ಇತ್ತೀಚೆಗೆ ವಿಜಯಪುರದ ಇಟ್ಟಂಗಿ ಭಟ್ಟಿಯ ಕೂಲಿ ಕಾರ್ಮಿಕರ ಮೇಲೆ ಅಮಾನವೀಯವಾಗಿ ಹಿಂಸೆ ಮಾಡಿರುವ ಕೃತ್ಯ ಸಮಾಜ ವಿರೋಧಿಯಾಗಿದೆ. ಕೂಲಿ ಕಾರ್ಮಿಕರ ಮೇಲೆ ಹಿಂಸೆ ಮಾಡಿರುವ ದುರುಳರನ್ನು ಪೊಲೀಸ್ ಇಲಾಖೆ ಕಠಿಣ ಶಿಕ್ಷೆಗೆ ಒಳಪಡಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಶರಣು ಶಿಂಧೆ ಆಗ್ರಹಿಸಿದರು.
ಸಮಾಜದಲ್ಲಿ ಗೂಂಡಾ ವರ್ತನೆ ತಾಂಡವಾಡುತ್ತಿದೆ. ಹೊಟ್ಟೆಪಾಡಿಗಾಗಿ ಅಲೆದಾಡುತ್ತಿರುವ ಕೂಲಿ ಕಾರ್ಮಿಕರ ಮೇಲೆ ಈ ರೀತಿ ದೌರ್ಜನ್ಯ ಮಾಡುತ್ತಿರುವುದು ಯಾವ ನ್ಯಾಯ? ಅವರು ತಪ್ಪು ಮಾಡಿದ್ದರೆ ಅದನ್ನ ತಿದ್ದಿ ತಿಳಿ ಹೇಳುವ ಪ್ರಯತ್ನ ಮಾಡಬೇಕು. ಅದು ಬಿಟ್ಟು ಅಮಾಯಕರ ಮೇಲೆ ರೀತಿ ಹಲ್ಲೆ ಮಾಡಿರುವುದು ದೊಡ್ಡ ಅಪರಾಧ. ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ಕ್ವಿಂಟಾಲ್ ತೊಗರಿಗೆ ರಾಜ್ಯ ಸರ್ಕಾರದಿಂದ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಆದ ಕೂಡಲೇ ಎಚ್ಚೆತ್ತ ವಿಜಯಪುರ ಗ್ರಾಮೀಣ ಪೊಲೀಸ್ ಅಧಿಕಾರಿಗಳು ಅಪರಾಧಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ದಲಿತ ಸಂಘರ್ಷ ಸಮಿತಿ ಸ್ವಾಗತಿಸುತ್ತದೆ. ಆದರೆ ಆ ಕಿಡಿಗೇಡಿಗಳನ್ನು ಸುಮ್ಮನೆ ಬಿಡಬಾರದು. ಬೇರೆ ಬೇರೆ ಕಡೆ ಕೂಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಭಯದಿಂದ ಬದುಕುತ್ತಿದ್ದಾರೆ. ಅವರಿಗೆ ನೆಮ್ಮದಿಯ ಬದುಕು ಬೇಕಾಗಿದೆ. ಸಮಾಜದಲ್ಲಿ ನಿತ್ಯ ಕಾರ್ಮಿಕರ ಮೇಲೆ ಒಂದಲ್ಲ ಒಂದು ರೀತಿ ದೌರ್ಜನ್ಯ ನಿರಂತರವಾಗಿ ಸಾಗುತ್ತಿದೆ. ಪ್ರಕರಣಕ್ಕೆ ಸ್ಪಂದಿಸಬೇಕಾದ ಕಾರ್ಮಿಕ ಇಲಾಖೆ ಜಾಣ ಕುರುಡನಂತೆ ವರ್ತಿಸುತ್ತಿದೆ. ಕೂಡಲೇ ಸರ್ಕಾರ ಮತ್ತು ಕಾರ್ಮಿಕ ಇಲಾಖೆ ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಅಪರಾಧಿಗಳನ್ನು ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.
