ಮಣಿಪುರದ ಬಗ್ಗೆ ಮೋದಿ ಮೌನ ಯಾಕೆ? ಇಲ್ಲಿವೆ ಆ ಆರು ಕಾರಣಗಳು!

Date:

Advertisements

ಒಂದೂವರೆ ವರ್ಷದಿಂದ ಜನಾಂಗೀಯ ಹಿಂಸಾಚಾರದಲ್ಲಿ ಬೇಯುತ್ತಿರುವ ಮಣಿಪುರದ ಇತ್ತೀಚಿನ ಸುದ್ದಿಯೆಂದರೆ, ಕೇಂದ್ರ ಸರ್ಕಾರದ ಮಾಜಿ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ರಾಜ್ಯದ ಹೊಸ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಆದರೆ, ಮಣಿಪುರ ಇನ್ನೂ ಎರಡು ಪ್ರಮುಖ ಸುದ್ದಿಗಳಿಗಾಗಿ ಕಾಯುತ್ತಿದೆ. ಒಂದು, ತಪ್ಪಿಸಿಕೊಂಡು ಓಡಾಡುತ್ತಿರುವ ನಮ್ಮ ಪ್ರಧಾನಿ ಮೋದಿ ಅವರು ಮಣಿಪುರಕ್ಕೆ ಯಾವಾಗ ಭೇಟಿ ನೀಡುತ್ತಾರೆ. ಎರಡು, ಹಿಂಸಾಚಾರವನ್ನು ತಡೆಯುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್‌ ಅವರು ರಾಜೀನಾಮೆ ನೀಡಬೇಕೆಂದು ಬಿಜೆಪಿ ಯಾವಾಗ ಕೇಳುತ್ತದೆ?

ಈ ಎರಡು ಪ್ರಶ್ನೆಗಳಲ್ಲಿ 1ನೇ ಪ್ರಶ್ನೆಗೆ ಉತ್ತರ ಸಿಕ್ಕರೆ, 2ನೇ ಪ್ರಶ್ನೆ ಪ್ರಾಮುಖ್ಯತೆ ಕಳೆದುಕೊಳ್ಳುತ್ತದೆ. ಯಾಕೆಂದರೆ, ಸಿಂಗ್‌ ಅವರ ಆಡಳಿತವು ಮೋದಿ ಸರ್ಕಾರದ ಕೃಪಾಕಟಾಕ್ಷದ ಮೇಲೆ ನಿಂತಿದೆ. ಅವರು ಕೇಂದ್ರದ ಆಣತಿಯಂತೆಯೇ ಸರ್ಕಾರವನ್ನು ನಡೆಸುತ್ತಿದ್ದಾರೆ. ಹೀಗಾಗಿ, ಅವರಿಂದ ಬಿಜೆಪಿ ರಾಜೀನಾಮೆ ಕೇಳುವ ಪ್ರಹಸನ ಯಾವಾಗ ಬರಬಹುದು? ಅದು ಮೋದಿ ಮಣಿಪುರಕ್ಕೆ ಕಾಲಿಟ್ಟಾಗ ಮಾತ್ರ ಸಾಧ್ಯ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಆದರೆ, ಪ್ರಧಾನಿ ಮೋದಿ ಅವರು ಏನು ಮಾಡುತ್ತಿದ್ದಾರೆ? ಮಣಿಪುರಕ್ಕೆ ಭೇಟಿ ನೀಡದಿರಲು ಅವರ ಹಠಮಾರಿತನದ ಹಿಂದೆ ಏನಿದೆ? ಸಿಂಗ್ ಅವರನ್ನು ಕೇವಲ ನಾಮಮಾತ್ರದ ಮುಖ್ಯಮಂತ್ರಿಯಾಗಿ ಇಟ್ಟುಕೊಳ್ಳುವುದು ಮೋದಿಯವರ ರಾಜಕೀಯಕ್ಕೆ ಸರಿಹೊಂದುತ್ತದೆಯೇ? ಈ ಪ್ರಶ್ನೆಗಳ ನಡುವೆಯೂ, ಮಣಿಪುರಕ್ಕೆ ಭೇಟಿ ನೀಡದೇ ಇರುವುದು ಅವರ ಉದ್ದೇಶಪೂರ್ವಕ ನಿರ್ಧಾರವಲ್ಲ ಎಂಬ ಅಭಿಪ್ರಾಯಗಳೂ ಇವೆ.

