ತಮ್ಮ ಮನೆ ಮಾತು ಮಲಯಾಳಂ ಆದರೂ ಕನ್ನಡ ಮಾಧ್ಯಮದಲ್ಲಿ ಕಲಿತ ಗಂಗಾಧರನ್ ಮಲಯಾಳಂ ಓದು-ಬರಹವನ್ನು ಸ್ವತಂತ್ರವಾಗಿ ಕಲಿತರು. ಮೈಸೂರಿನ ‘ಒಡನಾಡಿ’ ಪತ್ರಿಕೆಗಾಗಿ ನಂಬೂದಿರಿಪಾಡ್ ಬರಹಗಳನ್ನು ಅನುವಾದಿಸುವುದರೊಂದಿಗೆ ಅವರ ಅನುವಾದ ಕೃಷಿ ಆರಂಭಗೊಂಡಿತು. ಹೀಗೆ ಕುದುರಿದ ಅನುವಾದದ ಆಸಕ್ತಿ ಕಾಲಕ್ರಮೇಣ ಅವರ ಬದುಕಿನ ಪ್ರಧಾನ ಆಸಕ್ತಿಯಾಯಿತು.
ಅನುವಾದ ಸಾಹಿತ್ಯಕ್ಕಾಗಿ ಕಳೆದ ವರ್ಷ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾಗಿದ್ದ ಕೆ.ಕೆ. ಗಂಗಾಧರನ್ ಮೊನ್ನೆ 19ನೇ ತಾರೀಖು ನಿಧನರಾಗಿದ್ದಾರೆ. ಅವರ ʼಮಲಯಾಳಂ ಕತೆಗಳುʼ ಎಂಬ ಮಲೆಯಾಳಿಯ ಆಯ್ದ ಉತ್ತಮ ಕತೆಗಳ ಸಂಕಲನಕ್ಕೆ ಈ ಪ್ರಶಸ್ತಿ ಸಂದಿದೆ. ಇದಲ್ಲದೆ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಅವರ ʼಬಳಲಿದ ಬಾಳಿಗೆ ಬೆಳಕುʼ ಕೃತಿಗೆ 2010ರಲ್ಲಿ ಪುರಸ್ಕಾರ ಮತ್ತು ಅವರ ಇಡೀ ಅನುವಾದ ಸಾಹಿತ್ಯಕ್ಕಾಗಿ 2017ರ ಗೌರವ ಪ್ರಶಸ್ತಿ ಲಭಿಸಿವೆ.
75 ವರ್ಷ ವಯಸ್ಸಿನ ಗಂಗಾಧರನ್ ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯವರು; ಆದರೆ ಹುಟ್ಟಿ ಬೆಳೆದಿದ್ದೆಲ್ಲ ಕೊಡಗಿನ ಸೋಮವಾರಪೇಟೆ ಸಮೀಪದ ಕಬ್ಬಿಣಸೇತುವೆ ಎಂಬಲ್ಲಿ. ಸೋಮವಾರಪೇಟೆಯಲ್ಲಿ ಹೈಸ್ಕೂಲು ಮುಗಿಸಿ, ಪುತ್ತೂರಿನ ವಿವೇಕಾನಂದ ಕಾಲೇಜಿನಿಂದ ಬಿ.ಎಸ್‌ಸಿ. ಪದವಿ ಪಡೆದ ಇವರು, 1970ರಲ್ಲಿ ಹಾಸನದ ಕೊಥಾರಿ ಕಾಫಿ ಕ್ಯೂರಿಂಗ್ ವರ್ಕ್ಸ್‌ನಲ್ಲಿ, ನಂತರ 1974ರಿಂದ ಅಂಚೆ-ತಂತಿ ಇಲಾಖೆಯ ರೈಲ್ವೆ ಮೇಲ್ ಸರ್ವಿಸ್ ವಿಭಾಗದಲ್ಲಿ ಅರಸೀಕೆರೆ, ತುಮಕೂರು, ಮೈಸೂರು, ಮಡಿಕೇರಿ ಹಾಗೂ ಬೆಂಗಳೂರುಗಳಲ್ಲಿ ಕೆಲಸ ಮಾಡಿ 2009ರಲ್ಲಿ ನಿವೃತ್ತಿ ಹೊಂದಿ ಬೆಂಗಳೂರಿನಲ್ಲಿ ನೆಲೆಸಿದ್ದರು.
