ಹಾಸನ | 97 ಎಕರೆ ಭೂಮಿ ಕಬಳಿಕೆಗೆ ಯತ್ನ; ಪ್ರಭಾವಿ ರಾಜಕಾರಣಿಗಳ ಹುನ್ನಾರವೆಂದ ಎಚ್ ಡಿ ರೇವಣ್ಣ

Date:

Advertisements

ಹಾಸನ ನಗರದ ವಿವಿಧೆಡೆ ಇರುವ ಜಾಗ ಕಬಳಿಸಲು ಮುಂದಾಗಿದ್ದು, ದೊಡ್ಡಕೊಂಡಗುಳ ಗ್ರಾಮದ ಬಳಿ ಅಧಿಕಾರಿಗಳೇ ಕೈಬರಹದ ಪಹಣಿ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಬೆಲೆಬಾಳುವ 97 ಎಕರೆ ಭೂಮಿಯನ್ನು ಕಬಳಿಸುವ ಹುನ್ನಾರ ನಡೆದಿದೆ ಎಂದು ಶಾಸಕ ಎಚ್ ಡಿ ರೇವಣ್ಣ ಆರೋಪಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಾಧ್ಯಮದೊಂದಿಗೆ ಮಾತನಾಡಿ, “ಭೂಮಿ ಕಬಳಿಕೆ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕು. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.

“ನಗರ ಪ್ರದೇಶದ ಸರ್ಕಾರಿ ಜಾಗವನ್ನು ಕಂದಾಯ ಅಧಿಕಾರಿಗಳು ಹಾಗೂ ಕೆಲ ಪ್ರಭಾವಿಗಳು ಸೇರಿ ದಾಖಲೆ ತಿದ್ದಿದ್ದಾರೆ. ದೊಡ್ಡಕೊಂಡಗುಳ ಗ್ರಾಮದ 7, 32, 34, 54ರಲ್ಲಿನ ಸರ್ವೆ ನಂಬರ್‌ನಲ್ಲಿ 97 ಎಕರೆ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಲಾಗಿದ್ದು, ಮಂಜೂರಾತಿ ದಾಖಲೆಗಳೇ ಇಲ್ಲದೆ ಕೆಲವರ ಹೆಸರಿಗೆ ಮಂಜೂರು ಮಾಡಿ ಕೈ ಬರಹದ ಪಹಣಿ ಸೃಷ್ಟಿಸಿ ಹಗರಣ ಮಾಡಲಾಗಿದೆ” ಎಂದು ಆರೋಪಿಸಿದರು.

Advertisements

“ಸುಮಾರು 500 ಕೋಟಿ ಮೌಲ್ಯದ ಜಮೀನು ದುರ್ಬಳಕೆಯಾಗಿದ್ದು, ಯಾವುದೇ ಮೂಲ ದಾಖಲೆಗಳಿಲ್ಲದೆ ಯಾರೊಬ್ಬರೂ ಸಾಗುವಳಿಯಲ್ಲಿ ಇಲ್ಲದಿದ್ದರೂ ಕೇವಲ ಹೆಸರುಗಳನ್ನು ನಮೂದಿಸಿ ತಲಾ ಒಬ್ಬೊಬ್ಬರಿಗೆ 1-2 ಎಕರೆಯಂತೆ ಹಂಚಿಕೆ ಮಾಡಲಾಗಿದೆ. ತಾಲೂಕು ಕಚೇರಿಯಲ್ಲಿ ಪ್ರಸ್ತುತ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿರುವ ಹಾಗೂ ಈ ಹಿಂದೆ ರೆಕಾರ್ಡ್ ರೂಮ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚನ್ನಕೇಶವ ಮತ್ತು ಗ್ರಾಮಲೆಕ್ಕಿಗ ವಿಶ್ವನಾಥ್ ಇಬ್ಬರೂ ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಕಡತಗಳ ಒಳಗೆ ಸೇರಿಸಿದ್ದಾರೆ. ಗೋಮಾಳ ಜಮೀನಿನಲ್ಲಿ ಬಡಾವಣೆ ಮಾಡಲಾಗುತ್ತಿದೆ” ಎಂದು ಗಂಭೀರವಾಗಿ ಆರೋಪಿಸಿದರು.

“ಕೆಲ ಪ್ರಭಾವಿ ರಾಜಕಾರಣಿಗಳು ಹಾಗೂ ಭೂಮಾಫಿಯಾದವರು ಸೇರಿ ಬಡಾವಣೆ ನಿರ್ಮಾಣ ಮಾಡುತ್ತಿದ್ದು, ನಕಲಿ ದಾಖಲೆ ಸೃಷ್ಟಿ ಮಾಡಿದವರ ವಿರುದ್ದ ಡಿಸಿ ಕ್ರಮ ಕೈಗೊಂಡು ಈ 97 ಎಕರೆ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು” ಎಂದು ಆಗ್ರಹಿಸಿದರು.

