ಯಲ್ಲಾಪುರ ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಕಿಮ್ಸ್ ಆಸ್ಪತ್ರೆಯ ವೈದ್ಯರು ಹಿಂದೇಟು ಹಾಕಿದ್ದರಿಂದ ಸಾವು ಸಂಭವಿಸಿದೆ ಎಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಸಂಬಂಧಿಕರು ಆರೋಪಿಸಿದ್ದಾರೆ.
“ಕಿಮ್ಸ್ ವೈದ್ಯರು ಗಾಯಾಳುಗಳಿ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ. ಮೊದಲು ಚೀಟಿ ಮಾಡಿಕೊಂಡು ಬನ್ನಿ, ಆಮೇಲೆ ಚಿಕಿತ್ಸೆ ಕೊಡುತ್ತೇವೆಂದು ಕಿಮ್ಸ್ ಸಿಬ್ಬಂದಿ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದರಿಂದ ಸಾವು ಸಂಭವಿಸಿದೆ” ಎಂದು ಮೃತ ವ್ಯಕ್ತಿಯ ಸಂಬಂಧಿಕರು ದೂರಿದ್ದಾರೆ.
“ಉಳಿದ ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡಬೇಕು” ಎಂದು ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಕಿಮ್ಸ್ ನಿರ್ದೇಶಕ ಎಸ್ ಎಫ್ ಕಮ್ಮಾರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಯಲ್ಲಾಪುರ ಅಪಘಾತದಲ್ಲಿ ಗಾಯಗೊಂಡ 11 ಮಂದಿ ಗಾಯಾಳುಗಳು ಬಂದಿದ್ದರು, ಅದರಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಗಾಯಾಳುಗಳಿಗೆ ಬೇಕಾದ ಚಿಕಿತ್ಸೆಯನ್ನು ಈಗಾಗಲೇ ನೀಡಲಾಗಿದೆ. ಡಾ.ರಾಜಶೇಖರ್ ನೇತೃತ್ವದ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದ್ದು, 24 ಅಥವಾ 48 ಗಂಟೆಗಳ ಕಾಲ ನಾವು ಏನೂ ಹೇಳಲಾಗುವುದಿಲ್ಲ. ಆದರೆ ಗಾಯಾಳುಗಳನ್ನು ಈಗ ತೀವ್ರ ನಿಗಾ ಘಟಕದಲ್ಲಿ ಇಟ್ಟಿದ್ದೇವೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಬೆಳ್ಳಂಬೆಳಗ್ಗೆ ಭೀಕರ ಅಪಘಾತ: 8 ಮಂದಿ ದಾರುಣ ಮೃತ್ಯು
ʼಚಿಕಿತ್ಸೆ ನೀಡಲು ಕಿಮ್ಸ್ ವೈದ್ಯರ ಹಿಂದೇಟುʼ ಆರೋಪ ಬಗ್ಗೆ ಮಾತನಾಡಿದ ಅವರು, “ಏಕಾಏಕಿ ಚಿಕಿತ್ಸೆಗಾಗಿ ಬಂದ 10 ಮಂದಿ ಗಾಯಾಳುಗಳಿಗೆ ಮೊದಲು ಚಿಕಿತ್ಸೆ ನೀಡಲು ಸೂಚನೆ ನೀಡಿದ್ದೇನೆ. ಹೆಸರು, ಆಧಾರ್ ಕಾರ್ಡ್ ಕೇಳಿದ್ದು ಬಿಟ್ಟರೆ, ಚಿಕಿತ್ಸೆ ನೀಡುವಲ್ಲಿ ಯಾವುದೇ ರೀತಿಯ ವಿಳಂಬವಾಗಿಲ್ಲ. ಉಳಿದಂತೆ ನಾವು ಅವರಿಗೆ ಸೂಕ್ತ ಚಿಕಿತ್ಸೆ ನೀಡುತ್ತೇವೆ” ಎಂದು ಕಮ್ಮಾರ್ ಹೇಳಿದ್ದಾರೆ.