ತಮ್ಮ ಮನೆ ಮಾತು ಮಲಯಾಳಂ ಆದರೂ ಕನ್ನಡ ಮಾಧ್ಯಮದಲ್ಲಿ ಕಲಿತ ಗಂಗಾಧರನ್ ಮಲಯಾಳಂ ಓದು-ಬರಹವನ್ನು ಸ್ವತಂತ್ರವಾಗಿ ಕಲಿತರು. ಮೈಸೂರಿನ ‘ಒಡನಾಡಿ’ ಪತ್ರಿಕೆಗಾಗಿ ನಂಬೂದಿರಿಪಾಡ್ ಬರಹಗಳನ್ನು ಅನುವಾದಿಸುವುದರೊಂದಿಗೆ ಅವರ ಅನುವಾದ ಕೃಷಿ ಆರಂಭಗೊಂಡಿತು. ಹೀಗೆ ಕುದುರಿದ ಅನುವಾದದ ಆಸಕ್ತಿ ಕಾಲಕ್ರಮೇಣ ಅವರ ಬದುಕಿನ ಪ್ರಧಾನ ಆಸಕ್ತಿಯಾಯಿತು.
1978ರ ಸುಮಾರಿಗೆ ಮಲಯಾಳಿ ಕತೆಗಳನ್ನು ಅನುವಾದಿಸಲು ಆರಂಭಿಸಿದ ಗಂಗಾಧರನ್ ಅವರ ಅನುವಾದಿತ ಕತೆಗಳು ಕನ್ನಡದ ಬಹುತೇಕ ಎಲ್ಲ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಬೆಳಕು ಕಂಡಿವೆ. ಕನ್ನಡ ಓದುಗರಲ್ಲಿ ಅವರ ಹೆಸರು ಗೊತ್ತಿರದ ಕಥಾ ಸಾಹಿತ್ಯ ಪ್ರಿಯರು ಯಾರೂ ಇರಲಿಕ್ಕಿಲ್ಲ. ಬಹುಶಃ ಒಂದು ಸಾವಿರಕ್ಕಿಂತಲೂ ಹೆಚ್ಚು ಕತೆಗಳನ್ನು ಅವರು ಅನುವಾದಿಸಿರಬಹುದು ಎಂಬುದು ನನ್ನ ಅಂದಾಜು. ಅವರ ಅನುವಾದಿತ ಕತೆಗಳ ಪ್ರಕಟಣೆ 1983ರಲ್ಲಿ ಪ್ರಾರಂಭವಾದರೂ, 2009ರಲ್ಲಿ ನಿವೃತ್ತಿಯಾದ ಬಳಿಕವೇ ಅವರ ಮೊದಲ ಪುಸ್ತಕ ಪ್ರಕಟವಾಯಿತು. ಮುಂದೆ ಅವರ ಸುಮಾರು 20 ಅನುವಾದಿತ ಪುಸ್ತಕಗಳು ಹೊರಬಂದವು.
