ಧಾರವಾಡ ತಾಲೂಕು ಕಸಾಪ ವತಿಯಿಂದ ಚಂದ್ರಶೇಖರ ಬಸನಗೌಡ ಪಾಟೀಲ ಹಾಗೂ ಡಾ. ರಾ ಯ ಧಾರವಾಡಕರ ದತ್ತಿ ಅಂಗವಾಗಿ ಕರ್ನಾಟಕ ಸಂಭ್ರಮ-50 ಸಾಪ್ತಾಹಿಕ ಸಾಹಿತ್ಯ ಮಾಲಿಕೆಯಡಿಯಲ್ಲಿ, ಬುಧವಾರ ಸಾಯಂಕಾಲ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಗಣರಾಜ್ಯೋತ್ಸವ ಹಾಗೂ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ದತ್ತು ಉಪನ್ಯಾಸ ಮತ್ತು ಕವಿಗೋಷ್ಠಿ ಹಮ್ಮಿಕೊಂಡಿದ್ದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಸಾಹಿತಿ ಎ ಎ ದರ್ಗಾ ಮಾತನಾಡಿ, ಕವಿಯಾದವರಿಗೆ ದಿಟ್ಟತನ ಇರಬೇಕು. ಕವಿತೆ ರಂಗೋಲಿ ಇದ್ದಂತೆ. ಸಂಗೀತ ಭಾವ ಮತ್ತು ಪದಪುಂಜ ಯಾರಲ್ಲಿದೆಯೊ ಅಂತವರು ಕವಿಗಳಾಗಬಹುದು. ಕವನದಲ್ಲಿ ವಿಷಯದ ಗಹನತೆ ಇದ್ದರೆ, ವಾಚಿಸುವ ರೂಢಿ ಬರುತ್ತದೆ. ಒಬ್ಬರ ಕವನ ಮತ್ತೊಬ್ಬರಿಗೆ ಕವಿತೆ ಬರೆಯಲು ಆಹ್ವಾನ ಮಾಡಬೇಕು. ಕವಿತೆಯಲ್ಲಿ ಲಯ ಮತ್ತು ಹಿತವಾಗಿರಬೇಕು. ಕವಿತೆ ನಿಜಾಕಾರವೂ ಹೌದು ನಿರಾಕಾರವೂ ಹೌದು. ಇವತ್ತಿನ ಕವಿತೆಗಳಲ್ಲಿ ಅಂಬೇಡ್ಕರ್ ಬಗ್ಗೆ ಬರೆದಿರುವುದು ಸಂತಸದ ವಿಚಾರ. ನಮ್ಮ ವಿಚಾರಗಳನ್ನು ಕವಿತೆಗಳ ಮೂಲಕ ವ್ಯಕ್ತಪಡಿಸುವಾಗ ನೆರವಾಗಿ ಹೇಳುವುದು ಕಡಿಮೆ ಆಗಬೇಕು ಏಕೆಂದರೆ ಗುರಿಯಾಗುತ್ತೇವೆ. ಆದರೆ ದಿಟ್ಟತನ ಇರುವುದು ಒಳ್ಳೆಯದು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಡಾ. ಎಸ್ ಎಸ್ ದೊಡಮನಿ ಮಾತನಾಡಿ, ಪಂಪನಿಂದ ಹಿಡಿದುಕೊಂಡು ಇಲ್ಲಿಯವರೆಗೂ ಕನ್ನಡಕ್ಕೆ ತನ್ನದೇ ಆದ ಕಾವ್ಯ ಮೀಮಾಂಸೆ ಇದೆ. ಕಾವ್ಯದ ವಸ್ತು, ಭಾಷೆ ಮತ್ತು ಅಲಂಕಾರದ ಬಗ್ಗೆ ಬರಹಗಾರರಲ್ಲಿ ತಿಳುವಳಿಕೆ ಇರಬೇಕು. ಹೊಸಗನ್ನಡದ ಕಾವ್ಯ ಚಿಂತನೆಯು ಕವಿ ಮತ್ತು ಆತನ ಅಂತರಂಗಕ್ಕೆ ಸಂಬಂಧಿಸಿವೆ. ಕವಿ ಲೋಕದ ಅನುಭವಗಳಿಗೆ ಸ್ಪಂದಿಸುವ ಸಾಹಿತ್ಯ ಅರಗಿಸಿಕೊಂಡು ಕಟ್ಟಿಕೊಡುವ ಸಾಮರ್ಥ್ಯವೇ ಕವಿತೆಯಾಗಿದೆ ಎಂದರು.
ಶ್ರೀನಿವಾಸ ವಾಡಪ್ಪಿ ಮಾತನಾಡಿ, ಡಾ. ರಾ ಯ ಧಾರವಾಡಕರ ಅವರ ಜೀವನದ ಪರಿಚಯ ಮಾಡಿಕೊಟ್ಟರು. ಕಾವ್ಯ ಬರೆಯಬೇಕು ಎನ್ನುವವರು ಎಲ್ಲ ಸಾಹಿತ್ಯವನ್ನೂ ಮನದಲ್ಲಿ ಯಾವುದೇ ಗೊಂದಲವಾಗಿಟ್ಟುಕೊಳ್ಳದೆ ಓದಬೇಕು. ಎಲ್ಲವನ್ನೂ ಓದಿಕೊಂಡು ನಮ್ಮೊಳಗಿನಿಂದ ಯಾವ ಒಂದು ತೀರ್ಮಾನ ಬರುತ್ತದೆಯೋ ಅದನ್ನು ವ್ಯಕ್ತಪಡಿಸಬೇಕು. ಎಲ್ಲದರ ಕುರಿತಾಗಿ ನಮ್ಮಲ್ಲಿ ಅರಿವಿರಬೇಕು. ಅಂದಾಗ ಮಾತ್ರ ನಾವೊಬ್ಬ ಅದ್ಭುತ ಕವಿಯಾಗಿ ಹೊರಹೊಮ್ಮಬಹುದು ಮತ್ತು ನಾವು ಮತ್ತೊಬ್ಬರನ್ನು ಅನುಕರಣೆ ಮಾಡಬಾರದು ಎನ್ನಬಹುದು.
