18 ವರ್ಷದೊಳಗಿನ ಮಕ್ಕಳಿಗೆ ವಾಹನ ಚಲಾಯಿಸಲು ಕೊಟ್ಟರೆ ಪೋಷಕರಿಗೆ ₹25 ಸಾವಿರ ದಂಡ ಹಾಗೂ 6 ತಿಂಗಳು ಜೈಲು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಪ್ರಾದೆಶೀಕ ಸಾರಿಗೆ ಅಧಿಕಾರಿ ಜಿ.ಕೆ.ಬಿರಾದರ್ ಹೇಳಿದರು.
ಔರಾದ್ ತಾಲ್ಲೂಕಿನ ಸಂತಪೂರ ಗ್ರಾಮದ ಸಿದ್ದರಾಮೇಶ್ವರ ಪಿಯು ಕಾಲೇಜಿನಲ್ಲಿ ಸಂತಪೂರ ಪೊಲೀಸ್ ಠಾಣೆ ಹಾಗೂ ಬೀದರ್ ಮೋಟಾರ್ ವಾಹನ ತರಬೇತಿ ಶಾಲೆ ಸಂಘದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ʼಅಪಘಾತ ರಹಿತ ವಾಹನ ಚಲಾಯಿಸಲು ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸಬೇಕು. ವಾಹನ ಪರವಾನಿಗೆ ಇಲ್ಲದೇ ವಾಹನ ಚಲಾಯಿಸುವುದು ಹಾಗೂ ಮದ್ಯ ಕುಡಿದು ವಾಹನ ಚಲಾಯಿಸುವುದು ಅಪರಾಧʼ ಎಂದು ತಿಳಿಸಿದರು.
ಸಂತಪೂರ ಠಾಣೆ ಪಿಎಸ್‌ಐ ನಂದಕುಮಾರ ಮಾತನಾಡಿ, ʼದ್ವಿಚಕ್ರ ವಾಹನದ ಮೇಲೆ ಇಬ್ಬರಿಗಿಂತ ಹೆಚ್ಚು ಜನ ಕೂಡುವಂತಿಲ್ಲ. ವಾಹನ ಚಲಾಯಿಸುವಾಗ ಮೊಬೈಲ್ ಬಳಸಬಾರದು. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಬರುವಾಗ ಯಾವುದೇ ತೊಂದರೆಯಾದರೆ ಕೂಡಲೇ ಪೊಲೀಸ್ ಸಹಾಯವಾಣಿ 112 ಗೆ ಕರೆ ಮಾಡಬಹುದುʼ ಎಂದು ಸಲಹೆ ನೀಡಿದರು.
ಹಿರಿಯ ಮೋಟಾರ್ ವಾಹನ ನಿರೀಕ್ಷಕ ಡಿ.ನಾಗರಾಜ ಮಾತನಾಡಿ, ʼವಾಹನ ಚಾಲನೆ ಮಾಡುವಾಗ ವೇಗ ಮಿತಿಯಲ್ಲಿ ಇರಬೇಕು ಹಾಗೂ ಪುಟ್ಟ ಕೆಲಸಗಳಿಗೆ ವಾಹನ ಉಪಯೋಗಿಸಬಾರದುʼ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜು ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಮಾತಾನಾಡಿ, ʼಸಂಚಾರ ನಿಯಮಗಳ ಪಾಲನೆ ಕುರಿತು ಆಯೋಜಿಸಿರುವ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು. ರಸ್ತೆ ಸುರಕ್ಷತೆಯ ನಿಯಮಗಳನ್ನು ಎಲ್ಲರೂ ಪಾಲಿಸೋಣʼ ಎಂದು ಹೆಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ತೊಗರಿ ಬೆಲೆ ಕುಸಿತದಿಂದ ರೈತರು ಕಂಗಾಲು : ಸ್ಪಂದಿಸುವುದೇ ಸರ್ಕಾರ?
ಕಾರ್ಯಕ್ರಮದಲ್ಲಿ ಮೋಟಾರ್ ವಾಹನ ನಿರೀಕ್ಷಕ ಅಶ್ವಿನ ರೆಡ್ಡಿ, ಬೀದರ್ ಮೋಟಾರ್ ವಾಹನ ತರಬೇತಿ ಶಾಲೆ ಸಂಘದ ಅಧ್ಯಕ್ಷ ಪ್ರಕಾಶ ಗುಮ್ಮೆ, ರಾಜ್ಯ ಸಂಘಟನೆ ಕಾರ್ಯದರ್ಶಿ ಶಿವರಾಜ ಜಮಾದರ, ವಿದ್ಯಾರ್ಥಿ ಮುಖಂಡ ರತ್ನದೀಪ ಕಸ್ತೂರೆ ಸೇರಿದಂತೆ ಕಾಲೇಜಿನ ಬೋಧಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.