ದೆಹಲಿ ವಿಧಾನಸಭೆ ಚುನಾವಣೆ ಇನ್ನು ಕೆಲವೇ ವಾರಗಳಲ್ಲಿ ನಡೆಯಲಿದೆ. ಫೆಬ್ರವರಿ 5ರಂದು ನಡೆಯುವ ಚುನಾವಣೆಯ ಫಲಿತಾಂಶ ಫೆಬ್ರವರಿ 8ರಂದು ಪ್ರಕಟವಾಗಲಿದೆ. ಈಗಾಗಲೇ ಎಎಪಿ, ಕಾಂಗ್ರೆಸ್, ಬಿಜೆಪಿ ಮೊದಲಾದ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಎಎಪಿ ತನ್ನ ಗದ್ದುಗೆ ಉಳಿಸಿಕೊಳ್ಳುವ ಸಾಹಸದಲ್ಲಿದ್ದರೆ, ಬಿಜೆಪಿ ಸಿಎಂ ಕುರ್ಚಿ ಅಲುಗಿಸುವ ಪ್ರಯತ್ನದಲ್ಲಿದೆ. ಇವೆಲ್ಲವುದರ ನಡುವೆ ಕಾಂಗ್ರೆಸ್ ತನ್ನ ನೆಲೆಯನ್ನು ಮರಳಿ ಪಡೆಯುವ ಪ್ರಯತ್ನದಲ್ಲಿದ್ದರೂ, ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ಕಾಣಿಸಿಕೊಳ್ಳುತ್ತಿದೆ. ಎಎಪಿ-ಬಿಜೆಪಿ ಕದನದಲ್ಲಿ ಲಾಭ ಮಾಡಿಕೊಳ್ಳಬಹುದೇ ಎಂದು ಎದುರು ನೋಡುತ್ತಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಲು ಗ್ಯಾರಂಟಿ ಯೋಜನೆಗಳು ಕಾರಣವೆಂದರೆ ತಪ್ಪಾಗಲಾರದು. ಇದೀಗ ಬಹುತೇಕ ಎಲ್ಲ ರಾಜ್ಯ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಮಾತ್ರವಲ್ಲದೆ ಎಲ್ಲ ಪಕ್ಷಗಳು ಈ ಉಚಿತ ಯೋಜನೆಗಳಿಗೆ ಜೋತುಬಿದ್ದಿದೆ. ನೇರವಾಗಿ ಹೇಳುವುದಾದರೆ ಈ ಬಾರಿ, ದೆಹಲಿ ವಿಧಾನಸಭೆ ಚುನಾವಣೆಯು ಕಾಂಗ್ರೆಸ್, ಬಿಜೆಪಿ, ಎಎಪಿ ನಡುವೆ ನಡೆಯುವುದಲ್ಲ, ಬದಲಾಗಿ ಈ ಮೂರು ಪಕ್ಷಗಳು ಘೋಷಿಸಿರುವ ಉಚಿತ ಯೋಜನೆ ಅಥವಾ ಉಚಿತ ಕೊಡುಗೆಗಳ ನಡುವೆ ನಡೆಯುತ್ತಿದೆ ಎಂಬ ಅಭಿಪ್ರಾಯಗಳಿವೆ.
ಇದನ್ನು ಓದಿದ್ದೀರಾ? ದೆಹಲಿ ವಿಧಾನಸಭೆ ಚುನಾವಣೆ | ಕಾಂಗ್ರೆಸ್ ಬದಲು ಎಎಪಿ ಬೆಂಬಲಕ್ಕೆ ನಿಂತ ‘ಇಂಡಿಯಾ’ ಮಿತ್ರಪಕ್ಷಗಳು
ದೆಹಲಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾ ಪಕ್ಷ ಕಟ್ಟಿಕೊಂಡ ಅರವಿಂದ್ ಕೇಜ್ರಿವಾಲ್ 2013ರಿಂದ ಇತ್ತೀಚಿನವರೆಗೂ ಮುಖ್ಯಮಂತ್ರಿಯಾಗಿದ್ದರು. ಅಬಕಾರಿ ಅಕ್ರಮ ಆರೋಪದಲ್ಲಿ ಜೈಲು ಸೇರಿ ಅಲ್ಲಿಂದ ಹೊರಬಂದು ತನ್ನ ಗದ್ದುಗೆಯನ್ನು ಆತಿಶಿಗೆ ಬಿಟ್ಟುಕೊಟ್ಟವರು ಕೇಜ್ರಿವಾಲ್. ಏನೇ ಆದರೂ ದೆಹಲಿಯಲ್ಲಿ ಎಎಪಿ ಕೊಂಚ ಸುಧಾರಣೆಯನ್ನು ತಂದಿರುವುದನ್ನು ನಾವು ಅಲ್ಲಗಳೆಯುವಂತಿಲ್ಲ. ಜೊತೆಗೆ ರಾಜಕೀಯಅ ಆಟಾಟೋಪಗಳಲ್ಲೇ ಮಗ್ನರಾಗಿ ವಾಯುಮಾಲಿನ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದನ್ನೂ ಬದಿಗೊತ್ತುವಂತಿಲ್ಲ.