ಪ್ರೇಮಾ ಹೊರಟ್ಟಿ ಮಾತನಾಡಿ, ಶರಣರು ಸ್ತ್ರೀ ಸ್ವಾತಂತ್ರ್ಯ, ಜಾತಿ ನಿರ್ಮೂಲನೆಗಾಗಿ ಹೋರಾಡಿದವರು. ನಾನು ಯಾರು? ಎಲ್ಲಿಂದ ಬಂದೆ? ಎಂದು ತಿಳಿಯುವುದೇ ಆತ್ಮಜ್ಞಾನವಾಗಿದೆ. ಆತ್ಮಜ್ಞಾನವೆಂದರೆ ಸತ್ಯದ ಇರುವಿಕೆಯಾಗಿದೆ. ಅರ್ಥಾತ್ ಅಂತರ್ಯಾತ್ರೆ ಎಂದು ಕರೆಯಬಹುದು. ಆತ್ಮಜ್ಞಾನದ ಕುರಿತಾಗಿ ಬಾಲಸಂಗಯ್ಯ, ಅಕ್ಕ ಮಹಾದೇವಿ ಹೀಗೆ ಬಹುತೇಕ ಶರಣರು ಬರೆದಿದ್ದಾರೆ. ನಮ್ಮಲ್ಲೇ ಅರಿವು ಸ್ವಯವಾಗಿರುವಾಗ ಬೇರೆಯವರ ಕೇಳುವ ಅವಶ್ಯವಿಲ್ಲ ಎಂಬ ಶರಣರ ಸಂದೇಶ ನೆನಪಿಸಿಕೊಂಡರು.
ಸನ್ಮಾನ ಸ್ವೀಕರಿಸಿದ ಪತ್ರಕರ್ತ ರವಿಕುಮಾರ ಕಗ್ಗಣ್ಣವರ ಮಾತನಾಡಿ, ನಮ್ಮ ಕೆಲಸದಲ್ಲಿ ಬದ್ಧತೆ ಇರಬೇಕು. ನಮ್ಮ ಕೆಲಸದ ಕುರಿತು ಎಲ್ಲರೂ ವಿಮರ್ಶೆ ಮಾಡುತ್ತಾರೆ. ಪತ್ರಿಕೋದ್ಯದಲ್ಲಿಯೂ ಸಾಹಿತ್ಯವು ಸತ್ತು ಹೋಗುತ್ತಿದೆ. ಪತ್ರಕರ್ತರು ಯಾಕೆ ಪುಸ್ತಕಗಳನ್ನು ಬರೆಯಲು ಮುಂದಾಗುತ್ತಿಲ್ಲ? ಇವತ್ತಿನ ದಿನಗಳಲ್ಲಿ ಪತ್ರಿಕೆಗಳನ್ನು ಮೊಬೈಲ್’ನಲ್ಲಿ ಕಟಿಂಗ್ ಮಾಡಿ ಓದುತ್ತಿರುವ ಪರಿಸ್ಥಿತಿ ಬಂದೊದಗಿದೆ. ಸಾಹಿತ್ಯವನ್ನು ಪತ್ರಕೊಧ್ಯಮವು ಅತಿಹೆಚ್ಚು ಪ್ರಚಾರ ಮಾಡಬೇಕಿದೆ. ಮಾದ್ಯಮದ ಜೊತೆಗೆ ಸಾಹಿತ್ಯ ಬೆಳೆಸುವ ಕಾರ್ಯವಾಗಲಿ ಎಂದರು.
ಈ ವರದಿ ಓದಿದ್ದೀರಾ? ಧಾರವಾಡ | ಒಂದೇ ತಾಯಿ ಮಕ್ಕಳಾದರೂ; ಬೇರೆ-ಬೇರೆ ಜಾತಿ ಮಾಡಿಕೊಂಡಿದ್ದೇವೆ: ಗೀತಾ.ಸಿ.ಡಿ
ದತ್ತಿ ದಾನಿ ಅನಿಲ ಧಾರವಾಡಕರ ಮಾತನಾಡಿದರು. ಪ್ರಾಸ್ತಾವಿಕವಾಗಿ ಪ್ರೋ. ಕೌಜಲಗಿ ಮಾತನಾಡಿದರು. ದತ್ತಿ ದಾನಿ ಚಂದ್ರಶೇಖರ ಪಾಟೀಲ, ಶಾಂತವೀರ ಬೆಟಗೇರಿ, ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ, ಮಾರ್ತಾಂಡಪ್ಪ ಕತ್ತಿ ವೇದಿಕೆ ಮೇಲಿದ್ದರು. ಕವಿಗಳು ಕವಿಯತ್ರಿಯರು ಕವಿತೆಗಳ ವಾಚಿಸಿದರು. ಮೇಘ ಹುಕ್ಕೇರಿ ಕಾರ್ಯಕ್ರಮ ನಿರೂಪಿಸಿದರು. ಉಮಾ ಬಾಗಲಕೋಟ, ಪರಿಷತ್ತಿನ ಪದಾಧಿಕಾರಿಗಳು, ಕಾವ್ಯಸಕ್ತರು, ಮಾಧ್ಯಮಮಿತ್ರರು ಉಪಸ್ಥಿತರಿದ್ದರು.