ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಮನನೊಂದು ಪತಿ ಆತ್ಮಹತ್ಯೆಗೆ ಶರಣಾದರೆ, ಇತ್ತ ಪತ್ನಿ ಗೃಹಸಚಿವ ಜಿ ಪರಮೇಶ್ವರ್ ಅವರಿಗೆ ಅಂಚೆ ಮೂಲಕ ಮಂಗಳಸೂತ್ರ ಕಳುಹಿಸಿರುವ ಮನಕಲಕುವ ಘಟನೆ ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಕಪಗಲ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಶರಣ ಬಸವ ಜನವರಿ 17 ರಂದು ಆತ್ಮಹತ್ಯೆಗೆ ಶರಣಾಗಿದ್ದ. ಪತಿಯ ಸಾವಿನಿಂದ ನೊಂದ ಪತ್ನಿ ನಿನ್ನೆ ಗೃಹ ಸಚಿವರಿಗೆ ಮಂಗಳಸೂತ್ರ ಕಳುಹಿಸಿ, ಸಾಲ ಕೊಟ್ಟ ಫೈನಾನ್ಸ್ ಸಿಬ್ಬಂದಿ ತನ್ನ ಪತಿಗೆ ನಿತ್ಯ ಕಿರುಕುಳ ನೀಡಿದ್ದಾರೆ. ಹಾಗಾಗಿ ಪತಿಯ ಸಾವಿಗೆ ಕಾರಣವಾದ ಕಂಪನಿ ಹಾಗೂ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಮೃತ ಶರಣಬಸವನ ಕುಟುಂಬ ನ್ಯಾಯಕ್ಕಾಗಿ ಹೋರಾಟಕ್ಕೆ ಸಜ್ಜಾಗಿದೆ. ಶರಣಬಸವ ಡ್ರೈವಿಂಗ್ ಜೊತೆ ಕೂಲಿ ಕೆಲಸವನ್ನೂ ಮಾಡುತ್ತಿದ್ದರು. ಆದರೆ ಕೆಲ ಖಾಸಗಿ ಕಂಪನಿಗಳಿಂದ ಸುಮಾರು ₹6-8 ಲಕ್ಷ ಸಾಲ ಮಾಡಿಕೊಂಡಿದ್ದರು. ಇತ್ತೀಚೆಗೆ ಕೆಲ ಕಂತುಗಳು ಬಾಕಿ ಇದ್ದ ಹಿನ್ನೆಲೆ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿತ್ತಂತೆ. ಇದೇ ಕಾರಣಕ್ಕೆ ಶರಣಬಸವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಒಪೆಕ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಸಿಗಲಿ: ಸಚಿವ ಡಾ.ಶರಣಪ್ರಕಾಶ ಪಾಟೀಲ್
ಇದೀಗ ಮೃತನ ಕುಟುಂಬ ಜನಸೇವಾ ಫೌಂಡೇಶನ್ ಸಂಘಟನೆಯ ಜಾವೀದ್ ಖಾನ್ ಜತೆ ಒಗ್ಗೂಡಿ ಹೋರಾಟಕ್ಕಿಳಿದಿದ್ದಾರೆ. ಪತಿಯ ಸಾವಿನಿಂದ ಕಂಗಾಲಾಗಿರುವ ಪತ್ನಿ ನ್ಯಾಯ ಹಾಗೂ ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ.
