ʼಬಹು ಸಂಸ್ಕೃತಿ ಬಿಟ್ಟು ಏಕ ಸಂಸ್ಕೃತಿ ಬಿತ್ತಲು ಸೇಡಂನಲ್ಲಿ ಹಮ್ಮಿಕೊಂಡಿರುವ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಬಸವಣ್ಣನ ಪರವಾಗಿ ಇರುವ ಮಠಾಧೀಶರು ಅವರ ಕಾರ್ಯಕ್ರಮಕ್ಕೆ ಹೋಗಬಾರದು. ಒಂದು ವೇಳೆ ನೀವು ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಹೋಗುವುದಾದರೆ ನಮಗೆ ವಿಷಕೊಟ್ಟು ಹೋಗಿ’ ಎಂದು ಚಿಂತಕ ಪ್ರೊ. ಆರ್.ಕೆ.ಹುಡಗಿ ಹೇಳಿದರು.
ಭಾನುವಾರ ಸೌಹಾರ್ದ ಕರ್ನಾಟಕದ ವತಿಯಿಂದ ಕಲಬುರಗಿ ನಗರದ ಜಗತ್ ವೃತ್ತದಲ್ಲಿ ಆಯೋಜಿಸಿದ ‘ಬಹುತ್ವ ಸಂಸ್ಕೃತಿ ಭಾರತೋತ್ಸವ ಬಹಿರಂಗ ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಎಚ್ಚರಿಕೆ ಸಂದೇಶ ನೀಡಿದರು.
ʼಏಕ ಸಂಸ್ಕೃತಿ ಉತ್ಸವದ ಆಮಂತ್ರಣ ಪತ್ರಿಕೆಯಲ್ಲಿ 22 ಮಂದಿ ವಿರಕ್ತ ಮಠಾಧೀಶರು, 11 ಮಂದಿ ಪಟ್ಟದೇವರು, 19 ಮಂದಿ ಲಿಂಗಾಯತ ನಾಯಕರು, 13 ಮಂದಿ ಲಿಂಗಾಯತ ಉದ್ಯಮಿಗಳು ಹಾಗೂ ನಾಲ್ವರು ಮುಸ್ಲಿಂ ನಾಯಕರ ಹೆಸರುಗಳಿವೆ. ಅವರಾರೂ ರಾಷ್ಟ್ರೀಯ ಸರ್ವನಾಶ ಸಂಘಟನೆಗೆ ಸಹಕಾರ ನೀಡಬಾರದು. ಬಸವತತ್ವ ಅನುಯಾಯಿಗಳಾಗಿ ಯಾರೂ ಹೋಗಬಾರದು. ನೀವು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ನಾವೆಲ್ಲಿ ಹೋಗಬೇಕುʼ ಎಂದರು.
ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಅನೇಕರು ಜನ ಹೆಂಡಕ್ಕೆ, ಹಣಕ್ಕೆ ಆಮೀಷಕ್ಕೆ ಒಳಗಾಗಿ ಈ ನೆಲದ ಬಹು ಸಂಸ್ಕೃತಿ ನಾಶ ಮಾಡುವ ಜನರಿಗೆ ಮಾರಿಕೊಂಡಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟವು ಏಕ ಸಂಸ್ಕೃತಿ ಹೇರುವ ಮಂಗಗಳಿಂದ ಸಂಪೂರ್ಣ ನಾಶವಾಗಿದೆ. ಇದನ್ನು ತಪ್ಪಿಸಲು ನಾಡಿನ ಚುಕ್ಕಾಣಿ ಹಿಡಿದವರು ಬದಲಾಗಬೇಕು. ಹಾಗಾಗಿ, ನೀವೇ ಸರ್ಕಾರವಾಗಬೇಕು, ಇದು ಎಲ್ಲರ ಸಾಮೂಹಿಕ ಜವಾಬ್ದಾರಿʼ ಎಂದು ಸಲಹೆ ನೀಡಿದರು.
