ಅಭಿಷೇಕ್ ಶರ್ಮಾ ಅಬ್ಬರದ ಬ್ಯಾಟಿಂಗ್, ವರುಣ್ ಚಕ್ರವರ್ತಿ ಮಾರಕ ಬೌಲಿಂಗ್ ನೆರವಿನಿಂದ ಆಂಗ್ಲ ಪಡೆ ವಿರುದ್ಧ ಟೀಂ ಇಂಡಿಯಾ 7 ವಿಕೆಟ್ಗಳ ಜಯ ಗಳಿಸಿ 5 ಪಂದ್ಯಗಳ ಟಿ20 ಸರಣಿಯಲ್ಲಿ ಸೂರ್ಯ ಕುಮಾರ್ ಯಾದವ್ ಪಡೆ 1-0 ಮುನ್ನಡೆ ಪಡೆದಿದೆ.
ಈ ಜಯದೊಂದಿಗೆ ಟೀಮ್ ಇಂಡಿಯಾ ಟಿ20 ಕ್ರಿಕೆಟ್ನಲ್ಲಿ ಅಮೋಘ ಗೆಲುವಿನ ದಾಖಲೆ ಬರೆದಿದೆ. ಅಂದರೆ ಟಿ20 ಪಂದ್ಯದಲ್ಲಿ ಭಾರತ ತಂಡವು ಇದೇ ಮೊದಲ ಬಾರಿಗೆ 130 ಕ್ಕೂ ಹೆಚ್ಚು ರನ್ಗಳ ಗುರಿಯನ್ನು ಅತೀ ವೇಗವಾಗಿ ಬೆನ್ನಟ್ಟಿ ಜಯಭೇರಿ ಬಾರಿಸಿದೆ.
ಇದಕ್ಕೂ ಮುನ್ನ ಭಾರತ ತಂಡ 2012 ರಲ್ಲಿ 130 ಕ್ಕೂ ಸ್ಕೋರ್ ಅನ್ನು ಅತೀ ವೇಗವಾಗಿ ಬೆನ್ನಟ್ಟಿತ್ತು. ಪುಣೆಯಲ್ಲಿ ನಡೆದ ನಮೀಬಿಯ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ 158 ರನ್ಗಳನ್ನು 17.5 ಓವರ್ಗಳಲ್ಲಿ ಚೇಸ್ ಮಾಡಿ ದಾಖಲೆ ಬರೆದಿತ್ತು.ಇದೀಗ ಬರೋಬ್ಬರಿ 12 ವರ್ಷಗಳ ಬಳಿಕ 43 ಎಸೆತಗಳನ್ನು ಬಾಕಿ ಇರಿಸಿ ಟೀಮ್ ಇಂಡಿಯಾ 133 ರನ್ ಗಳನ್ನು ಬೆನ್ನಟ್ಟಿ ಗೆದ್ದಿದೆ.
ಈ ಸುದ್ದಿ ಓದಿದ್ದೀರಾ? ಮೊದಲ ಟಿ20 | ಅಭಿಷೇಕ್ 34 ಎಸೆತಗಳಲ್ಲಿ 79; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 7 ವಿಕೆಟ್ ಜಯ
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರ್ಗಳಿಗೆ 132 ರನ್ ಗಳಿಸಲಷ್ಟೆ ಶಕ್ತವಾಯಿತು. 133 ರನ್ ಗುರಿ ಬೆನ್ನಟ್ಟಿದ ಭಾರತ 12.5 ಓವರ್ಗಳಿಗೆ 3 ವಿಕೆಟ್ ನಷ್ಟಕ್ಕೆ ಗೆದ್ದು ಬೀಗಿತು.
ಟೀಂ ಇಂಡಿಯಾ ವಿರುದ್ಧ ಇಂಗ್ಲೆಂಡ್ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿತು. ಆರಂಭಿಕರಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ ಶೂನ್ಯ ಸುತ್ತಿ ತಂಡಕ್ಕೆ ಆಘಾತ ನೀಡಿದರು. ಬೆನ್ ಡಕೆಟ್ ಕೇವಲ 4 ರನ್ ಗಳಿಸಿ ಬಂದಷ್ಟೇ ಬೇಗ ಪೆವಿಲಿಯನ್ ಸೇರಿದರು. ತಂಡದ ನಾಯಕ ಜೋಸ್ ಬಟ್ಲರ್ ಏಕಾಂಗಿ ಹೋರಾಟ ನಡೆಸಿ ತಂಡಕ್ಕೆ ಭರವಸೆ ಮೂಡಿಸಿದ್ದರು. 44 ಚಂಡುಗಳಿಗೆ 68 ರನ್ (8 ಬೌಂಡರಿ, 2 ಸಿಕ್ಸರ್) ಗಳಿಸಿದರು. ಹ್ಯಾರಿ ಬ್ರೂಕ್ 17, ಜೋಫ್ರಾ ಆರ್ಚರ್ 12 ರನ್ ಗಳಿಸಿದರು. ಉಳಿದಂತೆ ಆಟಗಾರರು ಕಳಪೆ ಬ್ಯಾಟಿಂಗ್ ಮಾಡಿದರು.
ಭಾರತ ತಂಡದ ಪರ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ವರುಣ್ ಚಕ್ರವರ್ತಿ 3 ವಿಕೆಟ್ ಕಿತ್ತು ಗಮನ ಸೆಳೆದರು. ಅರ್ಶದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ತಲಾ 2 ವಿಕೆಟ್ ಕಬಳಿಸಿದರು.
ಇಂಗ್ಲೆಂಡ್ ನೀಡಿದ 133 ರನ್ ಗುರಿ ಬೆನ್ನಟ್ಟಿದ ಭಾರತ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಭರ್ಜರಿ ಜಯ ಸಾಧಿಸಿತು. ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಜೋಡಿ ಜವಾಬ್ದಾರಿಯುತ ಆಟವಾಡಿ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿತು. ಸಂಜು 26 ರನ್ ಗಳಿಸಿ ಔಟಾದರು. ಈ ವೇಳೆ ಕ್ರೀಸ್ನಲ್ಲಿ ಅಬ್ಬರಿಸಿದ ಶರ್ಮಾ 34 ಚಂಡುಗಳಲ್ಲಿ 79 ರನ್ (5 ಬೌಂಡರಿ, 8 ಸಿಕ್ಸರ್)ಗಳಿಸಿದರು. ಈ ಮಧ್ಯೆ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಶೂನ್ಯ ಸುತ್ತಿ ಔಟಾಗಿದ್ದು, ಕ್ರಿಕೆಟ್ ಪ್ರಿಯರಲ್ಲಿ ಬೇಸರ ಮೂಡಿಸಿತು. ತಿಲಕ್ ವರ್ಮಾ 19 ರನ್ ಗಳಿಸಿದರು.