ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ ಇತರ ಆರೋಪಿಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಹೈಕೋರ್ಟ್ ದರ್ಶನ್ ಸೇರಿದಂತೆ ಇತರೇ 7 ಆರೋಪಿಗಳಿಗೆ ಮಂಜೂರು ಮಾಡಿದ್ದ ಜಾಮೀನು ರದ್ದು ಕೋರಿ ಬೆಂಗಳೂರು ಪೊಲೀಸರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು.
ಈ ವೇಳೆ ಹೈಕೋರ್ಟ್ ವಿಸ್ತೃತ ಆದೇಶ ಪ್ರಕಟಿಸಿ ಆರೋಪಿಗಳಿಗೆ ಜಾಮೀನು ನೀಡಿದೆ. ಮೆರಿಟ್ ಮೇಲೆ ಕೋರ್ಟ್ ಆದೇಶ ನೀಡಿದೆ. ಹೀಗಾಗಿ ಈ ಅರ್ಜಿಯ ವಿಚಾರಣೆಗೆ ಆರೋಪಿಗಳ ವಾದವನ್ನು ಕೇಳಬೇಕಾಗುತ್ತದೆ ಎಂದು ಹೇಳಿ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿ ಕೋರ್ಟ್ ವಿಚಾರಣೆಯನ್ನು ಮುಂದೂಡಿತು.
ಮುಂದಿನ ವಿಚಾರಣೆಯಲ್ಲಿ ಆರೋಪಿಗಳ ಪರ ವಕೀಲರು ಜಮೀನು ನೀಡಿದ್ದನ್ನು ಸಮರ್ಥಿಸಿಕೊಂಡರೆ, ಪೊಲೀಸರ ಪರ ವಕೀಲರು ಜಾಮೀನು ನೀಡಬಾರದು ಎಂದು ವಾದ ಮಂಡಿಸಲಿದ್ದಾರೆ. ಎರಡು ಕಡೆಯ ವಾದವನ್ನು ಆಲಿಸಿದ ಬಳಿಕ ಕೋರ್ಟ್ ತನ್ನ ಆದೇಶವನ್ನು ಪ್ರಕಟಿಸಲಿದೆ.
ಪವಿತ್ರಾ ಗೌಡ (ಎ 1), ದರ್ಶನ್ (ಎ 2), ಜಗದೀಶ್ ಜಗ್ಗ ಅಲಿಯಾಸ್ ಜಗ್ಗ (ಎ 6),ಅನುಕುಮಾರ್ ಅಲಿಯಾಸ್ ಅನು (ಎ 7), ಆರ್ ನಾಗರಾಜು (ಎ 11) ಎಂ ಲಕ್ಷ್ಮಣ್ (ಎ 12), ಪ್ರದೋಶ್ ಎಸ್. ರಾವ್ (ಎ 14) ಅವರಿಗೆ ನೋಟಿಸ್ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೈಕ್ರೋ ಫೈನಾನ್ಸ್‌ಗೆ ಬಲಿಯಾಗುತ್ತಿರುವ ಬಡವರು; ಸತ್ತಂತಿರುವ ಸರ್ಕಾರ
ದರ್ಶನ್ ಹಾಗೂ 7 ಆರೋಪಿಗಳ ಜಾಮೀನು ರದ್ದುಕೋರಿ ಸುಪ್ರೀಂಕೋರ್ಟ್‌ಗೆ ಪೊಲೀಸರು ಅರ್ಜಿ ಸಲ್ಲಿಸಿದ್ದರು. ವಕೀಲ ಅನಿಲ್ ನಿಶಾನಿ ಮುಖಾಂತರ ಮೇಲ್ಮನವಿ ಸಲ್ಲಿಸಿರುವ ಸರ್ಕಾರ ಬರೋಬ್ಬರಿ 1,492 ಪುಟಗಳ ಕಡತಗಳನ್ನು ಸಲ್ಲಿಕೆ ಮಾಡಿತ್ತು.
ಹೈಕೋರ್ಟ್ ಜಾಮೀನು ಆದೇಶ, ಪ್ರತ್ಯಕ್ಷದರ್ಶಿಗಳ ಹೇಳಿಕೆಯ ತರ್ಜುಮೆ ಕಾಪಿ, ಮರಣೋತ್ತರ ಪರೀಕ್ಷೆಯ ವರದಿ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ, ಸಿಡಿಆರ್, ಪಂಚನಾಮೆ ವರದಿ, ಆರೋಪಿಗಳ ಬಳಿ ವಶಪಡಿಸಿಕೊಂಡ ಡಿಜಿಟಲ್ ವಸ್ತುಗಳ ವಿಶ್ಲೇಷಣೆ ವರದಿ, ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾ ಆದೇಶ ಪ್ರತಿ, ದರ್ಶನ್‌ಗೆ ನೀಡಿದ್ದ ಮಧ್ಯಂತರ ಜಾಮೀನು ಅದೇಶ ಪ್ರತಿ, ಜೈಲಿನಿಂದ ದರ್ಶನ್ ಬಗ್ಗೆ ಸಲ್ಲಿಕೆಯಾದ ವೈದ್ಯಕೀಯ ವರದಿ, ಬಿಜಿಎಸ್ ಆಸ್ಪತ್ರೆ ವೈದ್ಯರ ವರದಿ ಸೇರಿದಂತೆ ಒಟ್ಟು 15 ಅಂಶಗಳಿಗೆ ಸಂಬಂಧಿಸಿ 1492 ಪುಟಗಳ ಕಡತವನ್ನು ಕೋರ್ಟ್‌ಗೆ ನೀಡಲಾಗಿದೆ.
