ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಡಲಗಿರಿ ಗ್ರಾಮದ ಸಿಗ್ನೇಕೊಪ್ಪ ರಸ್ತೆಯ ಸರ್ಕಾರಿ ಪ್ರೌಢಶಾಲೆಯ ಹಿಂಬದಿಯಲ್ಲಿರುವ ಕೆಂಪು ಕೆರೆ ಮಣ್ಣು ಕಳ್ಳತನವಾಗಿದ್ದು, ಗರಚು ಮಣ್ಣನ್ನು ರಾತ್ರೋರಾತ್ರಿ ಕಳವು ಮಾಡಿ ಸರಿಸುಮಾರು 200ಕ್ಕೂ ಅಧಿಕ ಟ್ರ್ಯಾಕ್ಟರ್ ಗಾಡಿಗಳಷ್ಟು ಮಣ್ಣನ್ನು ಸಾಗಾಟ ಮಾಡಿದ್ದಾರೆ ಎಂದು ಗ್ರಾಮಸ್ಥರೆಲ್ಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕೆರೆಯ ಮಣ್ಣನ್ನು ರಿಯಲ್ ಎಸ್ಟೇಟ್ ದಧೆಕೋರರು ಪರವಾನಗಿ ಇಲ್ಲದೇ ಆಗಾಗ ಕೆರೆಯ ಮಣ್ಣನ್ನು ಎತ್ತಿಕೊಂಡು ಹೋಗುತ್ತಿದ್ದಾರೆ. ಹೇಳೋರು ಕೇಳೋರು ಯಾರೂ ಇಲ್ಲವೆಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

“ಕೆರೆಯ ಪಕ್ಕದ ಕೆಲವೇ ಅಂತರದಲ್ಲಿ ಲೇಔಟ್ ನಿರ್ಮಾಣವಾಗುತ್ತಿದ್ದು, ಇದರ ರಸ್ತೆ ನಿರ್ಮಾಣಕ್ಕಾಗಿ ಕೆರೆಯ ಮಣ್ಣನ್ನು ಬಳಸಿಕೊಳ್ಳುವ ಉದ್ದೇಶದಿಂದ ಮಣ್ಣನ್ನು ಕಳವು ಮಾಡಿ ರಾತ್ರೋರಾತ್ರಿ ಲೇಔಟಿನ ರಸ್ತೆಯಲ್ಲಿ ಹಾಕಲಾಗಿದ್ದು, ಬುಧವಾರ ಬೆಳಿಗ್ಗೆ ಗ್ರಾಮದ ಪ್ರಮುಖರು ಗಮನಿಸಿದಾಗ ಲೇಔಟ್ ಅಭಿವೃದ್ಧಿಗೆ ಬಳಸಿಕೊಂಡಿರುವುದಾಗಿ ತಿಳಿದುಬಂದಿದೆ.
ಕುಷ್ಟಗಿ ಪಟ್ಟಣದ ಗುತ್ತಿಗೆದಾರ ವಿಶ್ವನಾಥ ಕುಂಬಾರ ತಾವೇ ತಮ್ಮ ಲೇಔಟ್‌ನ ರಸ್ತೆಗೆ ಹಾಕಿಕೊಂಡಿರುವುದಾಗಿ ತಿಳಿಸಿದ್ದು, ಈ ಕಾರ್ಯಕ್ಕೆ ರಾತ್ರಿ ವೇಳೆಯಲ್ಲಿ ಒಂದು ಜೆಸಿಬಿ ಸೇರಿದಂತೆ ಆರರಿಂದ ಎಂಟು ಟ್ರ್ಯಾಕ್ಟರ್ ಬಳಕೆ ಮಾಡಿರುವುದಾಗಿ ಹೇಳಿದ್ದಾರೆ.
ಪರವಾನಗಿ ಇಲ್ಲದೆ ರಾತ್ರೋರಾತ್ರಿ ಕೆರೆಯ ಮಣ್ಣನ್ನು ಸಾಗಿಸಿದ ಈ ಗುತ್ತಿಗೆದಾರನಿಗೆ ಕಾನೂನಿನ ಅರಿವು ಇಲ್ಲವೇ ಎಂಬುವಂತೆ ಗ್ರಾಮದ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ʼನಾನೇ ಈ ಕಾರ್ಯ ಮಾಡಿಸಿದ್ದೇನೆʼ ಎಂದು ಗುತ್ತಿಗೆದಾರ ವಿಶ್ವನಾಥ ಕುಂಬಾರ ತನ್ನ ತಪ್ಪೊಪ್ಪಿಕೊಂಡಿದ್ದು, ಕ್ಷಮಿಸುವಂತೆ ಬೇಡಿಕೊಂಡಿರುತ್ತಾನೆ.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಸಮೃದ್ಧ ದೇಶ ನಿರ್ಮಾಣದಲ್ಲಿ ಮಕ್ಕಳ ಆರೋಗ್ಯದ ಪಾತ್ರ ಮುಖ್ಯ: ಬಸವರಾಜ ಶರಾಬಿ
“ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ಇಂತಹ ಘಟನೆಗಳು ಸಂಭವಿಸುವುದಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಕೃತ್ಯ ಎಸಿಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದುನೋಡಬೇಕಾಗಿದೆ” ಎಂದು ಸ್ಥಳೀಯರು ಮಾತನಾಡುತ್ತಿದ್ದಾರೆ.