ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ನೀರಮಾನ್ವಿ ಗ್ರಾಮದ ಜಮೀನೊಂದರಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ವಿರೋಧಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.
ನೀರಮಾನ್ವಿ ಗ್ರಾಮದ ಸ.ನಂ. 55/1 ಮತ್ತು ಸ.ನಂ. 56 ರ ಕೃಷಿ ಜಮೀನಿನಲ್ಲಿ ಸಣ್ಣ ಪ್ರಮಾಣದ ಕಲ್ಲುಬಂಡೆಗಳನ್ನು ತೆಗೆಯುತ್ತೇವೆ ಎಂದು ಗಣಿ ಇಲಾಖೆಯಿಂದ ಪರವಾನಿಗೆ ಪಡೆದು ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ. ಈ ಕೂಡಲೇ ಸರ್ಕಾರ ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆಯಿಂದ ಸುಮಾರು ಒಂದು ಲಕ್ಷ ಟನ್ ಹೆಚ್ಚುವರಿ ಕಲ್ಲನ್ನು ಗಣಿಗಾರಿಕೆ ಮಾಡಿದ್ದು, ಇದರ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಯಾವುದೇ ದಂಡ ವಿಧಿಸಿಲ್ಲ. ಘಟನೆ ತಿಳಿದಿದ್ದೂ ನಿರ್ಲಕ್ಷ್ಯ ವಹಿಸಿದ ಗಣಿ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪುಷ್ಪಲತಾ ಕವಲೂರು ಅವರನ್ನು ತಕ್ಷಣ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.
ಗಣಿ ಇಲಾಖೆಯ ಹೆಚ್ಚುವರಿ ನಿರ್ದೇಶಕರ ಕಚೇರಿ ಸಿಬ್ಬಂದಿ ಹಾಗೂ ರಾಯಚೂರು ಗಣಿ ಇಲಾಖೆ ಸಿಬ್ಬಂದಿ ಜಂಟಿಯಾಗಿ ಸ್ಥಾನಿಕ ಪರಿಶೀಲನೆ ಮಾಡಿ ಹಾಗೂ ಡಿಜಿಪಿಎಸ್ ಡೋಸ್ ಸರ್ವೆ ಮಾಡಿ ಪರವಾನಿಗೆ ಪಡೆದದ್ದಕ್ಕಿಂತಲೂ ಹೆಚ್ಚುವರಿಯಾಗಿ 18 ಸಾವಿರ ಟನ್ ಕಲ್ಲು ಬಂಡೆಗಳನ್ನು ತೆಗೆದಿರುತ್ತಾರೆ ಎಂದು ಅಧಿಕಾರಿಗಳೇ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ನಿಯಮಗಳ ಪ್ರಕಾರ ಪ.ಜಾತಿ, ಪ.ಪಂಗಡದವರಿಗೆ ಕಲ್ಲು ಕಟ್ಟಡ ಕ್ವಾರಿಯನ್ನು ಗುರುತಿಸಿ ಕಲ್ಲುಗಣಿಗಾರಿಕೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಕಾರ್ಮಿಕರ ಮೇಲೆ ಹಲ್ಲೆ: ಕಠಿಣ ಕ್ರಮಕ್ಕೆ ಆಗ್ರಹ
ಧರಣಿಯಲ್ಲಿ ಅಂಬೇಡ್ಕರ್ ದಲಿತ ಸೇನೆಯ ಮುಖಂಡ ಗುರುರಾಜ ಎನ್ ನಾಗಲಾಪುರ, ರೈತ ಸಂಘದ ಅಧ್ಯಕ್ಷ ಹೊಳೆಯಪ್ಪ ಉಟಕನೂರು, ದಲಿತಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ನರಸಪ್ಪ ಜೂಕೂರು ಹಾಗೂ ಹನುಮಂತ ಸೀಕಲ್, ನೀರಮಾನ್ವಿ ಗ್ರಾಮಸ್ಥರಾದ ಶಿವು, ಮರಿಸ್ವಾಮಿ, ವೆಂಕಟೇಶ, ಜಗದೀಶ, ರಾಜ, ಕೃಷ್ಣ, ಸುರೇಶ, ರಾಮಣ್ಣ ಭೋವಿ ಭಾಗವಹಿಸಿದ್ದರು.
