ಗಾಝಾದಲ್ಲಿ ಹಮಾಸ್-ಇಸ್ರೇಲ್ ಕದನ ವಿರಾಮ ವಿರೋಧಿಸಿ ನೇತನ್ಯಾಹು ಸಮ್ಮಿಶ್ರ ಸರ್ಕಾರದ ಮೂವರು ಮುಂತ್ರಿಗಳು ರಾಜೀನಾಮೆ ನೀಡಿದ್ದಾರೆ. ತೀವ್ರ ಬಲಪಂಥೀಯ ಪಕ್ಷವಾದ ಜ್ಯೂಯಿಶ್ ಪವರ್ ಪಾರ್ಟಿ ಸರ್ಕಾರಕ್ಕೆ ತನ್ನ ಬೆಂಬಲವನ್ನು ವಾಪಸು ಪಡೆದಿದೆ. ಪರಿಣಾಮವಾಗಿ ನೇತನ್ಯಾಹು ಸರ್ಕಾರದ ಬಹುಮತದ ಸಂಖ್ಯೆ ಕುಸಿದಿದೆ. ಆದರೆ, ಸರ್ಕಾರಕ್ಕೆ ಅಪಾಯವಿಲ್ಲ ಎನ್ನಲಾಗಿದೆ.
ಇಸ್ರೇಲಿನ ರಕ್ಷಣಾ ಮಂತ್ರಿಯೂ ಆಗಿರುವ ಜ್ಯೂಯಿಶ್ ಪವರ್ ಪಾರ್ಟಿಯ ನಾಯಕ ಇತೆಮಾರ್ ಬೆನ್ ಗ್ವೀರ್ ಜೊತೆಗೆ ಇತರೆ ಇಬ್ಬರು ಮಂತ್ರಿಗಳು ಭಾನುವಾರ ರಾಜೀನಾಮೆ ನೀಡಿದ್ದಾರೆ. ಬೆನ್ ಗ್ವೀರ್ ಈ ಮುನ್ನವೂ ಕದನ ವಿರಾಮ ಒಪ್ಪಂದವನ್ನು ವಿರೋಧಿಸಿಕೊಂಡೇ ಬಂದಿದ್ದರು. ಸರ್ಕಾರವನ್ನು ಉರುಳಿಸುವ ಕೆಲಸವನ್ನು ಮಾಡುವುದಿಲ್ಲ ಎಂಬ ಆಶ್ವಾಸನೆಯನ್ನು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ನೀಡಿದ್ದಾರೆ.
ಕದನ ವಿರಾಮ ಒಪ್ಪಂದವು ‘ಭಯೋತ್ಪಾದಕರ ಗೆಲುವು’ ಎಂಬುದು ಗ್ವೀರ್ ನಿಲುವು.
ಕದನ ವಿರಾಮ ಒಪ್ಪಂದದ ಭಾಗವಾಗಿ ಹಮಾಸ್ ಇಂದು ಬಿಡುಗಡೆ ಮಾಡಲಿರುವ 33 ಇಸ್ರೇಲಿ ಒತ್ತೆಯಾಳುಗಳ ಹೆಸರು-ವಿವರಗಳ ಪಟ್ಟಿಯನ್ನು ಇಸ್ರೇಲಿ ಸರ್ಕಾರ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದೆ.