2019 ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೊದಲ ಬಾರಿಗೆ ಕುಂದಾಪುರ ಮೂಲದ ಯಾಕೂಬ್ ಖಾದರ್ ಗುಲ್ವಾಡಿ ಅವರ ಮೊದಲ ನಿರ್ದೇಶನದ ಕನ್ನಡದ ಪ್ರಾದೇಶಿಕ ಭಾಷೆಯಾದ ಬ್ಯಾರಿ ಭಾಷೆಯ ಸಿನಿಮಾ ‘ಟ್ರಿಪಲ್ ತಲಾಖ್’ಗೆ ಅತ್ಯುತ್ತಮ ರಾಜ್ಯ ಪ್ರಶಸ್ತಿ ಲಭಿಸಿದೆ.
2017 ರಲ್ಲಿ ಗುಲ್ವಾಡಿ ಟಾಕೀಸ್ ಸಂಸ್ಥೆಯ ಮೂಲಕ ರಿಸರ್ವೇಶನ್ ಎಂಬ ಕನ್ನಡ ಸಿನಿಮಾ ನಿರ್ಮಿಸಿ ಅದಕ್ಕೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡ ಇದೇ ಸಂಸ್ಥೆಯ ಬ್ಯಾನರ್ ಅಡಿಯಲ್ಲಿ ಮಾಡಿದ್ದ ಬ್ಯಾರಿ ಭಾಷೆಯ ಸಿನಿಮಾಗೆ ರಾಜ್ಯ ಪ್ರಶಸ್ತಿ ಪಡೆಯುವ ಮೂಲಕ ಸುದ್ದಿ ಮಾಡಿದೆ.
ಮುಂಬೈನ ಪ್ರಭನಾರಾಯಣ ಸುವರ್ಣ ಮತ್ತು ಯಾಕೂಬ್ ಖಾದರ್ ಗುಲ್ವಾಡಿ ಜೊತೆಯಾಗಿ ಈ ಸಿನಿಮಾವನ್ನು ನಿರ್ಮಿಸಿದ್ದರು.
‘ಟ್ರಿಪಲ್ ತಲಾಖ್’ ಸಿನಿಮಾದ ಬಗ್ಗೆ:
ತ್ರಿಪಲ್ ತಲಾಖ್ ಸಿನಿಮಾ ಸಮುದಾಯವೊಂದರ ಮಾನವೀಯ ಸಂವೇದನೆಗಳಿಗೆ ಹಿಡಿದ ಭಾವನಾತ್ಮಕ ಕನ್ನಡಿ. ತಲಾಖ್ ಎಂಬ ಮೂರಕ್ಷರವನ್ನು ಒಂದೇ ಉಸಿರಲ್ಲಿ ಮೂರು ಬಾರಿ ಹೇಳಿ ಬಿಟ್ಟರೆ ಸಂಬಂಧಗಳು ಮುರಿದೇ ಹೋಗುತ್ತವೆ ಎಂಬ ಅಪಕಲ್ಪನೆಯ ಹಿಂದಿರುವ ನೋವು, ತಲ್ಲಣಗಳಿಗೆ ಮೂರ್ತ ರೂಪ ಕೊಟ್ಟ ಕುಂದಾಪುರದ ಕ್ರಿಯಾಶೀಲ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿಯವರ ಈ ಚಲನಚಿತ್ರ ಒಂದು ಸಾಮಾಜಿಕ ಜವಾಬ್ದಾರಿಯ ರೂಪದಲ್ಲಿ ತೆರೆಯಲ್ಲಿ ಸೆರೆಯಾದ ದೃಶ್ಯಗಳಾಗಿದೆ.
