ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ರೈಲು ಅಪಘಾತಕ್ಕೆ ಹಳಿ ಬದಲಿಸುವ ವ್ಯವಸ್ಥೆಯಲ್ಲಿನ (ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಸಿಸ್ಟಮ್) ದೋಷವೇ ಕಾರಣ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
288 ಜನರನ್ನು ಬಲಿ ಪಡೆದ ತ್ರಿವಳಿ ರೈಲು ಅಪಘಾತದ ಘಟನಾ ಸ್ಥಳದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, `ರೈಲು ಅಪಘಾತ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದ್ದು, ಅಪಘಾತದ ಮೂಲ ಕಾರಣ ಮತ್ತು ಅದಕ್ಕೆ ಕಾರಣವಾದ ಅಪರಾಧಿಗಳನ್ನು ಗುರುತಿಸಲಾಗಿದೆ’ ಎಂದು ಹೇಳಿದ್ದಾರೆ.
ಹಾನಿಗೀಡಾಗಿರುವ ರೈಲು ಹಳಿಗಳ ದುರಸ್ತಿ ಕಾರ್ಯ ಭರದಿಂದ ಸಾಗಿದ್ದು, ರೈಲ್ವೆ ಅಧಿಕಾರಿಗಳ ಜೊತೆ ಘಟನಾ ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಕ್ಷಣಾ ಕಾರ್ಯಗಳ ಮೇಲ್ವಿಚಾರಣೆ ವಹಿಸಿದ್ದಾರೆ.
ಸಿಬಿಐ ತನಿಖೆ
ತ್ರಿವಳಿ ರೈಲು ಅಪಘಾತದ ಕುರಿತಾದ ಆಡಳಿತಾತ್ಮಕ ಮಾಹಿತಿಯನ್ನು ಪರಿಗಣನೆಗೆ ಇಟ್ಟುಕೊಂಡು ರೈಲ್ವೆ ಮಂಡಳಿಯು, ಸಂಪೂರ್ಣ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಶಿಫಾರಸು ಮಾಡಿದೆʼ ಎಂದು ರೈಲ್ವೆ ಸಚಿವರು ಹೇಳಿದ್ದಾರೆ.
ಶುಕ್ರವಾರ ಸಂಜೆ ಸುಮಾರು 6.50 ಮತ್ತು 7.10 ರ ನಡುವೆ, ಶಾಲಿಮಾರ್-ಚೆನ್ನೈ ನಡುವಿನ ಕೊರಮಂಡಲ್ ಎಕ್ಸ್‌ಪ್ರೆಸ್ ರೈಲು, ಬೆಂಗಳೂರಿನ ಯಶವಂತಪುರ-ಹೌರ ಸೂಪರ್‌ಫಾಸ್ಟ್ ರೈಲು ಹಾಗೂ ಗೂಡ್ಸ್ ರೈಲಿನ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಬಹನಾಗಾ ರೈಲು ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ವೇಗವಾಗಿ ಬಂದ ಕೊರಮಂಡಲ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ರೈಲಿನ ಬೋಗಿಗಳು ಪಕ್ಕದ ಹಳಿಯ ಮೇಲೆ ಬಿದ್ದಿತ್ತು. ಈ ವೇಳೆ ಅದೇ ಮಾರ್ಗದಲ್ಲಿ ಬಂದ ಯಶವಂತಪುರ-ಹೌರ ಸೂಪರ್‌ಫಾಸ್ಟ್ ರೈಲು ಹಳಿತಪ್ಪಿ ಬಿದ್ದಿದ್ದ ರೈಲಿನ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಘಟನೆ ನಡೆದ ಸ್ಥಳದಿಂದ 5 ಕಿಲೋ ಮೀಟರ್ ದೂರದವರೆಗೂ ಅಪಘಾತದ ಶಬ್ಧ ಕೇಳಿತ್ತು.