ಬಿಜೆಪಿ ಮಾಡಿದ ಸರ್ಕಾರಿ ತನಿಖಾ ಸಂಸ್ಥೆಗಳ ಪ್ರಯೋಗಕ್ಕೆ ಬಲಿಯಾಗಿದ್ದು ವಿಪಕ್ಷಗಳ ನಾಯಕರು. ಬಿಜೆಪಿ ವಾಷಿಂಗ್ ಮಷಿನ್‌ನಲ್ಲಿ ಸ್ವಚ್ಚವಾದ ಕೈಲಾಶ್ ಗೆಹ್ಲೋಟ್‌ನಂತಹ ಎಷ್ಟೋ ನಾಯಕರು ಈಗ ಬಿಜೆಪಿ ಪಾಳಯದಲ್ಲಿದ್ದಾರೆ. ಇವೆಲ್ಲವುದರ ನಡುವೆಯೂ ಈ ಚುನಾವಣೆ ಮಾತ್ರ ಉಚಿತ ಯೋಜನೆಗಳ ಸುತ್ತಲೇ ಸುತ್ತುತ್ತಿದೆ. ಉಚಿತ ವಿದ್ಯುತ್, ಉಚಿತ ಆರೋಗ್ಯ ವ್ಯವಸ್ಥೆ, ಮಹಿಳೆಯರಿಗೆ ಮಾಸಿಕ ಸಹಾಯಧನ ಹೀಗೆ ಬಿಜೆಪಿ, ಕಾಂಗ್ರೆಸ್, ಎಎಪಿ ಪ್ರತ್ಯೇಕವಾಗಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆಗಳನ್ನು ಮಾಡಿದೆ. ಜನರು ಈ ಯೋಜನೆಗಳ ಲೆಕ್ಕಾಚಾರದಲ್ಲಿ ಮತ ಚಲಾಯಿಸುತ್ತಾರಾ ಅಥವಾ ಜನರ ಲೆಕ್ಕಾಚಾರವೇ ಬೇರೆ ಇದೆಯೇ ಎಂದು ಕಾದುನೋಡಬೇಕಿದೆ.
ಉಚಿತ ಯೋಜನೆಗಳ ಸಮರ
ಈ ಹಿಂದೆಯೇ ಹೇಳಿದಂತೆ ದೆಹಲಿ ವಿಧಾನಸಭೆ ಚುನಾವಣೆ ಬರೀ ರಾಜಕೀಯ ಪಕ್ಷಗಳ ನಡುವಿನ ಚುನಾವಣೆಯಾಗಿ ಉಳಿದಿಲ್ಲ. ಬದಲಾಗಿ ಉಚಿತ ಯೋಜನೆಗಳ/ಕೊಡುಗೆಗಳ ನಡುವಿನ ಸಮರವಾಗಿ ಮಾರ್ಪಟ್ಟಿದೆ. ಈ ಯೋಜನೆಗಳಿಂದಾಗಿಯೇ ಗದ್ದುಗೆಯನ್ನು ಎರಡನೇ ಬಾರಿಗೆ ಭರ್ಜರಿ ಗೆಲುವಿನೊಂದಿಗೆ ಉಳಿಸಿಕೊಂಡ ಎಎಪಿಗೆ ನಾವೂ ಸ್ಪರ್ಧೆ ನೀಡುತ್ತೇವೆ ಎಂದುಕೊಂಡು ಬಿಜೆಪಿ, ಕಾಂಗ್ರೆಸ್ ಕಣದಲ್ಲಿದೆ.