ಅಮಾನುಷ ಸಂಪ್ರದಾಯವನ್ನು ಬಳಸಿಕೊಂಡು ಕುಟುಂಬದ ಮೂಲ ನೆಲೆಯನ್ನೇ ಛಿದ್ರಗೊಳಿಸುವ ಸಮಯ ಸಾಧಕರ ಹಿಂದಿರುವ ನಗ್ನ ಸತ್ಯದ ದರ್ಶನದಂತಿರುವ ಈ ಸಿನಿಮಾ ಸಮುದಾಯದ ಮಹಿಳೆಯರನ್ನು ದಿಗ್ಭ್ರಾಂತಗೊಳಿಸುವ ತಲಾಖ್ ವಿರುದ್ಧ ಜಾಗೃತಿಯ ಸಂದೇಶ ಹರಡುತ್ತಾ ಸಮಸ್ಯೆಯ ದಾರುಣತೆಯನ್ನು ವಿಷಾದೀಕರಿಸುತ್ತಾ ಹೋಗುತ್ತದೆ. ಮುಂದುವರಿದ ಜಗತ್ತಿನ ಕಪ್ಪು ಚುಕ್ಕೆಯಂತಿರುವ ತ್ರಿವಳಿ ತಲಾಖ್ ವಿಚಾರದ ಅಮೂಲಾಗ್ರ ವಿಶ್ಲೇಷಣೆಯೊಂದಿಗೆ ಅಂತರಂಗವನ್ನು ಕೆಣಕುವ ಮತ್ತು ಆತ್ಮ ವಿಮರ್ಶೆ ಮಾಡುವಂತೆ ‘ಟ್ರಿಪಲ್ ತಲಾಖ್- ಕುರ್ ಆನ್ ಹೇಳಿಲ್ಲ’ ಚಿತ್ರ ಪ್ರೇರೇಪಿಸಿತ್ತು.
ಚಿತ್ರಕ್ಕಾಗಿ ಬಣ್ಣ ಹಚ್ಚಿದವರು
ಈ ಸಿನಿಮಾಗೆ ಮುಂಬೈಯ ನಾರಾಯಣ ಪ್ರಭಾ ಸುವರ್ಣ ಮತ್ತು ಯಾಕೂಬ್ ಖಾದರ್ ಗುಲ್ವಾಡಿ ನಿರ್ಮಾಪಕರಾಗಿದ್ದು, ಪಿ.ವಿ.ಆರ್ ಸ್ವಾಮಿ ಮತ್ತು ಸತೀಶ್ ಕುಮಾರ್ ಛಾಯಾಗ್ರಹಕರಾಗಿದ್ದರು.
ಎಡಿಟರ್-ಕಲರೀಸ್ಟ್-ಮೋಹನ್ ಎಲ್ ರಂಗ ಕಹಳೆ, ಸೌಂಡ್ ಮಿಕ್ಸಿಂಗ್-ಮುನೀಬ್ ಅಹಮದ್, ಹಿನ್ನೆಲೆ ಸಂಗೀತ ಮತ್ತು ಸೌಂಡ್ ಎಫೆಕ್ಟ್-ಗಿರೀಶ್ ಬಿ.ಎಮ್, ವಸ್ತ್ರವಿನ್ಯಾಸ-ಇಸ್ಮಾಯಿಲ್ ಸರ್ಫುದ್ದೀನ್, ಕಲೆ- ಎ.ಕೆ.ಗುಲ್ವಾಡಿ
ಸಹ ನಿರ್ದೇಶನ-ಪಣಕನಹಳ್ಳಿ ಪ್ರಸನ್ನ ಮತ್ತು ರಿಝ್ವಾನ್ ಗುಲ್ವಾಡಿ ಇದ್ದರು.
ಕಲಾವಿದರಾಗಿ ರೂಪಾ ವರ್ಕಾಡಿ, ನವ್ಯ ಪೂಜಾರಿ, ಅಝರ್ ಶಾ, ಹಿರಿಯ ಬ್ಯಾರಿ ಸಾಹಿತಿ ಮುಹಮ್ಮದ್ ಬಡ್ಡೂರ್, ಎಮ್. ಕೆ.ಮಠ, ವಿಶೇಷ ಪಾತ್ರದಲ್ಲಿ ಕುಂದಾಪುರದ ಹಿರಿಯ ವಕೀಲರಾದ ರವಿಕಿರಣ್ ಮುರ್ಡೇಶ್ವರ ಮತ್ತು ಎ.ಎಸ್.ಎನ್ ಹೆಬ್ಬಾರ್ ಸಹಿತ ಪ್ರಸ್ತುತ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಉಮರ್ ಯು.ಹೆಚ್, ಸುಬ್ರಹ್ಮಣ್ಯ ಶೆಟ್ಟಿ, ನಾರಾಯಣ ಸುವರ್ಣ, ಪ್ರಭಾ ಸುವರ್ಣ, ಎಸ್. ಎಸ್ ಹನೀಫ್, ಜಮಾಲ್ ಕುದ್ರುಮಕ್ಕಿ, ಜಿ.ಟಿ.ಮೊಯಿದೀನ್, ಪಕ್ಕೂರಾಕ, ಬೀಡಿ ಉಸ್ಮಾನಾಕ, ಜಾನೇಟ್, ಅಸ್ಲಮ್ ಕುಂಬ್ರ, ಚಂದ್ರಣ್ಣ,ಸಾದೀಕ್ ಆಲಿ, ಜಾಫರ್, ಕಾವ್ಯ ಮಯ್ಯ, ಆಮೀರ್ ಹಂಝ, ಐಶ್ವರ್ಯ, ಪ್ರತೀಕ್ಷ ,ಮಲ್ಲಿಕಾ ಟೀಚರ್, ಮಾಧುರಿ,ಸರೋಜ ಸುರೇಶ್, ಇಕ್ಬಾಲ್ ಎಸ್, ದಿನೇಶ್ ಬೆಟ್ಟ, ಮಾಸ್ಟರ್ ಇಫ್ರಾಝ್, ಮಾಸ್ಟರ್ ಫಹಾದ್ ಯಾಕೂಬ್, ಬೇಬಿ ಫಹಿಮತುಲ್ ಯುಶ್ರ,ಮಾಸ್ಟರ್ ಸಿಮಾಝ್ ತೆರೆಯ ಮೇಲೆ ಕಾಣಿಸಿಕೊಂಡಿದ್ದರು.
ಈಗಾಗಲೇ ಈ ಸಿನೆಮಾ ನೈಜೀರಿಯಾದಲ್ಲಿ ನಡೆದ ಅಬುಜ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೂರು ವಿಭಾಗದಲ್ಲಿ ಸೆಮಿಫೈನಲ್ ಹಂತ ತಲುಪಿದ್ದು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೂಡ ಭಾರತದ ಉಪಭಾಷೆಗಳು ವಿಭಾಗದಲ್ಲಿ ಪ್ರದರ್ಶನ ಕಂಡಿದ್ದಲ್ಲದೆ ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಶಸ್ತಿ ವಿಜೇತ ನಿರ್ದೇಶಕ, ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ, “ಈ ಹಿಂದೆ ನನ್ನ ಮೊದಲ ನಿರ್ಮಾಣದ ರಿಸರ್ವೇಶನ್ ಸಿನಿಮಾಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಬಂದಿತ್ತು. ಸೂಕ್ಷ್ಮ ಸಂವೇದನೆಯ, ಗಟ್ಟಿ ಕಥಾಹಂದರವುಳ್ಳ ನನ್ನ ಮೊದಲ ನಿರ್ದೇಶನದ ಟ್ರಿಪಲ್ ತಲಾಖ್‌ಗೆ ಕನ್ನಡದ ಪುಟಾಣಿ ಪ್ರಾದೇಶಿಕ ಭಾಷೆಯಾದ ಬ್ಯಾರಿ ಭಾಷೆಯ ರಾಜ್ಯ ಪ್ರಶಸ್ತಿ ಬಂದಿದ್ದು ಸಂತೋಷವಾಗಿದೆ. ಈ ಚಿತ್ರದಲ್ಲಿ ನಟಿಸಿದ ಎಲ್ಲ ಕಲಾವಿದರಿಗೂ, ತಂತ್ರಜ್ಞರಿಗೂ, ಸಹ ನಿರ್ಮಾಪಕರಿಗೂ ಮತ್ತು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ತಿಳಿಸಿದ್ದಾರೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಉಮರ್ ಯು.