ಈ ದಿನ ಸಂಪಾದಕೀಯ | ರಾಯಚೂರು ಗ್ರಾಮೀಣ ಕೂಲಿಕಾರರ ಸತ್ಯಾಗ್ರಹ; ಸ್ವಾರ್ಥರಹಿತ ಜನಹಿತದ ಬೇಡಿಕೆಗಳು ಸರ್ಕಾರದ ಕಣ್ತೆರೆಸಲಿ ‌

Date:

Advertisements

ಅಷ್ಟಕ್ಕೂ ಈ ಸಂಘಟನೆಗಳು ಇಟ್ಟಿರುವ ಬೇಡಿಕೆಗಳನ್ನು ʼಬೇಡಿಕೆʼ ಎಂದು ಪರಿಗಣಿಸಬೇಕಿಲ್ಲ. ಅವು ಸರ್ಕಾರವೊಂದರ ಮೂಲಭೂತ ಕರ್ತವ್ಯಗಳು. ನೀರು, ನೆರಳು, ಅನ್ನ, ಅಕ್ಷರ, ಸೂರು ಕಲ್ಪಿಸುವುದು ಆದ್ಯತೆಯ ಸಂಗತಿಗಳು. ಇವುಗಳಿಗಾಗಿ ಕೂಲಿಕಾರರು ಸತ್ಯಾಗ್ರಹ ನಡೆಸುವ ಪರಿಸ್ಥಿತಿ ಶೋಚನೀಯ.

ಗ್ರಾಮೀಣ ಕೂಲಿಕಾರರ ಸಂಘಟನೆ ಸೇರಿದಂತೆ ಪ್ರಗತಿಪರ ಸಂಘಟನೆಗಳ ಕ್ರಿಯಾ ಸಮಿತಿಯವರು ನಾಳೆಯಿಂದ (ಜ.25) ರಾಯಚೂರಿನಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಲಿದ್ದಾರೆ. ಈ ಸ್ವಾರ್ಥರಹಿತ, ಜನಹಿತದ ಅವರ ಬೇಡಿಕೆಗಳು ಸರ್ಕಾರದ ಕಣ್ತೆರೆಸಬೇಕು.

ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಬ್ಯಾಂಕ್‌, ಕಾರ್ಖಾನೆ ನೌಕರರು, ಗುತ್ತಿಗೆ ಕಾರ್ಮಿಕರು, ಅರೆಕಾಲಿಕ ಉಪನ್ಯಾಸಕರು ಹೀಗೆ ಹಲವು ವೃತ್ತಿನಿರತರ ಸಂಘಟನೆಗಳು ತಮ್ಮ ವೇತನ ಹೆಚ್ಚಳ, ಸರ್ಕಾರಿ ಸೌಲಭ್ಯಗಳು ಮುಂತಾದ ಬೇಡಿಕೆಗಳನ್ನು ಇಟ್ಟುಕೊಂಡು ಮುಷ್ಕರ ನಡೆಸುವುದನ್ನು ನೋಡಿದ್ದೇವೆ. ಹತ್ತಾರು ಜಾತಿ ಸಂಘಟನೆಗಳು ಮೀಸಲಾತಿ ಸೇರಿದಂತೆ ತಮ್ಮ ಸಮುದಾಯದ ಏಳಿಗೆ ಬಯಸಿ ಹಕ್ಕೊತ್ತಾಯ ಮಂಡಿಸಿ ಅದನ್ನು ಸರ್ಕಾರ ಈಡೇರಿಸದಿದ್ದರೆ ಪ್ರತಿಭಟನೆಯ ಅಸ್ತ್ರವನ್ನು ಪ್ರಯೋಗಿಸುವುದು ಮಾಮೂಲಿ. ಆದರೆ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಶುದ್ಧ ಕುಡಿಯುವ ನೀರು, ಪೌಷ್ಟಿಕ ಆಹಾರ, ತಾಯಿ-ಮಗು ಮರಣ ತಡೆಯುವುದು, ನಿರ್ಗತಿಕರಿಗೆ ಪಡಿತರ ಚೀಟಿ, ದೇವದಾಸಿಯರ ಮರು ಸಮೀಕ್ಷೆ, ಮಹಿಳೆಯರ ಪಿಂಚಣಿ- ವಿದ್ಯಾರ್ಥಿವೇತನ ನಿಯಮಿತವಾಗಿ ನೀಡಲು ಕ್ರಮ ಕೈಗೊಳ್ಳಬೇಕು ಎಂಬ ಸಾಮಾನ್ಯ ಜನರ ಏಳಿಗೆಗೆ ಅಗತ್ಯವಾಗಿರುವ ಬೇಡಿಕೆಗಳನ್ನು ಇಟ್ಟುಕೊಂಡು ಬಡ ಕೂಲಿಕಾರರೇ ಸರ್ಕಾರದ ವಿರುದ್ಧ ಬೃಹತ್‌ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ ಎಂದರೆ ಇದು ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿಯೇ ಹೌದು. ಅಷ್ಟೇ ಅಲ್ಲ ರಾಜ್ಯದಲ್ಲಿರುವ ವಿರೋಧ ಪಕ್ಷಗಳ ವೈಫಲ್ಯವೂ ಹೌದು.

