ಯುವಜನತೆ ತಂಬಾಕು ಉತ್ಪನ್ನಗಳಿಗೆ ಆಕರ್ಷಿತರಾಗುತ್ತಿದ್ದಾರೆ. ತಂಬಾಕು ಉತ್ಪನ್ನಗಳ ಬಳಕೆಯಿಂದ ಕ್ಯಾನ್ಸರ್ ನಂತಹ ಮಾರಕ ರೋಗಗಳು ಬರುತ್ತಿವೆ. ಯುವಜನತೆ ತಂಬಾಕು ದುಷ್ಪರಿಣಾಮಗಳ ಕುರಿತು ಜಾಗೃತರಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ತಿಳಿಸಿದರು.
ಚಿಕ್ಕಬಳ್ಳಾಪುರ ನಗರದ ಸರಕಾರಿ ಪ್ರೌಢಶಾಲೆ ಅವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ “ಗುಲಾಬಿ ಆಂದೋಲನ ಜಾಥಾ ಕಾರ್ಯಕ್ರಮ”ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇದೊಂದು ಮಾರಕ ದುಶ್ಚಟವಾಗಿ ಪರಿಣಮಿಸಿದೆ. ತಂಬಾಕು ಸೇವನೆಯಿಂದ ಉಂಟಾಗುವ ಮಾರಕ ಪರಿಣಾಮಗಳ ಕುರಿತು ಅರಿಯುವುದರಿಂದ ದೂರ ಉಳಿಯಬಹುದು. ತಂಬಾಕು ಸೇವನೆ ಕೈಬಿಟ್ಟು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಎಲ್ಲರು ಕೈ ಜೋಡಿಸಬೇಕು. ಯುವಕರು, ವಿದ್ಯಾವಂತರು ಸಮಾಜದ ಬೆನ್ನೆಲುಬು. ಯುವ ಜನರು ಮುಖ್ಯವಾಗಿ ಕಾಲೇಜು ಹಂತದ ಕೆಲವು ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟು, ಖೈನಿ, ಹನ್ಸ್, ಕಡ್ಡಿಪುಡಿ ತಂಬಾಕು ಸೇವನೆಯಿಂದ ಕ್ಯಾನ್ಸರ್ ನಂತಹ ಆರೋಗ್ಯ ಸಂಬಂಧಿ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ವಿದ್ಯಾರ್ಥಿ ಯುವ ಸಮೂಹ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳನ್ನು ಅರಿತುಕೊಂಡು ಅದರಿಂದ ದೂರವಿರುವ ಜೊತೆಗೆ ತಮ್ಮ ಮನೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ತಮಗೆ ಸಂಪರ್ಕಿತರಾಗುವ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್ ಮಾತನಾಡಿ, ತಂಬಾಕು ಸೇವನೆಯಿಂದ ಸಾಕಷ್ಟು ದುಷ್ಪರಿಣಾಮಗಳಾಗುತ್ತಿವೆ. ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಯುವಕ- ಯುವತಿಯರು ಬಲಿಯಾಗುತ್ತಿದ್ದಾರೆ. ಗಾಂಜಾ ವ್ಯಸನಿಗಳು ಹೆಚ್ಚಾಗುತ್ತಿದ್ದಾರೆ. ತಂಬಾಕು ಉತ್ಪನ್ನಗಳು ಹಾಗೂ ಮಾದಕ ವಸ್ತುಗಳ ಸೇವನೆಯ ಅಡ್ಡಪರಿಣಾಮಗಳನ್ನು ಅರಿತು ಅಂತಹ ವ್ಯಸನಗಳಿಂದ ದೂರವಿರುವಂತೆ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಬಿ.ಬಿ ರಸ್ತೆಯ ಸರ್ಕಾರಿ ಪ್ರೌಢಶಾಲೆಯ ಆವರಣದಿಂದ ಪ್ರಾರಂಭವಾಗಿ ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿನ ವಾಣಿಜ್ಯ ಮಳಿಗೆಗಳು ಹಾಗೂ ಅಂಗಡಿ ಮಾಲೀಕರು, ಕಾರ್ಮಿಕರು, ಗ್ರಾಹಕರಿಗೆ ಗುಲಾಬಿ ಹೂ ಕೊಟ್ಟು ತಂಬಾಕು ಮಾರಾಟ ಹಾಗೂ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಯುವಜನತೆ ಕಾನೂನುಬಾಹಿರ ಕೃತ್ಯಗಳಿಂದ ದೂರವಿರಿ; ವೆಂಕಟರಮಣಪ್ಪ ಕರೆ
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹರೀಶ್, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಕೃಷ್ಣ ಪ್ರಸಾದ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಮಂಜುಳಾ, ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲೆ ಪ್ರಭಾವತಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.