ಚಿಕ್ಕಬಳ್ಳಾಪುರ | ಎಸ್ಪಿಯವರ ಮಾತಿಗೆ ಕವಡೇ ಕಾಸಿನ ಕಿಮ್ಮತ್ತಿಲ್ಲವೇ?

Date:

Advertisements

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಸಾಮಾನ್ಯರ ರಕ್ಷಣೆ ಪೊಲೀಸ್‌ ಇಲಾಖೆಯ ಜವಾಬ್ದಾರಿ. ಯಾವುದೇ ಸಮಸ್ಯೆಗಳಾದಾಗ ತಕ್ಷಣವೇ ಸ್ಪಂದಿಸುವುದು ಇಲಾಖೆ ಕರ್ತವ್ಯ. ಇದಕ್ಕೆ ಅಪವಾದವೆಂಬಂತೆ ಪೊಲೀಸ್‌ ಇಲಾಖೆ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಸಮಸ್ಯೆಯೆಂದು ತಮ್ಮ ಬಳಿ ಬರುವ ಜನರಿಗೆ ಸೂಕ್ತ ಪರಿಹಾರ ಒದಗಿಸುತ್ತಿಲ್ಲ. ಜನರಿಗೆ ಪೊಲೀಸರ ಮೇಲೆ ನಂಬಿಕೆ ಇಲ್ಲವಾಗುತ್ತಿದೆ. ಪೊಲೀಸರು ಜನರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಇದಕ್ಕೆಲ್ಲಾ ಇಲಾಖೆ ಮುಖ್ಯಸ್ಥರಾದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯೇ ಜವಾಬ್ದಾರರು. ಯಾವುದೇ ಕ್ಲಿಷ್ಟಕರ ಪ್ರಕರಣಗಳು ಎದುರಾದಾಗ ತನ್ನ ಅಧೀನ ಅಧಿಕಾರಿಗಳಿಗೆ ಸೂಕ್ತ ಸಲಹೆ, ಸೂಚನೆ ನೀಡಿ ಸಮಸ್ಯೆ ಬಗೆಹರಿಸಬೇಕು. ಹಾಗಂತ ಎಲ್ಲಾ ಕೆಲಸವನ್ನು ಎಸ್ಪಿಯವರೇ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಇಲಾಖೆಗಳಲ್ಲಿ ಶ್ರೇಣೀಕೃತ ವ್ಯವಸ್ಥೆ ಇದೆ. ಆದರೆ, ಶ್ರೇಣೀಕೃತ ವ್ಯವಸ್ಥೆಯಲ್ಲಿ ಇತ್ತೀಚೆಗೆ ಸಾಕಷ್ಟು ಲೋಪದೋಷಗಳು ಕಂಡುಬರುತ್ತಿವೆ. ಅಧೀನ ಅಧಿಕಾರಿಗಳು ಉನ್ನತ ಅಧಿಕಾರಿಗಳ ಮಾತು ಕೇಳುತ್ತಿಲ್ಲ. ಜನಸಾಮಾನ್ಯರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ನಿದರ್ಶನವೆಂಬಂತೆ ಇತ್ತೀಚೆಗಷ್ಟೇ ಒಂದು ಘಟನೆ ನಡೆದಿದೆ.

ಯುವತಿಯೊಬ್ಬಳು ತನ್ನ ಪೋಷಕರೊಂದಿಗೆ ಸೈಬರ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಬುಧವಾರದಂದು(22/01/2025) ದೂರು ಸಲ್ಲಿಸಲು ಶಿಡ್ಲಘಟ್ಟ ಪೊಲೀಸ್‌ ಠಾಣೆಗೆ ತೆರಳುತ್ತಾಳೆ. ಅದು 81 ಸಾವಿರ ರೂಪಾಯಿ ವಂಚನೆಯಾಗಿರುವ ಪ್ರಕರಣ. ಅಲ್ಲಿನ ಸಿಬ್ಬಂದಿ ನಮ್ಮಲ್ಲಿ 50 ಸಾವಿರದ ಪ್ರಕರಣಗಳನ್ನಷ್ಟೇ ಸ್ವೀಕರಿಸುತ್ತೇವೆ. ಅದಕ್ಕಿಂತ ದೊಡ್ಡ ಮೊತ್ತದ ಪ್ರಕರಣಗಳನ್ನು ಚಿಕ್ಕಬಳ್ಳಾಪುರ ಸೆನ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಬೇಕು ಎಂದು ತಿಳಿಸುತ್ತಾರೆ. ಅದರಂತೆ ಶಿಡ್ಲಘಟ್ಟದಿಂದ ಚಿಕ್ಕಬಳ್ಳಾಪುರ ನಗರದ ಸೆನ್‌ ಪೊಲೀಸ್‌ ಠಾಣೆಗೆ ಬಂದ ಸಂತ್ರಸ್ತರು ದೂರು ನೀಡಲು ಮುಂದಾದಾಗ, ಅಲ್ಲಿನ ಸಿಬ್ಬಂದಿ ಇಲ್ಲಿ 2 ಲಕ್ಷಕ್ಕೆ ಮೇಲ್ಪಟ್ಟ ಪ್ರಕರಣಗಳನ್ನಷ್ಟೇ ಸ್ವೀಕರಿಸುತ್ತೇವೆ. ನೀವು ನಿಮ್ಮ ಹತ್ತಿರದ ಠಾಣೆಗೆ(ಶಿಡ್ಲಘಟ್ಟ) ಹೋಗಿ ಎಂದು ವಾಪಾಸ್‌ ಕಳಿಸಿದ್ದರು.

ಅದೇ ಸಮಯಕ್ಕೆ ಸಂತ್ರಸ್ತರ ಪರವಾಗಿ ಬಂದ ಮಾಧ್ಯಮ ಮಂದಿ ದೂರು ದಾಖಲಿಸುವಂತೆ ಮನವಿ ಮಾಡಿದರು. ಇದನ್ನೇ ಎಸ್ಪಿಯವರ ಗಮನಕ್ಕೂ ತರಲಾಗಿ, ಠಾಣೆಯ ಸಿಬ್ಬಂದಿಗೆ ದೂರು ದಾಖಲಿಸಿಕೊಳ್ಳುವಂತೆ(ಫೋನ್‌ನಲ್ಲೇ) ಎಸ್ಪಿಯವರು ಸೂಚನೆ ನೀಡಿದರು. ಎಸ್ಪಿಯವರ ಸೂಚನೆಯ ಬಳಿಕ ಠಾಣೆಯ ಡಿವೈಎಸ್ಪಿಯವರಿಗೆ(ಮೇಲಾಧಿಕಾರಿ) ಕರೆ ಮಾಡಿದ ಅಲ್ಲಿನ ಸಿಬ್ಬಂದಿ ವಿಷಯ ತಿಳಿಸಿದರು. ಕರೆಯಲ್ಲಿ ಮಾತನಾಡಿದ ಡಿವೈಎಸ್ಪಿ, ನಮ್ಮಲ್ಲಿ 2 ಲಕ್ಷ ಮೇಲ್ಪಟ್ಟ ವಂಚನೆ ಪ್ರಕರಣಗಳನ್ನು ಮಾತ್ರವೇ ದಾಖಲಿಸಿಕೊಳ್ಳಲಾಗುವುದು. ದೂರು ದಾಖಲಿಸಿಕೊಳ್ಳುಲು ಸಾಧ್ಯವಿಲ್ಲ. ಶಿಡ್ಲಘಟ್ಟ ಠಾಣೆಯ ಎಸ್‌ಐಗೆ ತಿಳಿಸಲಾಗಿದೆ. ಅಲ್ಲೇ ಹೋಗಿ ಎಂದು ತಿಳಿಸಿದರು. ಇದನ್ನು ಸುದ್ದಿ ಮಾಡಲು ಮುಂದಾದ ಮಾಧ್ಯಮದವರ ಮೇಲೆ ಅಲ್ಲಿನ ಸಿಬ್ಬಂದಿ ದುಂಡಾವರ್ತನೆ ಮಾಡಿದ್ದೂ ಕಂಡುಬಂತು. ಇದೇ ವೇಳೆ ಬೈಕ್‌ ಒಂದನ್ನು ಬಿಡಿಸಿಕೊಡಲು ಹಣ ಪಡೆದಿರುವ ಆರೋಪವೂ ಅಲ್ಲೇ ಕೇಳಿಬಂತು. ಒಟ್ಟಾರೆಯಾಗಿ, ಮಾಧ್ಯಮದವರ ಮಧ್ಯಪ್ರವೇಶದ ಬಳಿಕ ಚಿಕ್ಕಬಳ್ಳಾಪುರ ಸೆನ್‌ ಪೊಲೀಸ್‌ ಠಾಣೆಯಲ್ಲಿ 81 ಸಾವಿರ ರೂಪಾಯಿಯ ಸೈಬರ್‌ ವಂಚನೆಯ ಪ್ರಕರಣ ದಾಖಲಾಯಿತು.

Advertisements

ಇದನ್ನೂ ಓದಿ : ಚಿಕ್ಕಬಳ್ಳಾಪುರ | ಅಭಿವೃದ್ಧಿ ಮರೆತು, ಮುಖ್ಯಮಂತ್ರಿ ಚರ್ಚೆಯಲ್ಲಿ ತಲ್ಲೀನವಾದ ಸರಕಾರ; ಸಂಸದ ಡಾ.ಕೆ.ಸುಧಾಕರ್ ವಾಗ್ದಾಳಿ

ಇಲ್ಲಿ ಮೂರು ಪ್ರಮುಖ ವಿಚಾರಗಳನ್ನು ನಾವು ಗಮನಿಸಲೇಬೇಕು. ಎಸ್ಪಿಯವರ ಮಾತಿಗೆ ಕಿಮ್ಮತ್ತು ನೀಡದ ಸಿಬ್ಬಂದಿ, ಪೊಲೀಸರ ಹೊಣೆಗೇಡಿತನ ಮತ್ತು ದುಂಡಾವರ್ತನೆ. ಇದೆಲ್ಲದರ ಜವಾಬ್ದಾರಿ ಎಸ್ಪಿಯವರದ್ದೇ. ಈ ರೀತಿಯ ಕ್ಲಿಷ್ಟಕರ ಸಂದರ್ಭಗಳು ಎದುರಾದಾಗ ಎಸ್ಪಿಯವರು ಇಲಾಖೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ಅಥವಾ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಈ ಪ್ರಕರಣದಲ್ಲಿ ಎಸ್ಪಿಯವರು ಮಾಡಿದ್ದೂ ಅದನ್ನೇ. ಆದರೆ, ಡಿವೈಎಸ್ಪಿ ರವಿಕುಮಾರ್ ಅವರು ಎಸ್ಪಿಯವರ ಮಾತಿಗೆ ಕಿಮ್ಮತ್ತಿಲ್ಲದೆ, ಬೇರೆ ಠಾಣೆಗೆ ಕಳಿಸುವ ಪ್ರಯತ್ನ ಮಾಡಿದರು. ಬಹಳ ಸಮಯದ ಮಾತುಕತೆಯ ನಂತರವಷ್ಟೇ ಪ್ರಕರಣ ದಾಖಲಿಸಲಾಯಿತು. ಇಷ್ಟೆಲ್ಲಾ ಘಟನೆ ನಡೆದರೂ ಠಾಣೆಯ ಪಿಎಸ್‌ಐ ಸೂರ್ಯಪ್ರಕಾಶ್ ಸ್ಥಳದಲ್ಲೇ ಇರಲಿಲ್ಲ. ಈ ಪ್ರಕರಣಕ್ಕೂ ಮೊದಲೇ 2 ಲಕ್ಷ ಹಣ ಕಳೆದುಕೊಂಡು ಠಾಣೆಗೆ ಬಂದಿದ್ದ ಯುವಕ, “ನಿಮಗೂ ಮುನ್ನವೇ ಬಂದಿದ್ದೇನೆ. ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ” ಎಂದು ದೂರಿದ್ದೂ ಕಂಡುಬಂತು. ಸಾಮಾನ್ಯವಾಗಿ ಠಾಣೆಗಳಲ್ಲಿ ಅಮಾನುಷ ವರ್ತನೆಗಳೇ ಹೆಚ್ಚು ಕಂಡುಬರುತ್ತವೆ. ಸಮಸ್ಯೆ ಎಂದು ಬಂದವರನ್ನು ಕರೆದು ಕೂರಿಸಿ ಮಾತಾಡುವ ಕನಿಷ್ಠ ಸೌಜನ್ಯವೂ ಅಲ್ಲಿನ ಅಧಿಕಾರಿಗಳಿಗಾಗಲೀ, ಸಿಬ್ಬಂದಿಗಳಿಗಾಗಲೀ ಇರುವುದಿಲ್ಲ. ಗಂಟೆಗಟ್ಟಲೇ ನಿಂತರೂ ಕುಳಿತುಕೊಳ್ಳಿ ಎಂದೇಳುವ ಮಹಾನುಭಾವರೇ ಕಾಣಿಸುವುದಿಲ್ಲ. ಹೀಗಾದರೆ ಜನಸ್ನೇಹಿ ಠಾಣೆಗಳಾಗಲೂ ಹೇಗೆ ಸಾಧ್ಯ?.

ರಾಜ್ಯದಲ್ಲಿ ಪೊಲೀಸ್‌ ಇಲಾಖೆಯನ್ನ ಜನಸ್ನೇಹಿ ಮಾಡಲು ಸರಕಾರ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಆದರೆ, ಇವತ್ತಿಗೂ ಅದು ಸಾಧ್ಯವಾಗಿಲ್ಲವೆಂದರೆ ಅದಕ್ಕೆ ಇಂತಹ ಸೋಗಲಾಡಿ ಪೊಲೀಸರೇ ಕಾರಣ. ಜನಸ್ನೇಹಿ ಪೊಲೀಸ್‌ ಠಾಣೆ ಕನಸಿಗೆ ಇಂತಹವರು ಮುಳ್ಳಾಗಿದ್ದಾರೆ. ಪಿಎಸ್‌ಐಗಳದ್ದು ಏನೂ ನಡೆಯುವುದಿಲ್ಲ. ಇಲ್ಲಿ ಕಾನ್ಸ್ಟೇಬಲ್‌ಗಳೇ ಪಿಎಸ್‌ಐಗಳಾಗಿದ್ದಾರೆ. ಜನರ ಜತೆ ಹೇಗೆ ನಡೆದುಕೊಳ್ಳಬೇಕೆಂಬುದರ ಸಾಮಾನ್ಯ ಪ್ರಜ್ಞೆ ಕೂಡ ಇರುವುದಿಲ್ಲ. ಇದೆಲ್ಲದರ ಹೊಣೆ ಠಾಣೆ ಮುಖ್ಯಸ್ಥರದ್ದು. ಸಮಸ್ಯೆ ಯಾವುದೇ ಇರಲಿ, ಏನೇ ಇರಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ದೊರಕಿಸುವುದೇ ಪೊಲೀಸ್‌ ಇಲಾಖೆ ಕರ್ತವ್ಯ. ಪೊಲೀಸರು ಕರ್ತವ್ಯವನ್ನೇ ಮರೆತರೇ, ಸಮಾಜದಲ್ಲಿ ಪೊಲೀಸ್‌ ಠಾಣೆಗಳ ಅವಶ್ಯಕತೆ ಇದೆಯೇ?.

ಹೊಣೆಗೇಡಿತನದ ಪರಮಾವಧಿ :

ಈ ರೀತಿ ರಾಜ್ಯಾದ್ಯಂತ ಸಾಕಷ್ಟು ಉದಾಹರಣೆಗಳಿವೆ. ಪೊಲೀಸ್‌ ಇಲಾಖೆ ಮೇಲೆ ಗುರುತರ ಆರೋಪಗಳು ಇವೆ. ಇದು ಪೊಲೀಸರ ಹೊಣೆಗೇಡಿತನವಲ್ಲದೇ ಮತ್ತೇನೂ ಅಲ್ಲ. ಅಂತಿಮವಾಗಿ ಇಲ್ಲ ಎಂದವರು ಪ್ರಕರಣ ದಾಖಲಿಸಿಕೊಂಡರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಜನರ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಪೊಲೀಸರು ಈ ರೀತಿಯಾಗಿ ಜನಸಾಮಾನ್ಯರನ್ನು ಅಲೆದಾಡಿಸುವ, ಅವರಿಂದಲೇ ಹಣ ಪೀಕುವ ಭಕ್ಷಕರಾದರೆ ಜನ ನಂಬುವುದಾದರೂ ಯಾರನ್ನ. ಸಮಸ್ಯೆಗಳಾದಾಗ ನ್ಯಾಯಕ್ಕಾಗಿ ಯಾರ ಬಳಿ ಹೋಗಬೇಕು. ಈ ರೀತಿಯ ಹತ್ತಾರು ಉದಾಹರಣೆಗಳು ಠಾಣೆಯ ಮೇಲೆ ಕೇಳಿಬರುತ್ತಿವೆ.

ಇದು ಜಂಗಲ್‌ ರಾಜ್‌(ಕಾಡಿನ ರಾಜ) ಅಲ್ಲ, ಡೆಮಾಕ್ರಸಿ ಡಿವೈಎಸ್ಪಿಯವರೇ :

ಈ ಎಲ್ಲಾ ಬೆಳವಣಿಗೆಗಳ ನಡುವೆ ಡಿವೈಎಸ್ಪಿಯವರು ಸಂತ್ರಸ್ತರಿಗೆ ಬೆದರಿಸಿರುವ ಸಂಗತಿ ಚರ್ಚೆಗೆ ಗ್ರಾಸವಾಗಿದೆ. “ನಿನಗೆ ಪೊಲೀಸರ ರಕ್ಷಣೆ ಬೇಡವಾ?, ಮೀಡಿಯಾದವರನ್ನ ಕರೆಸಿದ್ದೀಯಾ” ಎಂದು‌ ಡಿವೈಎಸ್ಪಿಯವರು ಕರೆಯಲ್ಲಿ ಹೇಳಿದರೆಂದು ಪಿರ್ಯಾದುದಾರರು ಆರೋಪಿಸಿದರು. ಡಿವೈಎಸ್ಪಿಯವರ ಈ ನಡೆ ಫೋಲೀಸ್‌ ಇಲಾಖೆಯನ್ನ ಗುತ್ತಿಗೆ ಪಡೆದಂತಿದೆ. ರಕ್ಷಣೆ ಎಂಬುದು ದಾನ ಅಥವಾ ಅನುಕಂಪ ಅಲ್ಲ. ಅದು ಪ್ರತಿಯೊಬ್ಬ ನಾಗರೀಕನ ಹಕ್ಕು. ಕಾನೂನಿಯ ಮುಂದೆ ಎಲ್ಲರೂ ಸಮಾನರು, ಎಲ್ಲರಿಗೂ ಸಮಾನ ರಕ್ಷಣೆ ಕೊಡಬೇಕು ಎಂದು ಸಂವಿಧಾನದ 14ನೇ ವಿಧಿ ಹೇಳುತ್ತದೆ. ಇದರ ಸಾಮಾನ್ಯ ತಿಳಿವಳಿಕೆಯೂ ಅವರಿಗೆ ಇಲ್ಲವೆನಿಸುತ್ತಿದೆ. ಇದು ನಾಗರೀಕ ಸಮಾಜದಲ್ಲಿ ಶೋಭೆ ತರುವಂತದಲ್ಲ. ಇದು ಜಂಗಲ್‌ ರಾಜ್‌ ಅಲ್ಲ, ಡೆಮಾಕ್ರಸಿ ಎಂಬುದನ್ನು ಡಿವೈಎಸ್ಪಿಯವರು ಅರಿಯಬೇಕಿದೆ.

ಆಡಳಿತದ ನಿಯಂತ್ರಣ ತಪ್ಪುತ್ತಿದೆಯೇ ಪೊಲೀಸ್‌ ಇಲಾಖೆ?:

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರೆಯಬೇಕು. ಇದಕ್ಕೆ ಮುಖ್ಯವಾಗಿ ಪೊಲೀಸರ ಸೋಗಲಾಡಿತನವನ್ನು ಹೋಗಲಾಡಿಸಬೇಕು. ಇದೆಲ್ಲವನ್ನು ಗಮನಿಸಿದಾಗ ಪೊಲೀಸ್‌ ಇಲಾಖೆ ಆಡಳಿತದ ನಿಯಂತ್ರಣ ತಪ್ಪುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಸಮಸ್ಯೆಯೆಂದು ಬರುವ ಜನರಿಗೆ ಕ್ಷಿಪ್ರ ಪರಿಹಾರ ದೊರೆಕಿಸಿಕೊಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾರ್ಯೋನ್ಮುಖವಾಗಬೇಕು, ಜನಸ್ನೇಹಿಯಾಗಿರಬೇಕು. ಇದು ಕಾನೂನಿನ ಅಂತಿಮ ಉದ್ದೇಶ. ಅಂದರೆ ಕರ್ನಾಟಕದಲ್ಲಿ ಪ್ರಜ್ಞಾವಂತಿದ್ದಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಇದನ್ನೂ ಓದಿ : ಈ ದಿನ ಸಂಪಾದಕೀಯ | ಮೈಕ್ರೋ ಫೈನಾನ್ಸ್‌ಗೆ ಬಲಿಯಾಗುತ್ತಿರುವ ಬಡವರು; ಸತ್ತಂತಿರುವ ಸರ್ಕಾರ

ರಾಜ್ಯದ ಜನರ ರಕ್ಷಣೆಯನ್ನ ಪೊಲೀಸ್‌ ಇಲಾಖೆಯಲ್ಲದೇ ಕಂದಾಯ ಇಲಾಖೆ ಮಾಡಲು ಸಾಧ್ಯವಿಲ್ಲ. ಜನಸಾಮಾನ್ಯರ ರಕ್ಷಣೆಯ ಹೊಣೆಯನ್ನ ಪೊಲೀಸರೇ ಹೊರಬೇಕು. ಕಚೇರಿಗೆ ಬಂದು ಕುಳಿತು ಎದ್ದು ಹೋಗುವುದೇ ದೊಡ್ಡ ಸಾಧನೆ ಎಂದು ಪೊಲೀಸರು ಭಾವಿಸಿದ್ದಾರೆ. ಜನ ಸಾಮಾನ್ಯರೊಂದಿಗೆ ಪೊಲೀಸರು ಯಾವ ರೀತಿ ವರ್ತಿಸಬೇಕು, ಯಾವ ರೀತಿ ವರ್ತಿಸಬಾರದು ಎಂಬ ನೀತಿ ಪಾಠದ ತರಬೇತಿ ಆಗಬೇಕು.

ಸಮಾಜದ ಸ್ವಾಸ್ಥ್ಯ ಕಾಪಾಡಲು ಪೊಲೀಸರಿಗೆ ಕಾರು, ಕುರ್ಚಿ, ಅಧಿಕಾರ, ಸಂಬಳ, ಭತ್ಯೆ ಸಕಲ ಸೌಕರ್ಯಗಳನ್ನು ಜನರ ಹಣದಿಂದಲೇ ನೀಡಲಾಗುತ್ತಿದೆ. ಭಿಕ್ಷುಕನೊಬ್ಬ ಕಟ್ಟುವ ತೆರಿಗೆಯಿಂದಲೂ ಇಲಾಖೆ ಸಂಬಳ ಪಡೆಯುತ್ತಿದೆ. ಎಸ್ಪಿಯವರು ನಡೆಸುವ ಸಭೆಗಳು, ನಿರ್ದೇಶನಗಳು, ಸಲಹೆ, ಸೂಚನೆಗಳು ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು. ಇಲ್ಲವಾದಲ್ಲಿ ಈ ಅಧ್ವಾನಗಳು ಘಟಿಸುತ್ತಲೇ ಇರುತ್ತವೆ. ಇದಕ್ಕೆಲ್ಲಾ ಕ್ಷಿಪ್ರ ಪರಿಹಾರವೆಂದರೆ ಇಲಾಖೆ ಹೊಣೆ ಹೊತ್ತಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮತಿವಂತರಾಗಬೇಕು. ಇಲ್ಲವಾದರೆ ಇಲಾಖೆಯ ಸಭೆಗಳು ಕಾಲಹರಣದ ಕೂಟಗಳು ಅಷ್ಟೇ.

WhatsApp Image 2024 08 09 at 11.58.31 de404b09
+ posts

ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ ಜಿಲ್ಲಾ ಸಂಯೋಜಕರು. ಪತ್ರಕರ್ತ, ಪರಿಸರ ಪ್ರೇಮಿ.

ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಜ್ಜರಹಳ್ಳಿ ಗ್ರಾಮದವರು. 

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿಜಯ್‌ ಕುಮಾರ್ ಗಜ್ಜರಹಳ್ಳಿ
ವಿಜಯ್‌ ಕುಮಾರ್ ಗಜ್ಜರಹಳ್ಳಿ
ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ ಜಿಲ್ಲಾ ಸಂಯೋಜಕರು. ಪತ್ರಕರ್ತ, ಪರಿಸರ ಪ್ರೇಮಿ. ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಜ್ಜರಹಳ್ಳಿ ಗ್ರಾಮದವರು. 

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

Download Eedina App Android / iOS

X