ಕೇಂದ್ರ ಸರ್ಕಾರವು ಉತ್ತಮ ಉದ್ದೇಶವನ್ನು ಹೊಂದಿದ್ದರೆ ಫೆಬ್ರವರಿ 14ರವರೆಗೆ ಕಾಯುವ ಬದಲಾಗಿ ಪ್ರತಿಭಟನಾ ನಿರತ ರೈತರೊಂದಿಗೆ ಆದಷ್ಟು ಬೇಗ ಸಭೆ ನಡೆಸಬೇಕು ಎಂದು ಪಂಜಾಬ್ ಕೃಷಿ ಸಚಿವ ಗುರ್ಮೀತ್ ಸಿಂಗ್ ಖುಡಿಯನ್ ಭಾನುವಾರ ಹೇಳಿದ್ದಾರೆ.
ಎಂಎಸ್‌ಪಿಗೆ ಕಾನೂನು ಖಾತರಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ಸುಮಾರು ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸುಮಾರು 50ಕ್ಕೂ ಅಧಿಕ ದಿನಗಳಿಂದ ರೈತ ನಾಯಕ ಜಗಜಿತ್ ಸಿಂಗ್ ದಲ್ಲೇವಾಲ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇತ್ತೀಚೆಗೆ ಅವರೊಂದಿಗೆ 111 ರೈತರು ಕೂಡಾ ಉಪವಾಸ ಆರಂಭಿಸಿದ್ದಾರೆ.
ಇದನ್ನು ಓದಿದ್ದೀರಾ? ದಲ್ಲೇವಾಲ್ ಉಪವಾಸ – ದೆಹಲಿ ಚಲೋಗೆ ಮಂಡಿಯೂರಿದ ಪ್ರಧಾನಿ ಮೋದಿ; ರೈತರಿಗೆ ಪ್ರಸ್ತಾವನೆ ಸಲ್ಲಿಸಿದ ಕೇಂದ್ರ ಸರ್ಕಾರ
ಈಗಾಗಲೇ ದಲ್ಲೇವಾಲ್ ಸ್ಥಿತಿ ಚಿಂತಾಜನಕವಾಗಿದೆ. ಇತರೆ ರೈತರ ಆರೋಗ್ಯವೂ ಕೂಡಾ ಹದಗೆಡುತ್ತಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ರೈತರ ಜೀವಕ್ಕೆ ಬೆಲೆಯೇ ಇಲ್ಲದಂತೆ ವರ್ತಿಸುತ್ತಿದೆ. ವಿಪಕ್ಷಗಳು ಮತ್ತು ರೈತರ ಒತ್ತಡದ ಬಳಿಕ ಕೊನೆಗೂ ಮಾತುಕತೆಗೆ ಒಪ್ಪಿಕೊಂಡಿದೆ. ಆದರೆ ಫೆಬ್ರವರಿ 14ರಂದು ಮಾತುಕತೆಗೆ ದಿನಾಂಕ ನಿಗದಿ ಮಾಡಿದೆ. ಪ್ರತಿಭಟನಾನಿರತ ರೈತರ ಸ್ಥಿತಿ ಶೋಚನೀಯವಾಗಿದ್ದರೂ ತಕ್ಷಣ ಸ್ಪಂದಿಸದೆ ಸುಮಾರು ಒಂದು ತಿಂಗಳ ನಂತರ ಮಾತುಕತೆಗೆ ಆಹ್ವಾನಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕೇಂದ್ರವು ಫೆಬ್ರವರಿ 14ರಂದು ಚಂಡೀಗಢದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ವನ್ನು ಮಾತುಕತೆಗೆ ಆಹ್ವಾನಿಸಿದೆ.
ಶನಿವಾರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಿಯ ರಂಜನ್ ನೇತೃತ್ವದ ಉನ್ನತ ಮಟ್ಟದ ಕೇಂದ್ರ ನಿಯೋಗವು ಖಾನೌರಿ ಗಡಿಗೆ ಭೇಟಿ ನೀಡಿದ್ದು, ದಲ್ಲೇವಾಲ್ ಮತ್ತು ಇತರೆ ನಾಯಕರುಗಳನ್ನು ಫೆಬ್ರವರಿ 14ರಂದು ಮಾತುಕತೆಗೆ ಆಹ್ವಾನಿಸಿದರು. ಒಂದು ತಿಂಗಳ ನಂತರ ದಿನಾಂಕ ನಿಗದಿಪಡಿಸಿರುವುದಕ್ಕೆ ಪಂಜಾವ್ ಸಚಿವರೂ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಎಂಎಸ್‌ಪಿ | 43ನೇ ದಿನಕ್ಕೆ ಕಾಲಿಟ್ಟ ದಲ್ಲೇವಾಲ್ ಉಪವಾಸ; ರೈತರ ಬಲಿಗೆ ಕಾಯುತ್ತಿದೆಯೇ ಕೇಂದ್ರ?
“ನವೆಂಬರ್ 26 ರಿಂದ ಆಮರಣಾಂತ ಉಪವಾಸ ನಡೆಸುತ್ತಿರುವ ದಲ್ಲೆವಾಲ್ ಅವರ ಆರೋಗ್ಯ ಚಿಂತಾಜನಕವಾಗಿದೆ. ಕೇಂದ್ರ ಸಚಿವಾಲಯವು ಪ್ರತಿಭಟನಾ ನಿರತ ರೈತರೊಂದಿಗೆ ಆದಷ್ಟು ಬೇಗ ಸಭೆ ನಡೆಸಬೇಕು. ಕೇಂದ್ರವು ಉತ್ತಮ ಉದ್ದೇಶದಿಂದ ಸಭೆ ನಡೆಸುವುದಾದರೆ ಒಂದು ಅಥವಾ ಎರಡು ದಿನಗಳಲ್ಲಿ ಮಾತುಕತೆ ನಡೆಸಬೇಕು” ಎಂದು ಹೇಳಿದ್ದಾರೆ.
ಇನ್ನು ಈ ಸಭೆಗೆ ಒಪ್ಪಿದ ಬಳಿಕ ದಲ್ಲೇವಾಲ್ ವೈದ್ಯಕೀಯ ನೆರವು ಪಡೆಯಲು ಒಪ್ಪಿಕೊಂಡಿದ್ದಾರೆ. ಆದರೆ ಆಹಾರ ಇನ್ನೂ ಸೇವಿಸಿಲ್ಲ ಎಂದು ಹೇಳಲಾಗಿದೆ. ನವೆಂಬರ್ 26ರಂದು ಆಮರಣಾಂತ ಉಪವಾಸ ಕುಳಿತಾಗಿನಿಂದ 70 ವರ್ಷದ ದಲ್ಲೇವಾಲ್ ಯಾವುದೇ ವೈದ್ಯಕೀಯ ನೆರವು ಪಡೆಯಲು ನಿರಾಕರಿಸಿದ್ದರು. ರೈತರೊಂದಿಗೆ ಮಾತುಕತೆಗೆ ದಿನಾಂಕ ನಿಗದಿಯಾದ ಬಳಿಕ ಔಷಧಿಯನ್ನು ಡ್ರಿಪ್ ಮೂಲಕ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.