Advertisements

ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಜಾರಿಗೆ ತಂದಿದ್ದು ಬಿಟ್ಟರೆ, ಮಿಕ್ಕಂತೆ ಇರುವ ಅವ್ಯವಸ್ಥೆಗಳು ಹಾಗೆಯೇ ಮುಂದುವರಿದಿವೆ. ರಚನಾತ್ಮಕ ರೀತಿಯಲ್ಲಿ ಸರ್ಕಾರದ ಕಿವಿ ಹಿಂಡಬೇಕಾಗಿದ್ದ ವಿರೋಧ ಪಕ್ಷ ಬಿಜೆಪಿ ಹಿಂದಿನ ಅದೇ ಕೋಮುವಾದ, ಸಮಾಜದ ಶಾಂತಿ ಕದಡುವ, ಗೋವಿನ ವಿಚಾರದಲ್ಲಿ ಸಮುದಾಯಗಳ ನಡುವೆ ದ್ವೇಷ ಬಿತ್ತುವ ರಾಜಕಾರಣದಲ್ಲಿ ನಿರತವಾಗಿದೆ. ಮೂಡಾ, ವಕ್ಫ್‌ ವಿಚಾರದಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಸರ್ಕಾರವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಹನ್ನಾರ ಬಿಟ್ಟರೆ, ಅಸಲು ಜನಪರವಾಗಿ ವಿಷಯಗಳು ಅದಕ್ಕೆ ಲೆಕ್ಕಕ್ಕೇ ಇಲ್ಲ. ಪ್ರತಿಪಕ್ಷ ಬಿಜೆಪಿ ಮಾಡಬೇಕಿರುವ ಪ್ರತಿಭಟನೆಯನ್ನು ಸಮಸ್ಯೆಯ ಸಂತ್ರಸ್ತರಾದ ಕೂಲಿ ಕಾರ್ಮಿಕರೇ ಕೈಗೆತ್ತಿಕೊಂಡಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.

ಕಳೆದ ಒಂದೂವರೆ ವರ್ಷಗಳಲ್ಲಿ ಹಲವಾರು ಪ್ರತಿಭಟನೆಗಳನ್ನು ಕೂಲಿಕಾರರ ಸಂಘಟನೆಯ ನೇತೃತ್ವದಲ್ಲಿ ಮಾಡಲಾಗಿದೆ. ಆಗ ಕರ್ನಾಟಕ ಸರ್ಕಾರದ ಶಾಸಕರು ಮತ್ತು ಸಚಿವರು ಕಾಲಮಿತಿಯಲ್ಲಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಜನರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲಗೊಂಡಿದ್ದಾರೆ. ಹಾಗಾಗಿ ಕೂಲಿ ಕಾರ್ಮಿಕರು ಸತ್ಯಾಗ್ರಹದ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಜಡ್ಡುಗಟ್ಟಿದ ವ್ಯವಸ್ಥೆ, ಕರ್ತವ್ಯ ಮರೆತ ಅಧಿಕಾರಿಗಳು, ಜನಸೇವೆಯ ಅರಿವಿಲ್ಲದ ರಾಜಕಾರಣಿಗಳು ಹಣ ಮಾಡುವ ದಂಧೆಯನ್ನೇ ಕಾಯಕ ಮಾಡಿಕೊಂಡಿದ್ದರ ಪರಿಣಾಮವಿದು. ಕೆಟ್ಟು ನಿಂತ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಪಡಿಸಿ ಎಂದು ಸತ್ಯಾಗ್ರಹ ಹೂಡಬೇಕಾಗಿ ಬಂದ ದುರಂತ ಸ್ಥಿತಿ ಮತ ಹಾಕಿದ ಜನರದ್ದು.

ರಾಯಚೂರಿನ ಸ್ಟೇಡಿಯಂ ಆವರಣದಲ್ಲಿ ನಾಳೆ 20,000ಕ್ಕೂ ಹೆಚ್ಚು ಕಾರ್ಮಿಕರು, ಮುಖ್ಯವಾಗಿ ಮಹಿಳೆಯರು ಸತ್ಯಾಗ್ರಹದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಂಘಟನೆಗಳು ಹೇಳಿವೆ. ಇದು ಚಾರಿತ್ರಿಕ ಸತ್ಯಾಗ್ರಹವಾಗಲಿದೆ. ಕಲ್ಯಾಣ ಕರ್ನಾಟಕ, ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಅಪೌಷ್ಟಿಕತೆ, ಕುಡಿಯುವ ನೀರಿನ ಸಮಸ್ಯೆ, ರಸ್ತೆ, ಆಸ್ಪತ್ರೆ, ಶಾಲೆಗಳ ದುಸ್ಥಿತಿ ಹೇಳತೀರದು. ಇದನ್ನು ಸರಿಪಡಿಸಲಾರದ ರಾಜಕಾರಣಿಗಳು ಚುನಾವಣೆಯ ಸಮಯದಲ್ಲಿ ಇದೇ ಜನರಿಗೆ ಹಣ ವಸ್ತುಗಳ ಕ್ಷಣಿಕ ಆಮಿಷವೊಡ್ಡಿ ಗೆಲ್ಲುತ್ತಲೇ ಬಂದಿದ್ದಾರೆ. ಗೆದ್ದ ನಂತರ ಮತದಾರರನ್ನೇ ಮರೆತು ಉದ್ಧಟತನ ತೋರಿಸುತ್ತಾರೆ. ಆದರೆ ಅಂತಹ ದುರಹಂಕಾರಿಗಳಿಗೆ ಬುದ್ಧಿ ಕಲಿಸುವ ಶಕ್ತಿ ಜನ ಸಾಮಾನ್ಯರಿಗೆ ಇದೆ ಎಂಬುದನ್ನು ಈ ಸತ್ಯಾಗ್ರಹ ತೋರಿಸಬೇಕಿದೆ.

ಅಷ್ಟಕ್ಕೂ ಈ ಸಂಘಟನೆಗಳು ಇಟ್ಟಿರುವ ಬೇಡಿಕೆಗಳನ್ನು ʼಬೇಡಿಕೆʼ ಎಂದು ಪರಿಗಣಿಸಬೇಕಿಲ್ಲ. ಅವು ಸರ್ಕಾರವೊಂದರ ಮೂಲಭೂತ ಕರ್ತವ್ಯಗಳು. ನೀರು, ನೆರಳು, ಅನ್ನ, ಅಕ್ಷರ, ಸೂರು ಕಲ್ಪಿಸುವುದು ಆದ್ಯತೆಯ ಸಂಗತಿಗಳು. ಇವುಗಳಿಗಾಗಿ ಸತ್ಯಾಗ್ರಹ ನಡೆಸುವ ಪರಿಸ್ಥಿತಿ ಶೋಚನೀಯ. ಬಜೆಟ್‌ನಲ್ಲಿ ಮೀಸಲಿಡುವ ಅನುದಾನವನ್ನು ಕಾಲ ಕಾಲಕ್ಕೆ ಸಮರ್ಪಕ ರೀತಿಯಲ್ಲಿ ಸದುಪಯೋಗಪಡಿಸುವ ಕೆಲಸ ಆಗಬೇಕಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸರ್ಕಾರಿ ಶಾಲೆಗಳ ಪರಿಸ್ಥಿತಿ ಯಾಕೆ ಹದಗೆಟ್ಟಿದೆ? ಅಪೌಷ್ಟಿಕತೆ, ತಾಯಿ -ಶಿಶು ಮರಣ ಪ್ರಮಾಣ ಯಾಕೆ ಅಲ್ಲೇ ಹೆಚ್ಚು ಇದೆ? ಕಲುಷಿತ ನೀರು ಕುಡಿದು ಸಾವು, ಸಾಂಕ್ರಾಮಿಕ ರೋಗಗಳು ಈ ಭಾಗದ ಜನರನ್ನು ಯಾಕೆ ಅಷ್ಟೊಂದು ಬಾಧಿಸುತ್ತಿದೆ ಎಂದು ಅಲ್ಲಿನ ಜನಪ್ರತಿನಿಧಿಗಳು ಯೋಚಿಸಬೇಕಲ್ಲವೇ?

ಕಳೆದ ವರ್ಷ ಇದೇ ದಿನ, ಜ.25ರಂದು ಕೂಲಿಕಾರರ ಸಂಘಟನೆ ಕಲಬುರ್ಗಿಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿ ಸರ್ಕಾರಿ ಶಾಲಾ ಗುಣಮಟ್ಟ ಸುಧಾರಣೆ ಮಾಡಬೇಕು ಎಂದು ಒತ್ತಾಯಿಸಿತ್ತು. ಕೊಪ್ಪಳ, ರಾಯಚೂರು, ಯಾದಗಿರಿಯಲ್ಲಿ 18ಸಾವಿರ ಶಿಕ್ಷಕರ ಕೊರತೆಯಿದೆ. ಕೆಲವು ಶಾಲೆಗಳಲ್ಲಿ ಜೀರೋ ಶಿಕ್ಷಕರು! ವಿಜ್ಞಾನ, ಗಣಿತಕ್ಕೆ ಶಿಕ್ಷಕರಿಲ್ಲ. ಹೀಗಾಗಿ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಟ್ಯೂಷನ್‌ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆಯಿಟ್ಟಿದ್ದರು. ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ, ಶಾಸಕ ಅಜಯ್‌ ಸಿಂಗ್‌ ಸ್ಥಳಕ್ಕೆ ಹೋಗಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಅದಾಗಿ ಸರಿಯಾಗಿ ಒಂದು ವರ್ಷ ಕಳೆದಿದೆ. ಸರ್ಕಾರ ಕೊಟ್ಟ ಭರವಸೆಯನ್ನು ಮರೆತು ಕೂತ ಕಾರಣ ಮತ್ತೆ ನೆನಪಿಸುವ ಕೆಲಸವನ್ನು ಕೂಲಿಕಾರರ ಸಂಘಟನೆ ಮಾಡಲು ಹೊರಟಿದೆ.

ಇಡೀ ಆಡಳಿತ ಯಂತ್ರಾಂಗವೇ ಕೆಟ್ಟು ನಿಂತರೆ ಈ ರೀತಿಯ ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತದೆ. ಶಾಸಕರು, ಮಂತ್ರಿಗಳು ತಮ್ಮ ಜವಾಬ್ದಾರಿಗಳನ್ನು ಮರೆತಂತೆ ಅಧಿಕಾರಿಗಳೂ ತಮ್ಮ ಕರ್ತವ್ಯವನ್ನು ಮರೆತಿರುವುದರ ಪರಿಣಾಮವಾಗಿ ಬಡ ಜನರು ಮೂಲಭೂತ ಸೌಕರ್ಯಕ್ಕಾಗಿ ದಿನದ ದುಡಿಮೆ ಬಿಟ್ಟು ಸತ್ಯಾಗ್ರಹ ಕೂರುವಂತಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಎಲ್ಲ ಬೇಡಿಕೆಗಳನ್ನು ಈಡೇರಿಸುವತ್ತ ಪರಿಣಾಮಕಾರಿ ಹೆಜ್ಜೆಯಿಡಬೇಕಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X