ಹಿರಿಯ ಪತ್ರಕರ್ತ ದಿನೇಶ ಅಮೀನ್ ಮಟ್ಟು ಮಾತನಾಡಿ, “ಪರಸ್ಪರ, ಕೂಡಿ ಬಾಳದ, ಪ್ರೀತಿಸಿದರೂ ಮದುವೆಯಾಗಲಾರದ ಕಾಲದಲ್ಲಿ ಬಸವಣ್ಣ ಅಂತರ್ಜಾತಿ ವಿವಾಹ ಮಾಡಿ ಕ್ರಾಂತಿಯನ್ನೇ ಮಾಡಿದ್ದರು. ಆ ಕ್ರಾಂತಿಗೆ ಪ್ರತಿಕ್ರಾಂತಿ ಮಾಡುವ ಷಡ್ಯಂತ್ರಗಳು ನಡೆದಿವೆ. ಆರ್‌ಎಸ್‌ಎಸ್ ಹುಟ್ಟಿದ ಕೇವಲ ಎರಡು ವರ್ಷಗಳಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮನುಸ್ಮೃತಿ ಸುಟ್ಟು ಹಾಕಿದ್ದಾರೆ. ಆ ಕರಕಲು ಮನುಸ್ಮೃತಿ ಮತ್ತೆ ತಲೆ ಎತ್ತಿ ನಿಲ್ಲುತ್ತಿದೆ. ಅದಕ್ಕೆ ಸುಮ್ಮನೆ ಬಿಟ್ಟರೆ ನಮ್ಮ ಮುಂದಿನ ತಲೆಮಾರು ಖಂಡಿತ ನಾಶ ಮಾಡುತ್ತಾರೆ” ಎಂದು ಕಳವಳ ವ್ಯಕ್ತಪಡಿಸಿದರು.
ಸಾಂಸ್ಕೃತಿಕ ಚಿಂತಕ ಪ್ರೊ.ರಹಮತ್ ತರೀಕೆರೆ ಮಾತನಾಡಿ, ʼಕೋಮುವಾದದ ವಿರುದ್ಧ ಯುದ್ಧದ ಚಾಲನೆಯ ಸಮಾರಂಭವಿದು. ಎಲ್ಲ ಜಾತಿ, ಧರ್ಮ, ವರ್ಗ ಹಾಗೂ ಲಿಂಗದವರು ಕೂಡಿ ಬಾಳುವುದೇ ಬಹುತ್ವ. ಬಹುತ್ವ ಭಾರತವನ್ನು ಉಳಿಸುವುದೆಂದರೆ, ಮನುವಾದಿಗಳ ಕಾಲಾಳಾಗಿ ದುಡಿಯುತ್ತಿರುವ ನಮ್ಮ ಯುವ ಜನರನ್ನು ಬಿಡಿಸಿಕೊಳ್ಳಬೇಕು. ಬುದ್ದ, ಬಸವ, ಅಂಬೇಡ್ಕರ್, ಸೂಫಿ, ಶರಣರು, ಕನಕತತ್ವ ಪದಕಾರರು, ನೇತಾಜಿ, ಭಗತರನ್ನು ಉಳಿಸಿಕೊಳ್ಳಬೇಕಿದೆʼ ಎಂದರು.
ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ʼಸಂವಿಧಾನದಿಂದ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ, ಆದರೆ, ಸಾಮಾಜಿಕ ಮತ್ತು ಧಾರ್ಮಿಕ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ. ಸಾಂಸ್ಕೃತಿಕ ದಾಸ್ಯದ ವಿರುದ್ಧ ಹೋರಾಟ ಮಾಡಿದ ದಾರ್ಶನಿಕರನ್ನು, ಅವರು ಸಾರಿದ ಸಂದೇಶಗಳನ್ನು ನಾವಿಂದು ಅರ್ಥ ಮಾಡಿಕೊಳ್ಳಬೇಕಾಗಿದೆ. ನಿಜವಾದ ಸ್ವಾತಂತ್ರ್ಯ ಬೇಕಾದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಉಳಿಯಬೇಕು, ಸಾಂಸ್ಕೃತಿಕ ದಾಸ್ಯದಿಂದ ಮುಕ್ತಿ ಹೊಂದಬೇಕುʼ ಎಂದರು.
