- ದುಂದುವೆಚ್ಚ ಪ್ರಕೃತಿ ವಿರೋಧಿ, ಜನ ವಿರೋಧಿ
- ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಭಾಗಿ
ವಿಪಕ್ಷ ಬಿಜೆಪಿ ಜನರಿಗೆ ವಿದ್ಯುತ್ ದುಂದುವೆಚ್ಚ ಹಾಗೂ ದುರುಪಯೋಗ ಮಾಡುವಂತೆ ಕುಮ್ಮಕ್ಕು ಕೊಡುತ್ತಿದೆ. ಇದು ಅತ್ಯಂತ ಜನವಿರೋಧಿಯಾದದ್ದು,ನಾಡಿನ ಪ್ರಜ್ಞಾವಂತ ಜನತೆ ಇದಕ್ಕೆ ಸೊಪ್ಪು ಹಾಕುವುದಿಲ್ಲ ಎನ್ನುವ ಭರವಸೆ ನಮಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ 2023ರ ಕಾರ್ಯಕ್ರಮ ಉದ್ಘಾಟಿಸಿ, ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ರಾಜ್ಯದ ಜನ ನೀರು, ಗಾಳಿ, ಹಾಗೂ ವಿದ್ಯುತ್ ಬಳಕೆಯನ್ನು ಹಿತಮಿತವಾಗಿ ಬಳಕೆ ಮಾಡಬೇಕು. ಇವುಗಳ ದುರುಪಯೋಗ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.
ನೀರು, ಗಾಳಿ, ವಿದ್ಯುತ್ ಯಾವುದನ್ನೂ ದುಂದುವೆಚ್ಚ ಮಾಡಬಾರದು. ದುಂದುವೆಚ್ಚ ಎನ್ನುವುದು ಪ್ರಕೃತಿ ವಿರೋಧಿ, ಜನ ವಿರೋಧಿ ಮತ್ತು ಪರಿಸರ ವಿರೋಧಿಯಾದದ್ದು ಎಂದು ಅವರು ತಿಳಿಸಿದರು.
ಮನುಷ್ಯ ಪ್ರಕೃತಿಯ ಅವಿಭಾಜ್ಯ ಅಂಗ. ಪ್ರಕೃತಿ ನಾಶ ನಮ್ಮ ನಾಶ. ಹೀಗಾಗಿ ಪ್ರಕೃತಿಯ ಜತೆಗೆ ನಾವು ಬೆಳೆಯಬೇಕು, ಬಾಳಬೇಕು ಎಂದ ಸಿಎಂ, ಸಂಕಷ್ಟದಲ್ಲಿರುವ ನಾಡಿನ ಬಡವರು ಮತ್ತು ಮಧ್ಯಮ ವರ್ಗದವರ ನೆರವಿಗಾಗಿ ನಾವು ಉಚಿತ ವಿದ್ಯುತ್ ನೀಡಲು ಮುಂದಾಗಿದ್ದೇವೆ.
ಒಂದು ವರ್ಷದ ಸರಾಸರಿ ಬಳಕೆಗಿಂತ ಶೇ10 ರಷ್ಟು ಹೆಚ್ಚು ಉಚಿತ ವಿದ್ಯುತ್ ಬಳಕೆಗೆ ನಾವು ಅವಕಾಶ ನೀಡಿದ್ದೇವೆ. ಇದನ್ನು ನಾಡಿನ ಜನತೆ ಸಂಭ್ರಮದಿಂದ ಒಪ್ಪಿಕೊಂಡಿದ್ದಾರೆ ಮತ್ತು ಸ್ವೀಕರಿಸಿದ್ದಾರೆ ಎಂದರು.
ಈ ಸುದ್ದಿ ಓದಿದ್ದೀರಾ?:ಮೊದಲ ಜಿಲ್ಲಾ ಪ್ರವಾಸ ಆರಂಭಿಸಿದ ಸಿಎಂ ಸಿದ್ದರಾಮಯ್ಯ
ಆದರೆ ಜನರಿಂದ ತಿರಸ್ಕೃತಗೊಂಡಿರುವ ಬಿಜೆಪಿ, ವಿದ್ಯುತ್ ಅನ್ನು ಅನಗತ್ಯ ದುರ್ಬಳಕೆ-ದುಂದುವೆಚ್ಚ-ದುರುಪಯೋಗ ಮಾಡಲು ಕುಮ್ಮಕ್ಕು ಕೊಡುತ್ತಿದೆ ಎಂದು ಕಿಡಿಕಾರಿದರು. ಬಿಜೆಪಿ ನಡೆ ಜನವಿರೋಧಿಯಾಗಿದೆ. ನಾಡಿನ ಪ್ರಜ್ಞಾವಂತ ಜನತೆ ಇದಕ್ಕೆ ಸೊಪ್ಪು ಹಾಕುವುದಿಲ್ಲ ಎನ್ನುವ ಭರವಸೆ ನಮಗಿದೆ ಎಂದರು.
ಪರಿಸರ ಉಳಿಸುವುದು, ಕಾಡು ಬೆಳೆಸುವುದು ಮತ್ತು ಉಳಿಸುವುದು ಕೇವಲ ಅರಣ್ಯ ಇಲಾಖೆ ಕರ್ತವ್ಯ ಅಲ್ಲ. ಪ್ರತಿಯೊಬ್ಬರ ಜವಾಬ್ದಾರಿ. ಪ್ರಕೃತಿಯ ಪ್ರಯೋಜನವನ್ನು ಪಡೆಯುತ್ತಿರುವ ಪ್ರತಿಯೊಬ್ಬರ ಮೇಲೂ ಪ್ರಕೃತಿ ಉಳಿಸುವ ಜವಾಬ್ದಾರಿ ಇದೆ ಎಂದು ಸಿದ್ದರಾಮಯ್ಯ ಹೇಳಿದರು.