ಸಂವಿಧಾನದ ಆಶಯದಂತೆ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯ, ಅಭಿವೃದ್ಧಿ ಹೀಗೆ ಎಲ್ಲವೂ ಸಮಾನವಾಗಿ ಇರಬೇಕೆಂಬ ಕನಸಿನೊಂದಿಗೆ ಕಳೆದ 14 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ಪರ್ಯಾಯ ರಾಜಕಾರಣದಿಂದ ಸಮ ಸಮಾಜ ಕಟ್ಟುವ ಗುರಿ ನನ್ನದಾಗಿದೆ ಎಂದು ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದರು.
ಔರಾದ್ ಪಟ್ಟಣದ ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ ‘ಸಮಾನತಾವಾದಿಗಳೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ʼನಾವು ಸಮ ಸಮಾಜ ನಿರ್ಮಾಣಕ್ಕಾಗಿ ಪರ್ಯಾಯ ರಾಜಕಾರಣದ ಸಸಿ ನೆಡುತ್ತಿದ್ದು, ಸತ್ಯ , ಪ್ರಾಮಾಣಿಕ, ಸೇವಾ ಮನೋಭಾವದೊಂದಿಗೆ ರಾಜಕೀಯ ಚಳವಳಿಯ ಪ್ರಯತ್ನಕ್ಕೆ ಮುಂದಾಗಿದ್ದು, ಇದು ಹೆಮ್ಮರವಾಗಿ ಬೆಳೆದು ಮುಂದಿನ ಪೀಳಿಗೆಗೆ ಮುಟ್ಟಬಹುದು ಎಂಬ ಸದಾಶಯ ನಮ್ಮದಾಗಿದೆ. ಅವ್ಯವಸ್ಥೆ, ಅನ್ಯಾಯ ವಿರುದ್ಧ ದನಿಯೆತ್ತುವ ಜನರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆʼ ಎಂದು ತಿಳಿಸಿದರು.
ʼಡಾ.ಅಂಬೇಡ್ಕರ್, ಪೆರಿಯಾರ್ ಹಾಗೂ ಕಾನ್ಸಿರಾಮ್ ಬಿಟ್ಟರೆ ಸಮಾನತೆ ಸಮಾಜ ಕಟ್ಟಲು ಯಾರೂ ಬರಲಿಲ್ಲ. ಇಂದಿನ ರಾಜಕಾರಣಿಗಳು ರಸ್ತೆ, ಕಟ್ಟಡಗಳು ನಿರ್ಮಿಸುತ್ತಾರೆ, ಭ್ರಷ್ಟಾಚಾರ ಸೇರಿದಂತೆ ಎಲ್ಲವೂ ಯಥಾಸ್ಥಿತಿ ಕಾಪಾಡಿಕೊಂಡು ನಾನು ಮುಖ್ಯಮಂತ್ರಿ ಆಗಬೇಕೆಂದು ಬರ್ತಾರೆ, ಹೊರತು ಸಮ ಸಮಾಜ ಕಟ್ಟಲು ಬಂದಿರುವುದು ನೋಡಲಿಲ್ಲʼ ಎಂದರು.