ಇದನ್ನು ಓದಿದ್ದೀರಾ? ದೆಹಲಿ ವಿಧಾನಸಭೆ ಚುನಾವಣೆ | ಎಎಪಿಯ ಅಂತಿಮ ಅಭ್ಯರ್ಥಿ ಪಟ್ಟಿ ಬಿಡುಗಡೆ
ಉಚಿತ ವಿದ್ಯುತ್: ತನ್ನ ಸರ್ಕಾರವಿರುವಾಗ ಉಚಿತ ವಿದ್ಯುತ್ ನೀಡುತ್ತಿರುವ ಎಎಪಿ, 200 ಯುನಿಟ್‌ವರೆಗೆ ಉಚಿತ ವಿದ್ಯುತ್ ಮತ್ತು 200 ಯುನಿಟ್‌ಗಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದವರಿಗೆ ಶೇಕಡ 50ರಷ್ಟು ಸಬ್ಸಿಡಿ ಘೋಷಿಸಿದೆ. ಈಗಾಗಲೇ ಎಎಪಿ ಜಾರಿಗೆ ತಂದಿರುವ ಯೋಜನೆಯನ್ನು ಮುಂದುವರೆಸುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ. ಈ ನಡುವೆ ಕಾಂಗ್ರೆಸ್ ಒಂದು ಹೆಜ್ಜೆ ಮುಂದಿರಿಸಿದ್ದು 300 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದೆ.
ಮಹಿಳೆಯರಿಗೆ ನಗದು ಸಹಾಯ: ಮಹಿಳೆಯರನ್ನು ತಮ್ಮತ್ತ ಸೆಳೆಯುವ ಪ್ರಯತ್ನವನ್ನು ಎಲ್ಲ ಪಕ್ಷಗಳು ಮಾಡುತ್ತಿವೆ. ಕಳೆದ ವರ್ಷ ‘ಮುಖ್ಯಮಂತ್ರಿ ಮಹಿಳಾ ಸಮ್ಮಾನ ಯೋಜನೆ’ಯನ್ನು ಘೋಷಿಸಿರುವ ಎಎಪಿ ಮತ್ತೆ ಅಧಿಕಾರಕ್ಕೆ ಬಂದರೆ, ವಾರ್ಷಿಕ 3 ಲಕ್ಷ ರೂಪಾಯಿ ಆದಾಯವಿರುವ ಕುಟುಂಬದ ಮಹಿಳಯರಿಗೆ ಮಾಸಿಕ ನಗದು ಪರಿಹಾರವನ್ನು 2,100 ರೂಪಾಯಿಗೆ ಏರಿಸುವುದಾಗಿ ಹೇಳಿದೆ. ಇನ್ನೊಂದೆಡೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಕಡಿಮೆ ಆದಾಯವಿರುವ ಕುಟುಂಬದ ಮಹಿಳೆಯರಿಗೆ ‘ಮಹಿಳಾ ಸಮೃದ್ಧಿ ಯೋಜನೆ’ಯಡಿ ಮಾಸಿಕ 2,500 ರೂಪಾಯಿ ನೀಡುವುದಾಗಿ ಘೋಷಿಸಿದೆ. ಇನ್ನು, ಕಾಂಗ್ರೆಸ್ ಕೂಡ ‘ಪ್ಯಾರಿ ದೀದಿ ಯೋಜನೆ’ಯಡಿಯಲ್ಲಿ 2,500 ರೂಪಾಯಿ ನೀಡುವುದಾಗಿ ಘೋಷಿಸಿದೆ.