ಗಂಗಾಧರನ್ ಅವರು ಮಲಯಾಳಂನಲ್ಲಿ ಪ್ರಸಿದ್ಧರಾಗಿರುವ ತಕಳಿ ಶಿವಶಂಕರ ಪಿಳ್ಳೈ, ಎಸ್.ಕೆ. ಪೊಟ್ಟೆಕ್ಕಾಟ್, ಎಂ.ಟಿ. ವಾಸುದೇವನ್ ನಾಯರ್, ವೈಕಂ ಮಹಮ್ಮದ್ ಬಷೀರ್, ಮಲಯಾಟ್ಟೂರು ರಾಮಕೃಷ್ಣನ್, ಪುನ್ನತ್ತಿಲ್ ಕುಂಞಬ್ದುಲ್ಲ, ಬಹು ಜನಪ್ರಿಯರಾಗಿರುವ ಕಮಲಾದಾಸ್, ಕವಿತಾ ಮೊದಲಾದವರ ಕೃತಿಗಳನ್ನೂ ಕನ್ನಡಕ್ಕೆ ತಂದಿದ್ದಾರೆ. ನಟಿ ಶಕೀಲಾ ಅವರ ಅತ್ಮಕತೆಯನ್ನು ಅನವಾದಿಸಿದ್ದಾರೆ. ಉನ್ನಿಕೃಷ್ಣನ್ ಪುದೂರ್ ಅವರ ಜೈನ ಇತಿಹಾಸವನ್ನು ಆಧರಿಸಿದ ‘ಧರ್ಮಚಕ್ರ’ ಕಾದಂಬರಿ, ಮಾಂತ್ರಿಕ ಕಾದಂಬರಿಗಳನ್ನು ಬರೆಯುವುದರಲ್ಲಿ ನಿಸ್ಸೀಮರಾದ ಏಟುಮಾನೂರು ಶಿವಕುಮಾರ್ ಅವರ ‘ಅಷ್ಟಮಂಗಲ’, ಪ್ರಸಿದ್ಧ ಪೌರಾಣಿಕ ಕಾದಂಬರಿ ‘ದಮಯಂತಿ’ ಮುಂತಾದ ವೈವಿಧ್ಯಮಯ ಕೃತಿಗಳನ್ನೂ ಅನುವಾದಿಸಿದ್ದಾರೆ. ಕಮಲಾ ದಾಸ್ ಅವರೊಬ್ಬರದೇ 205 ಕಥೆಗಳನ್ನು ಕನ್ನಡೀಕರಿಸಿರುವುದು ಒಂದು ವಿಶಿಷ್ಟ ದಾಖಲೆಯಾಗಿದೆ.

ಗಂಗಾಧರನ್ ಎಂದು ಅವರ ಪೂರ್ತಿ ಹೆಸರು ಹೇಳಿದರೆ ಎಷ್ಟೋ ಜನರಿಗೆ ಗೊತ್ತಾಗುವುದಿಲ್ಲ, ಕೆಕೆಜಿ ಎಂದೇ ಅವರು ಅಂಚೆ ಮತ್ತು ತಂತಿ ಇಲಾಖೆಗಳಲ್ಲಿ ಚಿರಪರಿಚಿತರಾಗಿದ್ದವರು. ಅವರು ನನಗೆ ದೊರೆತಿದ್ದು ಅಂಚೆ ಇಲಾಖೆಯ ರೈಲ್ವೆ ಮೇಲ್ ಸರ್ವಿಸ್ (ಆರ್ಎಂಎಸ್) ವಿಭಾಗದಲ್ಲಿ ನಾನು ಕೆಲಸದಲ್ಲಿದ್ದಾಗ. 1974ರಲ್ಲಿ ಅವರು ತುಮಕೂರಿನಿಂದ ಮೈಸೂರಿಗೆ ವರ್ಗವಾಗಿ ಬಂದರು. ಅಲ್ಲಿ ನಮಗಿಂತ ಏಳೆಂಟು ವರ್ಷ ಸೀನಿಯರ್ ಆಗಿದ್ದ, ಮುಂದೆ ಇಂಗ್ಲಿಷ್ ಎಂಎ ಮಾಡಿ ಗೌರಿಬಿದನೂರಿನಲ್ಲಿ ಎಚ್ಚೆನ್ನರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ತೆರಳಿದ ಬಿ. ಗಂಗಾಧರ ಮೂರ್ತಿ ಮತ್ತು ನಾವಿಬ್ಬರು ಸೇರಿ ನಮ್ಮದೊಂದು ಅಪರೂಪದ ತ್ರಿವಳಿ.