ಕೋರಣೇಶ್ವರ ಸ್ವಾಮೀಜಿ ಮಾತನಾಡಿ, “ಲಿಂಗಾಯತರನ್ನು ಅದರಲ್ಲೂ ವಿಶೇಷವಾಗಿ ಲಿಂಗಾಯತ ಯುವಕರನ್ನು ಗುರಿಯಾಗಿಸಿಕೊಂಡು ಸೇಡಂನಲ್ಲಿ ಆರ್‌ಎಸ್‌ಎಸ್ ಸಂಸ್ಕೃತಿ ಉತ್ಸವ ಮಾಡುತ್ತಿದೆ. ಇದಕ್ಕೆ ಲಿಂಗಾಯತ ಯುವಕರಷ್ಟೇ ಅಲ್ಲ. ಮಠಾಧೀಶರೂ ಬಲಿಯಾಗಿದ್ದಾರೆ. ಎಲ್ಲರೂ ಎಚ್ಚರಗೊಳ್ಳಬೇಕುʼ ಎಂದರು.
ಬಹಿರಂಗ ಸಮಾವೇಶಕ್ಕೂ ಮುನ್ನ ನಗರದ ಕನ್ನಡ ಭವನದಿಂದ ಜಗತ್ ವೃತ್ತದವರೆಗೆ ಮಠಾಧೀಶರ ನೇತ್ರತ್ವದಲ್ಲಿ ಬೃಹತ್ ಮೆರವಣಿಗೆ ನಡೆಯಿತು.

ಗದಗ ಲಡಾಯಿ ಪ್ರಕಾಶನದ ಬಸವರಾಜ ಮಾತನಾಡಿ, “ವೈದಿಕ ಪರಂಪರೆಗೆ ವಿರುದ್ಧವಾಗಿ ಹುಟ್ಟಿಕೊಂಡಿದ್ದು ಬೌದ್ಧ ಧಮ್ಮ, ಶರಣ ಚಳುವಳಿ, ಸೂಫಿ, ಹಾಗೂ ಸಂತ ಪರಂಪರೆ. ಇದನ್ನು ನಾಶ ಮಾಡಲು ಸಾಧ್ಯವಿಲ್ಲ. ಆದರೆ, ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಮಠಾಧೀಶರು ಇಂದೇ ಘೋಷಣೆ ಮಾಡಬೇಕುʼ ಎಂದು ಆಗ್ರಹಿಸಿದರು.
ಅಧ್ಯಕ್ಷತೆ ವಹಿಸಿದ ಭಾಲ್ಕಿಯ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, “ಸಂವಿಧಾನ, ವಚನ ಸಾಹಿತ್ಯ ಬೇರೆ ಬೇರೆ ಅಲ್ಲ. ಎರಡೂ ಒಂದೇ. ಅದಕ್ಕೆ ಬುದ್ಧ, ಬಸವ ಅಂಬೇಡ್ಕರ್ ತತ್ವಗಳು ಜಾರಿಯಾಗಬೇಕುʼ ಎಂದರು.