ಉಚಿತ ಆರೋಗ್ಯ ವ್ಯವಸ್ಥೆ: ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗೆ ಸಂಜೀವಿಣಿ ಯೋಜನೆಯಡಿ ಉಚಿತ ಚಿಕಿತ್ಸೆಯನ್ನು ಎಎಪಿ ಘೋಷಿಸಿದೆ. ಇದಕ್ಕೆ ಯಾವುದೇ ಆದಾಯ ಮಿತಿಯನ್ನು ವಿಧಿಸಿಲ್ಲ. ಬಿಜೆಪಿ ಹಿರಿಯ ನಾಗರಿಕರಿಗೆ ಮತ್ತು ಬಡ ಕುಟುಂಬಕ್ಕೆ ಆಯುಷ್ಮನ್ ಭಾರತ ಯೋಜನೆಯಡಿಯಲ್ಲಿ 10 ಲಕ್ಷ ರೂಪಾಯಿ ವೈದ್ಯಕೀಯ ಚಿಕಿತ್ಸೆ ಘೋಷಿಸಿದೆ. ಇವೆಲ್ಲವುದರ ನಡುವೆ ಕಾಂಗ್ರೆಸ್ ಎಲ್ಲ ದೆಹಲಿ ನಿವಾಸಿಗಳಿಗೆ 25 ಲಕ್ಷ ರೂಪಾಯಿಯ ಆರೋಗ್ಯ ವಿಮೆ ಭರವಸೆ ನೀಡಿದೆ.
ಇದನ್ನು ಓದಿದ್ದೀರಾ? ದೆಹಲಿ ಚುನಾವಣೆ | ಚೀನೀ ಸಿಸಿಟಿವಿ ಕ್ಯಾಮೆರಾ ಬಳಕೆ, ಪಂಜಾಬ್ ಆಡಳಿತ ದುರುಪಯೋಗ: ಎಎಪಿ, ಬಿಜೆಪಿ ವಾಕ್ಸಮರ
ಹಿರಿಯ ನಾಗರಿಕರಿಗೆ ಪಿಂಚಣಿ: ಈ ಹಿಂದೆ ಜಾರಿಗೆ ತಂದಿರುವ ಪಿಂಚಣಿ ಯೋಜನೆಯನ್ನು 80,000 ಅರ್ಹರಿಗೆ ವಿಸ್ತರಿಸುವ ಭರವಸೆಯನ್ನು ಎಎಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದೆ. ಎಎಪಿಯ ಈ ಯೋಜನೆಯು 60-69 ವರ್ಷದವರಿಗೆ 2 ಸಾವಿರ ರೂಪಾಯಿ, 70 ವರ್ಷ ದಾಟಿದವರಿಗೆ 2,500 ರೂಪಾಯಿ, 60-69 ವರ್ಷದ ಎಸ್‌ಸಿ/ಎಸ್‌ಟಿ ಮತ್ತು ಅಲ್ಪಸಂಖ್ಯಾತರಿಗೆ 2,500 ರೂಪಾಯಿ ಪಿಂಚಣಿಯನ್ನು ನೀಡುತ್ತದೆ. ಜೊತೆಗೆ ವಿಶೇಷ ಚೇತನರಿಗೆ ಮಾಸಿಕ 5000 ರೂಪಾಯಿ ಪಿಂಚಣಿಯನ್ನು ನೀಡುತ್ತದೆ. ಈ ನಡುವೆ ಬಿಜೆಪಿ ಹಿರಿಯ ನಾಗರಿಕರಿಗೆ 2ರಿಂದ 2500 ರೂಪಾಯಿ ಮಾಸಿಕ ಪಿಂಚಣಿ, 70 ವರ್ಷ ದಾಟಿದವರಿಗೆ 2500ರಿಂದ 3000 ರೂಪಾಯಿ ಪಿಂಚಣಿ ನೀಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದೆ. ಆದರೆ ಕಾಂಗ್ರೆಸ್ ಮಾತ್ರ ಹಿರಿಯ ನಾಗರಿಕರಿಗಾಗಿ ಯಾವುದೇ ಪ್ರತ್ಯೇಕ ಭರವಸೆಯನ್ನು ಘೋಷಿಸಿಲ್ಲ.