ನಾನು 1975ರಲ್ಲಿ ಆರ್‌ಎಂಎಸ್‌ನಿಂದ ಟೆಲಿಫೋನ್ ವಿಭಾಗಕ್ಕೆ, ಹಾಗೂ ಮುಂದೆ ಮೂರ್ತಿ ಅವರು ಗೌರಿಬಿದನೂರಿಗೆ ಹೋದರೂ ಸಹ ನಮ್ಮ ಮೂವರ ನಡುವಿನ ಸ್ನೇಹ ಬಾಂಧವ್ಯ ಐದು ದಶಕಗಳ ಕಾಲ, ಅವರಿಬ್ಬರ ನಿಧನದವರೆಗೂ ಮುಂದುವರಿದುಕೊಂಡು ಬಂತು. ಅದು ನಮ್ಮ ಮೂವರ ನಡುವಿನ ಸ್ನೇಹವಷ್ಟೇ ಆಗಿರದೆ ಮೂರೂ ಕುಟುಂಬಗಳ ನಡುವಿನ ಅವಿನಾಭಾವ ಬಾಂಧವ್ಯವಾಗಿತ್ತು.
ನಿರಂಜನರ ʼಚಿರಸ್ಮರಣೆʼ ಕಾದಂಬರಿಯಲ್ಲಿ ಬರುವ ಪಯಸ್ವಿನಿ ನದಿಯ ಬಳಿಯ ಹಳ್ಳಿಯೊಂದರ ರಾಧಾ ಅವರೊಂದಿಗೆ ಕೆಕೆಜಿಯ ಮದುವೆ ಅವರು ಮೈಸೂರಿಗೆ ಬಂದ ಮೇಲೆ ಆಯಿತು. ಅವರು ಮೊದಮೊದಲು ತಮ್ಮ ಮಡದಿಯನ್ನು ರಾಧಾ ಪಯಸ್ವಿನಿ ಎಂದೇ ಪರಿಚಯಿಸುತ್ತಿದ್ದರು! ನಂತರ ಅವರು ಬೆಂಗಳೂರಿಗೆ ವರ್ಗಾವಣೆ ತೆಗೆದುಕೊಂಡು ಶೇಷಾದ್ರಿಪುರದ ಆರೆಮ್ಮೆಸ್ ಕಚೇರಿಗೆ ಸಮೀಪ ಚಿಕ್ಕದೊಂದು ಬಾಡಿಗೆ ಮನೆಯಲ್ಲಿ ನೆಲೆಸಿದರು. ಮನೆ ಚಿಕ್ಕದೆಂದರೆ ಚಿಕ್ಕದೇ: ಒಂದು ಹಾಲ್, ಚಿಕ್ಕ ಅಡಿಗೆಮನೆ, ಅದರೊಳಗೇ ಮೂಲೆಯಲ್ಲಿ ಬಚ್ಚಲು. ಒಟ್ಟು 10×15 ಅಳತೆ ಇದ್ದಿರಬಹುದು. ಆದರೆ ಮನೆ ಎಷ್ಟು ಚಿಕ್ಕದಿತ್ತೋ, ಆ ದಂಪತಿಗಳ ಹೃದಯ ಅಷ್ಟೇ ವಿಶಾಲವಾಗಿತ್ತು. ನಾವು ಮಾತ್ರವಲ್ಲ, ಮೈಸೂರು, ಮಂಗಳೂರು ಮತ್ತಿತರ ಕಡೆಗಳ ಅನೇಕ ಸಹೋದ್ಯೋಗಿಗಳೂ ಸಹ ಕೆಲಸದ ಮೇಲೆ ಬೆಂಗಳೂರಿಗೆ ಬಂದವರು ಉಳಿಯಬೇಕಾದಾಗ ಇವರ ಮನೆಯಲ್ಲೇ ಠಿಕಾಣಿ ಹೂಡುತ್ತಿದ್ದರು. ಮುಂದೆ ಅವರಿಗೆ ಮಗ ಶರತ್ ಹುಟ್ಟಿದಾಗ ಅವನ ತೊಟ್ಟಿಲೂ ಆ ಚಿಕ್ಕ ಹಾಲ್ನಲ್ಲೇ ತೂಗಿತ್ತು!
ಬೆಂಗಳೂರಿಗೆ ವರ್ಗವಾದ ಬಳಿಕ ಕೆಕೆಜಿಯೊಬ್ಬ ʼಪರೋಪಕಾರಿ ಪಾಪಣ್ಣʼನೇ ಆಗಿಬಿಟ್ಟರು! ಅಂಚೆ-ತಂತಿ ಇಲಾಖೆಯಲ್ಲಿ ಎರಡು ಸೊಸೈಟಿಗಳಿವೆ: ಒಂದು ಗೃಹ ನಿರ್ಮಾಣ ಸಹಕಾರ ಸಂಘ; ಇನ್ನೊಂದು ಗ್ರಾಹಕರ ಸಹಕಾರ ಸಂಘ. ಎರಡರಲ್ಲೂ ಇವರು ಒಂದಾದಮೇಲೊಂದರಂತೆ ಮೊದಲು ಖಜಾಂಚಿ, ನಂತರ ಕಾರ್ಯದರ್ಶಿ, ಅಧ್ಯಕ್ಷ ಮೂರೂ ಹುದ್ದೆಗಳನ್ನು ನಿಭಾಯಿಸಿದರು. ಇವರು ನಿಭಾಯಿಸಿದರು ಎನ್ನುವುದಕ್ಕಿಂತ ಆ ಹುದ್ದೆಗಳು ಒಂದಾದ ಮೇಲೊಂದು ಇವರ ಬೆನ್ನು ಹತ್ತಿ ಬಂದವು. ಭ್ರಷ್ಟಾಚಾರ, ಅವ್ಯವಹಾರ ಎನ್ನುವುದು ನೌಕರರ ಸಹಕಾರ ಸಂಘಗಳನ್ನೂ ಬಿಡದಿರುವ ಈ ದಿನಗಳಲ್ಲಿ ಈ ಸೊಸೈಟಿಗಳಲ್ಲಿ ಮಾತ್ರ ಅದಕ್ಕೆ ಕೊಂಚವೂ ಅವಕಾಶ ದೊರೆಯದಂತೆ ನೋಡಿಕೊಂಡಿದ್ದರಲ್ಲಿ ಕೆಕೆಜಿಯ ಪಾಲು ದೊಡ್ಡದು. ದಿನವೂ ಕಚೇರಿ ಮುಗಿದ ನಂತರ ರಾತ್ರಿ ಎಂಟು ಗಂಟೆಯವರೆಗೂ ಸೊಸೈಟಿ ಕೆಲಸ ಇರುತ್ತಿತ್ತು. ಅನೇಕ ವೇಳೆ ಭಾನುವಾರವೂ ಕೆಲಸ ಮಾಡಬೇಕಾಗುತ್ತಿತ್ತು.

ಗ್ರಾಹಕರ ಸಹಕಾರ ಸಂಘಕ್ಕೆ ಬಟ್ಟೆಬರೆ ಮುಂತಾದ ಸರಕನ್ನು ತಮಿಳುನಾಡು ಮತ್ತಿತರ ಕಡೆಗಳ ಉತ್ಪಾದನಾ ಕೇಂದ್ರಗಳಿಗೇ ಹೋಗಿ ತರುತ್ತಿದ್ದರು. ಅಲ್ಲೂ ಸಹ ಖರೀದಿಗೆ ಹೋದ ಇಲ್ಲಿನ ಪದಾಧಿಕಾರಿಗಳಿಗೆ ಅವರು ಒಂದಷ್ಟು ʼಗಿಫ್ಟ್ʼ ಕೊಡುವ ಪದ್ಧತಿ ಇತ್ತು. ಆದರೆ ಅದೆಲ್ಲವನ್ನೂ ಇವರು ಸೊಸೈಟಿಯ ಲೆಕ್ಕಕ್ಕೇ ತೆಗೆದುಕೊಂಡು ಬಿಡುತ್ತಿದ್ದರು. ಸ್ವಂತಕ್ಕೆ ಒಂದು ಬಿಡಿಗಾಸನ್ನೂ ಬಳಸಲಿಲ್ಲ. ಹಲವೊಮ್ಮೆ ಇವರಿಗೂ ಇತರ ಪದಾಧಿಕಾರಿಗಳಿಗೂ ನಡುವೆ ಈ ವಿಚಾರದಲ್ಲಿ ತಕರಾರು ಸಂಭವಿಸಿದ್ದುಂಟು. ಇವರನ್ನು ಹ್ಯಾಗಾದರೂ ಬದಿಗೆ ಸರಿಸಲು ಅಂಥ ಕೆಲವರು ಪ್ರಯತ್ನಿಸಿದ್ದೂ ಉಂಟು. ಆದರೆ ಸಾಮಾನ್ಯ ಸದಸ್ಯರು ಆ ಮೂರು ಮುಖ್ಯ ಪದಾಧಿಕಾರಗಳ ಪೈಕಿ ಒಂದರಲ್ಲಿ ಕೆಕೆಜಿ ಇದ್ದೇ ಇರುವಂತೆ ನೋಡಿಕೊಳ್ಳುತ್ತಿದ್ದರು. ಸೇವಾ ನಿವೃತ್ತಿಯ ನಂತರವೂ ಹಲವು ವರ್ಷ ಅವರು ಆ ಹುದ್ದೆಗಳಲ್ಲಿ ಮುಂದುವರಿದರು.
ಅವರು ಯೂನಿಯನ್‌ಗೆ ಕಟ್ಟಾ ನಿಷ್ಠರಾಗಿದ್ದರು. ಒಮ್ಮೆ ಆರೆಮ್ಮೆಸ್ ಯೂನಿಯನ್‌ನಿಂದ ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದ್ದಾಗ, ವಿಭಾಗೀಯ ಪದಾಧಿಕಾರಿಗಳೇ ಮುಷ್ಕರದಲ್ಲಿ ಪಾಲ್ಗೊಳ್ಳದೆ ಏನೋ ನೆಪ ಹೇಳಿ ತಪ್ಪಿಸಿಕೊಂಡರು, ಆದರೆ ಕೆಕೆಜಿ ಒಬ್ಬರೇ ಮುಷ್ಕರ ನಡೆಸಿ ಅದರ ಪರಿಣಾಮಕ್ಕೆ ಎದೆ ಕೊಟ್ಟಿದ್ದರು. ಆರ್‌ಎಂಎಸ್ ಕಚೇರಿಯ ಮನರಂಜನಾ ಕೂಟದಲ್ಲೂ ಪದಾಧಿಕಾರಿಯಾಗಿರುತ್ತಿದ್ದ ಅವರು ಕಚೇರಿಯ ಕೆಲಸದಲ್ಲೂ ಎಂದೂ ಹಿಂದುಳಿದವರಲ್ಲ. ಅಷ್ಟೆಲ್ಲದರ ನಡುವೆ, ದೂರದ ಊರುಗಳ ಸಿಬ್ಬಂದಿಗೆ ಬೆಂಗಳೂರಿನ ಹೆಡ್ಡಾಫೀಸಿನಲ್ಲಿ ಏನಾದರೂ ಕೆಲಸ ಆಗಬೇಕಿದ್ದರೆ ಅದಕ್ಕೂ ಇವರಿಗೇ ಗಂಟು ಬೀಳುವರು, ಫೋನ್ ಮಾಡುವರು!
ಇಷ್ಟೆಲ್ಲ ಕ್ರಿಯಾಶೀಲರಾಗಿದ್ದ ಕೆಕೆಜಿ ಎಡೆಬಿಡದೆ ಬರವಣಿಗೆಯನ್ನೂ ಅದ್ಯಾವಾಗ ನಡೆಸಿದರೋ ಎಂದು ಆಶ್ಚರ್ಯವಾಗುತ್ತದೆ. ಅವರ ಮನೆಯಲ್ಲಿ ಏಕಕಾಲದಲ್ಲಿ ಎರಡು ಅಥವಾ ಮೂರು ಕತೆ-ಕಾದಂಬರಿಗಳ ಅಪೂರ್ಣವಾದ ಅನುವಾದದ ಬರಹಗಳು ಒಂದೊಂದು ಕ್ಲಿಪ್ ಪ್ಯಾಡಿಗೆ ಅಂಟಿಕೊಂಡು ಇದ್ದೇ ಇರುತ್ತಿದ್ದವು. ಚೂರುಪಾರು ಬಿಡುವು ಸಿಕ್ಕಿದಾಗಲೆಲ್ಲ ಕೂತು ಯಾವುದಾದರೊಂದು
ಬರವಣಿಗೆ ಮುಂದುವರಿಸುತ್ತಿದ್ದರು. ಕಮ್ಯೂನಿಸ್ಟ್ ಚಿಂತನೆಗೆ ಬದ್ಧರಾಗಿದ್ದ ಅವರು ಕೊನೆವರೆಗೂ ಜಾತ್ಯತೀತ, ಪ್ರಜಾಸತ್ತಾತ್ಮಕ, ಸಂವಿಧಾನ ನಿಷ್ಠ ಸಾದಾ ಜೀವನ ನಡೆಸಿದರು. ಹಾಗೆಂತ ಕುಟುಂಬವನ್ನೇನೂ ಕಡೆಗಣಿಸಲಿಲ್ಲ, ಕುಟುಂಬದೊಳಗಿನ ತನ್ನ ಜವಾಬ್ದಾರಿಗಳನ್ನು ಚಾಚೂ ತಪ್ಪದೆ ನಿರ್ವಹಿಸಿದರು. ಕೊನೆಗೆ, ಮಾಗಡಿ ರಸ್ತೆಯ ಬಡಾವಣೆಯೊಂದರಲ್ಲಿ ಸ್ವಂತ ಮನೆ ಕಟ್ಟಿಕೊಂಡು, ಮಡದಿ, ಮಗ-ಸೊಸೆ ಮೊಮ್ಮಗನೊಂದಿಗೆ ಇದ್ದುದರಲ್ಲೇ ಸಂತೃಪ್ತ ಸಾರ್ಥಕ ಜೀವನ ನಡೆಸಿ ಬೀಳ್ಕೊಂಡರು.