ಕಾರ್ಯಕ್ರಮದಲ್ಲಿ ಶರಣ ಬಸವೇಶ್ವರ ಸಂಸ್ಥಾನದ ಮಾತೋಶ್ರೀ ದಾಕ್ಷಾಯಿಣಿ ತಾಯಿ, ಹುಲಸೂರಿನ ಶಿವಾನಂದ ಸ್ವಾಮೀಜಿ, ಚನ್ನಬಸವಾನಂದ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾದ ಜಿ.ಬಿ.ಪಾಟೀಲ್, ವಿಜಯಪುರದ ಚಿಂತಕ ಜೆ.ಎಸ್.ಪಾಟೀಲ್, ಮಳಖೇಡದ ಸೈಯದ್ ಶಹಾ, ಹೋರಾಟಗಾರ್ತಿ ವರಲಕ್ಷ್ಮೀ, ಫಾದರ್ ಸ್ಟ್ಯಾನಿ ಲೋಬೊ, ಮನೋಜ ಮಂಗಳೂರು, ಬೀದರ್ ಬಸವಗಿರಿಯ ಡಾ.ಗಂಗಾಂಬಿಕೆ ಅಕ್ಕ, ಚಿಂತಕರಾದ ಕೆ.ಎಸ್.ವಿಮಲಾ, ಕೆ.ನೀಲಾ, ಗುರುಶಾಂತ ಸೇರಿದಂತೆ ಅನೇಕರು ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸಮ ಸಮಾಜ ನಿರ್ಮಾಣಕ್ಕೆ ಪರ್ಯಾಯ ರಾಜಕಾರಣ ಅಗತ್ಯ : ನಟ ಚೇತನ್
ಸಮಾವೇಶದಲ್ಲಿ ಪ್ರಮುಖರಾದ ಹಜರತ್ ಶೇಖ್, ಅಲ್ಲಮ ಪ್ರಭು ಬೆಟ್ಟದೂರು, ದಸಂಸ ಮುಖಂಡ ಮರಿಯಪ್ಪ ಹಳ್ಳಿ, ಲಚ್ಚಪ್ಪ ಜಮಾದಾರ, ಅರ್ಜುನ್ ಭದ್ರೆ, ಎಸ್.ಆರ್. ಕೊಲ್ಲೂರ, ಎಂ.ವೈ.ಗೋರ್ಪಡೆ, ಆರ್.ಜಿ.ಶೆಟಗಾರ, ಶಾಮ ನಾಟೀಕರ, ಸುರೇಶ ಮೆಂಗನ್, ಪ್ರಕಾಶ ಮೂಲಭರತಿ, ಲವಿತ್ರ ವಸ್ತ್ರದ, ದತ್ತಾತ್ರೇಯ ಇಕ್ಕಳಕಿ, ಶ್ರೈಶೈಲ ಮಸೂತಿ, ಸುಜಾತಾ, ಪ್ರಿಯಂಕಾ ಮಾವಿನಕರ್, ಪಿ.ನಂದುಕುಮಾರ್, ಅರುಣ ಜೋಳದಕೂಡ್ಲಗಿ, ಅಶ್ವಿನಿ ಮದನಕರ್, ಅಬ್ದುಲ್ ಖಾದರ್, ಮುಬಿನ್, ಲಚ್ಚಪ್ಪ ಜಮಾದರ್, ಪದ್ಮಾವತಿ ಪಾಟೀಲ್, ಶಾಂತಾ ಗಂಟಿ, ಗೌರಮ್ಮ ಪಾಟೀಲ್, ಮಲ್ಲಿಕಾರ್ಜುನ ಸತ್ಯಂಪೇಟೆ, ಚನ್ನಪ್ಪ ಆನೆಗುಂದಿ, ಮೈಲಾರಿ ದೊಡ್ಡಮನಿ, ಸೇರಿದಂತೆ ಅನೇಕ ಇದ್ದರು. ದಸಂಸ ಜಿಲ್ಲಾ ಸುರೇಶ ಹಾದಿಮನಿ ಸ್ವಾಗತಿಸಿದರು. ಡಾ.ಮೀನಾಕ್ಷಿ ಬಾಳಿ ನಿರೂಪಿಸಿದರು. ಮಹೇಶ ರಾಠೋಡ ವಂದಿಸಿದರು.