Advertisements

200ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ, 60,000 ಮಂದಿ ಸ್ಥಳಾಂತರಗೊಂಡಿರುವ, ಲಕ್ಷಕ್ಕೂ ಹೆಚ್ಚು ಮಂದಿ ನಿರ್ಗತಿಕರಾಗಿರುವ ಗಂಭೀರ ಪರಿಸ್ಥಿತಿಯಲ್ಲೂ ಮಣಿಪುರಕ್ಕೆ ಮೋದಿ ಭೇಟಿ ನೀಡಿಲ್ಲ. ಮಾತ್ರವಲ್ಲ, ಮಣಿಪುರದ ಬಗ್ಗೆ ಒಂದೇ ಒಂದು ಮಾತನಾಡಿಲ್ಲ. ಇತ್ತೀಚೆಗೆ ನಡೆದ 2024ರ ಲೋಕಸಭಾ ಚುನಾವಣೆಯಲ್ಲಿ ಮಣಿಪುರಕ್ಕೆ ಮೋದಿ ಗೈರು ಹಾಜರಿ ಪ್ರಚಾರದ ವಿಷಯವಾಗಿತ್ತು. ವಿಷಯವನ್ನು ಪ್ರಸ್ತಾಪಿಸಿದ್ದ ಕಾಂಗ್ರೆಸ್‌ ಬಿಜೆಪಿಯನ್ನು ಮುಜುಗರಕ್ಕೀಡು ಮಾಡಿತ್ತು. ಆದರೂ, ಮೋದಿ ಮಣಿಪುರದತ್ತ ತಿರುಗಿಯೂ ನೋಡಲಿಲ್ಲ.

ಮಣಿಪುರದ ವಿಚಾರದಲ್ಲಿ ಮೋದಿ ತಪ್ಪಿಸಿಕೊಂಡು ಓಡಾಡುತ್ತಿರೋದೇಕೆ?

ಮೋದಿ ಮಣಿಪುರಕ್ಕೆ ಯಾಕೆ ಭೇಟಿ ನೀಡುತ್ತಿಲ್ಲ ಅಥವಾ ಅದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂಬುದಕ್ಕೆ ರಾಜಕೀಯ ವಿಶ್ಲೇಷಕ, ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಪಾರ್ಥ ಎಸ್ ಘೋಷ್ ಅವರು ಆರು ಕಾರಣಗಳನ್ನು ಗುರುತಿಸಿದ್ದಾರೆ.

ಒಂದು, ಮಣಿಪುರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅಲ್ಲಿ, ಮುಂದಿನ ವಿಧಾನಸಭಾ ಚುನಾವಣೆ 2027ರಲ್ಲಿ ನಡೆಯಲಿದೆ. ಹೀಗಾಗಿ, ಮಣಿಪುರದಲ್ಲಿ ಸದ್ಯಕ್ಕೆ ಬಿಜೆಪಿಗೆ ಬೇಕಿರುವ ಯಾವುದೇ ಸಂದರ್ಭಗಳಿಲ್ಲ. ಬಹುಶಃ 2027ರ ವೇಳೆಗೆ ಅವರು ಮಣಿಪುರದ ಬಗ್ಗೆ ಚಿಂತಿಸಬಹುದು!

ಎರಡು, ಮಣಿಪುರವು 543 ಸದಸ್ಯರ ಬಲ ಹೊಂದಿರುವ ಸಂಸತ್ತಿಗೆ ಕೇವಲ ಇಬ್ಬರು ಸಂಸದರನ್ನು ಮಾತ್ರ ಆಯ್ಕೆ ಮಾಡುತ್ತದೆ. ಈ ಎರಡು ಸ್ಥಾನಗಳು ವಿರೋಧ ಪಕ್ಷಕ್ಕೆ ಹೋದರೂ (ಈಗಾಗಲೇ ಕಾಂಗ್ರೆಸ್‌ ಗೆದ್ದಿದೆ) ಅಧಿಕಾರದಲ್ಲಿರುವ ಬಿಜೆಪಿಗೆ ಹೆಚ್ಚಿನ ಹಾನಿಯಾಗುವುದಿಲ್ಲ.

ಮೂರನೆಯದು, ಮಣಿಪುರದಲ್ಲಿ ಹಿಂದು ಮೈತೇಯಿ ಸಮುದಾಯವು ಪ್ರಬಲ ಸಮುದಾಯವಾಗಿದೆ. ಬಹುಸಂಖ್ಯಾತರನ್ನು ಹೊಂದಿದೆ. ಅವರು ಬಿಜೆಪಿ ಪರವಾಗಿದ್ದಾರೆ. ಅಲ್ಪಸಂಖ್ಯಾತ ನಾಗಾ ಅಥವಾ ಕುಕಿ ಸಮುದಾಯಗಳು ಕಡಿಮೆ ಜನಸಂಖ್ಯೆಯನ್ನು ಹೊಂದಿವೆ. ಮಣಿಪುರದಲ್ಲಿ 53% ಮೈತೇಯಿಗಳಿದ್ದರೆ, 20% ನಾಗಾ ಮತ್ತು 16% ಕುಕಿ ಸಮುದಾಯಗಳಿವೆ.  ಹೀಗಾಗಿ, ಮೈತೇಯಿಗಳು ಬಿಜೆಪಿ ಜೊತೆಗಿರುವವರೆಗೆ ಹೆಚ್ಚಿನ ಬದಲಾವಣೆ ಸಾಧ್ಯವಿಲ್ಲ ಎಂದು ಮೋದಿ ಭಾವಿಸಿದಂತಿದೆ.