“ಹಾಸನ ಜಿಲ್ಲಾಧಿಕಾರಿ ಕೆಲಸ ಮಾಡುವುದರಲ್ಲಿ ನಂಬರ್‌ ಒನ್. ಎಂಥದ್ದೂ ಬೇಕಾದರೂ ಸೃಷ್ಟಿಸಬಹುದು, ಮುಚ್ಚಿ ಹಾಕಲೂಬಹುದೆಂದು ಅವಾರ್ಡ್ ಕೊಟ್ಟಿದ್ದಾರೆ. ಈ ಗೋಮಾಳ ಭೂಮಿ ಅಕ್ರಮ ಮಂಜುರಾತಿ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಲಿ. ಈ ಬಗ್ಗೆ ಸದನದಲ್ಲಿ ಕೂಡ ಮಾತನಾಡಿದ್ದೇವೆ. ಸಾಗುವಳಿ ಚೀಟಿ ಇದ್ದರೆ, ಮಂಜೂರಾತಿ ದಾಖಲೆ ಇದ್ದರೆ ಭೂಮಿ ಕೊಡಲಿ. ಆದರೆ ಈ ಯಾವುದೇ ದಾಖಲೆಪತ್ರ ಇಲ್ಲದೆ ಭೂಮಿ ಪರಭಾರೆ ಮಾಡಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಅಧಿಕಾರಿಗಳೇ ಕೈ ಪಹಣಿ ರಚಿಸಿ ತಮಗೆ ಇಷ್ಟ ಬಂದವರ ಹೆಸರುಗಳನ್ನು ಬರೆದುಕೊಂಡು ದುರಸ್ತಿಯಾಗದಿದ್ದರೂ ಲೇಔಟ್ ಮಾಡಲು ಅನುಮತಿ ನೀಡಿದ್ದಾರೆ. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕು. ಕೋಟ್ಯಂತರ ರೂಪಾಯಿ ಬೆಲೆಬಾಳುವ ರೈತರ ಜಮೀನನ್ನು ಸಾರ್ವಜನಿಕ ಹಿತದೃಷ್ಟಿಯಿಂದ ರಕ್ಷಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸಬೇಕು. ಜತೆಗೆ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.

“ನಗರದ ಹೊರವಲಯದಲ್ಲಿ ನಡೆಯುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಮೂಲ ಕಡತದ ಮಾದರಿಯಲ್ಲೇ ನಡೆಯಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ ಜಿಲ್ಲೆಯ ಬೆಳವಣಿಗೆ ದೃಷ್ಟಿಯಿಂದ ವಿಶಾಲವಾದ ವಿಮಾನ ನಿಲ್ದಾಣಕ್ಕೆ ಎಲ್ಲರೂ ಸಹಕಾರ ನೀಡಬೇಕು” ಎಂದು ಮನವಿ ಮಾಡಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಜ.30ರಂದು ಫ್ಯಾಸಿಸ್ಟ್ ವಿರೋಧಿ ಸಮಾವೇಶ: ಆರ್ ಮಾನಸಯ್ಯ

“ಪ್ರವಾಸಿ ಸ್ಥಳಗಳನ್ನು ಹೊಂದಿರುವ ಹಾಸನ ಜಿಲ್ಲೆಗೆ ವಿದೇಶದ ನಂಟು, ಹೊರ ರಾಜ್ಯಗಳಿಗೆ ತೆರಳಲು, ಹಾಸನದಲ್ಲಿ ಬೆಳೆದ ಬೆಳೆಗಳನ್ನು ಹೊರರಾಜ್ಯ ಹಾಗೂ ದೇಶಕ್ಕೆ ರಫ್ತು ಮಾಡಲು ವಿಶಾಲವಾದ ವಿಮಾನ ನಿಲ್ದಾಣದ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.

“ಕೃಷಿ ಕಾಲೇಜು ಬೇಕಾದರೆ ಮಂಡ್ಯದವರು ಮಾಡಿಕೊಳ್ಳಲಿ. ಈ ಜಿಲ್ಲೆಯ ಬೆಳವಣಿಗೆಗೆ ಬೇಕಾದರೇ ಅವರಿಗೂ 500 ಕೋಟಿ ಕೊಡಲಿ. ಏಳು ಜನ ಶಾಸಕರ ಗೆಲ್ಲಿಸಿ ಕೊಟ್ಟಿದ್ದು, ಅವರ ಋಣ ತೀರಿಸಲಿ, ನಮ್ಮದು ಏನಿದೆ. ಬೆಂಗಳೂರಿಗೆ ಕೃಷಿ ಕಾಲೇಜು ಇರಬೇಕು. ನಮ್ಮ ಕೃಷಿ ಕಾಲೇಜು ಅಭಿವೃದ್ಧಿ ಮಾಡಲು ಮುಂದಾಗುತ್ತೇವೆ. ಯಾವ ಕಾರಣಕ್ಕೂ ಮಂಡ್ಯಕ್ಕೆ ಸೇರಿಸುವುದು ಬೇಡ. ಹಿಂದಿನಿಂದ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದೆ ನಡೆಯಲಿ. ಇಲ್ಲವಾದರೆ ನಮಗೂ ಒಂದು ಯೂನಿವರ್ಸಿಟಿ ಕೃಷಿ ಕಾಲೇಜು ಮಾಡಿಕೊಡಲಿ. ಈ ಬಗ್ಗೆ ಅಸೆಂಬ್ಲಿಯಲ್ಲಿಯೂ ಹೋರಾಟ ಮಾಡಲಾಗುವುದು” ಎಂದು ತಾಕೀತು ಮಾಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X