ವಿಕಲಚೇತನರಿಗೆ ಅನುಕಂಪ ಬೇಡ. ಅವರಿಗೆ ಅವಕಾಶ ಬೇಕು. ಅವಕಾಶ ಸಿಕ್ಕರೆ ಎಲ್ಲರಿಗಿಂತಲೂ ಉತ್ತಮ ರೀತಿಯಲ್ಲಿ ಅವರು ಬದುಕು ಕಟ್ಟಿಕೊಳ್ಳಲು ಸಮರ್ಥರಿದ್ದಾರೆ ಎಂದು ವಿಜಯಪುರದ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಫಾದರ್ ಟಿಯೋಲ್ ಮಚಾದೊ ಅಭಿಪ್ರಾಯಪಟ್ಟರು.
ವಿಜಯಪುರದ ಅನೌಪಚಾರಿಕ ಶಿಕ್ಷಣ ಸಂಸ್ಥೆ, ವಿಶೇಷ ಚೇತನರ ಕಾರ್ಯಕ್ರಮ, ವಿಜಯಪುರ ಹಾಗೂ ಕುಷ್ಠರೋಗ ಬೆಂಬಲ ಕಾರ್ಯಕ್ರಮ ಇವರ ಸಹಯೋಗದಲ್ಲಿ ವಿಶ್ವ ವಿಶೇಷ ಚೇತನರ ದಿನಾಚರಣೆ ಹಾಗೂ ವಿಶ್ವ ಕುಷ್ಠರೋಗ ನಿರ್ಮೂಲನಾ ದಿನಾಚರಣೆ ಅಂಗವಾಗಿ ನಗರದ ಸಂತ ಅನ್ನಮ್ಮನವರ ದೇವಾಲಯದ ಸಭಾಂಗಣದಲ್ಲಿ ವಿಶೇಷ ಚೇತನರಿಗೆ ಅಗತ್ಯ ಸಲಕರಣೆಗಳ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಫಾದರ್ ಟಿಯೋಲ್ ಮಚಾದೊ ಅವರು, ʼಈಗಾಗಲೇ ಅನೌಪಚಾರಿಕ ಶಿಕ್ಷಣ ಸಂಸ್ಥೆ ಆರೋಗ್ಯದ ಕುರಿತು ಹಲವಾರು ರೀತಿ ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ಅದರಲ್ಲಿ ವಿಶೇಷ ಚೇತನರಿಗೆ ಮತ್ತು ಕುಷ್ಠರೋಗ ನಿರ್ಮೂಲನೆ ಮಾಡುವ ಸಲುವಾಗಿ ಸರ್ಕಾರದ ಜೊತೆ ಕೆಲಸ ಮಾಡುತ್ತಿದೆ. ಕುಷ್ಠರೋಗ ಎನ್ನುವುದು ಸಮಾಜದಲ್ಲಿ ಕಳಂಕ ಮತ್ತು ಅವರನ್ನು ಮುಟ್ಟಿಸಿಕೊಳ್ಳಬಾರದೆಂಬ ಮೂಢನಂಬಿಕೆ ಜನರಲ್ಲಿ ಹಾಸು ಹೊಕ್ಕಾಗಿದೆ. ಇದರ ವಿರುದ್ಧ ನಮ್ಮ ಸಂಸ್ಥೆಯು ನಿರಂತರವಾಗಿ ಹೋರಾಡಲಿದೆ. ಕುಷ್ಠರೋಗ ಭಾದಿತರ ಮತ್ತು ವಿಶೇಷ ಚೇತನರ ಜೊತೆ ನಾವಿದ್ದೇವೆʼ ಎಂದು ಕುಷ್ಠರೋಗಿಗಳಿಗೆ ಹಾಗೂ ವಿಶೇ಼ಷ ಚೇತನರಿಗೆ ಧೈರ್ಯ ತುಂಬಿದರು.

ಸಿಂದಗಿಯ ಸಂಗಮ ಸಂಸ್ಥೆಯ ಫಾದರ್ ಸಂತೋಷ್ ಮಾತನಾಡಿ, ವಿಶೇಷ ಚೇತನರು ಅಬಲರಲ್ಲ. ಎಲ್ಲ ವಿಧದಲ್ಲಿ ಸಬಲರು. ಅವರಲ್ಲಿ ಹಲವು ವಿಶಿಷ್ಟ ಕಲೆಗಳು ಮೈಗೂಡಿಕೊಂಡಿರುತ್ತವೆ. ಅವುಗಳನ್ನು ಕಂಡುಕೊಂಡು ಮುನ್ನಡೆದರೆ ಸಾಮಾನ್ಯರಂತೆ ಸಾಧಿಸಿ ತೋರಿಸಬಲ್ಲರು ಎಂದು ಹೇಳಿದರು.
ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಜಿಲ್ಲಾ ಅಧಿಕಾರಿ ಸವಿತಾ ಕಾಳೆ ಮಾತನಾಡಿ, ವಿಕಲಚೇತನರು ಮತ್ತು ಕುಷ್ಠರೋಗಿಗಳ ಸಲುವಾಗಿ ಅನೌಪಚಾರಿಕ ಶಿಕ್ಷಣ ಸಂಸ್ಥೆ ಸರ್ಕಾರದ ಜೊತೆಗೂಡಿ ಕೆಲಸ ಮಾಡುತ್ತಿರುವುದು ಸಂತೋಷದಾಯಕ. ಈ ಸಂಸ್ಥೆಯು ಸರ್ಕಾರದ ಯಾವುದೇ ಯೋಜನೆ ಇಲ್ಲದೇ ತಮ್ಮ ಸ್ವಂತ ಖರ್ಚಿನಲ್ಲಿ ಎಲ್ಲರಿಗೂ ಸಹಾಯ ಮಾಡುತ್ತಿರುವುದು ಅವರ ಆದೃಷ್ಟ ಇಲಾಖೆ ವತಿಯಿಂದ ಏನು ಸಹಾಯ ಮಾಡಬೇಕು, ಅದನ್ನು ಮಾಡಲು ಸಿದ್ಧರಿದ್ದೇವೆ ಎಂದರು.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ; ಅಮಾನವೀಯತೆ ಮೆರೆದ ಮಾಲೀಕ
ಕಾರ್ಯಕ್ರಮದಲ್ಲಿ ವಿಕಲಚೇತನ ಮತ್ತು ಕುಷ್ಠರೋಗ ಬಾಧಿತರು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆದ್ದರು. ಕುಷ್ಠರೋಗ ನಿವಾರಣ ಸಂಸ್ಥೆಯಿಂದ ಕುಷ್ಠರೋಗ ಬಾಧಿತರಿಗೆ ಪಾದರಕ್ಷೆಗಳನ್ನು ನೀಡಲಾಯಿತು. ಅನೌಪಚಾರಿಕ ಶಿಕ್ಷಣ ಸಂಸ್ಥೆ ಮತ್ತು ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯಿಂದ ವಿಕಲಚೇತನರಿಗೆ ಅಗತ್ಯವಿರುವ ಸಲಕರಣೆಗಳನ್ನು ವಿತರಣೆ ಮಾಡಲಾಯಿತು ಮತ್ತು ಅನೌಪಚಾರಿಕ ಶಿಕ್ಷಣ ಸಂಸ್ಥೆಯಿಂದ ಎಲ್ಲರಿಗೂ ಪ್ರೊಟೀನ್ ಪೌಡರ್ ಮತ್ತು ವಿಟಮಿನ್ ಔಷಧಿಯನ್ನು ವಿತರಿಸಲಾಯಿತು.