ನಾಲ್ಕನೆಯದು, ಈ ಪ್ರದೇಶದಲ್ಲಿ ಅಕ್ರಮ ಮಾದಕ ದ್ರವ್ಯ ಮತ್ತು ಮಾದಕವಸ್ತುಗಳು ರಾಜ್ಯದ ಆರ್ಥಿಕತೆಗೆ ಎಚ್ಚು ಕೊಡುಗೆ ನೀಡುತ್ತವೆ. ಮ್ಯಾನ್ಮಾರ್‌ಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಹೆಚ್ಚು ಅಕ್ರಮ ಮಾದಕ ವಸ್ತುಗಳ ವಹಿವಾಟು ನಡೆಯುತ್ತಿದೆ. ಈ ನಿರ್ಣಾಯಕ ಈಶಾನ್ಯ ರಾಜ್ಯಗಳಲ್ಲಿ ಯಾವುದೇ ಆಡಳಿತ ಪಕ್ಷವು ತಮ್ಮ ಪಕ್ಷಕ್ಕೆ ಹಣಕಾಸು ಒದಗಿಸಲು ಈ ಅಕ್ರಮ ವ್ಯಾಪಾರದ ಲಾಭವನ್ನು ಪಡೆಯುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಬಿಜೆಪಿ ಮಣಿಪುರವನ್ನು ಆಳುತ್ತಿರುವುದರಿಂದ, ಅಕ್ರಮ ಮಾದಕ ವಸ್ತುಗಳ ವ್ಯವಹಾರಕ್ಕೂ ಹಿಂಸಾಚಾರ ಮತ್ತು ಮೋದಿ ಮೌನಕ್ಕೂ ಏನಾದರೂ ಸಂಬಂಧವಿರಬಹುದು.

ಐದನೆಯದು, ಈ ಪ್ರದೇಶದಲ್ಲಿ ದೀರ್ಘಕಾಲದ ವಿವಾದವೆಂದರೆ, ಭಾರತ ಮತ್ತು ಮ್ಯಾನ್ಮಾರ್ ನಡುವಿನ ಗಡಿ ಬೇಲಿಗಾಗಿ ಇರುವ ಬೇಡಿಕೆ. ಅಂತಾರಾಷ್ಟ್ರೀಯ ವಲಸೆ ಮತ್ತು ಮಾದಕವಸ್ತು ವ್ಯಾಪಾರವನ್ನು ನಿಭಾಯಿಸಲು ಸುಲಭದ ದಾರಿಯೆಂದರೆ, ಅದು ಗಡಿಯಲ್ಲಿ ಬೇಲಿ ಹಾಕುವುದು ಎಂದು ಸಾಮಾನ್ಯ ಜನರು ಭಾವಿಸಿದ್ದಾರೆ. ಆದಾಗ್ಯೂ, ಈ ಬೇಲಿ ಹಾಕುವ ಒಪ್ಪಂದದ ವಿಚಾರದಲ್ಲೂ ರಾಜಕೀಯ ಅನುಕೂಲಗಳನ್ನು ಪಡೆಯುವ ದೊಡ್ಡ ಷಡ್ಯಂತ್ರವಿದೆ. ಅದನ್ನು ಅಗತ್ಯವಿದ್ದಾಗ ಮೋದಿ ಬಳಸಿಕೊಳ್ಳಬಹುದು. ಆ ದಾಳ ಉರುಳಿಸಿ, ಮಣಿಪುರದ ಪ್ರೀತಿ ಗೆಲ್ಲಲು ಮೋದಿ ಯೋಜಿಸಿರಬಹುದು.