ಉಚಿತ ಸರ್ಕಾರಿ ಸಾರಿಗೆ ವ್ಯವಸ್ಥೆ: ಈಗಾಗಲೇ ಮಹಿಳೆಯರಿಗೆ ಉಚಿತ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿರುವ ದೆಹಲಿ ಎಎಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನು ಶಾಲಾ ಕಾಲೇಜಿಗೆ ಹೋಗುವ ಹುಡುಗರಿಗೂ ವಿಸ್ತರಿಸುವುದಾಗಿ ಹೇಳಿದೆ. ಜೊತೆಗೆ ಮೆಟ್ರೋ ಶುಲ್ಕದಲ್ಲಿ ಶೇಕಡ 50ರಷ್ಟು ರಿಯಾಯಿತಿ ಘೋಷಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಎಎಪಿಯ ಯೋಜನೆ ಮುಂದುವರೆಸುವುದಾಗಿ ಹೇಳಿದರೆ, ಕಾಂಗ್ರೆಸ್ ಸಾರಿಗೆ ಸಂಬಂಧ ಯಾವುದೇ ಭರವಸೆ ನೀಡಿಲ್ಲ.
ಎಲ್‌ಪಿಜಿ ಸಬ್ಸಿಡಿ: ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗೆ 500 ರೂಪಾಯಿ ಸಬ್ಸಿಡಿ ಮತ್ತು ಹೋಳಿ, ದೀಪಾವಳಿ ಸಂದರ್ಭದಲ್ಲಿ ಉಚಿತ ಸಿಲಿಂಡರ್ ನೀಡುವ ಘೋಷಣೆ ಮಾಡಿದೆ. ಕಾಂಗ್ರೆಸ್ ಉಚಿತ ರೇಷನ್ ಕಿಟ್‌ನೊಂದಿಗೆ 500 ರೂಪಾಯಿಗೆ ಸಿಲಿಂಡರ್ ನೀಡುವುದಾಗಿ ಹೇಳಿದೆ. ಬಹುತೇಕ ಎಲ್ಲ ಉಚಿತ ಯೋಜನೆಗಳನ್ನು ಘೋಷಿಸಿರುವ ಎಎಪಿ ಎಲ್‌ಪಿಜಿ ಸಂಬಂಧ ಯಾವುದೇ ಭರವಸೆಯನ್ನು ನೀಡಿಲ್ಲ.
ಇದನ್ನು ಓದಿದ್ದೀರಾ? ದೆಹಲಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಜೈಲುಹಕ್ಕಿ ತಾಹಿರ್ ಹುಸೈನ್ ಯಾರು ಗೊತ್ತೇ?
ಈ ಭರವಸೆಗಳನ್ನು ಹೊರತುಪಡಿಸಿ ಮೂರೂ ಪಕ್ಷಗಳು ಕೂಡಾ ಇತರೆ ಭರವಸೆಗಳನ್ನು ಘೋಷಿಸಿದೆ. ಈ ಪೈಕಿ ಎಎಪಿ ಅಧಿಕಾರ ಉಳಿಸಿಕೊಳ್ಳುವ ತರಾತುರಿಯಲ್ಲಿ ಕೊಂಚ ಅಧಿಕವೇ ಭರವಸೆಗಳ ಬೆನ್ನು ಬಿದ್ದಿದೆ. ಆದರೆ ಮತದಾರರ ಒಲವು ಎತ್ತ ಎಂಬುದು ಚುನಾವಣೆ ಬಳಿಕವೇ ತಿಳಿದುಬರಲಿದೆ.
ಯಾರಿಗೆ ಸಿಗಲಿದೆ ಗದ್ದುಗೆ?
ದೆಹಲಿಯಲ್ಲಿ ಎಎಪಿ ತನ್ನ ಗದ್ದುಗೆ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದೆ. ಇತ್ತ ಬಿಜೆಪಿ ಭ್ರಷ್ಟಾಚಾರ, ನೀರು, ವಾಯುಮಾಲಿನ್ಯ ನಿರ್ವಹಣೆಯಲ್ಲಿ ವೈಫಲ್ಯ ವಿಚಾರವನ್ನು ಮುಂದಿಟ್ಟುಕೊಂಡು ಎಎಪಿಯನ್ನು ಅಧಿಕಾರದಿಂದ ಕೆಳಕ್ಕಿಳಿಸಲು ಹರಸಾಹಸ ಪಡುತ್ತಿದೆ. ಕಾಂಗ್ರೆಸ್ ಕೊಂಚ ಅಧಿಕ ಸೀಟು ಗೆಲ್ಲುವ ಸಾಮರ್ಥ್ಯ ಹೊಂದಿದ್ದರೂ ಕೊಂಚ ಅಧಿಕ ಪ್ರಯತ್ನದಲ್ಲೂ ತೊಡಗಿಲ್ಲ. ಏನೇ ಆದರೂ ಎಎಪಿ ನಾಯಕತ್ವದ ಎದುರು ಪ್ರಬಲ ನಾಯಕತ್ವವನ್ನು ಕಣಕಿಳಿಸುವಲ್ಲಿ ಕಾಂಗ್ರೆಸ್, ಬಿಜೆಪಿ ಎಡವಿದೆ. ಉಭಯ ಪಕ್ಷಕ್ಕೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜನಪ್ರಿಯತೆಗೆ ಸಮನಾದ ನಾಯಕತ್ವ ಇಂದಿಗೂ ಬಹಿರಂಗವಾಗಿಲ್ಲ.
ನವದೆಹಲಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಣದಲ್ಲಿದ್ದರೆ, ಕಾಂಗ್ರೆಸ್, ಬಿಜೆಪಿ ‘ಹೈಪ್ರೊಪೈಲ್’ ಇರುವ ನಾಯಕರನ್ನೇ ಕೇಜ್ರಿವಾಲ್ ವಿರುದ್ಧ ಕಣಕ್ಕಿಳಿಸಿದೆ. ಕಾಂಗ್ರೆಸ್ ಹಿರಿಯ ನಾಯಕಿ, ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಪುತ್ರ ಸಂದೀಪ್ ದೀಕ್ಷಿತ್‌ಗೆ ಟಿಕೆಟ್ ನೀಡಿದರೆ, ಬಿಜೆಪಿ ಮಾಜಿ ಸಿಎಂ ಸಾಹಿಬ್ ಸಿಂಗ್ ವರ್ಮಾ ಪುತ್ರ ಪರ್ವೇಶ್ ವರ್ಮಾ ಅವರನ್ನು ಕಣಕ್ಕಿಳಿಸಿದೆ. ಆದ್ದರಿಂದ ಈ ಕ್ಷೇತ್ರದ ಮೇಲೆ ಜನರ ಚಿತ್ತ ನೆಟ್ಟಿದೆ. ಈ ಕ್ಷೇತ್ರದಲ್ಲಿನ ಗೆಲುವು ಸೋಲು ಅರವಿಂದ್ ಕೇಜ್ರಿವಾಲ್ ಭವಿಷ್ಯ ನಿರ್ಧರಿಸಲಿದೆ.
ಕಳೆದ ಎರಡು ಚುನಾವಣೆಗಳಲ್ಲಿ ಭರ್ಜರಿ ಗೆಲುವು ಕಂಡಿದ್ದ ಎಎಪಿ ಈ ಬಾರಿ ಕೊಂಚ ಇಕ್ಕಟ್ಟಿನಲ್ಲಿ ಸಿಲುಕಿರುವುದನ್ನು ಮಾತ್ರ ಅಲ್ಲಗಳೆಯುವಂತಿಲ್ಲ. ದೆಹಲಿ ಅಬಕಾರಿ ನೀತಿ ಹಗರಣ, ಶೀಶ್ ಮಹಲ್ ವಿಚಾರಗಳು ಎಎಪಿಗೆ ಮುಳುವಾಗಬಹುದು ಅಥವಾ ಸಿಂಪತಿಯಾಗಿ ಬದಲಾಗಿ ಲಾಭವನ್ನೂ ತಂದುಕೊಡಬಹುದು. ಇನ್ನೊಂದೆಡೆ ವಾಯುಮಾಲಿನ್ಯ, ನೀರಿನ ನಿರ್ವಹಣೆ ಎಎಪಿ ಸಿಎಂ ಕುರ್ಚಿಗೆ ಕಂಟಕವಾದೀತು. ಬಿಜೆಪಿ ಅಧಿಕಾರಕ್ಕೆ ಏರುವ ಕನಸು ನನಸಾಗಲು ಶತಪ್ರಯತ್ನ ಅತ್ಯಗತ್ಯ. ಏಕೆಂದರೆ ಇಂದಿಗೂ ಕೇಜ್ರಿವಾಲ್ ‘ಹವಾ’ ದೆಹಲಿಯಲ್ಲಿ ಕ್ಷೀಣಿಸಿಲ್ಲ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.