ತಮ್ಮ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ರದ್ದುಡಿಸುವಂತೆ ಕೋರಿ ಎಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲು ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಹಿಂದೆ ಸರಿದಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಡಿ ರೂಪ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಹಲವಾರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಅವಹೇಳನಕಾರಿಯಾಗಿ ಬರೆದುಕೊಂಡಿದ್ದರು. ಬಳಿಕ, ಸಿಂಧೂರಿ ವಿರುದ್ಧ ಮಾಧ್ಯಮಗಳ ಮೂಲಕ ಹಲವು ಆರೋಪ ಮಾಡಿದ್ದರು.
ಡಿ ರೂಪ ಅವರ ಆರೋಪಿಗಳು ತಮ್ಮ ತೇಜೋವಧೆ ಮಾಡಿವೆ ಎಂದು ರೋಹಿಣಿ ಸಿಂಧೂರಿ ಹೈಕೋರ್ಟ್ ಮೆಟ್ಟಿಲೇರಿದ್ದರು. “ಡಿ ರೂಪಾ ಅವರ ಪೋಸ್ಟ್ ಮತ್ತು ಹೇಳಿಕೆಗಳು ನನ್ನ ಖಾಸಗಿ, ಸಾಮಾಜಿಕ ಮತ್ತು ವೃತ್ತಿ ಜೀವನದ ಮೇಲೆ ಪರಿಣಾಮ ಬೀರಿವೆ. ನಾನು ಮಾನಸಿಕವಾಗಿ ಯಾತನೆ ಪಡುವಂತಾಗಿದೆ. ಡಿ ರೂಪ ಅವರು ಪರಿಹಾರವಾಗಿ ಒಂದು ಕೋಟಿ ರೂ. ನೀಡುವಂತೆ ಆದೇಶಿಸಬೇಕು ಮತ್ತು ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಕೋರ್ಟ್‌ನಲ್ಲಿ ಮನವಿ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ?: ಜನರ ಸಮಸ್ಯೆಗೆ ಅಧಿಕಾರಿಗಳಿಂದ ಉಡಾಫೆ ಸಲ್ಲದು: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ಸಿಂಧೂರಿ ದಾಖಲಿಸಿರುವ ಖಾಸಗಿ ದೂರನ್ನು ವಜಾಗೊಳಿಸಬೇಕೆಂದು ಡಿ ರೂಪ ಕೂಡ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಅರ್ಜಿಯ ವಿಚಾರಣೆ ನಡೆಸಲು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಹಿಂದೆ ಸರಿಸಿದ್ದಾರೆ.
“ತಾವು ವಕೀಲರಾಗಿದ್ದಾಗ ರೋಹಿಣಿ ಸಿಂಧೂರಿ ಅವರ ಪರವಾಗಿ ಪ್ರಕರಣ ಒಂದರಲ್ಲಿ ವಾದಿಸಿದ್ದೆ. ಹಾಗಾಗಿ, ಈ ಪ್ರಕರಣದ ವಿಚಾರಣೆಯನ್ನು ನಾನು ನಡೆಸುದಿಲ್ಲ” ಎಂದು ನ್ಯಾಯಮೂರ್ತಿ ಹೇಳಿದ್ದಾರೆ. ಬೇರೊಂದು ಪೀಠಕ್ಕೆ ವರ್ಗಾಯಿಸುವಂತೆ ತಿಳಿಸಿದ್ದಾರೆ.