ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ವಿಜಯ ವಿದ್ಯಾಲಯ ಪ್ರಾಥಮಿಕ ಶಾಲೆಯಲ್ಲಿ 2004-5ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ್ದ ಹಳೆಯ ವಿದ್ಯಾರ್ಥಿಗಳ ಬಳಗವು ಗುರುಗಳಿಗೆ ಗೌರವ ಸಲ್ಲಿಸಲು ಮತ್ತು ಹಳೆಯ ನೆನಪುಗಳನ್ನು ನೆನಪಿಸಲು ವಿಶೇಷ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕಾರ್ಯಕ್ರಮ ಉದ್ದೇಶಿಸಿ ಹಳ್ಳೆಯ ವಿದ್ಯಾರ್ಥಿ ಗಿರೀಶ್ ತುಂಬಗಿ ಮಾತನಾಡಿ, “ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜೊತೆಗಿರುತ್ತದೆ. ಜೀವನದಲ್ಲಿ ಗುರಿ, ಛಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ. ಗುರುಗಳು ಜೀವನದ ಅತ್ಯುನ್ನತ ಮಾರ್ಗದರ್ಶಕರು. ಅವರ ಮಾರ್ಗದರ್ಶನದಿಂದ ನಾನು ಈ ಹಂತಕ್ಕೆ ಬಂದು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆದೆ. 20 ವರ್ಷಗಳ ನಂತರ ಮತ್ತೆ ಈ ಪ್ರೀತಿ ಮತ್ತು ನೆನಪುಗಳ ಕ್ಷಣವನ್ನು ಅನುಭವಿಸುವುದು ಸಂತೋಷ ತಂದಿದೆ. ಈ ಶಾಲೆಗೆ ಅಗತ್ಯವಿರುವ ಸಹಾಯವನ್ನು ಮುಂದಿನ ದಿನಗಳಲ್ಲಿ ನೀಡಲು ಸಿದ್ಧರಿದ್ದೇವೆ” ಎಂದು ಹೇಳಿದರು.
ಶಾಲೆಯ ಶಿಕ್ಷಕ ಬಸವರಾಜ ಹಡಪದ ಮಾತನಾಡಿ, “ಗುರು-ಶಿಷ್ಯರ ಬಾಂಧವ್ಯ ಇಂದು ನವೀಕರಿಸಿದಂತೆ ಭಾಸವಾಗುತ್ತಿದೆ. ಹಳೆಯ ವಿದ್ಯಾರ್ಥಿಗಳು ಅವರ ಗುರುಗಳನ್ನು ನೆನೆದು ಇಂಥದ್ದೊಂದು ಕಾರ್ಯಕ್ರಮ ಆಯೋಜಿಸಿರುವುದು ತುಂಬಾ ಸಂತೋಷ ನೀಡಿದೆ. ನಾವು ಇಂದು ಏನಾದರೂ ಗಳಿಸಿದ್ದರೆ ಅದೆಲ್ಲವೂ ಈ ಸಮಾಜದಿಂದ ಗಳಿಸಿದ್ದೆ ಆಗಿರುತ್ತದೆ. ಹಾಗಾಗಿ ಈ ಸಮಾಜದಿಂದ ಪಡೆದ ಒಂದಷ್ಟನ್ನಾದರೂ ನಾವು ಮತ್ತೆ ಸಮಾಜಕ್ಕ ವಾಪಸ್ ಮಾಡಬೇಕಾಗುತ್ತದೆ. ಆ ಮೂಲಕ ಅಕ್ಷರ ಕಲಿಸಿದ ಗುರುಗಳು, ಜನ್ಮ ಕೊಟ್ಟ ಹೆತ್ತವರು, ಆಡಿ ಬೆಳೆದ ಭೂಮಿಯ ಋಣ ತೀರಿಸಲು ಮರೆಯಬಾರದು” ಎಂದರು.
ಈ ಸುದ್ದಿ ಓದಿದ್ದೀರಾ?: ಕಲಬುರಗಿ | ನೇತಾಜಿ ಜನ್ಮದಿನಾಚರಣೆ; ವಿದ್ಯಾರ್ಥಿ ಸಂಘಟನೆಗಳ ಬೃಹತ್ ಮೆರವಣಿಗೆ
ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ಸುಂದರ್ ರಾಣಿ, ಬಸಯ್ಯ ಹಿರೇಮಠ, ಧನ್ಯ ಕುಮಾರ ಮೈನಾಳ್ಕರ, ಸೋನಾ ಈಶ್ವರ, ಪ್ರಮೋದ ಕುಮಾರ, ದೇವರಾಜ ಬುಳ್ಳ, ಶಾಲಾ ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಭಾಗಿಯಾಗಿದ್ದರು .