ಇಷ್ಟೆಲ್ಲ ಹೇಳಿದ ಮೇಲೆ ಇವರ ಮಡದಿ ರಾಧಾ ಅವರ ಕುರಿತೂ ಒಂದೆರಡು ಮಾತು ಬರೆಯದಿದ್ದರೆ ಅಪಚಾರವಾಗುತ್ತದೆ. ಅವರು ಬಹುಶಃ ಹೈಸ್ಕೂಲ್ ಮಾತ್ರ ಮುಗಿಸಿದ್ದರೂ ಕೆಕೆಜಿಯವರ ಅನುವಾದದ ಕೆಲಸದಲ್ಲಿ ಪರೋಕ್ಷ ರೀತಿಯಲ್ಲಿ ಕೊಡುಗೆ ನೀಡಿದರು. ಎಷ್ಟೋ ವೇಳೆ, ಕತೆಗಳಲ್ಲಿ ಯಾವುದಾದರೂ ಸಂದರ್ಭವೋ, ಪದಗಳೋ ತನಗೆ ಸರಿಯಾಗಿ ಅರ್ಥವಾಗದಿದ್ದಾಗ ಅದನ್ನು ಸಮರ್ಪಕವಾಗಿ ಅರ್ಥ ಮಾಡಿಸುತ್ತಿದ್ದುದು ರಾಧಾನೇ ಅಂತ ಕೆಕೆಜಿ ಹೇಳುತ್ತಿದ್ದುದುಂಟು. ಮದುವೆಯಾಗಿ ಬಂದಾಗ ಅಪ್ಪಟ ಹಳ್ಳಿ ಹುಡುಗಿಯಾಗಿದ್ದ ರಾಧಾ ಬೇಗನೆ ಮೈಸೂರು- ಬೆಂಗಳೂರುಗಳ ಬದುಕಿಗೆ ತನ್ನದೇ ರೀತಿಯಲ್ಲಿ ಹೊಂದಿಕೊಂಡರು. ಮನೆಯಲ್ಲಿ ಯಾವಾಗ ನೋಡಿದರೂ ಇರುತ್ತಿದ್ದ ಒಬ್ಬರಲ್ಲಾ ಒಬ್ಬರು ಗಂಡನ ಸ್ನೇಹಿತರಿಗೆ ತಾನೂ ಸ್ನೇಹಿತೆಯಾಗಿ ಬಿಡುತ್ತಿದ್ದರು. ಅವರೊಂದಿಗೆ ಮನ ಬಿಚ್ಚಿ ಮಾತಾಡುತ್ತಿದ್ದರು. ಹಾಗಾಗಿ ಯಾರಿಗೂ ಅವರ ಮನೆಯಲ್ಲಿ ಮುಜುಗರವಾಗಲಿ, ಅಪರಿಚಿತ ಭಾವನೆಯಾಗಲಿ ಬರುತ್ತಿದ್ದಿಲ್ಲ. ಗಂಡನಿಗೆ ಬರುತ್ತಿದ್ದ ಸಣ್ಣ ಸಂಬಳದಲ್ಲೂ ಅಚ್ಚುಕಟ್ಟಾಗಿ ಸಂಸಾರ ನಿಭಾಯಿಸಿದರು; ಇಬ್ಬರೂ ಸೇರಿ ಮಗ ಶರತ್‌ನನ್ನೂ ಒಳ್ಳೆಯ ರೀತಿಯಲ್ಲಿ ಓದಿಸಿ ಗುಣವಂತನನ್ನಾಗಿ ಬೆಳೆಸಿದರು.
ಸುಮಾರು ಐವತ್ತು ವರ್ಷ ಕೆಕೆಜಿಯೊಂದಿಗೆ ಅನ್ಯೋನ್ಯ ದಾಂಪತ್ಯದ ಬದುಕು ನಡೆಸಿದ ರಾಧಾ ಅವರಿಗೆ ಕೆಕೆಜಿಯಿಲ್ಲದ ದಿನಗಳು ಅತ್ಯಂತ ಶೂನ್ಯವೆನ್ನಿಸುವುದರಲ್ಲಿ ಸಂದೇಹವಿಲ್ಲ. ಅದರ ನಡುವೆಯೂ, ನನ್ನ ಜೀವನ ಸಂಗಾತಿ ಹೇಮಾರನ್ನೂ ಒಳಗೊಂಡಂತೆ ಅವರು ತನ್ನದೇ ಆಪ್ತ ಗೆಳತಿಯರ ಸಣ್ಣ ಬಳಗವನ್ನು ಗಳಿಸಿಕೊಂಡಿದ್ದರು. ಆ ಬಳಗ ಅವರ ಈ ಶೂನ್ಯದ ಒಂದು ಭಾಗವನ್ನಾದರೂ ಸಹನೀಯಗೊಳಿಸೀತೆಂದು ಆಶಿಸಬೇಕಿದೆ.