ʼಪರ್ಯಾಯ ರಾಜಕೀಯದಿಂದ ಸಮ ಸಮಾಜ ಕಟ್ಟಲು ಸಾಧ್ಯ. ಒಂದು ವರ್ಗ, ಜಾತಿ ಧರ್ಮಕ್ಕೆ ಸೀಮಿತ ಆಗದೇ ಇದು ಕರ್ನಾಟಕದ ಸಮ ಸಮಾಜವಾದದ ಪಕ್ಷವಾಗಿದ್ದು, ಮಾದರಿ ಕರ್ನಾಟಕ ರೂಪಿಸುವ ಉದ್ದೇಶದಿಂದ ರಾಜ್ಯದ 25ಕ್ಕೂ ಹೆಚ್ಚಿನ ಮತಕ್ಷೇತ್ರದಲ್ಲಿ ಜನಪರ ಸಂಘಟನೆಗಳ ಪ್ರಮುಖರೊಂದಿಗೆ ಕೈಜೋಡಿಸಿ ಸಿದ್ದತೆಗಳನ್ನು ಮಾಡುತ್ತಿದ್ದೇವೆ. ಆದರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕ, ಮುಖ್ಯಮಂತ್ರಿ ಆಗಬೇಕೆಂಬ ಕನಸು ಇಲ್ಲ. ಪಕ್ಷದ ಸಿದ್ಧಾಂತ ಮುನ್ನಡೆಸುವ ಜವಾಬ್ದಾರಿ ಮಾತ್ರ ನನ್ನದು. ಅಧಿಕಾರಿ ಬೇರೆಯವರೇ ನಡೆಸಲಿ’ ಎಂದು ಹೇಳಿದರು.
ʼಅಸಮಾನತೆಯ ಪಕ್ಷಗಳು ಅಧಿಕಾರ ಪಡೆದುಕೊಳ್ಳುವ ಗುರಿಯಿಂದ ಪ್ರಬಲ ಜಾತಿಗಳೊಂದಿ ಕೈಜೋಡಿಸಿ ಓಲೈಸುತ್ತಿವೆ. ಆದರೆ ಅನ್ಯಾಯಕ್ಕೊಳಗಾದ ದಲಿತ, ಒಬಿಸಿ, ಆದಿವಾಸಿ ಹಾಗೂ ಬಹುಜನರಿಗೆ ಆಗಿರುವ ನ್ಯಾಯ ಸರಿಪಡಿಸುವ ಆಲೋಚನೆ ಇಂದಿನ ಪಕ್ಷಗಳಿಗೆ ಇಲ್ಲ. ಅಧಿಕಾರ ಹಿಡಿಯಬೇಕಾದರೆ ಏನೆಲ್ಲಾ ಮಾಡುತ್ತಾರೆ. ಅಧಿಕಾರ ಸಿಕ್ಕನಂತರ ಏನು ಮಾಡಬೇಕೆಂಬ ಆಲೋಚನೆ ಮರೆಯುತ್ತಾರೆ. ಹೀಗಾಗಿ ರಾಜ್ಯಕ್ಕೆ ಬುದ್ದ, ಬಸವ, ಅಂಬೇಡ್ಕರ್, ಪೆರಿಯಾರ್ ಹಾಗೂ ಕುವೆಂಪು ಅವರ ಆದರ್ಶ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ಕಾರ್ಯ ಮಾಡುತ್ತಿದ್ದೇವೆ’ ಎಂದು ವಿಶ್ಲೇಷಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಪಶು ಮೇಳ: ಬೆರಗುಗೊಳಿಸಿದ 90 ಕೆಜಿ ತೂಕದ ಮೇಕೆ, ₹9 ಲಕ್ಷದ ಗಿರ್ ತಳಿ ಎತ್ತು
ಸಂವಾದದಲ್ಲಿ ಸಂಯೋಜಕರಾದ ಸುಭಾಷ ಲಾಧಾ, ರಾಹುಲ್ ಖಂದಾರೆ, ಸುಧಾಕರ್ ಕೊಳ್ಳೂರ್, ಗಣಪತಿ ವಾಸುದೇವ, ಶಿವು ಕಾಂಬಳೆ, ರಹೀಂ ಸಾಬ್ ಸೇರಿದಂತೆ ಪ್ರಮುಖರಾದ ನಂದಾದೀಪ ಬೋರಾಳೆ, ಡಾ.ಮನ್ಮಥಪ್ಪ ಡೋಳೆ, ಕಪೀಲ್ ಗೋಡಬೋಲೆ ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಸಾಮಾಜಿಕ ಚಿಂತಕರು ಪಾಲ್ಗೊಂಡಿದ್ದರು.