ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮಂಜುರಾಗಿರುವ ಮನೆಗಳ ಕಾಮಗಾರಿಯನ್ನು ಕೂಡಲೇ ಪುನಾರಂಭ ಮಾಡುವಂತೆ ಒತ್ತಾಯಿಸಿ ತಾಲ್ಲೂಕು ಒಕ್ಕೂಟ ಸಮಿತಿ, ಮಾದಿಗ ದಂಡೋರ, ಮಾದಿಗ ಸಂಘರ್ಷ ಸಮಿತಿ ಒಕ್ಕೂಟದಿಂದ ಪ್ರತಿಭಟನೆ ಮಾಡುವುದರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರದ ಸುತ್ತೋಲೆ ಮತ್ತು ನಿಯಮಾವಳಿಗಳ ಪ್ರಕಾರವೇ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ಜೇವರ್ಗಿಯ ಹಲವು ಘೋಷಿತ ಸ್ಲಂ ಬಡಾವಣೆಗಳ ನಿವಾಸಿಗಳಿಗೆ ಮನೆ ಮಂಜೂರು ಮಾಡಿರುತ್ತದೆ. ಸದರಿ ಫಲಾನುಭವಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಮ್ಮುಖದಲ್ಲಿಯೇ ಮನೆಗಳ ಕಾಮಗಾರಿ ಪ್ರಾರಂಭ ಮಾಡಲಾಗಿರುತ್ತದೆ. ಆದರೆ ಜೇವರ್ಗಿಯ ಸಾಮಾಜಿಕ ಹೋರಾಟಗಾರ ಈರಣ್ಣ ಗೌಡ ಗೊಳ್ಳಾಳ ಅಧಿಕಾರಿಗಳಿಗೆ ಸುಳ್ಳು ದಾಖಲಾತಿ ತೋರಿಸಿ ಮನೆಗಳು ನಿರ್ಮಾಣವಾಗಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುತ್ತಾರೆ ಎಂದು ಸಂಘಟನೆಗಳ ಒಕ್ಕೂಟ ಆರೋಪಿಸಿತು.
ಸದರಿ ಫಲಾನುಭವಿಗಳ ಮನೆಗಳು ಈಗಾಗಲೇ ಲಿಂಟಲ್, ಸ್ಲ್ಯಾಬ್ ಹಂತದವರೆಗೆ ತಲುಪಿ ಕಾಮಗಾರಿ ಸ್ಥಗಿತಗೊಂಡಿರುತ್ತದೆ. ಸುಮಾರು 2 ತಿಂಗಳಿನಿಂದ ಮನೆಗಳು ಅರ್ಧಕ್ಕೆ ನಿಂತಿರುವ ಕಾರಣ ಫಲಾನುಭವಿಗಳು ಪರದಾಡುವಂತಾಗಿದೆ. ಹಾಗಾಗಿ ಸದರಿ ಮನೆಗಳ ಕಾಮಗಾರಿಯನ್ನು ಕೂಡಲೇ ಪುನಃ ಪ್ರಾರಂಭ ಮಾಡಬೇಕು ಮತ್ತು ಸಂಬಂಧಪಟ್ಟ ಗುತ್ತಿಗೆದಾರರ ಹಣ ಪಾವತಿ ಮಾಡಬೇಕು. ಅಲ್ಲದೆ ಜೇವರ್ಗಿ ಪಟ್ಟಣದ ಎಸ್‌ಸಿ, ಎಸ್‌ಟಿ ಮತ್ತು ಇತರ ಸಮುದಾಯಗಳ ಫಲಾನುಭವಿಗಳಿಗೆ ನ್ಯಾಯ ಒದಗಿಸಿ ಮನೆ ಕಾಮಗಾರಿ ಪ್ರಾರಂಭ ಮಾಡಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಒಕ್ಕೂಟ ಒತ್ತಾಯಿಸಿತು.
ಒಂದು ವೇಳೆ ಮನೆಗಳ ಕಾಮಗಾರಿ ಪ್ರಾರಂಭ ಮಾಡದೇ ಇದ್ದಲ್ಲಿ ಸಂಬಂಧ ಪಟ್ಟ ಇಲಾಖೆಯ ಮುಂದೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿತು.
ಈ ಸುದ್ದಿ ಓದಿದ್ದೀರಾ?: ತೊಗರಿಗೆ ಬೆಂಬಲ ಬೆಲೆ ನೀಡುವಂತೆ ರೈತರ ಬೃಹತ್ ಪ್ರತಿಭಟನೆ: ಕಲಬುರಗಿ ಬಂದ್ ಯಶಸ್ವಿ
ಈ ವೇಳೆ ಯಲ್ಲಪ್ಪ ಬಿ ಕೋಟನೂರ, ಮಲ್ಲಿಕಾರ್ಜುನ ಬಿಲ್ಲಾರ, ಮರೆಪ್ಪಾ ಕೋಬಾಳಕರ, ನಾಗರಾಜ ಆಲಗೂರು, ಮಾನಪ್ಪಾ ಬಿ ಗೋಗಿ, ಶಿವಶರಣ ಅಂದೋಲಾ, ಪರಶುರಾಮ ಜಮಖಂಡಿ, ರಾಮು ಬಿಲ್ಲಾದ, ಶಂಕರ ಜೇವರ್ಗಿ, ಕರ್ಣ ಜೇವರ್ಗಿ, ಮಂಜುನಾಥ ಪ್ರಭಾಳಕರ, ಬಾಲರಾಜ ನಾಕಮನ, ರಾಜು ಬಳೊಂಡಗಿ, ಸಿದ್ದಮ್ಮ ಬಡಿಗೇರ, ಮರೆಮ್ಮಾ ಜೇವರ್ಗಿ, ಲಕ್ಷ್ಮೀ ಬಸವರಾಜ, ಸಕರಮ್ಮಾ ನಾಕಮನ, ಶರಣಪ್ಪಾ ಮತ್ತಿತರರು ಇದ್ದರು.
