೆದಿರುವ ಈ ಘಟನೆಯಲ್ಲಿ ಆರೋಪಿ ಮುಸ್ಲಿಂ ಅಲ್ಲದ ಕಾರಣ ಮಾಧ್ಯಮಗಳ ಕಣ್ಣು ಈ ಪ್ರಕರಣದತ್ತ ಬಿದ್ದಿಲ್ಲ. ಯಾವುದೇ ಧರ್ಮಕ್ಕೆ ಸೇರಿದವರಾದರೂ ಇದು ಸ್ಪಷ್ಟವಾಗಿ ವಿರೋಧಿಸಬೇಕಾದ, ಖಂಡಿಸಬೇಕಾದ ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಎಂದು ಜನರಿಗೆ ತಿಳಿಸಬೇಕಾಗಿದ್ದು ಮಾಧ್ಯಮಗಳ ಕರ್ತವ್ಯ. ಆದರೆ ಮಾಧ್ಯಮಗಳು ಸಂಘಪರಿವಾರದ ಜೀತಕ್ಕಿಳಿದು ಲವ್ ಜಿಹಾದ್ ಎಂಬ ಕಥೆ ಕಟ್ಟುತ್ತಿರುವುದು, ಮುಸ್ಲಿಂ ದ್ವೇಷ ಹರಡುತ್ತಿರುವುದು ಶೋಚನೀಯ.