ಹೆಚ್ ಈ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದು, “ಟ್ರಿಪಲ್ ತಲಾಖ್- ಕುರ್ ಆನ್ ಹೇಳಿಲ್ಲ’ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಸಿಕ್ಕಿರುವುದು ತುಂಬಾ ಖುಷಿಯ ಸಂಗತಿ. ಬ್ಯಾರಿ ಭಾಷೆಯ ಸಿನಿಮಾಕ್ಕೆ ಇಂತಹ ಪ್ರಶಸ್ತಿ ಸಿಕ್ಕಿರುವುದು ಪ್ರಾದೇಶಿಕ ಭಾಷೆಗಳ ಮಹತ್ವವನ್ನು ಸಾರುತ್ತದೆ. ತ್ರಿಪಲ್ ತಲಾಖ್ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆ ಇರುವುದನ್ನು ಹೋಗಲಾಡಿಸಲು ಮಾಡಿರುವ ಪ್ರಯತ್ನವಿದು. ಈ ಸಿನಿಮಾಕ್ಕೆ ಇನ್ನಷ್ಟು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಕೂಡ ಸಿಗಲಿ ಎಂದು ಹಾರೈಸುತ್ತೇನೆ” ಎಂದು ತಿಳಿಸಿದ್ದಾರೆ.

ಕುಂದಾಪುರದ ಹಿರಿಯ ವಕೀಲ ರವಿಕಿರಣ್ ಮುರ್ಡೇಶ್ವರ ಈ ಬಗ್ಗೆ ಮಾತನಾಡಿ, “ಮಹತ್ವಾಕಾಂಕ್ಷೆಯ ‘ತ್ರಿಪಲ್ ತಲಾಖ್’ ಚಿತ್ರಕ್ಕೆ ಕರ್ನಾಟಕ ರಾಜ್ಯ ಸರಕಾರವು ಪ್ರಾದೇಶಿಕ ಭಾಷೆಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಘೋಷಿಸಿದ್ದು ಸಂತಸ ನೀಡಿದೆ. ತ್ರಿಪಲ್ ತಲಾಖ್ ಮನೋರಂಜನೆ ನೀಡುವ ಚಿತ್ರವಾಗದೇ ಮನ ಕಲಕಿಸಿ, ಮನ ಕರಗಿಸುವ ಚಿತ್ರವಿದು. ಕಾನೂನು ಸಂದೇಶವನ್ನು ಜನರಿಗೆ ನೀಡುವಲ್ಲಿ ಚಿತ್ರ ಪರಿಣಾಮಕಾರಿಯಾಗಿದೆ. ಚಿತ್ರದ ಕ್ಲೈಮಾಕ್ಸ್‌ನಲ್ಲಿನ ನ್ಯಾಯಾಲಯದ ದೃಶ್ಯದಲ್ಲಿ ನ್ಯಾಯಾಧೀಶರಾಗಿ ಪಾತ್ರಮಾಡುವ ಅವಕಾಶ ಸಿಕ್ಕಿತ್ತು. ಗಂಡ-ಹೆಂಡತಿಯ ಬದುಕಿನ ನೈಜಾರ್ಥವನ್ನು ಕಟ್ಟಿಕೊಟ್ಟು ಸಂಬಂಧ, ಭಾವನೆಗಳ ಬಗ್ಗೆ ಚಿತ್ರದಲ್ಲಿ ತೆರೆದಿಡಲಾಗಿದೆ. ಸಂವಿಧಾನ ವಿರೋಧಿಯಾಗಿರುವ ತ್ರಿವಳಿ ತಲಾಖ್ ಅಸಿಂಧು ಎಂದು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ನೀಡಿದ್ದು ಚಿತ್ರದಲ್ಲಿಯೂ ಸಮಾಜಕ್ಕೆ ಉತ್ತಮ ಸಂದೇಶ ನೀಡಲಾಗಿದೆ” ಎಂದು ತಿಳಿಸಿದ್ದಾರೆ.
