ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯಿಂದ ನಡೆಸಿದ ಕಲಬುರಗಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ದೊರತಿದ್ದು, ತೊಗರಿಯ ಕಣಜವಾದ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಹಾಗೂ ನೆಟೆರೋಗದಿಂದ ಹಾನಿಯಾಗಿರುವ ತೊಗರಿಗೆ ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಮುಂಜಾನೆ ಪ್ರತಿಭಟನೆಗೆ ಇಳಿದ ರೈತ ಮುಖಂಡರು, “ಈ ವರ್ಷ ತೊಗರಿ ಬೆಳೆಗಾರರಿಗೆ ತುಂಬಾ ನಷ್ಟವಾಗಿದೆ. ಕೂಡಲೇ ರೈತರ ಸಮಸ್ಯೆಗಳನ್ನು ಈಡೇರಿಸಬೇಕು. ಬೆಳೆಹಾನಿ ಅನುಭವಿಸಿದ ಸಾವಿರಾರು ರೈತರು ಬೀದಿಪಾಲಾಗಿದ್ದಾರೆ. ಸರ್ಕಾರ ಅವರ ನೆರವಿಗೆ ನಿಂತು ಪರಿಹಾರವಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು” ಎಂದು ಘೋಷಣೆಗಳನ್ನು ಹಾಕಿದರು.
ಕಲಬುರಗಿ ಬಂದ್ ಘೋಷಣೆ ನಿಮಿತ್ತ ಇಂದು ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗೆ ಇಳಿದಿಲ್ಲ, ಇದರಿಂದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್‌ಗಳಿಲ್ಲದೆ ಬಿಕೋ ಎನ್ನುತ್ತಿರುವುದು ಕಂಡುಬಂದಿದೆ.
ಸ್ವಯಂಪ್ರೇರಿತ ಬಂದ್
ಕಲಬುರಗಿ ಬಂದ್ ಘೋಷಣೆ ಮಾಡಿದ್ದರಿಂದ ಇಲ್ಲಿನ ವಾಣಿಜ್ಯ ಮಳಿಗೆಗಳ ಮಾಲೀಕರು ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿಗಳನ್ನು ಮುಚ್ಚಿ, ರೈತರ ಹೋರಾಟಕ್ಕೆ ಬೆಂಬಲ ನೀಡಿದರು. ನಿತ್ಯ ಕೇಂದ್ರ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ ತೆರೆಯುತ್ತಿದ್ದ ಅಂಗಡಿ, ಹೋಟೆಲ್ ಸೇರಿದಂತೆ ಇತರ ವಾಣಿಜ್ಯ ಮಳಿಗೆಗಳೂ ಮುಚ್ಚಿದ್ದು, ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.
ಹಲವು ಸಂಘಟನೆಗಳ ಬೆಂಬಲ
ತೊಗರಿಗೆ ವಿಶೇಷ ಪ್ಯಾಕೇಜ್ ಅನುದಾನ ಘೋಷಿಸಬೇಕೆಂದು ಒತ್ತಾಯಿಸಿ ಕರೆ ಕೊಟ್ಟಿದ್ದ ಕಲಬುರಗಿ ಬಂದ್‌ಗೆ ವಿದ್ಯಾರ್ಥಿ ಸಂಘಟನೆ, ಕೂಲಿ ಕಾರ್ಮಿಕ ಸಂಘಟನೆ, ಸಿಐಟಿಯು, ದಲಿತ ಸಂಘಟನೆ, ಎಸ್‌ಎಫ್‌ಐ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಗಳು ಬೆಂಬಲ ಸೂಚಿಸಿದವು.
ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೈನ್ಯ ಕೊಡಿಹಳ್ಳಿ ಚಂದ್ರಶೇಖರ ಬಣ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೈನ್ಯ ಕೆ ಎಸ್ ಪುಟ್ಟಣ್ಣಯ್ಯ ಬಣ, ಸೆಂಟ್ರಲ್ ಆಫ್ ಇಂಡಿಯಾ ಟ್ರೇಡ್ ಯೂನಿಯನ್ ದಲಿತ ಸಂಘರ್ಷ ಸಮಿತಿ ಡಾ ಅಂಬೇಡ್ಕರ್ ವಾದಿ, ದಲಿತ ಸಂಘರ್ಷ ಸಮಿತಿ(ಮಾವಳ್ಳಿ ಶಂಕರ್ ಬಣ), ಕಟ್ಟಡ ಕಾರ್ಮಿಕ ಸಂಘಗಳ, ತೊಗರಿ ಬೆಳೆಗಾರರ ಸಂಘ, ಆಹಾರ ಧಾನ್ಯಗಳ ಮತ್ತು ಬೀಜ ವ್ಯಾಪಾರಿಗಳ ಸಂಘಗಳು, ಚೇಂಬರ್ ಆಫ್ ಕಾಮರ್ಸ್, ಅಡಕೆ ವ್ಯಾಪಾರಸ್ಥರು, ಮಾಲಿಕರ ಸಂಘ, ಕಿರಾಣಿ ಬಜಾರ್ ವ್ಯಾಪಾರಸ್ಥರ ಸಂಘ, ಬೀದಿಬದಿ ವ್ಯಾಪಾರಸ್ಥರು, ದಾಲ್ ಮಿಲ್ಲರ್ ಅಸೋಶಿಯೇಶನ್ ಸಂಘ, ಅಕ್ಕಿ ವ್ಯಾಪಾರಸ್ಥರ ಸಂಘ, ಔಷಧಿ ವ್ಯಾಪಾರಸ್ಥರ ಸಂಘ ಸೇರಿದಂತೆ ಇನ್ನೂ ಹಲವು ಸಂಘಟನೆಗಳೂ ಕೂಡಾ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.
ಈ ಸುದ್ದಿ ಓದಿದ್ದೀರಾ? ಬೀದರ್ | ತೊಗರಿ ಬೆಲೆ ಕುಸಿತದಿಂದ ರೈತರು ಕಂಗಾಲು : ಸ್ಪಂದಿಸುವುದೇ ಸರ್ಕಾರ?
ಬೆಳಿಗ್ಗೆಯಿಂದ ನಡೆದಿರುವ ಪ್ರತಿಭಟನೆಯಲ್ಲಿ ಶರಣಬಸಪ್ಪ ಮಮಶೆಟ್ಟಿ, ನಾಗೇಂದ್ರಪ್ಪ ಥಂಬೆ, ರಮೇಶ ರಾಗಿ, ಸುಜಾತಾ, ಇಬ್ರಾಹಿಂ ಪಟೇಲ್, ಭೀಮಾಶಂಕರ ಮಾಡಿಯಾಳ, ಕರೆಪ್ಪ, ಸಿದ್ದು, ಎಸ್ ಆರ್ ಕಲ್ಲೂರ್, ಅರ್ಜುನ್ ಗೊಬ್ಬೂರ್, ಮುಬೀನ್ ಅಹ್ಮದ್, ದಿಲೀಪ್ ನಾಗೋರೆ, ಬಾಬು ಹೂವಿನಹಳ್ಳಿ, ಮಹಾಂತೇಶ್ ಜಮಾದಾರ್,ಅರ್ಜುನ್ ಗೊಬ್ಬರ, ಅಲ್ಲಪಟೇಲ್ ಹಿಜೇರಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದಾರೆ.