ರಾಯಚೂರಿನ ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮ ಜಿ ನಾಯಕ ಅವರ ಮನೆಗೆ ನುಗ್ಗಿ ಕಳ್ಳತನಕ್ಕೆ ಪ್ರಯತ್ನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬುಧವಾರ ಮಧ್ಯ ರಾತ್ರಿ ಶಾಸಕಿ ಮನೆಯ ಹಿಂಬಾಗಿಲಿನಿಂದ ಅಪರಿಚಿತರು ಮನೆಯೊಳಗೆ ನುಗ್ಗಲು ಯತ್ನಿಸಿದ್ದಾರೆ. ಮನೆ ಪಕ್ಕದ ನಿವಾಸಿಗಳು ನೋಡಿ ಕೂಗಿಕೊಂಡ ತಕ್ಷಣವೇ ಕಳ್ಳರು ಪರಾರಿಯಾಗಿದ್ದಾರೆ. ಬಳಿಕ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ?: ರಾಯಚೂರು | ₹1 ಲಕ್ಷ ಮೌಲ್ಯದ ಗಾಂಜಾ ನಾಶಪಡಿಸಿದ ಪೊಲೀಸ್ ಇಲಾಖೆ
ಶಾಸಕಿ ಮಗಳು ಗೌರಿ ಕರೆಮ್ಮ ಮಾತನಾಡಿ, ʼರಾತ್ರಿ ವೇಳೆ ಮೂರು ಜನ ಮನೆ ಹತ್ತಿರ ಬಂದಿದ್ದು, ಅಕ್ಕ ಪಕ್ಕದವರು ಮಾಹಿತಿ ನೀಡಿದರು. ಕಳ್ಳತನಕ್ಕೆ ಪ್ರಯತ್ನ ನಡೆದಿದೆಯಾ ಅಥವಾ ಕೊಲೆ ಪ್ರಯತ್ನ ನಡೆದಿದೆಯಾ ಎಂದು ಗೊತ್ತಾಗುತ್ತಿಲ್ಲ. ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಗಳನ್ನು ಇನ್ನು ಪತ್ತೆ ಹಚ್ಚಿಲ್ಲ. ರಾಜಕೀಯ ನಾಯಕರ ಮನೆಯ ಮೇಲೆ ದಾಳಿ ನಡೆಸಿದ್ದಾರೆ ಎಂದರೆ ಸಾಮಾನ್ಯ ಜನರ ಪರಿಸ್ಥಿತಿ ಹೇಗೆ. ಪೊಲೀಸರ ನಿರ್ಲಕ್ಷ್ಯದಿಂದ ಈ ಭಾಗದಲ್ಲಿ ಕಳ್ಳತನ, ದರೋಡೆ, ಸುಲಿಗೆ, ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