ಆರನೆಯದು, ಕುಕಿಗಳಿಗೆ ಸ್ವಾಯತ್ತತೆಯನ್ನು ನೀಡದಿರುವ ಮೋದಿ ಸರ್ಕಾರದ ಹಠಮಾರಿ ದೃಢನಿರ್ಧಾರದ ಹಿಂದೆ ಮತ್ತೊಂದು ಗಂಭೀರ ವಿಚಾರವಿದೆ. ಅದು, ಕುಕಿಗಳ ಆವಾಸಸ್ಥಾನವಾಗಿರುವ ಅರಣ್ಯ ಮತ್ತು ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಕಾರ್ಪೊರೇಟ್ ಭಾರತದ ದುರಾಸೆಯ ಕಣ್ಣುಗಳಿವೆ ಎಂದು ಊಹಿಸಲಾಗಿದೆ. ಮೋದಿ ಮತ್ತು ಭಾರತದ ಕೆಲವು ಪ್ರಮುಖ ಕಾರ್ಪೊರೇಟ್ ದೈತ್ಯರ ನಡುವಿನ ಸಂಬಂಧವು ಮೋದಿ ಅವರನ್ನು ಮಣಿಪುರಕ್ಕೆ ಕಾಲಿಡದಂತೆ ತಡೆದಿರಬಹುದು.

ಈ ವರದಿ ಓದಿದ್ದೀರಾ?: ಟ್ರಂಪ್‌ ಬಿಲ್ಡ್‌ಅಪ್‌ | ಇಸ್ರೇಲ್-ಹಮಾಸ್ ಕದನ ವಿರಾಮದಿಂದ ನಿಜಕ್ಕೂ ಶಾಂತಿ ನೆಲೆಸುತ್ತದೆಯೇ?

ಗಂಭೀರ ವಿಚಾರವೆಂದರೆ, ಗೃಹ ವ್ಯವಹಾರಗಳ ಸಚಿವಾಲಯದ 2023-24ರ ವಾರ್ಷಿಕ ವರದಿಯ ಪ್ರಕಾರ, ಇಡೀ ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದ ಹಿಂಸಾಚಾರ ಪ್ರಕರಣದಲ್ಲಿ ಬರೋಬ್ಬರಿ 77% ಪ್ರಕರಣಗಳು ಮಣಿಪುರಕ್ಕೆ ಸಂಬಂಧಿಸಿವೆ. ಪರಿಸ್ಥಿತಿ ಇನ್ನೂ ಹದಗೆಡುತ್ತಿದೆ. ಮಣಿಪುರ ಸ್ಥಿತಿಯು ನಿಯಂತ್ರಣ ಮೀರಿ ಹೋಗುವ ಮೊದಲು ಮೋದಿ ಸರ್ಕಾರವು ಸಂಘರ್ಷವನ್ನು ನಿಯಂತ್ರಿಸಲು ಮುಂದಾಗಬೇಕು. ರಾಜಕೀಯವಾಗಿ ಪ್ರತಿಕ್ರಿಯಿಸಬೇಕು.

ಸುಮಾರು ಆರು ತಿಂಗಳ ಹಿಂದೆ, 2014ರ ಜುಲೈ 3ರಂದು, ಮೋದಿ ಮಣಿಪುರದ ಪರಿಸ್ಥಿತಿಯ ಬಗ್ಗೆ ರಾಜ್ಯಸಭೆಯಲ್ಲಿ ವಿವರಿಸಿದರು. ಆದರೆ, ರಾಜ್ಯದಲ್ಲಿ ನಡೆದ ಎಲ್ಲದಕ್ಕೂ ಕಾಂಗ್ರೆಸ್ ಅನ್ನು ದೂಷಿಸಿದರು. ಅದಾದ ಮೂರು ದಿನಗಳ ಬಳಿಕ ದಿ ಹಿಂದೂ ಪತ್ರಿಕೆಯ ಸಂಪಾದಕೀಯವು, ”ಬಿಕ್ಕಟ್ಟನ್ನು ಕೇವಲ ಒಪ್ಪಿಕೊಳ್ಳುವುದರಿಂದ ಮಣಿಪುರದ ಸಮಸ್ಯೆಗಳು ಬಗೆಹರಿಯುವುದಿಲ್ಲ. ಬದಲಾವಣೆಗಳನ್ನು ತರಲು ಮೋದಿ ಮುಂದಾಗಬೇಕು” ಎಂದು ಹೇಳಿತು. ಒತ್ತಾಯಿಸಿತು. ಅದನ್ನು ಮೋದಿ ಇನ್ನೂ ಅರಿತುಕೊಂಡಿಲ್ಲ. ಇನ್ನಾದರೂ ಅರಿತುಕೊಳ್ಳಬೇಕು. ಇಲ್ಲದಿದ್ದರೆ, ಮಣಿಪುರವೇ ಇಲ್ಲವಾಗಿಬಿಡುವ ಆತಂಕವಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

Download Eedina App Android / iOS

X