ಕಲಬುರಗಿ ಜಿಲ್ಲೆಯಲ್ಲಿ ನಡೆಯುವ “ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಸಂಸ್ಕೃತಿ ಉತ್ಸವ’ಕ್ಕೆ ರೋವರ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳನ್ನು ನಿಯೋಜಿಸದಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಸುಜಾತಾ ವೈ ಮಾತನಾಡಿ, “ಜನವರಿ 28ರಿಂದ 7ರವರೆಗೆ 11 ದಿನಗಳ ಕಾಲ ನಡೆಯುವ ‘ಕೊತ್ತಲ ಬಸವೇಶ್ವರ ಭಾರತೀಯ ಸಂಸ್ಕೃತಿ ಉತ್ಸವ’ವನ್ನು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ಹೊರವಲಯದಲ್ಲಿ ಆಯೋಜಿಸಲಾಗುತ್ತಿದೆ. 11 ದಿನ ನಡೆಯುವ ಈ ಉತ್ಸವದಲ್ಲಿ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಕಾಲೇಜುಗಳ ರೋವರ್ ವಿದ್ಯಾರ್ಥಿಗಳು ಮತ್ತು ರೇಂಜರ್ಸ್ ವಿದ್ಯಾರ್ಥಿಗಳನ್ನು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ಕಳುಹಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಕಲಬುರಗಿ ಜಿಲ್ಲಾಧಿಕಾರಿ ಮತ್ತು ಜಂಟಿ ನಿರ್ದೇಶಕರು, ಪ್ರಾದೇಶಿಕ ಕಚೇರಿ, ಕಾಲೇಜು ಶಿಕ್ಷಣ ಇಲಾಖೆಗೆ ಕಾಲೇಜು ಶಿಕ್ಷಣ ನಿರ್ದೇಶಕರು ಆದೇಶ ಮಾಡಿದ್ದಾರೆ. ಜತೆಗೆ ಈ ಕಾರ್ಯಕ್ರಮದಲ್ಲಿ ಅಧ್ಯಾಪಕರು ಅನ್ಯಕಾರ್ಯ ನಿಮಿತ್ತ ಭಾಗವಹಿಸುವಂತೆ ತಿಳಿಸಿರುವುದು ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಒಪೆಕ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಸಿಗಲಿ: ಸಚಿವ ಡಾ.ಶರಣಪ್ರಕಾಶ ಪಾಟೀಲ್
“ಕಲ್ಯಾಣ ಕರ್ನಾಟಕದ ಭಾಗದಲ್ಲಿ ಈಗಾಗಲೇ ಶಿಕ್ಷಕರು ಮತ್ತು ಅಧ್ಯಾಪಕರ ಕೊರತೆಯಿದೆ. ಜತೆಗೆ ಪದವಿ ಪರೀಕ್ಷೆಗಳೂ ನಡೆಯುತ್ತಿವೆ. ಈಗ ನಡೆಯುತ್ತಿರುವ ಪರೀಕ್ಷೆಗಳು ಕಾಲೇಜು ಪ್ರಾರಂಭವಾದ 3 ತಿಂಗಳಿನಲ್ಲಿಯೇ ನಿಗಧಿತ ಪಠ್ಯಕ್ರಮ(ಪಾಠ) ಮುಗಿಸದೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ನೀಡಬೇಕಿದ್ದ ಸರ್ಕಾರ ಇಂದು ಕಾಟಚಾರದ ಶಿಕ್ಷಣ ನೀಡಲು ಮುಂದಾಗಿದೆ. ಜತೆಗೆ ಕಾಲೇಜುಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಅದರ ಕಡೆ ಗಮನ ನೀಡದೆ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣವನ್ನು ಕುಂಠಿತಗೊಳಿಸುವ ಪ್ರಯತ್ನ ಮಾಡುತ್ತಿರುವುದು ದುರಂತ” ಎಂದು ಕಳವಳ ವ್ಯಕ್ತಪಡಿಸಿದರು.
ಧಾರ್ಮಿಕ ಕಾರ್ಯಕ್ರಮಕ್ಕೆ ಸ್ವಯಂ ಸೇವಕರಾಗಿ ವಿದ್ಯಾರ್ಥಿಗಳನ್ನು ಮತ್ತು ಅಧ್ಯಾಪಕರನ್ನು ಭಾಗವಹಿಸಲು ಆದೇಶ ಮಾಡಿರುವುದನ್ನು ಕೂಡಲೇ ವಾಪಸ್ ಪಡೆಯಬೇಕು” ಎಂದು ಆಗ್ರಹಿಸಿದರು.
ಜಿಲ್ಲಾ ಉಪಾಧ್ಯಕ್ಷೆ ಪ್ರೇಮ, ಸಹ ಕಾರ್ಯದರ್ಶಿ ನಾಗಮ್ಮ, ಯುವರಾಜ್, ದರ್ಶನ್, ದ್ರೌಪದಿ, ಜಿಲ್ಲಾ ಮುಖಂಡ ಪ್ರಜ್ವಲ್ ಇದ್ದರು.